ICC World Cup 2023 ಇಂಗ್ಲೆಂಡ್ ಎದುರು ಪಾಕಿಸ್ತಾನ ಪವಾಡ ಮಾಡುತ್ತಾ?

By Naveen Kodase  |  First Published Nov 11, 2023, 11:39 AM IST

ಪಾಕ್ ಆಡಿರುವ 8 ಪಂದ್ಯಗಳಲ್ಲಿ 4ರಲ್ಲಿ ಗೆದ್ದಿದ್ದು, +0.036 ನೆಟ್ ರನ್‌ರೇಟ್‌ನೊಂದಿಗೆ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಸೆಮೀಸ್‌ಗೇರಲು ಪಾಕಿಸ್ತಾನಕ್ಕೆ ಪ್ರಾಯೋಗಿಕವಾಗಿ ಸಾಧ್ಯವಿಲ್ಲದಿದ್ದರೂ ಲೆಕ್ಕಾಚಾರದ ಪ್ರಕಾರ ಇನ್ನೂ ಅವಕಾಶವಿದೆ.


ಕೋಲ್ಕತಾ(ನ.11): ಟ್ರೋಫಿಯ ಕನಸಿನೊಂದಿಗೆ ಭಾರತಕ್ಕೆ ವಿಶ್ವಕಪ್ ಆಡಲು ಆಗಮಿಸಿದ್ದರೂ ಟೂರ್ನಿಯುದ್ದಕ್ಕೂ ಸಾಧಾರಣ ಪ್ರದರ್ಶನ ತೋರಿದ ಪಾಕಿಸ್ತಾನ ಈಗ ಪವಾಡದ ನಿರೀಕ್ಷೆಯಲ್ಲಿದೆ. ತಂಡ ಇನ್ನೇನು ಮಾಡಿದರೂ ಸೆಮೀಸ್‌ಗೇರುವುದು ಅಸಾಧ್ಯ ಎಂಬಂತಿದ್ದು, ನಿರ್ಣಾಯಕ ಪಂದ್ಯದಲ್ಲಿ ಶನಿವಾರ ಇಂಗ್ಲೆಂಡ್ ವಿರುದ್ಧ ಸೆಣಸಾಡಲಿದೆ.

ಪಾಕ್ ಆಡಿರುವ 8 ಪಂದ್ಯಗಳಲ್ಲಿ 4ರಲ್ಲಿ ಗೆದ್ದಿದ್ದು, +0.036 ನೆಟ್ ರನ್‌ರೇಟ್‌ನೊಂದಿಗೆ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಸೆಮೀಸ್‌ಗೇರಲು ಪಾಕಿಸ್ತಾನಕ್ಕೆ ಪ್ರಾಯೋಗಿಕವಾಗಿ ಸಾಧ್ಯವಿಲ್ಲದಿದ್ದರೂ ಲೆಕ್ಕಾಚಾರದ ಪ್ರಕಾರ ಇನ್ನೂ ಅವಕಾಶವಿದೆ. ಸದ್ಯ ನ್ಯೂಜಿಲೆಂಡ್ +0.743 ನೆಟ್ ರನ್ ರೇಟ್‌ನೊಂದಿಗೆ 4ನೇ ಸ್ಥಾನದಲ್ಲಿದ್ದು, ಕಿವೀಸನ್ನು ಪಾಕ್ ಹಿಂದಿಕ್ಕಿ 4ನೇ ಸ್ಥಾನಿಯಾಗಬೇಕಿದ್ದರೆ ಇಂಗ್ಲೆಂಡ್ ವಿರುದ್ಧ ಕನಿಷ್ಠ 287 ರನ್‌ಗಳಿಂದ ಗೆಲ್ಲಬೇಕು. ಅಂದರೆ ಮೊದಲು ಬ್ಯಾಟ್ ಮಾಡಿ 300 ರನ್ ಗಳಿಸಿದರೆ ಆಗ ಇಂಗ್ಲೆಂಡನ್ನು 12 ರನ್ ಗೆ ಕಟ್ಟಿಹಾಕಬೇಕು. 400 ರನ್ ಹೊಡೆದರೆ ಇಂಗ್ಲೆಂಡನ್ನು 112 ರನ್‌ಗೆ ನಿಯಂತ್ರಿಸಬೇಕು.
ಒಂದು ವೇಳೆ ಪಾಕ್‌ಗೆ ಚೇಸಿಂಗ್ ಸಿಕ್ಕರೆ 2.4 ಓವರ್‌ಗಳಲ್ಲಿ ಗುರಿ ತಲುಪಬೇಕು. ಹೀಗಾದರೆ ಮಾತ್ರ ತಂಡ ಸೆಮೀಸ್‌ಗೇರಲು ಸಾಧ್ಯವಿದ್ದು, ಅಲ್ಲದಿದ್ದರೆ ತವರಿಗೆ ಗಂಟುಮೂಟೆ ಕಟ್ಟಲಿದೆ.

Latest Videos

undefined

Shot of the Century ಬಗ್ಗೆ ಪ್ರತಿಕ್ರಿಯಿಸಿದ ಕಿಂಗ್ ಕೊಹ್ಲಿ, 'ಅದು ಹೇಗಾಯ್ತೋ ಗೊತ್ತಿಲ್ಲ'ವೆಂದ ಚೇಸ್ ಮಾಸ್ಟರ್

ಮತ್ತೊಂದೆಡೆ ಇಂಗ್ಲೆಂಡ್ ಪಾಲಿಗೂ ಈ ಪಂದ್ಯ ಮಹತ್ವದ್ದು. ತಂಡ ಈಗಾಗಲೇ ಸೆಮೀಸ್ ರೇಸ್ ನಿಂದ ಹೊರಗುಳಿದಿದ್ದರೂ 2025ರ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯಲು ಈ ಪಂದ್ಯದಿಂದ ಸಾಧ್ಯವಿದೆ. ಸದ್ಯ ತಂಡ 8 ಪಂದ್ಯಗಳಲ್ಲಿ 2ರಲ್ಲಿ ಗೆದ್ದು 7ನೇ ಸ್ಥಾನದಲ್ಲಿದ್ದು, ಲೀಗ್ ಹಂತದ ಮುಕ್ತಾಯಕ್ಕೆ ಅಗ್ರ 8ರೊಳಗೆ ಸ್ಥಾನ ಗಿಟ್ಟಿಸಬೇಕಿದ್ದರೆ ಈ ಪಂದ್ಯದಲ್ಲಿ ಜಯ ಅಗತ್ಯ

ನಮ್ಮ ಯೋಜನೆಗಳು ಸ್ಪಷ್ಟ. ಗುರಿ ಸಾಧಿಸಲು ನಾವು ಗರಿಷ್ಠ ಮಟ್ಟದಲ್ಲಿ ಪ್ರಯತ್ನಿಸುತ್ತೇವೆ. ಯೋಜನಾಬದ್ಧವಾಗಿ ಆಡಿದರೆ ಎಲ್ಲವೂ ಸಾಧ್ಯವಿದೆ. ಫಖರ್‌ 20-30 ಓವರ್‌ವರೆಗೆ ಇದ್ದರೆ ಗುರಿ ಸಾಧಿಸಬಹುದು. ಇಫ್ತಿಕಾರ್, ರಿಜ್ವಾನ್‌ಗೆ ಪಂದ್ಯದ ಚಿತ್ರಣ ಬದಲಿಸುವ ತಾಕತ್ತಿದೆ. - ಬಾಬರ್ ಆಜಂ ಪಾಕ್ ನಾಯಕ

ಕ್ರಿಕೆಟ್‌ ವಿಶ್ವಕಪ್‌ಗೂ ದೀಪಾವಳಿ ಟಚ್‌, ಗೇಟ್‌ವೇ ಆಫ್‌ ಇಂಡಿಯಾದಲ್ಲಿ ಬೆಳಕಿನ ಚಿತ್ತಾರ!

ಸಂಭವನೀಯ ಆಟಗಾರರ ಪಟ್ಟಿ:

ಇಂಗ್ಲೆಂಡ್:

ಜಾನಿ ಬೇರ್‌ಸ್ಟೋವ್, ಡೇವಿಡ್ ಮಲಾನ್, ಜೋ ರೂಟ್, ಬೆನ್ ಸ್ಟೋಕ್ಸ್‌, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್(ನಾಯಕ), ಮೋಯಿನ್ ಅಲಿ, ಕ್ರಿಸ್ ವೋಕ್ಸ್, ಡೇವಿಡ್ ವಿಲ್ಲಿ, ಆಟ್ಕಿನ್ಸನ್, ಆದಿಲ್ ರಶೀದ್.

ಪಾಕಿಸ್ತಾನ:

ಅಬ್ದುಲ್ಲಾ ಶಫೀಕ್, ಫಖರ್ ಜಮಾನ್, ಬಾಬರ್ ಅಜಂ(ನಾಯಕ), ಮೊಹಮ್ಮದ್ ರಿಜ್ವಾನ್, ಸೌದ್ ಶಕೀಲ್, ಇಫ್ತಿಕಾರ್ ಅಹಮ್ಮದ್, ಆಗಾ ಸಲ್ಮಾನ್, ಹಸನ್ ಅಲಿ, ಶಾಹೀನ್ ಅಫ್ರಿದಿ, ಇಮಾದ್ ವಸೀಂ, ಹ್ಯಾರಿಸ್ ರೌಫ್. 

ಪಂದ್ಯ ಆರಂಭ: ಮಧ್ಯಾಹ್ನ 2 ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ+ ಹಾಟ್‌ಸ್ಟಾರ್.
 

click me!