T20 World Cup: ಟೀಂ ಇಂಡಿಯಾದಲ್ಲಿ ಸಂವಹನದ ಕೊರತೆ..?

By Suvarna News  |  First Published Nov 2, 2021, 10:59 AM IST

* ಸತತ ಎರಡು ಸೋಲುಗಳಿಂದ ಕಂಗೆಟ್ಟಿದೆ ಟೀಂ ಇಂಡಿಯಾ

* ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ನೀರಸ ಆರಂಭ

* ಸಂವಹನದ ಕೊರತೆ ಎದುರಿಸುತ್ತಿದೆಯಾ ಟೀಂ ಇಂಡಿಯಾ?


ದುಬೈ(ನ.02): ನ್ಯೂಜಿಲೆಂಡ್‌ ವಿರುದ್ಧ ನಾವು ಧೈರ್ಯವಾಗಿ ಬ್ಯಾಟ್‌ ಮಾಡಲಿಲ್ಲ ಎಂದು ಟೀಂ ಇಂಡಿಯಾ (Team India) ನಾಯಕ ವಿರಾಟ್‌ ಕೊಹ್ಲಿ (Virat Kohli) ನೀಡಿದ್ದ ಹೇಳಿಕೆಗೆ ವ್ಯತಿರಿಕ್ತವಾಗಿ ಹೇಳಿಕೆ ನೀಡಿರುವ ತಂಡದ ನಂ.1 ಬೌಲರ್‌ ಜಸ್‌ಪ್ರೀತ್‌ ಬುಮ್ರಾ (Jasprit Bumrah) ‘ಬ್ಯಾಟರ್‌ಗಳು ಆಕ್ರಮಣಕಾರಿಯಾಗಿ ಆಡಲು ಹೋಗಿ ಔಟಾದರು’ ಎಂದಿದ್ದಾರೆ. ಇದು ಟೀಂ ಇಂಡಿಯಾದಲ್ಲಿ ಸಂವಹನ ಕೊರತೆ ಇದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

ನ್ಯೂಜಿಲೆಂಡ್ ಕ್ರಿಕೆಟ್ ತಂಡದ (New Zealand Cricket Team) ವಿರುದ್ದ ಪಂದ್ಯ  ಬಳಿಕ ಮಾತನಾಡಿದ ಕೊಹ್ಲಿ, ‘ನಾವು ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಲ್ಲಿ ಸಾಕಷ್ಟು ಧೈರ್ಯಶಾಲಿಯಾಗಿರಲಿಲ್ಲ. ನಾವು ಮೈದಾನಕ್ಕೆ ಇಳಿದಾಗ ನಮ್ಮ ದೈಹಿಕ ಭಾಷೆಯು ಧೈರ್ಯದಿಂದ ಕೂಡಿರಲಿಲ್ಲ. ಆದರೆ ಕಿವೀಸ್‌ ಆಟಗಾರರು ಉತ್ತಮವಾಗಿ ಆಡಿದರು. ಅವರು ಪಂದ್ಯದ ಮೊದಲ ಓವರ್‌ನಿಂದಲೇ ನಮ್ಮ ಮೇಲೆ ಒತ್ತಡ ಹೇರಿದರು’ ಎಂದರು.

Tap to resize

Latest Videos

undefined

T20 World Cup: ಅನುಮಾನ ಬೇಡ, ಈಗಲೂ ಇದೆ ಟೀಂ ಇಂಡಿಯಾಗೆ ಸೆಮೀಸ್‌ಗೇರುವ ಅವಕಾಶ..!

ಕೊಹ್ಲಿ ಮಾತನಾಡಿದ ಕೆಲವೇ ನಿಮಿಷಗಳ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬುಮ್ರಾ, ‘ಬ್ಯಾಟರ್‌ಗಳು ಹೆಚ್ಚುವರಿ 20-30 ರನ್‌ ಗಳಿಸಿ ಬೌಲರ್‌ಗಳಿಗೆ ನೆರವಾಗಲು ಬಯಸಿದ್ದರು. ಹೀಗಾಗಿ ಆಕ್ರಮಣಕಾರಿ ಆಟವಾಡಿ ವಿಕೆಟ್‌ ಕಳೆದುಕೊಂಡರು’ ಎಂದಿದ್ದಾರೆ. ಇಬ್ಬರ ಹೇಳಿಕೆಗಳು ಒಂದುಕ್ಕೊಂದು ಹೊಂದುತ್ತಿಲ್ಲ. ಹೀಗಾಗಿ ತಂಡದಲ್ಲಿ ಸಂವಹನ ಕೊರತೆ ಇದೆಯೇ? ತಂಡ ಯಾವ ಲೆಕ್ಕಾಚಾರದೊಂದಿಗೆ ಕಣಕ್ಕಿಳಿಯುತ್ತಿದೆ, ತಂಡದ ಉದ್ದೇಶವೇನು, ರಣತಂತ್ರಗಳೇನು ಎನ್ನುವ ಮಾಹಿತಿ ಎಲ್ಲಾ ಆಟಗಾರರಿಗೆ ತಿಳಿಯುತ್ತಿಲ್ಲವೇ ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡಿವೆ.

ಮಹತ್ವದ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದ್ದ ಟೀಂ ಇಂಡಿಯಾ:

ಐಸಿಸಿ ಟಿ20 ವಿಶ್ವಕಪ್ ಟೂರ್ನಿ (ICC T20 World Cup) ಆರಂಭಕ್ಕೂ ಮುನ್ನ ಕಪ್‌ ಗೆಲ್ಲಬಲ್ಲ ನೆಚ್ಚಿನ ತಂಡಗಳಲ್ಲಿ ಒಂದು ಎಂದು ಗುರುತಿಸಿಕೊಂಡಿದ್ದ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ನಿರೀಕ್ಷಿತ ಆರಂಭ ಪಡೆಯಲು ವಿಫಲವಾಯಿತು. ದುಬೈನಲ್ಲಿ ನಡೆದ ಮೊದಲ ಪಂದ್ಯದಲ್ಲೇ ಪಾಕಿಸ್ತಾನ ಕ್ರಿಕೆಟ್ ತಂಡದ (Pakistan Cricket Team) ಎದುರು ಟೀಂ ಇಂಡಿಯಾ 10 ವಿಕೆಟ್‌ಗಳ ಆಘಾತಕಾರಿ ಸೋಲು ಕಂಡಿತು. ಈ ಮೂಲಕ ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ ಟೀಂ ಇಂಡಿಯಾ ಪಾಕಿಸ್ತಾನ ಎದುರು ಮುಗ್ಗರಿಸಿತ್ತು.

ಇನ್ನು ಅಕ್ಟೋಬರ್ 31ರಂದು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ (Dubai International Stadium) ನಡೆದ ಎರಡನೇ ಭಾರತದ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿತ್ತು. ಎರಡನೇ ಪಂದ್ಯದಲ್ಲೂ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ದಯನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಪರಿಣಾಮ ಭಾರತ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು ಕೇವಲ 110 ರನ್‌ಗಳನ್ನು ಕಲೆಹಾಕಿತ್ತು. ಈ ಸಾಧಾರಣ ಗುರಿ ಬೆನ್ನತ್ತಿದ ಕೇನ್‌ ವಿಲಿಯಮ್ಸನ್‌ (Kane Williamson) ನೇತೃತ್ವದ ನ್ಯೂಜಿಲೆಂಡ್ ತಂಡವು ಕೇವಲ 14.3 ಓವರ್‌ನಲ್ಲಿ 2 ವಿಕೆಟ್‌ ಕಳೆದುಕೊಂಡು ಸುಲಭವಾಗಿ ಗೆಲುವಿನ ನಗೆ ಬೀರಿತ್ತು.  

T20 World Cup: ನ್ಯೂಜಿಲೆಂಡ್ ಎದುರು ಟೀಂ ಇಂಡಿಯಾ ಸೋಲಿಗೆ ಕಾರಣವೇನು..?

ಭಾರತದ ಪಾಲಿಗೆ ಗ್ರೂಪ್ 2 ಹಂತದಲ್ಲಿ 3 ಪಂದ್ಯಗಳು ಬಾಕಿ ಇದ್ದು, ಆಫ್ಘಾನಿಸ್ತಾನ, ಸ್ಕಾಟ್ಲೆಂಡ್ ಹಾಗೂ ನಮೀಬಿಯಾ ತಂಡಗಳನ್ನು ಎದುರಿಸಲಿದೆ. ಈ ಮೂರು ಪಂದ್ಯಗಳಲ್ಲಿ ಟೀಂ ಇಂಡಿಯಾ ಭಾರೀ ಅಂತರದ ಗೆಲುವು ಸಾಧಿಸಿದರೆ, ಇದೇ ವೇಳೆ ನ್ಯೂಜಿಲೆಂಡ್ ತಂಡದ ಎದುರು ಆಫ್ಘಾನಿಸ್ತಾನ ಸಣ್ಣ ಅಂತರದ ಗೆಲುವು ಸಾಧಿಸಿದರೆ, ಭಾರತ ಸೆಮೀಸ್ ಪ್ರವೇಶಿಸುವ ಕನಸು ಜೀವಂತವಾಗಲಿದೆ. 

click me!