T20 World Cup ಟೂರ್ನಿಯಿಂದ ಹಾರ್ದಿಕ್‌ ಪಾಂಡ್ಯ ಔಟ್‌?

By Suvarna NewsFirst Published Oct 11, 2021, 1:01 PM IST
Highlights

* ಹಾರ್ದಿಕ್‌ ಪಾಂಡ್ಯ ಫಿಟ್ನೆಸ್‌ ಬಗ್ಗೆ ತಲೆ ಕೆಡಿಸಿಕೊಂಡ ಟೀಂ ಇಂಡಿಯಾ ಆಯ್ಕೆ ಸಮಿತಿ

* ಟಿ20 ವಿಶ್ವಕಪ್ ಟೂರ್ನಿಯು ಅಕ್ಟೋಬರ್ 17ರಿಂದ ಆರಂಭ

* ತಂಡದಿಂದ ಹೊರಬೀಳುವ ಭೀತಿಯಲ್ಲಿ ಹಾರ್ದಿಕ್‌ ಪಾಂಡ್ಯ

ನವದೆಹಲಿ(ಅ.11): ಐಸಿಸಿ ಟಿ20 ವಿಶ್ವಕಪ್‌ಗೆ (T20 World Cup) ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಆಲ್ರೌಂಡರ್‌ ಹಾರ್ದಿಕ್‌ ಪಾಂಡ್ಯ (Hardik Pandya), ತಂಡದಿಂದ ಹೊರಬೀಳುವ ಆತಂಕ ಎದುರಿಸುತ್ತಿದ್ದಾರೆ. ಹಾರ್ದಿಕ್‌ ಪಾಂಡ್ಯ ಬೌಲ್‌ ಮಾಡಲು ಫಿಟ್‌ ಇಲ್ಲ ಎಂದಾದರೆ ಅವರನ್ನು ತಂಡದಲ್ಲಿ ಉಳಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ ಎನ್ನುವ ನಿರ್ಣಯಕ್ಕೆ ಬಂದಿರುವ ಬಿಸಿಸಿಐ (BCCI) ಆಯ್ಕೆ ಸಮಿತಿ, ಅವರ ಫಿಟ್ನೆಸ್‌ ಮೇಲೆ ಸೂಕ್ಷ್ಮ ಕಣ್ಣಿರಿಸಿದೆ.

ಕಳೆದ ತಿಂಗಳು ಪ್ರಕಟಿಸಿದ್ದ ತಂಡದಲ್ಲಿ ಬದಲಾವಣೆ ಮಾಡಲು ಅಕ್ಟೋಬರ್ 10 ಕೊನೆಯ ದಿನ ಎಂದು ಭಾವಿಸಲಾಗಿತ್ತು. ಆದರೆ ಐಸಿಸಿ (ICC) ನಿಯಮದ ಪ್ರಕಾರ ಟೂರ್ನಿ ಆರಂಭಗೊಳ್ಳುವ 7 ದಿನಗಳ ಮೊದಲು ಅಂತಿಮ ತಂಡ ಘೋಷಿಸಬೇಕು. ಅಕ್ಟೋಬರ್ 17ರಂದು ಪ್ರಾಥಮಿಕ ಸುತ್ತು ಆರಂಭಗೊಳ್ಳಲಿದ್ದು, ಸೂಪರ್‌ 12 ಹಂತ ಆರಂಭವಾಗುವುದು ಅಕ್ಟೋಬರ್ 23ಕ್ಕೆ. ಹೀಗಾಗಿ ತಂಡದಲ್ಲಿ ಬದಲಾವಣೆ ಮಾಡಲು ಅಕ್ಟೋಬರ್ 15ರ ವರೆಗೂ ಸಮಯವಿದೆ.

ಹಾರ್ದಿಕ್‌ ಬೌಲ್‌ ಮಾಡಲಿದ್ದಾರೆ ಎನ್ನುವ ಕಾರಣದಿಂದ ಚೇತನ್‌ ಶರ್ಮಾ ನೇತೃತ್ವದ ಆಯ್ಕೆ ಸಮಿತಿ 15 ಸದಸ್ಯರ ತಂಡದಲ್ಲಿ ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ ಹಾಗೂ ಭುವನೇಶ್ವರ್ ಕುಮಾರ್ ಹೀಗೆ ಕೇವಲ ಮೂವರು ತಜ್ಞ ವೇಗಿಗಳನ್ನು ಆಯ್ಕೆ ಮಾಡಿದ್ದರು. ಆದರೆ ಐಪಿಎಲ್‌ನಲ್ಲಿ ಹಾರ್ದಿಕ್‌ ಒಂದೂ ಓವರ್‌ ಬೌಲ್‌ ಮಾಡದ ಕಾರಣ, ಅವರನ್ನು ಕೈಬಿಡಲು ಚಿಂತನೆ ನಡೆಯುತ್ತಿದೆ. ಒಂದು ವೇಳೆ ಹಾರ್ದಿಕ್‌ ಹೊರಬಿದ್ದರೆ ಮೀಸಲು ತಂಡದಲ್ಲಿರುವ ಶಾರ್ದೂಲ್‌ ಠಾಕೂರ್‌ ಇಲ್ಲವೇ ದೀಪಕ್‌ ಚಹರ್‌ಗೆ ಸ್ಥಾನ ಸಿಗಲಿದೆ. ಈ ಇಬ್ಬರಲ್ಲಿ ಒಬ್ಬರು ಪ್ರಧಾನ ತಂಡಕ್ಕೆ ಸೇರ್ಪಡೆಯಾದರೆ ಹರ್ಷಲ್‌ ಪಟೇಲ್‌ ನೆಟ್‌ ಬೌಲರ್‌ ಆಗಿ ತಂಡ ಕೂಡಿಕೊಳ್ಳಲಿದ್ದಾರೆ ಎನ್ನಲಾಗಿದೆ.

T20 World Cup: ವೇಗಿ ಉಮ್ರಾನ್‌ ಮಲಿಕ್ ಟೀಂ ಇಂಡಿಯಾ ನೆಟ್ ಬೌಲರ್‌

ಹಾರ್ದಿಕ್‌ ಪಾಂಡ್ಯ ಸದ್ಯದಲ್ಲಿಯೇ ಬೌಲಿಂಗ್‌ ಮಾಡಲು ಆರಂಭಿಸಲಿದ್ದಾರೆ ಎಂದು ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಹೇಳಿದ್ದರು. ಹಾರ್ದಿಕ್‌ ಪ್ರತಿ ದಿನವೂ ಪ್ರಗತಿ ಹೊಂದುತ್ತಿದ್ದಾರೆ. ಮುಂದಿನ ವಾರದಿಂದ ಅವರು ಬೌಲಿಂಗ್‌ ಮಾಡಬಹುದು. ಆದರೆ ಗೊತ್ತಿಲ್ಲ. ಈ ಬಗ್ಗೆ ಫಿಸಿಯೋ ಮತ್ತು ವೈದ್ಯರು ಸರಿಯಾದ ಮಾಹಿತಿ ನೀಡಬೇಕು. ಅವರು ಬ್ಯಾಟಿಂಗ್‌ನಲ್ಲಿ ಈಗ ನಿರಾಸೆ ಅನುಭವಿಸರಬಹುದು. ಆದರೆ ಅವರು ಗುಣಮಟ್ಟದ ಆಟಗಾರ. ತಂಡಕ್ಕೆ ನೆರವಾಗಲಿದ್ದಾರೆ’ ಎಂದು ಸನ್‌ರೈಸರ್ಸ್‌ ಹೈದರಾಬಾದ್ ವಿರುದ್ದದ ಪಂದ್ಯ ಮುಕ್ತಾಯದ ಬಳಿಕ ರೋಹಿತ್ ಶರ್ಮಾ ಹೇಳಿದ್ದರು. ಹಾರ್ದಿಕ್‌ ಪಾಂಡ್ಯ ಯುಎಇ ಚರಣದ ಐಪಿಎಲ್‌ನಲ್ಲಿ ಬ್ಯಾಟಿಂಗ್‌ನಲ್ಲೂ ನಿರಾಸೆ ಮೂಡಿಸಿದ್ದರು. ಹೀಗಾಗಿ ಪಾಂಡ್ಯ ಫಿಟ್ನೆಸ್ ಕಾಪಾಡಿಕೊಂಡು ತಂಡದಲ್ಲೇ ಉಳಿಯುತ್ತಾರೋ ಅಥವಾ ತಂಡದಿಂದ ಹೊರಬೀಳುತ್ತಾರೋ ಎನ್ನುವ ಕುತೂಹಲ ಜೋರಾಗಿದೆ.

T20 ವಿಶ್ವಕಪ್ ವಿಶ್ವಕಪ್ ಬಹುಮಾನ ಮೊತ್ತ ಪ್ರಕಟಿಸಿದ ICC,ಗೆದ್ದ ತಂಡ ಭರ್ಜರಿ ಕ್ಯಾಶ್ ಪ್ರೈಜ್!

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ (Team India) ಅಕ್ಟೋಬರ್ 24ರಂದು ತನ್ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ದುಬೈನ ಅಂತಾರಾಷ್ಟ್ರೀಯ ಮೈದಾನ ಆತಿಥ್ಯವನ್ನು ವಹಿಸಿದೆ. ಟೀಂ ಇಂಡಿಯಾ ಇರುವ ಗುಂಪಿನಲ್ಲೇ ನ್ಯೂಜಿಲೆಂಡ್, ಪಾಕಿಸ್ತಾನ, ಆಫ್ಘಾನಿಸ್ತಾನ ಹಾಗೂ ಅರ್ಹತಾ ಸುತ್ತಿನಲ್ಲಿ ಪಾಲ್ಗೊಂಡ ಎರಡು ತಂಡಗಳಿವೆ. ಈ ಗುಂಪಿನಲ್ಲಿ ಅಗ್ರ 2 ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್‌ಗೆ ಲಗ್ಗೆಯಿಡಲಿವೆ. 
 

click me!