SL vs NZ: ಲಂಕಾ ಎದುರು ಟೆಸ್ಟ್ ಸರಣಿ ಕ್ಲೀನ್‌ಸ್ವೀಪ್ ಮಾಡಿದ ಕಿವೀಸ್..!

By Naveen KodaseFirst Published Mar 20, 2023, 1:10 PM IST
Highlights

ಲಂಕಾ ಎದುರು ಟೆಸ್ಟ್ ಸರಣಿ ವೈಟ್‌ವಾಶ್ ಮಾಡಿದ ನ್ಯೂಜಿಲೆಂಡ್‌
ಸರಣಿಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡ ಕೇನ್ ವಿಲಿಯಮ್ಸನ್
ಎರಡನೇ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್‌ಗೆ ಇನಿಂಗ್ಸ್ & 58 ರನ್‌ಗಳ ಜಯ

ವೆಲ್ಲಿಂಗ್ಟನ್‌(ಮಾ.20): ಶ್ರೀಲಂಕಾ ಎದುರಿನ ಎರಡು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಆತಿಥೇಯ ನ್ಯೂಜಿಲೆಂಡ್ ತಂಡವು 2-0 ಅಂತರದಲ್ಲಿ ಕ್ಲೀನ್‌ಸ್ವೀಪ್ ಮಾಡಿದೆ. ಇಲ್ಲಿನ ಬಾಸಿನ್ ರಿಸರ್ವ್‌ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು ಇನಿಂಗ್ಸ್ ಹಾಗೂ 58 ರನ್‌ ಜಯ ಸಾಧಿಸಿ ಬೀಗಿದೆ. ಎರಡು ಟೆಸ್ಟ್‌ ಪಂದ್ಯಗಳಲ್ಲೂ ಆಕರ್ಷಕ ಶತಕ ಸಿಡಿಸಿದ ಮಾಜಿ ನಾಯಕ ಕೇನ್ ವಿಲಿಯಮ್ಸನ್‌ ಸರಣಿಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಮೊದಲು ಬ್ಯಾಟ್ ಮಾಡಿದ ಆತಿಥೇಯ ನ್ಯೂಜಿಲೆಂಡ್ ತಂಡವು ಕೇನ್ ವಿಲಿಯಮ್ಸನ್(215) ಹಾಗೂ ಹೆನ್ರಿ ನಿಕೋಲ್ಸ್ ಬಾರಿಸಿದ ಆಕರ್ಷಕ ಅಜೇಯ 200 ರನ್‌ಗಳ ನೆರವಿನಿಂದ ಮೊದಲ ಇನಿಂಗ್ಸ್‌ನಲ್ಲಿ 580 ರನ್ ಬಾರಿಸಿ ಡಿಕ್ಲೇರ್ ಮಾಡಿಕೊಂಡಿತು. ಇನ್ನು ಮೊದಲ ಇನಿಂಗ್ಸ್ ಆರಂಭಿಸಿದ ಶ್ರೀಲಂಕಾ ತಂಡವು ಮ್ಯಾಟ್ ಹೆನ್ರಿ ಹಾಗೂ ಡಗ್ ಬ್ರೇಸ್‌ವೆಲ್ ಮಾರಕ ದಾಳಿಗೆ ತತ್ತರಿಸಿ ಕೇವಲ 164 ರನ್‌ಗಳಿಗೆ ಸರ್ವಪತನ ಕಂಡಿತು. ಶ್ರೀಲಂಕಾ ಪರ ನಾಯಕ ದೀಮುತ್ ಕರುಣರತ್ನೆ(89), ದಿನೇಶ್ ಚಾಂಡಿಮಲ್(37) ಹಾಗೂ ವಿಕೆಟ್ ಕೀಪರ್ ಬ್ಯಾಟರ್ ನಿಶಾನ್ ಮದುಶಕಾ(19) ಹೊರತುಪಡಿಸಿ ಉಳಿದ್ಯಾವ ಬ್ಯಾಟರ್‌ಗಳು ಕೂಡಾ ಎರಡಂಕಿ ಮೊತ್ತ ದಾಖಲಿಸಲು ಯಶಸ್ವಿಯಾಗಲಿಲ್ಲ. ಲಂಕಾದ ನಾಲ್ವರು ಬ್ಯಾಟರ್‌ಗಳು ಖಾತೆ ತೆರೆಯುವ ಮುನ್ನವೇ ವಿಕೆಟ್ ಒಪ್ಪಿಸಿ ಪೆವಿಲಿಯನ್ ಪರೇಡ್ ನಡೆಸಿದರು. 

New Zealand overcome Sri Lanka's resistance to take the Test series 2-0. | 📝: https://t.co/6AWsAQ7CTM pic.twitter.com/JVTcCOWZEi

— ICC (@ICC)

ಇನ್ನು ಮೊದಲ ಇನಿಂಗ್ಸ್‌ನಲ್ಲಿ ಭಾರೀ ಹಿನ್ನಡೆ ಅನುಭವಿಸಿದ್ದರಿಂದ ನ್ಯೂಜಿಲೆಂಡ್ ತಂಡವು, ಲಂಕಾ ಮೇಲೆ ಫಾಲೋ ಆನ್ ಹೇರಿತು. ಹೀಗಾಗಿ ಎರಡನೇ ಇನಿಂಗ್ಸ್‌ ಆರಂಭಿಸಿದ ಲಂಕಾ ತಂಡವು, ಕಿವೀಸ್‌ಗೆ ತಿರುಗೇಟು ನೀಡಲು ಯತ್ನ ನಡೆಸಿತು. ಒಶಾಡೊ ಫರ್ನಾಂಡೋ(5) ಆರಂಭದಲ್ಲೇ ವಿಕೆಟ್ ಒಪ್ಪಿಸಿದರು. ಆದರೆ ಎರಡನೇ ವಿಕೆಟ್‌ಗೆ ದಿಮುತ್ ಕರುಣರತ್ನೆ(51) ಹಾಗೂ ಕುಸಾಲ್ ಮೆಂಡಿಸ್(50) ಆಕರ್ಷಕ ಅರ್ಧಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಇನ್ನು ಮೊದಲ ಟೆಸ್ಟ್‌ನಲ್ಲಿ ಶತಕ ಸಿಡಿಸಿದ್ದ ಏಂಜಲೋ ಮ್ಯಾಥ್ಯೂಸ್ ಎರಡನೇ ಇನಿಂಗ್ಸ್‌ನಲ್ಲೂ ಒಂದಂಕಿ(2) ಮೊತ್ತಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಕೆಚ್ಚೆದೆಯ ಬ್ಯಾಟಿಂಗ್ ನಡೆಸಿದ ಧನಂಜಯ ಡಿ ಸಿಲ್ವಾ ಕೇವಲ 2 ರನ್‌ ಅಂತರದಲ್ಲಿ ಶತಕ ವಂಚಿತರಾದರು. ಧನಂಜಯ ಡಿ ಸಿಲ್ವಾ 185 ಎಸೆತಗಳನ್ನು ಎದುರಿಸಿ 12 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 98 ಬಾರಿಸಿ ಮಿಚೆಲ್ ಬ್ರೇಸ್‌ವೆಲ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಕೊನೆಯಲ್ಲಿ ನಿಶಾನ್ ಮಧುಶಕ(39) ಹಾಗೂ ಕಸುನ್ ರಜಿತಾ(20) ನೆಲಕಚ್ಚಿ ಆಡುವ ಯತ್ನ ನಡೆಸಿದರಾದರೂ ತಂಡವನ್ನು ಇನಿಂಗ್ಸ್‌ ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಶ್ರೀಲಂಕಾ ತಂಡವು ಎರಡನೇ ಇನಿಂಗ್ಸ್‌ನಲ್ಲಿ 358 ರನ್‌ ಬಾರಿಸಿ ಸರ್ವಪತನ ಕಂಡಿತು.

IPL 2023: ವಯಸ್ಸು 36 ದಾಟಿದರೂ ಐಪಿಎಲ್‌ನಲ್ಲಿ ಅಬ್ಬರಿಸಲು ರೆಡಿಯಾದ 8 ಸ್ಟಾರ್‌ ಕ್ರಿಕೆಟಿಗರಿವರು..!

ಇನ್ನು ಇದಕ್ಕೂ ಮೊದಲು ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು ಕೊನೆಯ ಎಸೆತದಲ್ಲಿ ರೋಚಕ ಗೆಲುವು ಸಾಧಿಸುವ ಮೂಲಕ 1-0 ಅಂತರದಲ್ಲಿ ಗೆಲುವಿನ ನಗೆ ಬೀರಿತು. ಇದೀಗ ಎರಡನೇ ಟೆಸ್ಟ್‌ನಲ್ಲಿ ದ್ವಿಶತಕ ಸಿಡಿಸಿದ ಹೆನ್ರಿ ನಿಕೋಲ್ಸ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ಕೇನ್ ವಿಲಿಯಮ್ಸನ್ ಸರಣಿ ಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡರು.

click me!