ಪಾಕಿಸ್ತಾನ ಎದುರು ಭಾರತ ಹೀನಾಯವಾಗಿ ಸೋಲುತ್ತೆ ಎಂದು ಭವಿಷ್ಯ ನುಡಿದಿದ್ದ IIT ಬಾಬಾ ಈಗ ಫುಲ್ ಟ್ರೋಲ್!

Published : Feb 24, 2025, 01:36 PM ISTUpdated : Feb 24, 2025, 02:14 PM IST
ಪಾಕಿಸ್ತಾನ ಎದುರು ಭಾರತ ಹೀನಾಯವಾಗಿ ಸೋಲುತ್ತೆ ಎಂದು ಭವಿಷ್ಯ ನುಡಿದಿದ್ದ IIT ಬಾಬಾ ಈಗ ಫುಲ್ ಟ್ರೋಲ್!

ಸಾರಾಂಶ

ಐಐಟಿ ಬಾಬಾ ಅಭಯ್ ಸಿಂಗ್, 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನವು ಭಾರತವನ್ನು ಸೋಲಿಸುತ್ತದೆ ಎಂದು ಭವಿಷ್ಯ ನುಡಿದಿದ್ದರು. ಆದರೆ, ಭಾರತವು ಪಾಕಿಸ್ತಾನವನ್ನು ಸೋಲಿಸುವ ಮೂಲಕ ಬಾಬಾನ ಭವಿಷ್ಯ ಸುಳ್ಳಾಯಿತು. ವಿರಾಟ್ ಕೊಹ್ಲಿ ಶತಕ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಐಐಟಿ ಬಾಬಾನನ್ನು ಟ್ರೋಲ್ ಮಾಡುತ್ತಿದ್ದಾರೆ. ಭಾರತವು 6 ವಿಕೆಟ್‌ಗಳಿಂದ ಜಯ ಸಾಧಿಸಿತು.

ಬೆಂಗಳೂರು: ಐಐಟಿ ಬಾಬಾ ಎಂದೇ ಜನಪ್ರಿಯವಾಗಿರುವ ಅಭಯ್ ಸಿಂಗ್ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದ ಮೂಲಕ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಇದೇ ಐಐಟಿ ಬಾಬಾ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಪಾಕಿಸ್ತಾನ ತಂಡವು ಭಾರತ ತಂಡವನ್ನು ಸೋಲಿಸಲಿದೆ ಎಂದು ಭವಿಷ್ಯ ನುಡಿದಿದ್ದರು. ಆದರೆ ಈ ಐಐಟಿ ಬಾಬಾನ ಭವಿಷ್ಯ ಆರಂಭದಲ್ಲೇ ಮಕಾಡೆ ಮಲಗಿದೆ. ಪಾಕಿಸ್ತಾನವನ್ನು ಅರು ವಿಕೆಟ್‌ಗಳಿಂದ ಟೀಂ ಇಂಡಿಯಾ ಬಗ್ಗುಬಡಿಯುವುದರ ಜತೆಗೆ ಐಐಟಿ ಬಾಬಾ ಭವಿಷ್ಯವನ್ನು ಸುಳ್ಳು ಮಾಡಿದೆ. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಈ ಐಐಟಿ ಬಾಬಾನನ್ನು ಇನ್ನಿಲ್ಲದಂತೆ ಟ್ರೋಲ್ ಮಾಡಿದ್ದಾರೆ.

ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಆಯೋಜನೆಯಾಗಿದ್ದ ಪಂದ್ಯದಲ್ಲಿ ಉಭಯ ತಂಡಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷೆ ಮಾಡಲಾಗಿತ್ತು. ಆದರೆ ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದ ರೋಹಿತ್ ಶರ್ಮಾ ಪಡೆ ಏಕಪಕ್ಷೀಯವಾಗಿ ಪಂದ್ಯವನ್ನು ಜಯಿಸುವ ಮೂಲಕ ಸೆಮೀಸ್ ಹಾದಿಯನ್ನು ಸುಗಮ ಮಾಡಿಕೊಂಡಿತು. ಇದರ ಜತೆಗೆ ಐಐಟಿ ಬಾಬಾನ ಭವಿಷ್ಯದಲ್ಲಿ ಎಳ್ಳಷ್ಟು ಹುರುಳಿಲ್ಲ ಎಂದು ಸಾಬೀತು ಮಾಡಿದೆ.

ಅಭಯ್ ಸಿಂಗ್ ಅಥವಾ ಈ ಐಐಟಿ ಬಾಬಾ, ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಖಾಸಗಿ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಪಂದ್ಯದ ಕುರಿತಂತೆ ತುಂಬಾ ಆತ್ಮವಿಶ್ವಾಸದಿಂದಲೇ ಭವಿಷ್ಯ ನುಡಿದಿದ್ದರು. 'ಭಾರತ ತಂಡವು ಪಾಕಿಸ್ತಾನ ಎದುರು ಹೀನಾಯ ಸೋಲು ಅನುಭವಿಸಲಿದೆ. ಈ ಹೈವೋಲ್ಟೇಜ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೂಡಾ ವೈಫಲ್ಯ ಅನುಭವಿಸಲಿದ್ದಾರೆ' ಎಂದು ಐಐಟಿ ಬಾಬಾ ಭವಿಷ್ಯ ನುಡಿದಿದ್ದರು.

ಐಐಟಿ ಬಾಬಾ ಹೇಳಿದ್ದೊಂದು, ಆಗಿದ್ದು ಮತ್ತೊಂದು!

ಹೌದು, ಮೊದಲಿಗೆ ಈ ಐಐಟಿ ಬಾಬಾ, ಭಾರತ ತಂಡವು ಪಾಕ್ ಎದುರು ಹೀನಾಯ ಸೋಲು ಅನುಭವಿಸಲಿದೆ ಎಂದಿದ್ದರು. ಆದರೆ ಭಾರತ ತಂಡವು ಕೇವಲ 6 ವಿಕೆಟ್ ಕಳೆದುಕೊಂಡು ಇನ್ನೂ 7 ಓವರ್ ಬಾಕಿ ಇರುವಂತೆಯೇ ಪಾಕಿಸ್ತಾನ ಎದುರು ಭರ್ಜರಿ ಗೆಲುವು ಸಾಧಿಸಿತು. ರಿಜ್ವಾನ್ ಪಡೆ ಹೀನಾಯ ಸೋಲು ಅನುಭವಿಸಿತು. ಇನ್ನು ವಿರಾಟ್ ಕೊಹ್ಲಿ ಫೇಲ್ ಆಗಲಿದ್ದಾರೆ ಎಂದು ಈ ಅಭಯ್ ಸಿಂಗ್ ಭವಿಷ್ಯ ನುಡಿದಿದ್ದರು. ಆದರೆ ಪಾಕಿಸ್ತಾನ ಎದುರು ವಿರಾಟ್ ಕೊಹ್ಲಿ ಅಜೇಯ ಶತಕ ಸಿಡಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಇದರ ಜತೆಗೆ ಐಐಟಿ ಬಾಬಾನ ಬೊಗಳೆ ಭವಿಷ್ಯವನ್ನು ಸುಳ್ಳು ಮಾಡುವಲ್ಲಿ ಯಶಸ್ವಿಯಾದರು.

ಇನ್ನು ಪಾಕಿಸ್ತಾನ ಎದುರು ಟೀಂ ಇಂಡಿಯಾ ಭರ್ಜರಿ ಜಯ ಸಾಧಿಸುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಈ ಐಐಟ ಬಾಬಾನನ್ನು ಇನ್ನಿಲ್ಲದಂತೆ ಟ್ರೋಲ್ ಮಾಡಲಾರಂಭಿಸಿದ್ದಾರೆ. ಇದರ ಒಂದಷ್ಟು ಸ್ಯಾಂಪಲ್ಸ್‌ ಇಲ್ಲಿವೆ ನೋಡಿ.

ಹೇಗಿತ್ತು ಭಾರತ-ಪಾಕಿಸ್ತಾನ ಪಂದ್ಯ?

ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪಾಕ್ ತಂಡದ ನಾಯಕ ಮೊಹಮ್ಮದ್ ರಿಜ್ವಾನ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಆದರೆ ಆರಂಭದಲ್ಲೇ ಪಾಕ್ ತಂಡ ವಿಕೆಟ್ ಕಳೆದುಕೊಂಡಿತು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಸೌದ್ ಶಕೀಲ್ ಆಕರ್ಷಕ ಅರ್ಧಶತಕ ಹಾಗೂ ನಾಯಕ ಮೊಹಮ್ಮದ್ ರಿಜ್ವಾನ್ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ 241 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು.

ಇನ್ನು ಸಾಧಾರಣ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಸ್ಪೋಟಕ ಆರಂಭ ಪಡೆಯಿತು. ಶ್ರೇಯಸ್ ಅಯ್ಯರ್(56) ಆಕರ್ಷಕ ಅರ್ಧಶತಕ ಹಾಗೂ ವಿರಾಟ್ ಕೊಹ್ಲಿ ಮಿಂಚಿನ ಶತಕದ ನೆರವಿನಿಂದ ಇನ್ನೂ 45 ಎಸೆತ ಬಾಕಿ ಇರುವಂತೆಯೇ ಭಾರತ 6 ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸಿತು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜೈಸ್ವಾಲ್‌ ಸಖತ್‌ ಸೆಂಚುರಿ, ಟೆಸ್ಟ್‌ ಸರಣಿ ಸೋಲಿಗೆ ಏಕದಿನದಲ್ಲಿ ಸೇಡು ತೀರಿಸಿಕೊಂಡ ಭಾರತ!
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌