ICC World Cup 2023: ಪಾಕ್ ಮಣಿಸಿ ವಿಶ್ವಕಪ್‌ಗೆ ಗುಡ್‌ಬೈ ಹೇಳಿದ ಇಂಗ್ಲೆಂಡ್..!

By Kannadaprabha News  |  First Published Nov 12, 2023, 9:03 AM IST

ಪಾಕ್‌ ತಂಡ ನ್ಯೂಜಿಲೆಂಡನ್ನು ನೆಟ್‌ ರನ್‌ರೇಟ್‌ನಲ್ಲಿ ಹಿಂದಿಕ್ಕಿ ಸೆಮೀಸ್‌ಗೇರಬೇಕಿದ್ದರೆ ಇಂಗ್ಲೆಂಡ್‌ ವಿರುದ್ಧ ಕನಿಷ್ಠ 287 ರನ್‌ಗಳಿಂದ ಗೆಲ್ಲಬೇಕಿತ್ತು. ಆದರೆ ಟಾಸ್‌ ಗೆದ್ದ ಇಂಗ್ಲೆಂಡ್‌ ಬ್ಯಾಟಿಂಗ್‌ ಆಯ್ಕೆ ಮಾಡಿಕೊಳ್ಳುವುದರೊಂದಿಗೆ ಪಂದ್ಯ ಆರಂಭಕ್ಕೂ ಮುನ್ನವೇ ಪಾಕ್‌ನ ಸೆಮೀಸ್‌ ಕನಸು ಭಗ್ನಗೊಂಡಿತ್ತು.


ಕೋಲ್ಕತಾ(ನ.12): ವಿಶ್ವಕಪ್‌ ಸೆಮಿಫೈನಲ್‌ಗೇರಬೇಕಿದ್ದರೆ ಪವಾಡ ಮಾಡಲೇಬೇಕಿದ್ದ ಪಂದ್ಯದಲ್ಲಿ ಹೀನಾಯ ಸೋಲಿನ ಮುಖಭಂಗಕ್ಕೊಳಗಾದ ಪಾಕಿಸ್ತಾನ, ಲೀಗ್‌ ಹಂತದಿಂದಲೇ ಟೂರ್ನಿಯಿಂದ ಹೊರನಡೆದಿದೆ. ಇಂಗ್ಲೆಂಡ್‌ ವಿರುದ್ಧ 93 ರನ್‌ ಹೀನಾಯ ಸೋಲುಂಡ ಪಾಕ್‌ ಅಂಕಪಟ್ಟಿಯಲ್ಲಿ 5ನೇ ಸ್ಥಾನಿಯಾಗಿ ಗಂಟುಮೂಟೆ ಕಟ್ಟಿತು. ನಿರ್ಣಾಯಕ ಪಂದ್ಯದಲ್ಲಿ ಜಯದೊಂದಿಗೆ ಇಂಗ್ಲೆಂಡ್ 2025ರ ಚಾಂಪಿಯನ್ಸ್‌ ಟ್ರೋಫಿಗೆ ಅರ್ಹತೆ ಗಿಟ್ಟಿಸಿಕೊಂಡಿತು.

ಪಾಕ್‌ ತಂಡ ನ್ಯೂಜಿಲೆಂಡನ್ನು ನೆಟ್‌ ರನ್‌ರೇಟ್‌ನಲ್ಲಿ ಹಿಂದಿಕ್ಕಿ ಸೆಮೀಸ್‌ಗೇರಬೇಕಿದ್ದರೆ ಇಂಗ್ಲೆಂಡ್‌ ವಿರುದ್ಧ ಕನಿಷ್ಠ 287 ರನ್‌ಗಳಿಂದ ಗೆಲ್ಲಬೇಕಿತ್ತು. ಆದರೆ ಟಾಸ್‌ ಗೆದ್ದ ಇಂಗ್ಲೆಂಡ್‌ ಬ್ಯಾಟಿಂಗ್‌ ಆಯ್ಕೆ ಮಾಡಿಕೊಳ್ಳುವುದರೊಂದಿಗೆ ಪಂದ್ಯ ಆರಂಭಕ್ಕೂ ಮುನ್ನವೇ ಪಾಕ್‌ನ ಸೆಮೀಸ್‌ ಕನಸು ಭಗ್ನಗೊಂಡಿತ್ತು.

Latest Videos

undefined

ICC World Cup 2023: ನೆದರ್‌ಲೆಂಡ್ಸ್‌ ಬೇಟೆಗೆ ಅಜೇಯ ಟೀಂ ಇಂಡಿಯಾ ಸಜ್ಜು..!

ಬೆನ್‌ ಸ್ಟೋಕ್ಸ್(84) ಜೋ ರೂಟ್‌(60), ಬೇರ್‌ಸ್ಟೋವ್‌(59) ಅಬ್ಬರದಿಂದಾಗಿ ಇಂಗ್ಲೆಂಡ್‌ 9 ವಿಕೆಟ್‌ಗೆ 337 ರನ್‌ ಕಲೆಹಾಕಿತು. ಇಂಗ್ಲೆಂಡ್‌ ನೀಡಿದ ಬೃಹತ್‌ ಮೊತ್ತವನ್ನು ಪಾಕ್‌ಗೆ 6.2 ಓವರಲ್ಲಿ ಬೆನ್ನತ್ತಬೇಕಿತ್ತು. ಆದರೆ ಇದು ಅಸಾಧ್ಯ ಎಂದು ತಿಳಿದಿದ್ದ ಪಾಕ್‌, ಕನಿಷ್ಠ ಗೆಲುವಿನ ನಿರೀಕ್ಷೆಯೊಂದಿಗೆ ಕ್ರೀಸ್‌ಗಿಳಿಯಿತು. ಆದರೆ ಇಂಗ್ಲೆಂಡ್‌ ದಾಳಿಯನ್ನು ಎದುರಿಸಿ ನಿಲ್ಲಲು ಪಾಕ್‌ ಬ್ಯಾಟರ್‌ಗಳಿಗೆ ಸಾಧ್ಯವಾಗಲಿಲ್ಲ. ಆಘಾ ಸಲ್ಮಾನ್‌(51) ಏಕೈಕ ಅರ್ಧಶತಕ ಗಳಿಸಿದರೆ, ಕೊನೆಯಲ್ಲಿ ರೌಫ್‌(35), ಶಾಹೀನ್‌(25) ತಂಡವನ್ನು 200ರ ಗಡಿ ದಾಟಿಸಿದರು. 43.3 ಓವರಲ್ಲಿ ತಂಡ 244ಕ್ಕೆ ಆಲೌಟಾಯಿತು. ಒಂದು ವೇಳೆ ಪಾಕಿಸ್ತಾನ 188ಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟ್‌ ಆಗಿದ್ದರೆ, ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಕುಸಿಯುತ್ತಿತ್ತು. ಡೇವಿಡ್‌ ವಿಲ್ಲಿ ತಮ್ಮ ಕೊನೆಯ ಅಂ.ರಾ. ಪಂದ್ಯದಲ್ಲಿ ವಿಲ್ಲಿ 3 ವಿಕೆಟ್‌ ಕಿತ್ತರು.

ಸ್ಕೋರ್‌: 
ಇಂಗ್ಲೆಂಡ್‌ 50 ಓವರಲ್ಲಿ 337/9(ಸ್ಟೋಕ್ಸ್‌ 84, ರೂಟ್‌ 60, ರೌಫ್‌ 3-64)
ಪಾಕಿಸ್ತಾನ 43.3 ಓವರಲ್ಲಿ 244/10(ಸಲ್ಮಾನ್‌ 51, ಬಾಬರ್‌ 38, ವಿಲ್ಲಿ 3-56) 
ಪಂದ್ಯಶ್ರೇಷ್ಠ: ಡೇವಿಡ್‌ ವಿಲ್ಲಿ.

ಮಾರ್ಷ್‌ ಅಬ್ಬರಕ್ಕೆ ಬಾಂಗ್ಲಾ ತತ್ತರ!

ಪುಣೆ: ಮಿಚೆಲ್‌ ಮಾರ್ಷ್‌  ಸ್ಫೋಟಕ ಆಟದ ನೆರವಿನಿಂದ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಆಸ್ಟ್ರೇಲಿಯಾ 8 ವಿಕೆಟ್‌ ಭರ್ಜರಿ ಗೆಲುವು ಸಾಧಿಸಿದೆ. ಸತತ 7ನೇ ಜಯ ಸಾಧಿಸಿದ ತಂಡ ಅಂಕಪಟ್ಟಿಯಲ್ಲಿ 3ನೇ ಸ್ಥಾನಿಯಾಗಿ ರೌಂಡ್‌ ರಾಬಿನ್‌ ಹಂತ ಮುಕ್ತಾಯಗೊಳಿಸಿತು. ಬಾಂಗ್ಲಾ ಕೇವಲ 2 ಜಯದೊಂದಿಗೆ ಟೂರ್ನಿಗೆ ವಿದಾಯ ಹೇಳಿತು.

ಮೊದಲು ಬ್ಯಾಟ್‌ ಮಾಡಿದ ಬಾಂಗ್ಲಾ ಅನಿರೀಕ್ಷಿತ ಹೋರಾಟ ಪ್ರದರ್ಶಿಸಿ 8 ವಿಕೆಟ್‌ಗೆ 306 ರನ್‌ ಕಲೆಹಾಕಿತು. ದೊಡ್ಡ ಗುರಿಯನ್ನು ಬೆನ್ನತ್ತಿದರೂ ಆಸೀಸ್‌ ಯಾವುದೇ ಅಡ್ಡಿ ಆತಂಕವಿಲ್ಲದೇ 44.4 ಓವರಲ್ಲಿ ಜಯಗಳಿಸಿತು.

ಬೆಂಗಳೂರಿನ ಪಂದ್ಯಕ್ಕೆ ಟೀಂ ಇಂಡಿಯಾ ಕಾಂಬಿನೇಷನ್‌ ಬಗ್ಗೆ ಸುಳಿವು ನೀಡಿದ ರಾಹುಲ್ ದ್ರಾವಿಡ್..!

ಟ್ರ್ಯಾವಿಸ್‌ ಹೆಡ್‌(12) ಬೇಗನೇ ಔಟಾದರೂ, ವಾರ್ನರ್‌(53)- ಮಾರ್ಷ್‌ ಜೋಡಿ 2ನೇ ವಿಕೆಟ್‌ಗೆ 120 ರನ್‌ ಜೊತೆಯಾಟವಾಡಿತು. ಬಳಿಕ ಮಾರ್ಷ್‌-ಸ್ಮಿತ್‌(63) 3ನೇ ವಿಕೆಟ್‌ಗೆ 175 ರನ್‌ ಸೇರಿಸಿ ತಂಡವನ್ನು ಗೆಲ್ಲಿಸಿದರು. 132 ಎಸೆತಗಳಲ್ಲಿ 17 ಬೌಂಡರಿ, 9 ಸಿಕ್ಸರ್‌ನೊಂದಿಗೆ ಮಾರ್ಷ್‌ 177 ರನ್‌ ಸಿಡಿಸಿ ಗೆಲುವಿನ ರೂವಾರಿ ಎನಿಸಿಕೊಂಡರು.

ಬಾಂಗ್ಲಾ ಮಿಂಚು: ಟೂರ್ನಿಯುದ್ದಕ್ಕೂ ವಿಫಲವಾಗಿದ್ದ ಬಾಂಗ್ಲಾ ಬ್ಯಾಟರ್‌ಗಳು ಈ ಬಾರಿ ಸುಧಾರಿತ ಆಟವಾಡಿದರು. ತೌಹೀದ್‌ 74, ನಜ್ಮುಲ್‌ 45, ತಂಜೀದ್ 36, ಲಿಟನ್‌ ದಾಸ್‌ 36 ರನ್‌ ಗಳಿಸಿ ತಂಡ 300ರ ಗಡಿ ದಾಟಲು ನೆರವಾದರು.

ಸ್ಕೋರ್‌: 
ಬಾಂಗ್ಲಾದೇಶ 50ಓವರಲ್ಲಿ 306/8(ತೌಹೀದ್‌ 74, ನಜ್ಮುಲ್‌ 45, ಜಂಪಾ 2-32)
ಆಸ್ಟ್ರೇಲಿಯಾ 44.4 ಓವರಲ್ಲಿ 307/2(ಮಾರ್ಷ್‌ 177, ಸ್ಮಿತ್‌ 63, ತಸ್ಕೀನ್ 1-61) 
ಪಂದ್ಯಶ್ರೇಷ್ಠ: ಮಿಚೆಲ್‌ ಮಾರ್ಷ್‌

click me!