ಲಂಕಾ ಬೌಲರ್‌ಗಳ ಸಂಘಟಿತ ಪ್ರದರ್ಶನಕ್ಕೆ ಹಾಲಿ ಚಾಂಪಿಯನ್ ಇಂಗ್ಲೆಂಡ್ ತತ್ತರಿಸಿ ಹೋಗಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಜೋಸ್ ಬಟ್ಲರ್ ಪಡೆ ಕೇವಲ 156 ರನ್‌ಗಳಿಗೆ ಸರ್ವಪತನ ಕಂಡಿದೆ.
ಬೆಂಗಳೂರು(ಅ.26): ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ತಂಡವು ತಾವು ಹಾಲಿ ಚಾಂಪಿಯನ್ ಎನ್ನುವುದನ್ನು ಮರೆತಂತೆ ಕಾಣುತ್ತಿದೆ. ಲಂಕಾ ಎದುರು ಗೆದ್ದು ಏಕದಿನ ವಿಶ್ವಕಪ್ ಸೆಮೀಸ್ ಆಸೆ ಜೀವಂತವಾಗಿರಿಸಿಕೊಳ್ಳುವ ಗುರಿ ಇಟ್ಟುಕೊಂಡು ಕಣಕ್ಕಿಳಿದಿದ್ದ ಇಂಗ್ಲೆಂಡ್ ತಂಡವು ಕೇವಲ 156 ರನ್‌ಗಳಿಗೆ ಸರ್ವಪತನ ಕಂಡಿದೆ. ಈ ಮೂಲಕ ಶ್ರೀಲಂಕಾಗೆ ಗೆಲ್ಲಲು ಸಾಧಾರಣ ಗುರಿ ನೀಡಿದೆ.
ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ದೊಡ್ಡ ಮೊತ್ತ ಕಲೆಹಾಕುವ ಲೆಕ್ಕಾಚಾರದೊಂದಿಗೆ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗದುಕೊಂಡರು. ಮೊದಲ ವಿಕೆಟ್‌ಗೆ ಜಾನಿ ಬೇರ್‌ಸ್ಟೋವ್ ಹಾಗೂ ಡೇವಿಡ್ ಮಲಾನ್ 6.3 ಓವರ್‌ಗಳಲ್ಲಿ 45 ರನ್‌ಗಳ ಜತೆಯಾಟವಾಡುವ ಮೂಲಕ ಸಾಧಾರಣ ಆರಂಭ ಒದಗಿಸಿಕೊಟ್ಟರು. ಆದರೆ ಮೊದಲ ವಿಕೆಟ್ ಪತನದ ಬಳಿಕ ಇಂಗ್ಲೆಂಡ್ ತಂಡವು ನಾಟಕೀಯ ಕುಸಿತ ಕಂಡಿತು. 28 ರನ್ ಗಳಿಸಿದ್ದ ಡೇವಿಡ್ ಮಲಾನ್ ಅವರನ್ನು ಬಲಿ ಪಡೆಯುವಲ್ಲಿ ಏಂಜಲೋ ಮ್ಯಾಥ್ಯೂಸ್ ಯಶಸ್ವಿಯಾದರು.
ಲಂಕಾ ದಾಳಿಗೆ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಬ್ಬಿಬ್ಬು..! 85 ರನ್‌ಗೆ ಅರ್ಧ ತಂಡ ಪೆವಿಲಿಯನ್‌ಗೆ
ದಿಢೀರ್ ಕುಸಿದ ಇಂಗ್ಲೆಂಡ್: 45 ರನ್‌ಗಳವರೆಗೆ ಯಾವುದೇ ವಿಕೆಟ್ ಕಳೆದುಕೊಳ್ಳದೇ ಮುನ್ನುಗ್ಗುತ್ತಿದ್ದ ಹಾಲಿ ಚಾಂಪಿಯನ್ ಇಂಗ್ಲೆಂಡ್ ಕ್ರಿಕೆಟ್ ತಂಡವು, ಮಲಾನ್ ವಿಕೆಟ್ ಪತನದ ಬಳಿಕ ನಾಟಕೀಯ ಕುಸಿತ ಕಂಡಿತು. ಇದಾದ ಬಳಿಕ ಇಂಗ್ಲೆಂಡ್ ತನ್ನ ಖಾತೆಗೆ 40 ರನ್ ಸೇರಿಸಿವಷ್ಟರಲ್ಲಿ ಪ್ರಮುಖ 5 ವಿಕೆಟ್ ಕಳೆದುಕೊಳ್ಳುವ ಮೂಲಕ ನಾಟಕೀಯ ಕುಸಿತ ಕಂಡಿತು. ಜೋ ರೂಟ್ 3 ರನ್ ಬಾರಿಸಿ ರನೌಟ್ ಆದರೆ, ಜಾನಿ ಬೇರ್‌ಸ್ಟೋವ್ ಬ್ಯಾಟಿಂಗ್ 30 ರನ್‌ಗಳಿಗೆ ಸೀಮಿತವಾಯಿತು. ಇನ್ನು ನಾಯಕ ಜೋಸ್ ಬಟ್ಲರ್ 8 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಲಿಯಮ್ ಲಿವಿಂಗ್‌ಸ್ಟೋನ್ ಕೇವಲ ಒಂದು ರನ್ ಗಳಿಸಿ ಲಹಿರು ಕುಮಾರಗೆ ಎರಡನೇ ಬಲಿಯಾದರು.
Sri Lankan bowlers on fire! 🔥🔥🔥
England's batters held to 156. Now, it's our turn to roar! 🏏🦁 pic.twitter.com/dYG2EBelBI
ಇನ್ನು ಮಧ್ಯಮ ಕ್ರಮಾಂಕದಲ್ಲಿ 2019ರ ಏಕದಿನ ವಿಶ್ವಕಪ್ ಹೀರೋ ಬೆನ್ ಸ್ಟೋಕ್ಸ್ ನೆಲಕಚ್ಚಿ ಆಡುವ ಯತ್ನ ನಡೆಸಿದರಾದರೂ, ಮತ್ತೊಂದು ತುದಿಯಲ್ಲಿ ಅವರಿಗೆ ಸೂಕ್ತ ಸಾಥ್ ಸಿಗಲಿಲ್ಲ. ಬೆನ್ ಸ್ಟೋಕ್ಸ್ 73 ಎಸೆತಗಳನ್ನು ಎದುರಿಸಿ 6 ಬೌಂಡರಿ ಸಹಿತ 43 ರನ್ ಬಾರಿಸಿ ಲಹಿರು ಕುಮಾರಗೆ ಮೂರನೇ ಬಲಿಯಾದರು.
ICC World Cup 2023: ಬೆಂಗಳೂರಿನಲ್ಲಿಂದು ಲಂಕಾ vs ಇಂಗ್ಲೆಂಡ್ ಫೈಟ್..!
ಇನ್ನು ಮೋಯಿನ್ ಅಲಿ 15 ಹಾಗೂ ಡೇವಿಡ್ ವಿಲ್ಲಿ 14 ರನ್ ಬಾರಿಸಿದ್ದು ಬಿಟ್ಟರೆ, ಉಳಿದ್ಯಾವ ಬ್ಯಾಟರ್‌ಗಳು ಎರಡಂಕಿ ಮೊತ್ತ ದಾಖಲಿಸಲು ಕೂಡಾ ಯಶಸ್ವಿಯಾಗಲಿಲ್ಲ. ಅಂತಿಮವಾಗಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವು 33.2 ಓವರ್‌ಗಳಲ್ಲಿ 156 ರನ್‌ಗಳಿಗೆ ಸರ್ವಪತನ ಕಂಡಿತು.
ಶ್ರೀಲಂಕಾ ಪರ ಅತ್ಯಂತ ಶಿಸ್ತುಬದ್ದ ದಾಳಿ ನಡೆಸಿದ ಲಹಿರು ಕುಮಾರ 35 ರನ್ ನೀಡಿ 3 ವಿಕೆಟ್ ಪಡೆದರೆ, ಕಸುನ್ ರಜಿತಾ ಹಾಗೂ ಏಂಜಲೋ ಮ್ಯಾಥ್ಯೂಸ್ ತಲಾ 2 ವಿಕೆಟ್ ಕಬಳಿಸಿದರು. ಇನ್ನು ಮಿಸ್ಟ್ರಿ ಸ್ಪಿನ್ನರ್ ಖ್ಯಾತಿಯ ಮಹೀಶ್ ತೀಕ್ಷಣ ಒಂದು ವಿಕೆಟ್ ತಮ್ಮ ಖಾತೆಗೆ ಸೇರಿಸಿಕೊಂಡರು.