ಅಂಡರ್‌ 19 ವಿಶ್ವಕಪ್: ಟೀಂ ಇಂಡಿಯಾಗಿಂದು ಜಪಾನ್ ಎದುರಾಳಿ

By Kannadaprabha NewsFirst Published Jan 21, 2020, 9:47 AM IST
Highlights

ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿಂದು ಹಾಲಿ ಚಾಂಪಿಯನ್ ಭಾರತ ತಂಡವು ಜಪಾನ್ ತಂಡದೆದುರು ಸೆಣಸಲಿದೆ. ಈಗಾಗಲೇ ಲಂಕಾ ದಹನ ಮಾಡಿರುವ ಪ್ರಿಯಂ ಗರ್ಗ್‌ ಪಡೆ ಮತ್ತೊಂದು ಅಂತಹದ್ದೇ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ..

ಬ್ಲೂಮ್‌ಫಾಂಟೈನ್‌(ಜ.21): ಭರ್ಜರಿ ಗೆಲುವಿನೊಂದಿಗೆ ಐಸಿಸಿ ಅಂಡರ್‌-19 ಏಕದಿನ ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಶುಭಾರಂಭ ಮಾಡಿರುವ ಹಾಲಿ ಚಾಂಪಿಯನ್‌ ಭಾರತ, ಮಂಗಳವಾರ ‘ಎ’ ಗುಂಪಿನ 2ನೇ ಪಂದ್ಯದಲ್ಲಿ ಕ್ರಿಕೆಟ್‌ ಶಿಶು ಜಪಾನ್‌ ವಿರುದ್ಧ ಸೆಣಸಲಿದೆ. ಈ ಪಂದ್ಯದಲ್ಲಿ ಗೆದ್ದರೆ ಭಾರತ ತಂಡ ಕ್ವಾರ್ಟರ್‌ ಫೈನಲ್‌ ಪ್ರವೇಶಿಸುವುದು ಬಹುತೇಕ ಖಚಿತವಾಗಲಿದೆ.

ಐಸಿಸಿ ಅಂಡರ್‌-19 ವಿಶ್ವಕಪ್‌: ಟೀಂ ಇಂಡಿಯಾ ಶುಭಾರಂಭ

ಭಾನುವಾರ ನಡೆದಿದ್ದ ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಆಲ್ರೌಂಡ್‌ ಪ್ರದರ್ಶನ ತೋರಿದ್ದ ಟೀಂ ಇಂಡಿಯಾ 90 ರನ್‌ಗಳ ಗೆಲುವು ಸಾಧಿಸಿತ್ತು. ಗುಂಪು ಹಂತದ ಅಂತಿಮ ಪಂದ್ಯವನ್ನು ಜ.24ಕ್ಕೆ ನ್ಯೂಜಿಲೆಂಡ್‌ ವಿರುದ್ಧ ಆಡಲಿದೆ.

ತಂಡದ ಬ್ಯಾಟಿಂಗ್‌ ತಾರೆಯರಾದ ಯಶಸ್ವಿ ಜೈಸ್ವಾಲ್‌, ನಾಯಕ ಪ್ರಿಯಂ ಗರ್ಗ್‌, ಧೃವ್‌ ಜುರೆಲ್‌, ದಿವ್ಯಾನ್ಶ್ ಸಕ್ಸೇನಾ ಉತ್ತಮ ಲಯದಲ್ಲಿದ್ದಾರೆ. ಬೌಲರ್‌ಗಳಾದ ಕಾರ್ತಿಕ್‌ ತ್ಯಾಗಿ, ಆಕಾಶ್‌ ಸಿಂಗ್‌, ರವಿ ಬಿಶ್ನೋಯಿ, ಶುಭಾಂಗ್‌ ಹೆಗ್ಡೆ, ಆಲ್ರೌಂಡರ್‌ ಸಿದ್ಧೇಶ್‌ ವೀರ್‌ ಮತ್ತೊಮ್ಮೆ ಮಿಂಚಲು ಸಿದ್ಧಗೊಂಡಿದ್ದಾರೆ. ಭಾರತ ಮೊದಲು ಬ್ಯಾಟ್‌ ಮಾಡಿದರೆ ಬೃಹತ್‌ ಮೊತ್ತ ಕಲೆಹಾಕುವ ನಿರೀಕ್ಷೆ ಇದೆ.

ಅಂಡರ್ 19 ವಿಶ್ವಕಪ್: ಅಕ್ತರ್ ವೇಗದ ದಾಖಲೆ ಮುರಿದ ಜ್ಯೂ.ಮಲಿಂಗಾ ಮತೀಶಾ!

ಮತ್ತೊಂದೆಡೆ ಜಾಗತಿಕ ಮಟ್ಟದ ಟೂರ್ನಿಯಲ್ಲಿ ಆಡುವ ಅವಕಾಶ ಪಡೆದಿರುವ ಜಪಾನ್‌, ಆಕರ್ಷಕ ಆಟದ ಮೂಲಕ ಅಭಿಮಾನಿಗಳ ಗಮನ ಸೆಳೆಯಲು ಎದುರು ನೋಡುತ್ತಿದೆ. ಶನಿವಾರ ನ್ಯೂಜಿಲೆಂಡ್‌ ವಿರುದ್ಧದ ಪಂದ್ಯ ಮಳೆಯಿಂದ ರದ್ದಾದ ಕಾರಣ, ಜಪಾನ್‌ 1 ಅಂಕ ಗಳಿಸಿತ್ತು.

ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 3

ಆಸ್ಪ್ರೇಲಿಯಾಗೆ ಜಯ

ಕಿಂಬರ್ಲಿ: ನೈಜೀರಿಯಾ ವಿರುದ್ಧ ಸೋಮವಾರ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಆಸ್ಪ್ರೇಲಿಯಾ 10 ವಿಕೆಟ್‌ ಜಯ ಸಾಧಿಸಿತು. ನೈಜೀರಿಯಾ 30.3 ಓವರಲ್ಲಿ 61 ರನ್‌ಗೆ ಆಲೌಟ್‌ ಆಯಿತು. ಆಸ್ಪ್ರೇಲಿಯಾ 7.4 ಓವರಲ್ಲಿ ವಿಕೆಟ್‌ ನಷ್ಟವಿಲ್ಲದೆ ಗುರಿ ತಲುಪಿತು.
 

 

click me!