
ದಾಂಬುಲ್ಲಾ: ತ್ರಿರಾಷ್ಟ್ರ ಏಕದಿನ ಸರಣಿಯ ಭಾಗವಾಗಿ ಭಾರತ 'ಎ' ಮತ್ತು ಶ್ರೀಲಂಕಾ 'ಎ' ತಂಡಗಳ ನಡುವಿನ ಪಂದ್ಯದ ನಂತರ ಮೈದಾನದಲ್ಲಿ ನಡೆದ ಗಲಾಟೆ ಪ್ರಕರಣದಲ್ಲಿ, ಬಿಸಿಸಿಐ ತನ್ನ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಮೇಲೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ, ವೈಭವ್ ಅವರನ್ನು ನಿರಂತರವಾಗಿ ನಿಂದಿಸಿ ಜಗಳಕ್ಕೆ ಕಾರಣನಾದ ಶ್ರೀಲಂಕಾ ಆಟಗಾರ ವಿಶೇನ್ ಹಾಲಂಬಾಗೆ ವಿರುದ್ಧ ಶ್ರೀಲಂಕಾ ಕ್ರಿಕೆಟ್ ಮಂಡಳಿ ಕಠಿಣ ಕ್ರಮ ಕೈಗೊಂಡಿದೆ ಎಂದು ಕ್ರಿಕ್‌ಬಝ್ ವರದಿ ಮಾಡಿದೆ. ಸೋಮವಾರ ದಾಂಬುಲ್ಲಾದಲ್ಲಿ ನಡೆದ ಪಂದ್ಯದಲ್ಲಿ ಭಾರತ 'ಎ' ತಂಡ ಸೂಪರ್ ಓವರ್‌ನಲ್ಲಿ ಸೋತ ಬೆನ್ನಲ್ಲೇ ಎರಡೂ ತಂಡಗಳ ಆಟಗಾರರ ನಡುವೆ ತೀವ್ರ ವಾಗ್ವಾದ ಮತ್ತು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು.
ಪಂದ್ಯದ ನಂತರ ಎದುರಾಳಿ ಆಟಗಾರನೊಂದಿಗೆ ಗಲಾಟೆಯಲ್ಲಿ ಭಾಗಿಯಾಗಿದ್ದರಿಂದ, ಬಿಸಿಸಿಐ ಯುವ ಆಟಗಾರ ವೈಭವ್ ಸೂರ್ಯವಂಶಿಗೆ ಶೋಕಾಸ್ ನೋಟಿಸ್ ಅಥವಾ ಎಚ್ಚರಿಕೆ ನೀಡಬಹುದು ಎಂಬ ವರದಿಗಳಿದ್ದವು. ಆದರೆ, ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಈ ಎಲ್ಲಾ ವರದಿಗಳನ್ನು ತಳ್ಳಿಹಾಕಿದ್ದಾರೆ. "ಆಟಗಾರರು ಆಟದ ಕಡೆ ಗಮನ ಕೊಡಲಿ. ಬೇರೆ ಬಾಹ್ಯ ವಿಷಯಗಳಿಗೆ ಅವರ ಗಮನ ಬೇರೆಡೆ ಹೋಗುವುದು ನಮಗೆ ಇಷ್ಟವಿಲ್ಲ," ಎಂದು ದೇವಜಿತ್ ಸೈಕಿಯಾ ಹೇಳುವ ಮೂಲಕ ಬಿಸಿಸಿಐ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ಇನ್ನೊಂದೆಡೆ, ಜಗಳಕ್ಕೆ ಮೂಲ ಕಾರಣನಾದ ವಿಶೇನ್ ಹಾಲಂಬಾಗೆ ವಿರುದ್ಧ ಶ್ರೀಲಂಕಾ ಕ್ರಿಕೆಟ್ ಮಂಡಳಿ ಕಠಿಣ ಕ್ರಮ ಕೈಗೊಂಡಿದೆ ಎಂದು ಕ್ರಿಕ್‌ಬಝ್ ವರದಿ ಮಾಡಿದೆ. ಜೂನ್ 9ರಂದು ನಡೆದ ಮೊದಲ ಪಂದ್ಯದಲ್ಲೂ ಹಾಗೂ ಸೋಮವಾರದ ಪಂದ್ಯದಲ್ಲೂ ಹಾಲಂಬಾಗೆ, ವೈಭವ್ ಅವರನ್ನು ನಿರಂತರವಾಗಿ ನಿಂದಿಸಿದ್ದ. ಈ ಟೂರ್ನಿಯು ಐಸಿಸಿಯ ನೇರ ಶಿಸ್ತು ಕ್ರಮದ ವ್ಯಾಪ್ತಿಗೆ ಬರದ ಕಾರಣ, ಮ್ಯಾಚ್ ರೆಫರಿ ಪ್ರದೀಪ್ ಜಯಪ್ರಕಾಶ್ ಅವರ ವರದಿಯನ್ನು ಆಧರಿಸಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯೇ ಆಟಗಾರರಿಗೆ ದಂಡ ಮತ್ತು ಶಿಕ್ಷೆ ವಿಧಿಸಿದೆ.
Vaibhav got into a heated argument with Sri Lankan players after the super over pic.twitter.com/wnGyEF6Nvw
— Abhi (@AbhiMSD_07) June 15, 2026
ಜಗಳವನ್ನು ಸಮಾಧಾನಪಡಿಸಲು ಮಧ್ಯಪ್ರವೇಶಿಸಿದ್ದ ಶ್ರೀಲಂಕಾ 'ಎ' ತಂಡದ ಹಿರಿಯ ಆಟಗಾರ ಮತ್ತು ವಿಕೆಟ್ ಕೀಪರ್ ನಿರೋಷನ್ ಡಿಕ್‌ವೆಲ್ಲ ಅವರಿಗೂ ದಂಡ ವಿಧಿಸಲಾಗಿದೆ. ಆದರೆ, ಇದು ಈ ಗಲಾಟೆಗೆ ಸಂಬಂಧಿಸಿದ್ದಲ್ಲ, ಬದಲಾಗಿ ಪಂದ್ಯದ ವೇಳೆ ಅವರು ಮಾಡಿದ ಬೇರೊಂದು ಶಿಸ್ತು ಉಲ್ಲಂಘನೆಗಾಗಿ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಜೂನ್ 9ರ ಪಂದ್ಯದಿಂದಲೇ ಹಾಲಂಬಾಗೆ, ವೈಭವ್ ಸೂರ್ಯವಂಶಿಯನ್ನು ಕೆಣಕಲು ಆರಂಭಿಸಿದ್ದ. ಸೋಮವಾರದ ಪಂದ್ಯದಲ್ಲಿ ಭಾರತ 'ಎ' ತಂಡ ಸೂಪರ್ ಓವರ್‌ನಲ್ಲಿ ಬ್ಯಾಟಿಂಗ್‌ಗೆ ಇಳಿದಾಗ ಈ ಸ್ಲೆಡ್ಜಿಂಗ್ ಮಿತಿ ಮೀರಿತ್ತು. "ಮನೆಗೆ ಹೋಗು, ಇದು ನಿನ್ನ ಐಪಿಎಲ್ ಅಲ್ಲ" ಎಂಬಂತಹ ಕೀಳು ಮಟ್ಟದ ಮಾತುಗಳನ್ನು ಲಂಕಾ ಆಟಗಾರ ಭಾರತೀಯ ಓಪನರ್ ವೈಭವ್ ಸೂರ್ಯವಂಶಿ ವಿರುದ್ಧ ಬಳಸಿದ್ದ ಎಂದು ತಿಳಿದುಬಂದಿದೆ. ಇದೇ ಕಾರಣಕ್ಕೆ ಪಂದ್ಯದ ನಂತರ ಗಲಾಟೆ ನಡೆದಿದೆ.
ರೋಚಕ ಗೆಲುವಿನ ಹೊರತಾಗಿಯೂ ಇಂತಹ ಕೆಟ್ಟ ವರ್ತನೆಯಿಂದಾಗಿ ಗೆಲುವಿಗೆ ಕಪ್ಪುಚುಕ್ಕೆ ಬಂದಂತಾಗಿದ್ದಕ್ಕೆ ಶ್ರೀಲಂಕಾ ತಂಡದ ಬಹುತೇಕ ಆಟಗಾರರು ಮತ್ತು ಮ್ಯಾನೇಜ್‌ಮೆಂಟ್‌ಗೆ ತೀವ್ರ ಅಸಮಾಧಾನವಿದೆ. ಈ ಘಟನೆಗೆ ಶ್ರೀಲಂಕಾ ತಂಡ ಅಧಿಕೃತವಾಗಿ ಭಾರತದ ಬಳಿ ಕ್ಷಮೆ ಕೇಳಿದೆಯೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ, ಬಿಸಿಸಿಐ ಮಾತ್ರ ವೈಭವ್ ಅವರನ್ನು ಸಂಪೂರ್ಣವಾಗಿ ರಕ್ಷಿಸುವ ನಿಲುವು ತಾಳಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.