ಭಾರತದ ಮಿಂಚಿನ ಬೌಲಿಂಗ್ ಪ್ರದರ್ಶನಕ್ಕೆ ಮತ್ತೊಂದು ಭರ್ಜರಿ ಗೆಲುವಿನ ದಾಖಲೆ ನಿರ್ಮಾಣವಾಗಿದೆ. ಮೊನ್ನೆ ಲಂಕಾ ತಂಡವನ್ನು 55 ರನ್‌ಗೆ ಆಲೌಟ್ ಮಾಡಿದ್ದ ಟೀಂ ಇಂಡಿಯಾ, ಇದೀಗ ಸೌತ್ ಆಫ್ರಿಕಾ ತಂಡವನ್ನು 83 ರನ್‌ಗೆ ಆಲೌಟ್ ಆಗಿದೆ. ಇದರೊಂದಿಗೆ 243 ರನ್ ಭರ್ಜರಿ ಗೆಲುವು ದಾಖಲಿಸಿದ ಭಾರತ, 8ರಲ್ಲಿ 8 ಪಂದ್ಯ ಗೆದ್ದ ಸಾಧನೆ ಮಾಡಿದೆ.
ಕೋಲ್ಕತಾ(ನ.05) ಐಸಿಸಿ ವಿಶ್ವಕಪ್ 2023ರ ಟೂರ್ನಿಯಲ್ಲಿ ಭಾರತ 8ನೇ ಗೆಲುವು ದಾಖಲಿಸಿದೆ. ಶ್ರೀಲಂಕಾ ಬಳಿಕ ಸೌತ್ ಆಫ್ರಿಕಾ ವಿರುದ್ಧವೂ ಭಾರತ ಮಾರಕ ಬೌಲಿಂಗ್ ದಾಳಿ ಸಂಘಟಿಸಿದೆ. ಇದರ ಪರಿಣಾಮ ಸೌತ್ ಆಫ್ರಿಕಾ 83 ರನ್‌ಗೆ ಆಲೌಟ್ ಆಗಿದೆ. ಟೀಂ ಇಂಡಿಯಾ 243 ರನ್ ಗೆಲುವು ದಾಖಲಿಸಿದೆ. ಲೀಗ್ ಹಂತದ 8 ಪಂದ್ಯ ಗೆದ್ದಿರುವ ಭಾರತ ಕೊನೆಯ ಪಂದ್ಯದಲ್ಲಿ ನೆದರ್ಲೆಂಡ್ ವಿರುದ್ಧ ಹೋರಾಟ ನಡೆಸಲಿದೆ.
ಹುಟ್ಟುಹಬ್ಬದ ದಿನವೇ ವಿರಾಟ್ ಕೊಹ್ಲಿ ಸೆಂಚುರಿ ಸಿಡಿಸಿ ಅಬ್ಬರಿಸಿದ್ದರು. ಹೀಗಾಗಿ ಭಾರತ 327 ರನ್ ಟಾರ್ಗೆಟ್ ನೀಡಿತ್ತು. ಸೌತ್ ಆಫ್ರಿಕಾ ಬ್ಯಾಟಿಂಗ್ ಸ್ಟ್ರೆಂಥ್ ಚೆನ್ನಾಗಿದೆ. ಆದರೆ ಭಾರತದ ಬಲಿಷ್ಠ ಬೌಲಿಂಗ್ ಪಡೆ ಹರಿಣಗಳಿಗೆ ಅವಕಾಶವೇ ನೀಡಲಿಲ್ಲ. ಎರಡನೇ ಓವರ್‌ನಿಂದಲೇ ವಿಕೆಟ್ ಬೇಟೆ ಆರಂಭಗೊಂಡಿತು. ಮೊಹಮ್ಮದ್ ಸಿರಾಜ್ ಎಸೆತದಲ್ಲಿ ಕ್ವಿಂಟನ್ ಡಿಕಾಕ್ ಬೋಲ್ಡ್ ಆಗಿ ಪೆವಿಲಿಯನ್ ಸೇರಿದರು.
ವಿಶ್ವಕಪ್ ಟೂರ್ನಿಯಲ್ಲಿ ನಿರಾಸೆ ಮೂಡಿಸಿದ ನಾಯಕ ತೆಂಬಾ ಬವುಮಾ ಭಾರತ ವಿರುದ್ಧವೂ ನೆಲೆ ಕಂಡಕೊಳ್ಳಲಿಲ್ಲ. ಇದಕ್ಕೆ ಅವಕಾಶವೂ ಇರಲಿಲ್ಲ. ರವಿಂದ್ರ ಜಡೇಜಾ ಮೋಡಿಗೆ ಬವುಮಾ 11 ರನ್ ಸಿಡಿಸಿ ನಿರ್ಗಮಿಸಿದರು. ಇತ್ತ ಮೊಹಮ್ಮದ್ ಶಮಿ ದಾಳಿ ಆರಂಭಗೊಂಡಿತು. 9 ರನ್ ಸಿಡಿಸಿದ್ದ ಆ್ಯಡಿನ್ ಮರ್ಕ್ರಮ್ ವಿಕೆಟ್ ಪತನಗೊಂಡಿತು.
ರವೀಂದ್ರ ಜಡೇಜಾ ಸ್ಪಿನ್ ಮೋಡಿ ಸೌತ್ ಆಫ್ರಿಕಾ ತಂಡಕ್ಕೆ ಇನ್ನಿಲ್ಲದ ಸಂಕಷ್ಟ ನೀಡಿತು. 13 ರನ್ ಸಿಡಿಸಿ ಆಸರೆಯಾಗಿದ್ದ ರಸಿ ವ್ಯಾಂಡರ್ ಡುಸೆನ್ ವಿಕೆಟ್ ಪತನ ಸೌತ್ ಆಫ್ರಿಕಾ ತಂಡಕ್ಕೆ ಮತ್ತಷ್ಟು ಆಘಾತ ನೀಡಿತು. ಡೇವಿಡ್ ಮಿಲ್ಲರ್ 11 ರನ್ ಸಿಡಿಸಿ ಔಟಾದರು. ಕೇಶವ್ ಮಹಾರಾಜ್ ಕೇವಲ 7 ರನ್ ಸಿಡಿಸಿ ನಿರಾಸೆ ಮೂಡಿಸಿದರು.
ಮಾರ್ಕೋ ಜಾನ್ಸೆನ್, ಕಾಗಿಸೋ ರಬಾಡ ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಜಾನ್ಸೆನ್ 14 ರನ್ ಕಾಣಿಕೆ ನೀಡುವ ಮೂಲಕ ಸೌತ್ ಆಫ್ರಿಕಾ ಪರ ಗರಿಷ್ಠ ರನ್ ಸಿಡಿಸಿದ ಬ್ಯಾಟ್ಸ್‌ಮನ್ ಅನ್ನೋ ಹೆಗ್ಗಳಿಗೆಗೆ ಪಾತ್ರರಾದರು. ಅಂತಿಮವಾಗಿ ಲುಂಗಿ ಎನ್‌ಗಿಡಿ ವಿಕೆಟ್ ಪತನದೊಂದಿಗೆ ಸೌತ್ ಆಫ್ರಿಕಾ 27.1 ಓವರ್‌ಗಳಲ್ಲಿ 80 ರನ್‌ಗೆ ಆಲೌಟ್ ಆಯಿತು. ಭಾರತ 243 ರನ್ ಗೆಲುವು ದಾಖಲಿಸಿತು.
ರವೀಂದ್ರ ಜಡೇಜಾ 5 ವಿಕೆಟ್ ಕಬಳಿಸಿದರೆ, ಮೊಹಮ್ಮದ್ ಶಮಿ, ಕುಲ್ದೀಪ್ ಯಾದವ್ ತಲಾ 2, ಮೊಹಮ್ಮದ್ ಸಿರಾಜ್ 1 ವಿಕೆಟ್ ಪಡೆದು ಮಿಂಚಿದರು.