
ಲಖನೌ(ಮೇ.02): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, ಇಲ್ಲಿನ ಏಕಾನ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕೆ ಎಲ್ ರಾಹುಲ್ ನೇತೃತ್ವದ ಲಖನೌ ಸೂಪರ್ ಜೈಂಟ್ಸ್ ಎದುರು 18 ರನ್ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ತವರಿನಲ್ಲಿ ಅನುಭವಿಸಿದ್ದ ಸೋಲಿನ ಲೆಕ್ಕಾ ಚುಕ್ತಾ ಮಾಡುವಲ್ಲಿ ಆರ್‌ಸಿಬಿ ಯಶಸ್ವಿಯಾಗಿದೆ.
ಲಖನೌ ತಂಡವನ್ನು ಅವರದ್ದೇ ತವರಿನ ಮೈದಾನದಲ್ಲಿ ಬಗ್ಗುಬಡಿದ ಬೆನ್ನಲ್ಲೇ ಆರ್‌ಸಿಬಿ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಲಖನೌ ತಂಡದ ವೇಗದ ಬೌಲರ್ ನವೀನ್ ಉಲ್ ಹಕ್ ಹಾಗೂ ಮೆಂಟರ್ ಗೌತಮ್ ಗಂಭೀರ್ ಜತೆ ಮಾತಿನ ಚಕಮಕಿ ಕೂಡಾ ನಡೆಯಿತು. ಬೆಂಗಳೂರಿನ ಪಂದ್ಯದಲ್ಲಿ ಆರ್‌ಸಿಬಿ ಅಭಿಮಾನಿಗಳನ್ನು ಗಂಭೀರ್ ಕೆಣಕ್ಕಿದ್ದಕ್ಕೆ ಆಕ್ರೋಶಿತರಾಗಿದ್ದ ಕೊಹ್ಲಿ, ಈ ಬಾರಿ ಮೈದಾನದಲ್ಲೇ ಬಾಯಿ ಮುಚ್ಚಿಸುವ ಸನ್ನೆ ಮೂಲಕ ಉತ್ತರ ಕೊಟ್ಟರು. ಪಂದ್ಯದ ಬಳಿಕವೂ ಇವರಿಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಈ ವೇಳೆ ಅವರನ್ನು ಆಟಗಾರರು, ಅಂಪೈರ್ಗಳು ಸಮಾಧಾನಪಡಿಸಲು ಯತ್ನಿಸಿದರು.
ಇನ್ನು ಈ ಘಟನೆಯ ಬಳಿಕ ಡ್ರೆಸ್ಸಿಂಗ್ ರೂಂನಲ್ಲಿ ಆರ್‌ಸಿಬಿ ಪಡೆ ಲಖನೌ ಎದುರಿನ ಗೆಲುವನ್ನು ಭರ್ಜರಿಯಾಗಿಯೇ ಸಂಭ್ರಮಾಚರಣೆ ಮಾಡಿತು. ಈ ಸಂದರ್ಭದಲ್ಲಿ ತಂಡವನ್ನು ಉದ್ದೇಶಿಸಿ ಮಾತನಾಡಿದ ವಿರಾಟ್ ಕೊಹ್ಲಿ, 'ಕೊಟ್ಟರೆ ಅದನ್ನು ವಾಪಾಸ್ ಪಡೆಯಲು ಸಿದ್ದರಿರಬೇಕು, ಇಲ್ಲದಿದ್ದರೆ, ಕೊಡಲು ಹೋಗಬಾರದು' ಎಂದು ಹೇಳಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಇನ್ನು ಇದಷ್ಟೇ ಅಲ್ಲದೇ ವಿರಾಟ್ ಕೊಹ್ಲಿ, ಈ ಪಂದ್ಯ ಮುಕ್ತಾಯದ ಬಳಿಕ ಗೂಢಾರ್ಥದ ಸ್ಟೋರಿಯನ್ನು ಪೋಸ್ಟ್ ಮಾಡಿದ್ದು, ರೋಮನ್‌ನ ಮಾಜಿ ಸಾಮ್ರಾಟ ಮಾರ್ಕಸ್ ಆರ್ಲಿಯಸ್ ಅವರ " ನಾವು ಕೇಳುವ ಪ್ರತಿಯೊಂದು ಅಭಿಪ್ರಾಯವಾಗಿರುತ್ತದೆ. ಆದರೆ ಸತ್ಯವಾಗಿರುವುದಿಲ್ಲ. ಪ್ರತಿಯೊಂದು ನಾವು ನೋಡುವುದು ದೃಷ್ಟಿಕೋನವಾಗಿರುತ್ತದೆ, ಆದರೆ ಸತ್ಯವಾಗಿರುವುದಿಲ್ಲ ಎಂದು ಪೋಸ್ಟ್ ಮಾಡಿದ್ದಾರೆ.
ಹೇಗಿತ್ತು ಆರ್‌ಸಿಬಿ-ಲಖನೌ ನಡುವಿನ ಪಂದ್ಯ?:
150 ಕೂಡಾ ಉತ್ತಮ ಮೊತ್ತ ಎನಿಸಿದ್ದ ಪಿಚ್ನಲ್ಲಿ ಮೊದಲು ಬ್ಯಾಟಿಂಗ್ಗಿಳಿದ ಆರ್‌ಸಿಬಿ ಗಳಿಸಿದ್ದು 9 ವಿಕೆಟ್ಗೆ ಕೇವಲ 126 ರನ್. ಬ್ಯಾಟರ್ಗಳು ನಿರೀಕ್ಷಿತ ಮೊತ್ತ ಗಳಿಸದಿದ್ದರೂ ಬೌಲರ್ಗಳು ತಂಡದ ಕೈಹಿಡಿದರು. ಬಿಗು ದಾಳಿ ನಡೆಸಿ 19.5 ಓವರಲ್ಲಿ 108ಕ್ಕೆ ಆಲೌಟ್ ಮಾಡಿತು. ಶೂನ್ಯಕ್ಕೇ ವಿಕೆಟ್ ಕಳೆದುಕೊಂಡ ತಂಡದ ಪೆವಿಲಿಯನ್ ಪರೇಡ್ ಕೊನೆವರೆಗೂ ನಿಲ್ಲಿಲಿಲ್ಲ. ಕೆ.ಗೌತಮ್(23), ಕೃನಾಲ್(14), ಸ್ಟೋಯ್ನಿಸ್(13) ಬಿಟ್ಟರೆ ಉಳಿದವರಾರಯರೂ ಮಿಂಚಲಿಲ್ಲ.
IPL 2023 ಮೈದಾನದಲ್ಲೇ ಕಿತ್ತಾಡಿದ ಕೊಹ್ಲಿ-ಗಂಭೀರ್‌ಗೆ ಪಂದ್ಯದ ಶೇ.100 ರಷ್ಟು ದಂಡ!
ಕೇವಲ 38ಕ್ಕೆ ಪ್ರಮುಖ 5 ವಿಕೆಟ್ ಕಿತ್ತ ಆರ್‌ಸಿಬಿ ಬೌಲರ್ಸ್ ಪಂದ್ಯದ ಮೇಲಿನ ಹಿಡಿತ ಕೈಜಾರದಂತೆ ನೋಡಿಕೊಂಡರು. ಅಮಿತ್ ಮಿಶ್ರಾ(19), ನವೀನ್-ಉಲ್-ಹಕ್(13) ಹೋರಾಟ ತಂಡದ ಗೆಲುವಿಗೆ ಸಾಕಾಗಲಿಲ್ಲ. ಗಾಯದಿಂದಾಗಿ ಕೊನೆ ಕ್ರಮಾಂಕದಲ್ಲಿ ಕ್ರೀಸ್ಗಿಳಿದ ರಾಹುಲ್(00) ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ಜೋಶ್ ಹೇಜಲ್ವುಡ್, ಕರ್ಣ್ ಶರ್ಮಾ ತಲಾ 2 ವಿಕೆಟ್ ಪಡೆದರು.
ಆರಂಭಿಕರೇ ಆಸರೆ: ಆರ್ಸಿಬಿಯ ಮಾನ ಈ ಪಂದ್ಯದಲ್ಲೂ ಕಾಪಾಡಿದ್ದು ಆರಂಭಿಕರು. ನಿಧಾನಗತಿ ಪಿಚ್ನಲ್ಲಿ ರಕ್ಷಣಾತ್ಮಕ ಆಟಕ್ಕೆ ಒತ್ತುಕೊಟ್ಟಕೊಹ್ಲಿ(31) ಹಾಗೂ ಡು ಪ್ಲೆಸಿ(44) 9 ಓವರಲ್ಲಿ 62 ರನ್ ಜೊತೆಯಾಟವಾಡಿದರೂ ಆ ಬಳಿಕ ತಂಡವನ್ನು ಮೇಲೆತ್ತಲು ಯಾರೂ ಬರಲಿಲ್ಲ. ಎಂದಿನಂತೆ ಮಧ್ಯಮ ಕ್ರಮಾಂಕದ ವೈಫಲ್ಯಕ್ಕೊಳಗಾದ ತಂಡ ನಿರೀಕ್ಷಿಸಿದ್ದಕ್ಕಿಂತಲೂ ಕಡಿಮೆ ಮೊತ್ತ ಗಳಿಸಿತು. ಕಾರ್ತಿಕ್(16) ಬಿಟ್ಟರೆ ಉಳಿದ್ಯಾವ ಬ್ಯಾಟರ್ ಕೂಡಾ ಎರಡಂಕಿ ಮೊತ್ತ ಗಳಿಸಲಿಲ್ಲ.
ಸ್ಕೋರ್: ಆರ್‌ಸಿಬಿ 20 ಓವರಲ್ಲಿ 126/9( ಡು ಪ್ಲೆಸಿಸ್ 44, ಕೊಹ್ಲಿ 31, ನವೀನ್ 3-30),
ಲಖನೌ 19.5 ಓವರಲ್ಲಿ 108(ಗೌತಮ್ 23, ಮಿಶ್ರಾ 19, ಹೇಜಲ್ವುಡ್ 2-15)
ಟರ್ನಿಂಗ್ ಪಾಯಿಂಟ್
ಆರ್‌ಸಿಬಿ ನಿರೀಕ್ಷಿಸಿದ್ದಕ್ಕಿಂತ ಕಡಿಮೆ ಮೊತ್ತ ಗಳಿಸಿದರೂ, ಲಖನೌನ ಬ್ಯಾಟರ್ಗಳನ್ನು ಪವರ್-ಪ್ಲೇನಲ್ಲೇ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. 38ಕ್ಕೆ 6 ವಿಕೆಟ್ ಕಳೆದುಕೊಂಡ ಬಳಿಕ ಸೂಕ್ತ ಜೊತೆಯಾಟ ಸಿಗದೆ ಲಖನೌ ಸೋಲನುಭವಿಸಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.