
ಕೋಲ್ಕತಾ(ನ.06): ಭಾರತ-ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದ ಟಿಕೆಟ್ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಸುದ್ದಿ ನಡುವೆಯೇ ತಮಗೆ ಸಿಕ್ಕ ಉಚಿತ ಪಾಸ್‌ಗಳನ್ನು ವಾಪಸ್ ನೀಡಿ, ಪಶ್ಚಿಮ ಬಂಗಾಳ ರಾಜ್ಯಪಾಲ ಆನಂದ ಬೋಸ್ ಅವರು ರಾಜಭವನದಲ್ಲೇ 500 ಕ್ರಿಕೆಟ್ ಅಭಿಮಾನಿಗಳ ಜೊತೆ ದೊಡ್ಡ ಪರದೆಯ ಮೇಲೆ ಪಂದ್ಯ ವೀಕ್ಷಿಸಿದ್ದಾರೆ.
ಈ ಬಗ್ಗೆ ರಾಜಭವನ ಅಧಿಕಾರಿಗಳು ಮಾಹಿತಿ ನೀಡಿದ್ದು, ತಮಗೆ ಸಿಕ್ಕ 4 ಪಾಸ್‌ಗಳನ್ನು ರಾಜ್ಯಪಾಲರು ಕ್ರೀಡಾಂಗಣಕ್ಕೆ ಮರಳಿಸಿದರು ಎಂದಿದ್ದಾರೆ. ರಾಜಭವನದಲ್ಲಿ ಪಂದ್ಯ ವೀಕ್ಷಿಸಲು ಅಭಿಮಾನಿಗಳು ಆನ್‌ಲೈನ್‌ನಲ್ಲಿ ಜಾಗ ಕಾಯ್ದಿರಿಸಬೇಕಿತ್ತು. ಇದರ ಹೊರತಾಗಿ ಮೊದಲು ಆಗಮಿಸಿದವರಿಗೆ ಪಂದ್ಯ ವೀಕ್ಷಣೆಗೆ ಅವಕಾಶ ನೀಡಲಾಯಿತು.
ಟಿಕೆಟ್ ಮಾರಾಟ ವಿವರ ನೀಡಿ: ಬಿಸಿಸಿಐಗೆ ಕೋಲ್ಕತಾ ಪೊಲೀಸ್ ನೋಟಿಸ್!
ಕೋಲ್ಕತಾ: ಈಡನ್ ಗಾರ್ಡನ್ಸ್‌ನ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ವಿಚಾರಕ್ಕೆ ಸಂಬಂಧಿಸಿದಂತೆ ಬಿಸಿಸಿಐಗೆ ಕೋಲ್ಕತಾ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ. ಪಂದ್ಯದ ಟಿಕೆಟ್‌ಗಳನ್ನು ಉದ್ದೇಶಪೂರ್ವಕವಾಗಿ ಶೇಖರಿಸಿಟ್ಟು, ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡಲಾಗಿದೆ ಎಂದು ಇತ್ತೀಚೆಗೆ ಅಭಿಮಾನಿಗಳಿಂದ ದೂರು ಸಲ್ಲಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿಗೆ ನೋಟಿಸ್ ನೀಡಿರುವ ಪೊಲೀಸರು, ಟಿಕೆಟ್ ಮಾರಾಟದ ಬಗ್ಗೆ ದಾಖಲೆ ಹಾಗೂ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ.
ICC World Cup 2023: ಇಂದು ಬಾಂಗ್ಲಾ vs ಲಂಕಾ ಮ್ಯಾಚ್ ನಡೆಯುತ್ತಾ?
ಕಾಳಸಂತೆಯಲ್ಲಿ ವಿಶ್ವಕಪ್ ಟಿಕೆಟ್: ಕೇಸ್ ದಾಖಲು!
ಕೋಲ್ಕತಾ: ಬಂಗಾಳ ಕ್ರಿಕೆಟ್ ಸಂಸ್ಥೆ(ಸಿಎಬಿ) ಹಾಗೂ ವಿಶ್ವಕಪ್ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿರುವ ಬುಕ್ ಮೈ ಶೋ ಸಂಸ್ಥೆ ಕಾಳಸಂತೆಯಲ್ಲಿ ಟಿಕೆಟ್ ಮಾರಾಟ ಮಾಡಿಸುತ್ತಿವೆ ಎಂದು ಹಲವು ಕ್ರಿಕೆಟ್ ಅಭಿಮಾನಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಭಾರತ ಹಾಗೂ ದ.ಆಫ್ರಿಕಾ ನಡುವೆ ನ.5ರಂದು ನಡೆಯಲಿರುವ ಪಂದ್ಯದ ಟಿಕೆಟ್‌ಗಳನ್ನು ದುಬಾರಿ ಮೊತ್ತಕ್ಕೆ ಕಾಳ ಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಇದರ ಹಿಂದೆ ಸಿಎಬಿ ಹಾಗೂ ಬುಕ್ ಮೈ ಶೋ ಸಂಸ್ಥೆಯ ಕೈವಾಡವಿದೆ ಎಂದು ಅಭಿಮಾನಿಗಳು ನೀಡಿದ ದೂರನ್ನು ದಾಖಲಿಸಿಕೊಂಡಿರುವ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.
ಟೀಂ ಇಂಡಿಯಾ ಜಯದ ಓಟಕ್ಕಿಲ್ಲ ಬ್ರೇಕ್!
ಕೋಲ್ಕತಾ: ಈ ವಿಶ್ವಕಪ್‌ನಲ್ಲಿ ಆಡುತ್ತಿರುವ ಭಾರತ ತಂಡವನ್ನು ತಕ್ಕಡಿಯ ಒಂದು ಕಡೆ ಇಟ್ಟು, ಉಳಿದ 8 ತಂಡಗಳನ್ನು ಮತ್ತೊಂದು ಕಡೆ ಇಟ್ಟರೆ ತೂಗಬಹುದು. ಏಕೆಂದರೆ ಎಲ್ಲಾ 8 ತಂಡಗಳು ತಮ್ಮದೇ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಮೇಲೇಳಲು ಒದ್ದಾಡುತ್ತಿದ್ದರೆ, ಇತ್ತ ಭಾರತ ತನ್ನ ಹಾದಿಯಲ್ಲಿ ಸಿಗುತ್ತಿರುವ ಎಲ್ಲಾ ಎದುರಾಳಿಗಳನ್ನು ಬಗ್ಗುಬಡಿದು ಮುಂದೆ ಸಾಗುತ್ತಿದೆ.
ಭಾನುವಾರ ಭಾರತದ ಜಯದ ರಥದಡಿ ಸಿಲುಕಿ ಅಪ್ಪಚ್ಚಿಯಾಗಿದ್ದು ಟೂರ್ನಿಯಲ್ಲಿ ಆಡುತ್ತಿರುವ ಬಲಿಷ್ಠ ತಂಡಗಳಲ್ಲಿ ಒಂದಾದ ದಕ್ಷಿಣ ಆಫ್ರಿಕಾ. ಕಠಿಣ ಪಿಚ್‌ನಲ್ಲಿ ಯೋಜನಾಬದ್ಧವಾಗಿ ಆಡಿ 326 ರನ್‌ಗಳ ಬೃಹತ್ ಮೊತ್ತ ದಾಖಲಿಸಿದ ಭಾರತ, ಹರಿಣಗಳನ್ನು 83 ರನ್‌ಗೆ ಆಲೌಟ್ ಮಾಡಿ 243 ರನ್‌ಗಳ ದೊಡ್ಡ ಗೆಲುವು ಸಂಪಾದಿಸಿತು.
ಪಂದ್ಯದ ನಡುವೆ ಶಾರುಖ್ ಖಾನ್ ಚಲೆಯಾ ಹಾಡು ಹಾಡಿ ಸಿಗ್ನೇಚರ್ ಸ್ಟೆಪ್ಸ್ ಹಾಕಿದ ಕೊಹ್ಲಿ!
ಸತತ 8ನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿದಿದ್ದು, ರೌಂಡ್ ರಾಬಿನ್ ಹಂತವನ್ನು ಅಗ್ರಸ್ಥಾನಿಯಾಗಿಯೇ ಮುಗಿಸುವುದು ಖಚಿತವಾಗಿದೆ. ಭಾರತದ ಸೆಮೀಸ್ ಎದುರಾಳಿ ಯಾರಗಲಿದ್ದಾರೆ ಎನ್ನುವುದು ಇನ್ಮುಂದಿರುವ ಕುತೂಹಲ. ಸೆಮೀಸ್ ಪ್ರವೇಶಿಸಿರುವ ದ.ಆಫ್ರಿಕಾ, 2ನೇ ಸ್ಥಾನದಲ್ಲೇ ಉಳಿಯಲಿದೆಯೇ ಅಥವಾ 3ನೇ ಸ್ಥಾನಕ್ಕೆ ಕುಸಿಯಲಿದೆಯೇ ಎನ್ನುವುದು ಮುಂದಿನ ಪಂದ್ಯದ ಫಲಿತಾಂಶದ ಬಳಿಕ ನಿರ್ಧಾರವಾಗಲಿದೆ.
ಹಿಂದಿನ ಪಂದ್ಯದಲ್ಲಿ ಭಾರತೀಯ ಬೌಲರ್‌ಗಳಿಂದ ಶ್ರೀಲಂಕನ್ನರಿಗೆ ಸಿಕ್ಕಿದ್ದ ಟ್ರೀಟ್ಮೆಂಟ್, ಈ ಪಂದ್ಯದಲ್ಲಿ ಹರಿಣಗಳಿಗೆ ಸಿಕ್ಕಿತು. ಒಬ್ಬರಿಲ್ಲದಿದ್ದರೆ ಮತ್ತೊಬ್ಬರು ಎಂಬಂತೆ ಪೈಪೋಟಿಗೆ ಬಿದ್ದವರಂತೆ ಭಾರತೀಯ ಬೌಲರ್‌ಗಳು ವಿಕೆಟ್‌ಗಳನ್ನು ಉರುಳಿಸಿದರು. ಟೂರ್ನಿಯಲ್ಲಿ 4 ಶತಕ ಸಿಡಿಸಿರುವ ಡಿ ಕಾಕ್‌ರನ್ನು ಮೊದಲು ಸಿರಾಜ್ ಬೌಲ್ಡ್ ಮಾಡಿದರೆ, ಜಡೇಜಾ ದಾಳಿಗಿಳಿದ 3ನೇ ಎಸೆತದಲ್ಲೇ ಬವುಮಾರನ್ನು ಹೊರಗಟ್ಟಿದರು. ಶಮಿಯ ಗುಡ್‌ಲೆಂಥ್ ಎಸೆತ ಮಾರ್ಕ್‌ರಮ್‌ರನ್ನು ಬಲಿ ಪಡೆಯಿತು. ಮೊದಲ ಪವರ್-ಪ್ಲೇನಲ್ಲೇ ಭಾರತ ಮೇಲುಗೈ ಸಾಧಿಸಿತು.
ಕ್ಲಾಸೆನ್ ಹಾಗೂ ಡುಸ್ಸೆನ್‌ರನ್ನು ಡಿಆರ್‌ಎಸ್ ಸಹಾಯದಿಂದ ಪೆವಿಲಿಯನ್‌ಗಟ್ಟುವಲ್ಲಿ ಭಾರತ ಯಶಸ್ವಿಯಾಯಿತು. 14 ಓವರ್‌ಗಳೊಳಗೆ ದಕ್ಷಿಣ ಆಫ್ರಿಕಾ 40 ರನ್‌ಗೆ 5 ವಿಕೆಟ್ ಕಳೆದುಕೊಂಡಾಗ ಪುಟಿದೇಳುವ ಸಾಧ್ಯತೆಯೇ ಉಳಿಯಲಿಲ್ಲ.
ಇನ್ನುಳಿದ 5 ವಿಕೆಟ್‌ಗಳನ್ನು ಕಬಳಿಸಲು ಭಾರತೀಯ ಬೌಲರ್‌ಗಳಿಗೆ ಹೆಚ್ಚು ಸಮಯ ಬೇಕಾಗಲಿಲ್ಲ. 27.1 ಓವರಲ್ಲಿ ದ.ಆಫ್ರಿಕಾ 83 ರನ್‌ಗೆ ಆಲೌಟ್ ಆಯಿತು. ಜಡೇಜಾ 5, ಶಮಿ ಹಾಗೂ ಕುಲ್ದೀಪ್ ತಲಾ 2, ಸಿರಾಜ್‌ಗೆ 1 ವಿಕೆಟ್ ಸಿಕ್ಕಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.