
ಲಖನೌ: ಭಾರತ ಹಾಗೂ ಆಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ಆಫ್ಘಾನಿಸ್ತಾನ ತಂಡದ ನಾಯಕ ಹಸ್ಮತುಲ್ಲಾ ಶಾಹಿದಿ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲ ಪಂದ್ಯವನ್ನು ಜಯಿಸಿರುವ ಟೀಂ ಇಂಡಿಯಾ, ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಇನ್ನು ಈ ಪಂದ್ಯದಲ್ಲಿ ಉಭಯ ತಂಡಗಳು ತಲಾ ಮೂರು ಬದಲಾವಣೆಗಳೊಂದಿಗೆ ಕಣಕ್ಕಿಳಿದಿದೆ.
ಆಫ್ಘಾನಿಸ್ತಾನ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಶುಭ್‌ಮನ್ ಗಿಲ್ ನೇತೃತ್ವದ ಟೀಂ ಇಂಡಿಯಾ ಏಳು ವಿಕೆಟ್‌ಗಳ ಸುಲಭ ಗೆಲುವು ದಾಖಲಿಸಿತ್ತು. ಇದೀಗ ಎರಡನೇ ಪಂದ್ಯದಲ್ಲಿ ಮೂರು ಪ್ರಮುಖ ಬದಲಾವಣೆಗಳೊಂದಿಗೆ ಕಣಕ್ಕಿಳಿದಿದೆ. ಎರಡನೇ ಏಕದಿನ ಪಂದ್ಯಕ್ಕೆ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ, ವೇಗಿಗಳಾದ ಪ್ರಸಿದ್ದ್ ಕೃಷ್ಣ ಹಾಗೂ ಹರ್ಷ್ ದುಬೆಗೆ ವಿಶ್ರಾಂತಿ ನೀಡಲಾಗಿದೆ. ಇವರ ಸ್ಥಾನಕ್ಕೆ ಯಶಸ್ವಿ ಜೈಸ್ವಾಲ್, ಕುಲ್ದೀಪ್ ಯಾದವ್ ಹಾಗೂ ಪ್ರಿನ್ಸ್ ಯಾದವ್ ತಂಡ ಕೂಡಿಕೊಂಡಿದ್ದಾರೆ.
19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ತಮ್ಮ ಅದ್ಭುತ ಬೌಲಿಂಗ್ ಪ್ರದರ್ಶನದ ಮೂಲಕ ಆಯ್ಕೆ ಸಮಿತಿಯ ಗಮನ ಸೆಳೆದಿದ್ದ ಪ್ರಿನ್ಸ್ ಯಾದವ್ ಇದೀಗ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಉಪನಾಯಕ ಶ್ರೇಯಸ್ ಅಯ್ಯರ್, ಪ್ರಿನ್ಸ್ ಯಾದವ್‌ಗೆ ಕ್ಯಾಪ್ ನೀಡುವ ಮೂಲಕ ಟೀಂ ಇಂಡಿಯಾಗೆ ಬರ ಮಾಡಿಕೊಂಡರು. ಅಂದಹಾಗೆ ಈ ಸರಣಿಯಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ ಮೂರನೇ ಕ್ರಿಕೆಟಿಗ ಪ್ರಿನ್ಸ್ ಯಾದವ್ ಆಗಿದ್ದಾರೆ. ಈ ಮೊದಲು ಮೊದಲ ಏಕದಿನ ಪಂದ್ಯದಲ್ಲಿ ಹರ್ಷ್ ದುಬೆ ಹಾಗೂ ಗುರ್ನೂರ್ ಬ್ರಾರ್ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದರು.
Here's how #TeamIndia lines up for the 2️⃣nd #INDvAFG ODI 📝
Updates ▶️ https://t.co/JYJ5l44iJ6@IDFCFIRSTBank pic.twitter.com/ebEzTRX2zE— BCCI (@BCCI) June 17, 2026
ಇನ್ನು ಭಾರತ ಮಾತ್ರವಲ್ಲದೇ ಆಫ್ಘಾನಿಸ್ತಾನ ತಂಡದಲ್ಲೂ ಮೂರು ಬದಲಾವಣೆ ಮಾಡಲಾಗಿದೆ. ಮೊಹಮ್ಮದ್ ನಬಿ, ಜಿಯಾ ಶರೀಫಿ, ಅಝ್ಮತುಲ್ಲಾ ಓಮರ್‌ಝೈ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ನಂಗೇಲಿಯಾ ಖರೋಟಿ, ಬಿಲಾಲ್ ಶಮಿ ಹಾಗೂ ಡೌರಿಷ್ ರಸೋಲಿ ತಂಡ ಕೂಡಿಕೊಂಡಿದ್ದಾರೆ. ರಸೋಲಿ ಇದೀಗ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.