ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಎರಡನೇ ಸೆಮೀಸ್‌ನಲ್ಲಿ ಇಂಡೋ-ಆಂಗ್ಲೋ ಫೈಟ್
ಭಾರತ-ಇಂಗ್ಲೆಂಡ್ ಹೈವೋಲ್ಟೇಜ್ ಕದನಕ್ಕೆ ಅಡಿಲೇಡ್ ಓವಲ್ ಮೈದಾನ ಆತಿಥ್ಯ
ಮೂರನೇ ಬಾರಿಗೆ ಫೈನಲ್‌ಗೇರುವ ವಿಶ್ವಾಸದಲ್ಲಿ ಟೀಂ ಇಂಡಿಯಾ
ಅಡಿಲೇಡ್(ನ.10): ಭಾರತ ಹಾಗೂ ಇಂಗ್ಲೆಂಡ್ ಇತ್ತೀಚೆಗೆ ದ್ವಿಪಕ್ಷೀಯ ಸರಣಿಗಳಲ್ಲಿ ಮುಖಾಮುಖಿಯಾಗಿದ್ದವು, ಆದರೆ ಗುರುವಾರದ ಮುಖಾಮುಖಿ ಬ್ಲಾಕ್‌ಬಸ್ಟರ್ ಆಗಿರಲಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಟಿ20 ವಿಶ್ವಕಪ್‌ನ 2ನೇ ಸೆಮಿಫೈನಲ್ ಪಂದ್ಯಕ್ಕೆ ಅಡಿಲೇಡ್‌ನಲ್ಲಿ ವೇದಿಕೆ ಸಜ್ಜಾಗಿದ್ದು ಫೈನಲ್ ಟಿಕೆಟ್‌ಗಾಗಿ ಉಭಯ ತಂಡಗಳ ನಡುವೆ ಹಣಾಹಣಿ ಏರ್ಪಡಲಿದೆ.
ನ್ಯೂಜಿಲೆಂಡ್ ಹಾಗೂ ಶ್ರೀಲಂಕಾ ನಡುವೆ ಮಾಡು ಇಲ್ಲವೇ ಮಡಿ ಪಂದ್ಯಗಳನ್ನು ಗೆದ್ದು ಇಂಗ್ಲೆಂಡ್ ಸೆಮಿಫೈನಲ್ ಪ್ರವೇಶಿಸಿದರೆ, ಸೂಪರ್-12 ಹಂತದಲ್ಲಿ 4 ಗೆಲುವುಗಳನ್ನು ಕಂಡ ಏಕೈಕ ತಂಡ ಎನ್ನುವ ಹಿರಿಮೆಯೊಂದಿಗೆ ಭಾರತ ಉಪಾಂತ್ಯಕ್ಕೆ ಲಗ್ಗೆಯಿಟ್ಟಿತು. ಈ ಪಂದ್ಯ ಸಮಬಲ ತಂಡಗಳ ನಡುವಿನ ಹೋರಾಟ ಎಂದೇ ಬಿಂಬಿತವಾಗಿದೆ.
undefined
ಆಯ್ಕೆ ಗೊಂದಲ?: ಲೆಗ್ ಸ್ಪಿನ್ನರ್ ಆದಿಲ್ ರಶೀದ್ ವಿರುದ್ಧ ಪರಿಣಾಮಕಾಗಿಯಾಗಬಹುದು ಎನ್ನುವ ಕಾರಣಕ್ಕೆ ರಿಷಭ್ ಪಂತ್‌ರನ್ನು ಆಡಿಸಬೇಕೇ ಇಲ್ಲವೇ ಮೊದಲ ಎಸೆತದಿಂದಲೇ ಹೊಡಿಬಡಿ ಆಟಕ್ಕಿಳಿಯುವ ದಿನೇಶ್ ಕಾರ್ತಿಕ್‌ರನ್ನು ಆಡಿಸಬೇಕೆ ಎನ್ನುವ ಗೊಂದಲ ಭಾರತ ತಂಡದೊಳಗೆ ಇರಬಹುದು. ಇದನ್ನು ಹೊರತುಪಡಿಸಿ ತಂಡದ ಆಡಳಿತದ ಮುಂದೆ ಮತ್ತ್ಯಾವ ಪ್ರಶ್ನೆಗಳಿದ್ದಂತೆ ಕಾಣಿಸುತ್ತಿಲ್ಲ. ರಾಹುಲ್, ರೋಹಿತ್ ಪವರ್-ಪ್ಲೇನಲ್ಲಿ ಸ್ಫೋಟಕ ಆಟವಾಡಬೇಕಿದೆ. ಕೊಹ್ಲಿ, ಸೂರ್ಯ ಲಯ ಮುಂದುವರಿಸಬೇಕಿದೆ. ಹಾರ್ದಿಕ್ ಇನ್ನಷ್ಟೇ ತಮ್ಮ ಅಸಲಿ ಆಟ ತೋರಬೇಕಿದೆ. ಬೌಲರ್‌ಗಳು ಸ್ಥಿರತೆ ಕಂಡುಕೊಳ್ಳಬೇಕಾದ ಒತ್ತಡದಲ್ಲಿದ್ದಾರೆ.
T20 World cup ಭಾರತ ಇಂಗ್ಲೆಂಡ್ ಪಂದ್ಯಕ್ಕೆ ಆತಂಕ, ಆಡಿಲೇಡ್‌ನಲ್ಲಿ ಗುಡುಗು ಸಿಡಿಲು!
ಇಂಗ್ಲೆಂಡ್‌ಗೆ ಆತಂಕ: ವೇಗಿ ಮಾರ್ಕ್ ವುಡ್ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್ ಡೇವಿಡ್ ಮಲಾನ್ ಗಾಯದಿಂದ ಸಂಪೂರ್ಣ ಚೇತರಿಸಿಕೊಂಡಂತೆ ಕಾಣುತ್ತಿಲ್ಲ. ಇವರಿಬ್ಬರು ಅಲಭ್ಯರಾದರೆ ಇಂಗ್ಲೆಂಡ್‌ಗೆ ಹಿನ್ನಡೆಯಾಗಲಿದೆ. ಜೋಸ್ ಬಟ್ಲರ್, ಬೆನ್ ಸ್ಟೋಕ್ಸ್ ಮೇಲೆ ಭಾರೀ ನಿರೀಕ್ಷೆ ಇದೆ.
ಟಿ20 ಕ್ರಿಕೆಟ್ ಇತಿಹಾಸದಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಒಟ್ಟು 22 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಟೀಂ ಇಂಡಿಯಾ ಕೊಂಚ ಮೇಲುಗೈ ಸಾಧಿಸಿದೆ. 22 ಪಂದ್ಯಗಳ ಪೈಕಿ 12 ಪಂದ್ಯಗಳಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದ್ದರೇ, 10 ಪಂದ್ಯಗಳಲ್ಲಿ ಭಾರತ ಗೆಲುವಿನ ನಗೆ ಬೀರಿದೆ.
3ನೇ ಬಾರಿಗೆ ಫೈನಲ್‌ಗೇರುವ ವಿಶ್ವಾಸದಲ್ಲಿ ಟೀಂ ಇಂಡಿಯಾ: ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ ಚೊಚ್ಚಲ ಆವೃತ್ತಿಯ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್‌ಗೇರಿ ಪಾಕಿಸ್ತಾನ ಮಣಿಸುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದಾದ ಬಳಿಕ 2014ರಲ್ಲಿ ಧೋನಿ ನೇತೃತ್ವದ ಟೀಂ ಇಂಡಿಯಾ, ಫೈನಲ್ ಪ್ರವೇಶಿಸಿತ್ತಾದರೂ, ಲಂಕಾಗೆ ಶರಣಾಗುವ ಮೂಲಕ ನಿರಾಸೆ ಅನುಭವಿಸಿತ್ತು. ಇದೀಗ ಮತ್ತೊಮ್ಮೆ ಟೀಂ ಇಂಡಿಯಾ, ಫೈನಲ್‌ಗೇರುವ ಹೊಸ್ತಿಲಲ್ಲಿದೆ.
ಸಂಭವನೀಯರ ಪಟ್ಟಿ
ಭಾರತ: ರೋಹಿತ್ ಶರ್ಮಾ(ನಾಯಕ), ಕೆ ಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್/ ರಿಷಭ್ ಪಂತ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಅಶ್‌ರ್‍ದೀಪ್ ಸಿಂಗ್.
ಇಂಗ್ಲೆಂಡ್: ಜೋಸ್ ಬಟ್ಲರ್(ನಾಯಕ), ಅಲೆಕ್ಸ್ ಹೇಲ್ಸ್, ಫಿಲ್ ಸಾಲ್ಟ್, ಬೆನ್ ಸ್ಟೋಕ್ಸ್, ಹ್ಯಾರಿ ಬ್ರೂಕ್, ಲಿಯಾಮ್ ಲಿವಿಂಗ್‌ಸ್ಟೋನ್, ಮೋಯಿನ್ ಅಲಿ, ಸ್ಯಾಮ್ ಕರ್ರನ್, ಕ್ರಿಸ್ ವೋಕ್ಸ್, ಕ್ರಿಸ್ ಜೋರ್ಡನ್, ಆದಿಲ್ ರಶೀದ್.
ಪಂದ್ಯ: ಮಧ್ಯಾಹ್ನ 1.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್