T20 World Cup Bangladesh vs Sri Lanka ಶ್ರೀಲಂಕಾ ತಂಡಕ್ಕಿಂದು ಬಾಂಗ್ಲಾದೇಶ ಸವಾಲು

Suvarna News   | Asianet News
Published : Oct 24, 2021, 09:36 AM ISTUpdated : Oct 24, 2021, 10:01 AM IST
T20 World Cup Bangladesh vs Sri Lanka ಶ್ರೀಲಂಕಾ ತಂಡಕ್ಕಿಂದು ಬಾಂಗ್ಲಾದೇಶ ಸವಾಲು

ಸಾರಾಂಶ

* ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿಂದು ಬಾಂಗ್ಲಾದೇಶ-ಶ್ರೀಲಂಕಾ ಮುಖಾಮುಖಿ * ಅರ್ಹತಾ ಸುತ್ತಿನಲ್ಲಿ ಗೆದ್ದವರ ನಡುವೆ ಇಂದು ಸೆಣಸಾಟ * ಈ ಪಂದ್ಯಕ್ಕೆ ಸಾಕ್ಷಿಯಾಗಲಿದೆ ಶಾರ್ಜಾ ಕ್ರಿಕೆಟ್ ಮೈದಾನ

ಶಾರ್ಜಾ(ಅ.24): ಅರ್ಹತಾ ಸುತ್ತಿನಲ್ಲಿ ಸೆಣಸಿ ಟಿ20 ವಿಶ್ವಕಪ್‌ನ (ICC T20 World Cup) ಪ್ರಧಾನ ಸುತ್ತಿಗೇರಿರುವ ಬಾಂಗ್ಲಾದೇಶ-ಶ್ರೀಲಂಕಾ ಭಾನುವಾರ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. 

ಶ್ರೀಲಂಕಾ ಕ್ರಿಕೆಟ್ ತಂಡ (Sri Lanka Cricket) ಅರ್ಹತಾ ಸುತ್ತಿನ ಮೂರೂ ಪಂದ್ಯಗಳಲ್ಲಿ ಜಯಗಳಿಸಿದ್ದು, ಗೆಲುವಿನ ಮೂಲಕವೇ ವಿಶ್ವಕಪ್‌ನ ಸೂಪರ್‌-12ರ ಹಂತದಲ್ಲಿ ಶುಭಾರಂಭ ಮಾಡುವ ಉತ್ಸಾಹದಲ್ಲಿದೆ. ತಂಡದಲ್ಲಿ ಹಲವು ಪ್ರತಿಭಾವಂತ ಆಟಗಾರರಿದ್ದು, ಅತ್ಯುತ್ತಮ ಪ್ರದರ್ಶನದ ನಿರೀಕ್ಷೆ ಇಟ್ಟುಕೊಂಡಿದೆ. ಪ್ರಮುಖವಾಗಿ ಅಲ್ರೌಂಡರ್‌ ವನಿಂದು ಹಸರಂಗ (Wanindu Hasaranga) ಹಾಗೂ ಮಹೀಶ್‌ ತೀಕ್ಷಣ ಉತ್ತಮ ಲಯದಲ್ಲಿದ್ದು, ಸ್ಪಿನ್‌ ಅಸ್ತ್ರದ ಮೂಲಕ ಎದುರಾಳಿ ತಂಡಕ್ಕೆ ಶಾಕ್‌ ನೀಡುವ ನಿರೀಕ್ಷೆಯಲ್ಲಿದ್ದಾರೆ. ಸ್ಥಿರತೆ ಕಳೆದುಕೊಂಡಿರುವ ಆರಂಭಿಕ ಬ್ಯಾಟರ್‌ಗಳು ಮಿಂಚಬೇಕಾದ ಅಗತ್ಯವಿದೆ.

ಇನ್ನೊಂದೆಡೆ, ಅರ್ಹತಾ ಸುತ್ತಿನ ಆರಂಭಿಕ ಪಂದ್ಯದಲ್ಲಿ ಸ್ಕಾಟ್ಲೆಂಡ್‌ ವಿರುದ್ಧ ಸೋತು ಆಘಾತ ಅನುಭವಿಸಿದ್ದ ಬಾಂಗ್ಲಾದೇಶ ಬಳಿಕ ಸತತ 2 ಪಂದ್ಯಗಳಲ್ಲಿ ಗೆದ್ದು ಸೂಪರ್‌-12 ಪ್ರವೇಶಿಸಿತ್ತು. ಇದೇ ಹುಮ್ಮಸ್ಸಿನಲ್ಲಿ ತಂಡ ಲಂಕಾ ಸವಾಲನ್ನು ಎದುರಿಸಲಿದೆ. ಬಾಂಗ್ಲಾಗೆ ಆರಂಭಿಕ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯ ತಲೆನೋವಾಗಿ ಪರಿಣಮಿಸಿದೆ. ಹೆಚ್ಚಾಗಿ ಆಲ್ರೌಂಡರ್‌ ಶಕೀಬ್‌ ಅಲ್‌ ಹಸನ್‌ (Shakib Al Hasan) ಮೇಲೆಯೇ ಇಡೀ ತಂಡ ಅವಲಂಬಿತವಾಗಿದೆ. ಇವರ ಜೊತೆ ನಾಯಕ ಮಹಮದುಲ್ಲಾ ಹಾಗೂ ಮುಷ್ಫಿಕುರ್‌ ರಹೀಂ, ವೇಗಿ ಮುಸ್ತಾಫಿಜುರ್‌ರನ್ನು ತಂಡ ನೆಚ್ಚಿಕೊಂಡಿದೆ.

T20 World Cup: ಸೂಪರ್ 12 ಸುತ್ತಿಗೆ ಬಾಂಗ್ಲಾದೇಶ, ಸ್ಕಾಟ್ಲೆಂಡ್ ಲಗ್ಗೆ

ಕಳೆದ ಆರು ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡವು (Sri Lanka Cricket Team) 2014ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದಷ್ಟೇ ಅಲ್ಲದೇ ಎರಡು ಬಾರಿ ರನ್ನರ್ ಅಪ್ ಹಾಗೂ ಒಮ್ಮೆ ಸೆಮಿಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿದೆ. ಇನ್ನೊಂದೆಡೆ ಐಸಿಸಿ ಟಿ20 ಟೂರ್ನಿಯಲ್ಲಿ ಬಾಂಗ್ಲಾದೇಶವೂ ಒಮ್ಮೆಯೂ ಗ್ರೂಪ್ ಹಂತ ದಾಟಲು ಸಾಧ್ಯವಾಗಿಲ್ಲ. ಹೀಗಾಗಿ ಈ ಬಾರಿ ಹೊಸ ಹುರುಪಿನೊಂದಿಗೆ ಬಾಂಗ್ಲಾದೇಶ ತಂಡವು ಚುಟುಕು ಕ್ರಿಕೆಟ್ ಮಹಾ ಸಂಗ್ರಾಮಕ್ಕೆ ಸಜ್ಜಾಗಿದೆ. 

ಶ್ರೀಲಂಕಾ ಕ್ರಿಕೆಟ್‌ ತಂಡವು ಟಿ20 ಕ್ರಿಕೆಟ್‌ನಲ್ಲಿ ಕಳೆದ ಎರಡು-ಮೂರು ವರ್ಷಗಳಲ್ಲಿ ಅಂತಹ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ವಿಶ್ವಕಪ್ ಟೂರ್ನಿಗೂ ಮುನ್ನ ನಡೆದ ಕಳೆದ 20 ಟಿ20 ಪಂದ್ಯಗಳ ಪೈಕಿ ಶ್ರೀಲಂಕಾ ಕ್ರಿಕೆಟ್ ತಂಡವು ಕೇವಲ 3 ಪಂದ್ಯಗಳಲ್ಲಿ ಮಾತ್ರ ಗೆಲುವಿನ ನಗೆ ಬೀರಿದೆ. ಇನ್ನೊಂದೆಡೆ ಬಾಂಗ್ಲಾದೇಶ ತಂಡವು ಈ ವರ್ಷದಲ್ಲೇ 19 ಟಿ20 ಪಂದ್ಯಗಳನ್ನಾಡಿ 11ರಲ್ಲಿ ಗೆಲುವು ದಾಖಲಿಸುವ ಮೂಲಕ ಆತ್ಮವಿಶ್ವಾಸದಿಂದ ಬೀಗುತ್ತಿದೆ. ಬಾಂಗ್ಲಾದೇಶ ತಂಡವು 2017ರಿಂದ 2020ರ ಅವಧಿಯಲ್ಲಿ 12 ಗೆಲುವು ದಾಖಲಿಸಿತ್ತು. ಆದರೆ ಇದೀಗ ಒಂದೇ ವರ್ಷದಲ್ಲಿ 11 ಗೆಲುವುಗಳನ್ನು ದಾಖಲಿಸಿದೆ. 

ಟಿ20 ಕ್ರಿಕೆಟ್‌ನಲ್ಲಿ ಇದುವರೆಗೂ ಬಾಂಗ್ಲಾದೇಶ ಹಾಗೂ ಶ್ರೀಲಂಕಾ ತಂಡಗಳು ಒಟ್ಟು 11 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ದ್ವೀಪ ರಾಷ್ಟ್ರ ಲಂಕಾ ಕೊಂಚ ಮೇಲುಗೈ ಸಾಧಿಸಿದೆ. 11 ಪಂದ್ಯಗಳ ಪೈಕಿ ಲಂಕಾ 7 ಪಂದ್ಯಗಳಲ್ಲಿ ಗೆಲುವನ್ನು ದಾಖಲಿಸಿದ್ದರೆ, ಬಾಂಗ್ಲಾದೇಶ ತಂಡವು 4 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ. ಇನ್ನು ಟಿ20 ವಿಶ್ವಕಪ್‌ನಲ್ಲಿ ಉಭಯ ತಂಡಗಳು ಒಮ್ಮೆ ಮಾತ್ರ ಮುಖಾಮುಖಿಯಾಗಿದ್ದು, ಆ ಪಂದ್ಯದಲ್ಲಿ ಶ್ರೀಲಂಕಾ ಗೆಲುವಿನ ಸಿಹಿಯುಂಡಿದೆ.

ಸ್ಥಳ: ಶಾರ್ಜಾ
ಪಂದ್ಯ: ಮಧ್ಯಾಹ್ನ 3.30ಕ್ಕೆ
ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?