T20 World Cup Ind vs Pak ಟೀಂ ಇಂಡಿಯಾವನ್ನು ಗೆಲ್ಲಿಸ್ತಾರಾ ಮೆಂಟರ್ ಧೋನಿ..?

By Suvarna News  |  First Published Oct 24, 2021, 11:24 AM IST

* ದುಬೈ ಮೈದಾನದಲ್ಲಿಂದು ಭಾರತ - ಪಾಕಿಸ್ತಾನ ಸೆಣಸಾಟ

* ಟಿ20 ವಿಶ್ವಕಪ್‌ ಟೂರ್ನಿಯ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ

* ಟೀಂ ಇಂಡಿಯಾ ಆತ್ಮವಿಶ್ವಾಸ ಹೆಚ್ಚಿಸಿದ ಧೋನಿ ಉಪಸ್ಥಿತಿ


ದುಬೈ(ಅ.24): ಟಿ20 ವಿಶ್ವಕಪ್ ಟೂರ್ನಿಯ ಹೈವೋಲ್ಟೇಜ್ ಪಂದ್ಯ ಎನಿಸಿರುವ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಕಾದಾಟವನ್ನು ಕಣ್ತುಂಬಿಕೊಳ್ಳಲು ಇಡೀ ಕ್ರಿಕೆಟ್ ಜಗತ್ತೇ ತುದಿಗಾಲಿನಲ್ಲಿ ನಿಂತಿದೆ. 2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಕಡೆಯ ಬಾರಿಗೆ ಮುಖಾಮುಖಿಯಾಗಿದ್ದ ಉಭಯ ತಂಡಗಳು ಇದೀಗ ಮತ್ತೊಮ್ಮೆ ಚುಟುಕು ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಗೆಲುವಿಗಾಗಿ ಸೆಣಸಾಟ ನಡೆಸಲಿದೆ. 

ವಿಶ್ವಕಪ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಕ್ರಿಕೆಟ್ ತಂಡದ(Pakistan Cricket Team) ವಿರುದ್ದ ಸಂಪೂರ್ಣ ಪ್ರಾಬಲ್ಯ ಮೆರೆದಿರುವ ಟೀಂ ಇಂಡಿಯಾ ಪಾಳಯಕ್ಕೆ ಈ ಬಾರಿ ಮಹೇಂದ್ರ ಸಿಂಗ್ ಧೋನಿ ಎನ್ನುವ ಮಾಸ್ಟರ್ ಮೈಂಡ್ ಅಸ್ತ್ರ ಸೇರ್ಪಡೆಯಾಗಿದೆ. ಟೀಂ ಇಂಡಿಯಾ (Team India) ಮಾಜಿ ನಾಯಕ ಧೋನಿ ಟಿ20 ವಿಶ್ವಕಪ್‌ (ICC T20 World Cup) ಟೂರ್ನಿಗೆ ಭಾರತ ಕ್ರಿಕೆಟ್ ತಂಡದ ಮೆಂಟರ್ ಆಗಿ ಕಾರ್ಯ ನಿರ್ವಹಿಸಲಿದ್ದು, ಪಾಕ್‌ ವಿರುದ್ದ ರಣತಂತ್ರ ಹೆಣೆಯುತ್ತಿದ್ದಾರೆ.

Tap to resize

Latest Videos

undefined

T20 World Cup: India vs Pakistan ದುಬೈನಲ್ಲಿಂದು ಭಾರತ-ಪಾಕ್ ಮಹಾ ಕದನ

ಹೌದು, ಪಾಕಿಸ್ತಾನ ವಿರುದ್ಧ ಟಿ20 ವಿಶ್ವಕಪ್‌ಗಳ ಐದೂ ಪಂದ್ಯಗಳಲ್ಲಿ ಭಾರತ ತಂಡಕ್ಕೆ ನಾಯಕರಾಗಿದ್ದ ಎಂ.ಎಸ್‌.ಧೋನಿ (MS Dhoni) ಈ ಬಾರಿ ತಂಡದ ಮೆಂಟರ್‌ ಆಗಿ ಕಾರ‍್ಯನಿರ್ವಹಿಸಲಿದ್ದಾರೆ. ಪಾಕಿಸ್ತಾನ ವಿರುದ್ಧ ಯಾವ ಅಸ್ತ್ರಗಳನ್ನು ಯಾವ ಹಂತದಲ್ಲಿ ಬಳಸಬೇಕು ಎನ್ನುವುದು ಧೋನಿಗಿಂತ ಚೆನ್ನಾಗಿ ಮತ್ತ್ಯಾರಿಗೂ ತಿಳಿದಿಲ್ಲ. ಧೋನಿ ಮಾರ್ಗದರ್ಶನದಲ್ಲಿ ಭಾರತ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ.

ಟಿ20 ವಿಶ್ವಕಪ್‌ನಲ್ಲಿ ಪಾಕ್‌ ವಿರುದ್ಧ ಔಟಾಗಿಲ್ಲ ಕೊಹ್ಲಿ!

ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನಕ್ಕೆ ಇನ್ನೂ ವಿರಾಟ್‌ ಕೊಹ್ಲಿಯ (Virat Kohli) ವಿಕೆಟ್‌ ಕಬಳಿಸಲು ಸಾಧ್ಯವಾಗಿಲ್ಲ. ಪಾಕ್‌ ವಿರುದ್ಧ 3 ಇನ್ನಿಂಗ್ಸ್‌ಗಳನ್ನು ಆಡಿರುವ ವಿರಾಟ್‌ 3ರಲ್ಲೂ ಔಟಾಗದೆ ಉಳಿದಿದ್ದರು. 2012ರಲ್ಲಿ ಔಟಾಗದೆ 78 ರನ್‌ ಗಳಿಸಿದ್ದ ವಿರಾಟ್‌ 2014ರಲ್ಲಿ ಔಟಾಗದೆ 36, 2016ರಲ್ಲಿ ಔಟಾಗದೆ 55 ರನ್‌ ಗಳಿಸಿ ಭಾರತದ ಗೆಲುವಿಗೆ ನೆರವಾಗಿದ್ದರು. ದುಬೈನಲ್ಲೂ ಕೊಹ್ಲಿ ಮೇಲೆ ಭಾರತ ಅವಲಂಬಿತಗೊಂಡಿದೆ.

T20 World Cup: ಭಾರತ ವಿರುದ್ದದ ಪಂದ್ಯಕ್ಕೆ 12 ಆಟಗಾರರನ್ನೊಳಗೊಂಡ ಪಾಕಿಸ್ತಾನ ತಂಡ ಪ್ರಕಟ

7ನೇ ಟಿ20 ವಿಶ್ವಕಪ್‌ ಆಡಲಿರುವ ರೋಹಿತ್‌!

ಟೀಂ ಇಂಡಿಯಾದ ಉಪನಾಯಕ ರೋಹಿತ್‌ ಶರ್ಮಾ (Rohit Sharma) 7ನೇ ಟಿ20 ವಿಶ್ವಕಪ್‌ ಆಡಲು ಸಜ್ಜಾಗಿದ್ದಾರೆ. ಅತಿಹೆಚ್ಚು ವಿಶ್ವಕಪ್‌ಗಳಲ್ಲಿ ಆಡಿದ ಭಾರತೀಯ ಆಟಗಾರ ಎನ್ನುವ ದಾಖಲೆಯನ್ನು ಅವರು ಬರೆಯಲಿದ್ದಾರೆ. ಎಂ.ಎಸ್‌.ಧೋನಿ 6 ವಿಶ್ವಕಪ್‌ಗಳಲ್ಲಿ ಆಡಿದ್ದರು. ರೋಹಿತ್‌ ಶರ್ಮಾ 2007ರಿಂದ ನಡೆದಿರುವ ಎಲ್ಲಾ ಟಿ20 ವಿಶ್ವಕಪ್‌ಗಳಲ್ಲೂ ಭಾರತ ತಂಡದ ಪರ ಆಡಿದ್ದಾರೆ.

ಯುಎಇನಲ್ಲಿ ಪಂದ್ಯಗಳು: ಭಾರತ, ಪಾಕ್‌ ಎರಡಕ್ಕೂ ಲಾಭ!

ಯುಎಇನಲ್ಲಿ ಟಿ20 ವಿಶ್ವಕಪ್‌ ನಡೆಯುತ್ತಿರುವ ಕಾರಣ ಭಾರತ ಹಾಗೂ ಪಾಕಿಸ್ತಾನ ಎರಡೂ ತಂಡಗಳಿಗೆ ಇದರಿಂದ ಲಾಭವಾಗಲಿದೆ. ಏಕೆಂದರೆ ಭಾರತೀಯ ಆಟಗಾರರು ಇತ್ತೀಚೆಗಷ್ಟೇ ಯುಎಇನಲ್ಲಿ ಐಪಿಎಲ್‌ (IPL) ಪಂದ್ಯಗಳನ್ನು ಆಡಿದ್ದರು. 2020ರ ಐಪಿಎಲ್‌ ಸಹ ಯುಎಇನಲ್ಲೇ ನಡೆದಿತ್ತು. ಹೀಗಾಗಿ ಸ್ಥಳೀಯ ವಾತಾವರಣ, ಪಿಚ್‌ಗಳು ವರ್ತಿಸುವ ರೀತಿ ಬಗ್ಗೆ ಭಾರತೀಯರಿಗೆ ಸಂಪೂರ್ಣ ಮಾಹಿತಿ ಇದೆ. ಇನ್ನು ಪಾಕಿಸ್ತಾನ ತಂಡವು ಹಲವು ವರ್ಷಗಳಿಂದ ಯುಎಇ ಅನ್ನು ತನ್ನ ತವರಾಗಿ ಮಾಡಿಕೊಂಡಿದೆ. ತನ್ನ ಬಹುತೇಕ ತವರಿನ ಸರಣಿಗಳನ್ನು ಪಾಕಿಸ್ತಾನ, ಯುಎಇನಲ್ಲೇ ಆಡಲಿದೆ.

ಪಂದ್ಯಕ್ಕೂ ಮುನ್ನ ನಾಯಕರ ಮಾತು

ಮೈದಾನದಿಂದ ಹೊರಗೆ ನಡೆಯುತ್ತಿರುವ ವಿಚಾರಗಳಿಗೆ ನಾವು ಗಮನ ನೀಡುವುದಿಲ್ಲ. ನಮ್ಮ ಗಮನ ಆಟದ ಮೇಲೆ ಸಂಪೂರ್ಣವಾಗಿ ಕೇಂದ್ರೀಕೃತವಾಗಿದೆ. ಬೇರೆ ಯಾವುದೇ ಪಂದ್ಯವನ್ನು ಹೇಗೆ ಆಡುತ್ತೇವೋ ಅದೇ ರೀತಿಯಲ್ಲೇ ಈ ಪಂದ್ಯವನ್ನು ಆಡಲಿದ್ದೇವೆ. ನಮ್ಮ ಮನಸ್ಥಿತಿ, ನಮ್ಮ ಅಭ್ಯಾಸದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. - ವಿರಾಟ್‌ ಕೊಹ್ಲಿ, ಭಾರತ ತಂಡದ ನಾಯಕ

ಹಿಂದಿನ ಫಲಿತಾಂಶಗಳ ಬಗ್ಗೆ ನಾವು ಹೆಚ್ಚು ಗಮನ ನೀಡುತ್ತಿಲ್ಲ. ಈ ವಿಶ್ವಕಪ್‌ನಲ್ಲಿ ಗೆಲ್ಲಬೇಕು ಎನ್ನುವುದಷ್ಟೇ ನಮ್ಮ ಗುರಿ. ನಮ್ಮ ಸಾಮರ್ಥ್ಯದ ಮೇಲೆ ಶೇ.100ರಷ್ಟು ವಿಶ್ವಾಸವಿಟ್ಟು, ಪ್ರತಿ ಪಂದ್ಯದಲ್ಲೂ ನಮ್ಮ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಂಡು ಗೆಲುವಿನತ್ತ ಹೆಜ್ಜೆ ಹಾಕಲು ಎದುರು ನೋಡುತ್ತಿದ್ದೇವೆ. - ಬಾಬರ್‌ ಆಜಂ, ಪಾಕಿಸ್ತಾನ ತಂಡದ ನಾಯಕ

ಸ್ಥಳ: ದುಬೈ
ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

click me!