T20 World Cup ಭಾರತ ಮನೆಗೆ, ಇಂಗ್ಲೆಂಡ್ ಫೈನಲ್‌ಗೆ..! ಸೆಮೀಸ್‌ನಲ್ಲಿ ಟೀಂ ಇಂಡಿಯಾಗೆ ಹೀನಾಯ ಸೋಲು

Published : Nov 10, 2022, 04:36 PM ISTUpdated : Nov 10, 2022, 05:01 PM IST
T20 World Cup ಭಾರತ ಮನೆಗೆ, ಇಂಗ್ಲೆಂಡ್ ಫೈನಲ್‌ಗೆ..! ಸೆಮೀಸ್‌ನಲ್ಲಿ ಟೀಂ ಇಂಡಿಯಾಗೆ ಹೀನಾಯ ಸೋಲು

ಸಾರಾಂಶ

* ಭಾರತ ಎರಡು ಇಂಗ್ಲೆಂಡ್‌ಗೆ ಸೆಮೀಸ್‌ನಲ್ಲಿ ಭರ್ಜರಿ ಜಯ * 24 ಎಸೆತ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿದ ಜೋಸ್ ಬಟ್ಲರ್ ಪಡೆ * ಸ್ಪೋಟಕ ಅರ್ಧಶತಕ ಸಿಡಿಸಿ ಮಿಂಚಿದ ಬಟ್ಲರ್, ಹೇಲ್ಸ್

ಅಡಿಲೇಡ್(ನ.10): ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಇಂಗ್ಲೆಂಡ್ ಎದುರು 10 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿದೆ. ಭಾರತ ನೀಡಿದ್ದ 169 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡವು ಇನ್ನೂ 24 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿದ್ದು, ನವೆಂಬರ್ 13ರಂದು ಮೆಲ್ಬರ್ನ್‌ನಲ್ಲಿ ನಡೆಯಲಿರುವ ಫೈನಲ್‌ ಪಂದ್ಯಕ್ಕೆ ಲಗ್ಗೆಯಿಟ್ಟಿದೆ. ಫೈನಲ್‌ನಲ್ಲಿ ಪಾಕಿಸ್ತಾನ ಹಾಗೂ ಇಂಗ್ಲೆಂಡ್ ತಂಡಗಳು ಟಿ20 ವಿಶ್ವಕಪ್ ಪ್ರಶಸ್ತಿಗಾಗಿ ಕಾದಾಡಲಿವೆ.

ಇಲ್ಲಿನ ಅಡಿಲೇಡ್ ಓವಲ್ ಮೈದಾನದಲ್ಲಿ ಭಾರತ ನೀಡಿದ್ದ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡಕ್ಕೆ ನಾಯಕ ಜೋಸ್ ಬಟ್ಲರ್ ಹಾಗೂ ಅಲೆಕ್ಸ್‌ ಹೇಲ್ಸ್  ದಾಖಲೆಯ ಜತೆಯಾಟವಾಡುವಾಡುವ ಮೂಲಕ ತಂಡವನ್ನು ಫೈನಲ್‌ಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾದರು. ಜೋಸ್ ಬಟ್ಲರ್ ಹಾಗೂ ಅಲೆಕ್ಸ್ ಹೇಲ್ಸ್ ಜೋಡಿ ಪವರ್‌ ಪ್ಲೇನಲ್ಲೇ 63 ರನ್‌ಗಳ ಜತೆಯಾಟವಾಡುವ ಮೂಲಕ 10ರ ಸರಾಸರಿಯಲ್ಲಿ ರನ್‌ ಗಳಿಸಿತು. ಭಾರತದ ಯಾವೊಬ್ಬ ಬೌಲರ್ ಕೂಡಾ ಮಾರಕ ಎನಿಸುವಂತಹ ದಾಳಿ ನಡೆಸಲಿಲ್ಲ.

ಜೋಸ್ ಬಟ್ಲರ್ ಹಾಗೂ ಅಲೆಕ್ಸ್‌ ಹೇಲ್ಸ್‌ ಜೋಡಿ ಟಿ20 ವಿಶ್ವಕಪ್ ಸೆಮಿಫೈನಲ್ ಇತಿಹಾಸದಲ್ಲೇ ಮೊದಲ ವಿಕೆಟ್‌ಗೆ ದಾಖಲೆಯ 170 ರನ್‌ಗಳ ಜತೆಯಾಟವಾಡುವ ಮೂಲಕ ಕೇವಲ 16 ಓವರ್‌ಗಳಲ್ಲಿ ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದರು. ಕಳೆದ ವರ್ಷ ಇಯಾನ್ ಮಾರ್ಗನ್‌ ಇಂಗ್ಲೆಂಡ್‌ ನಾಯಕತ್ವಕ್ಕೆ ಗುಡ್ ಬೈ ಹೇಳಿದ ಬಳಿಕ ನಾಯಕರಾಗಿ ನೇಮಕವಾದ ಜೋಸ್ ಬಟ್ಲರ್ ಇದೀಗ ಇಂಗ್ಲೆಂಡ್ ತಂಡವನ್ನು ಯಶಸ್ವಿಯಾಗಿ ಫೈನಲ್‌ಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾದರು. ಸೆಮಿಫೈನಲ್‌ನಲ್ಲಿ ಆಕರ್ಷಕ ಬ್ಯಾಟಿಂಗ್ ನಡೆಸಿದ ನಾಯಕ ಜೋಸ್ ಬಟ್ಲರ್ 49 ಎಸೆತಗಳಲ್ಲಿ 9 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 80 ರನ್ ಬಾರಿಸಿದರೆ, ಮತ್ತೊಂದು ತುದಿಯಲ್ಲಿ ಅಲೆಕ್ಸ್ ಹೇಲ್ಸ್‌ ಕೇವಲ 47 ಎಸೆತಗಳಲ್ಲಿ 4 ಬೌಂಡರಿ ಹಾಗೂ 7 ಸಿಕ್ಸರ್ ಸಹಿತ ಅಜೇಯ 86 ರನ್ ಬಾರಿಸಿ ಮಿಂಚಿದರು.

2013ರ ಬಳಿಕ ಐಸಿಸಿ ಟ್ರೋಫಿ ಗೆಲ್ಲಲು ಟೀಂ ಇಂಡಿಯಾ: ಹೌದು, ಟೀಂ ಇಂಡಿಯಾ, ಮಹೇಂದ್ರ ಧೋನಿ ನೇತೃತ್ವದಲ್ಲಿ 2013ರಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಕೊನೆಯ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದಾಗಿ ಒಂದು ದಶಕ ಕಳೆದಿದ್ದು, ಟೀಂ ಇಂಡಿಯಾ ಒಮ್ಮೆಯೂ ಐಸಿಸಿ ಟ್ರೋಫಿ ಜಯಿಸುವಲ್ಲಿ ಯಶಸ್ವಿಯಾಗಿಲ್ಲ. ಭಾರತ ತಂಡವು 2013ರ ಬಳಿಕ 9 ನಾಕೌಟ್ ಪಂದ್ಯಗಳನ್ನಾಡಿದ್ದು, ಕೇವಲ 3 ಪಂದ್ಯಗಳಲ್ಲಿ ಗೆಲುವು ಹಾಗೂ 6 ಪಂದ್ಯಗಳಲ್ಲಿ ಸೋಲು ಕಂಡಿದೆ. 

T20 World Cup ಕೊಹ್ಲಿ-ಪಾಂಡ್ಯ ಸಿಡಿಲಬ್ಬರದ ಬ್ಯಾಟಿಂಗ್, ಇಂಗ್ಲೆಂಡ್‌ಗೆ ಸವಾಲಿನ ಗುರಿ ನೀಡಿದ ಭಾರತ..!

ಭಾರತ ತಂಡವು 2014ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಸೋಲು, 2015ರ ಪುರುಷರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಸೋಲು, 2016ರ ಅಂಡರ್ 19 ವಿಶ್ವಕಪ್‌ನಲ್ಲಿ ಸೋಲು, 2020ರ ಅಂಡರ್ 19 ವಿಶ್ವಕಪ್ ಸೋಲು, 2021 ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಸೋಲು ಹಾಗೂ ಇದೀಗ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಸೋಲು.

ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಟೀಂ ಇಂಡಿಯಾ ಆರಂಭದಲ್ಲೇ ಕೆ ಎಲ್ ರಾಹುಲ್(05) ವಿಕೆಟ್ ಕಳೆದುಕೊಂಡಿತು. ಇನ್ನು ನಾಯಕ ರೋಹಿತ್ ಶರ್ಮಾ 21 ಎಸೆತಗಳಲ್ಲಿ 20 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೂ. ಇನ್ನು ಟೂರ್ನಿಯುದ್ದಕ್ಕೂ ಮಿಂಚಿದ್ದ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಕೇವಲ 14 ರನ್‌ಗಳಿಗೆ ಸೀಮಿತವಾಯಿತು.

ಕೊಹ್ಲಿ-ಪಾಂಡ್ಯ ಜುಗಲ್ಬಂದಿ: ಒಂದು ಹಂತದಲ್ಲಿ 75 ರನ್‌ಗಳಿಗೆ 3 ವಿಕೆಟ್ ಕಳೆದುಕೊಡು ಕಂಗಾಲಾಗಿದ್ದ ಭಾರತ ತಂಡಕ್ಕೆ ನಾಲ್ಕನೇ ವಿಕೆಟ್‌ಗೆ ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ 61 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ತಮ್ಮ ನೆಚ್ಚಿನ ಮೈದಾನದಲ್ಲಿ ಮತ್ತೊಮ್ಮೆ ಆಕರ್ಷಕ ಬ್ಯಾಟಿಂಗ್ ನಡೆಸಿದ ವಿರಾಟ್ ಕೊಹ್ಲಿ 40 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 50 ರನ್ ಬಾರಿಸಿ ಕ್ರಿಸ್ ಜೋರ್ಡನ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಹಾರ್ದಿಕ್ ಪಾಂಡ್ಯ ಕೇವಲ 29 ಎಸೆತಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. ಅಂತಿಮವಾಗಿ ಹಾರ್ದಿಕ್ ಪಾಂಡ್ಯ 33 ಎಸೆತಗಳಲ್ಲಿ 66 ರನ್ ಬಾರಿಸಿ ಕೊನೆಯ ಎಸೆತದಲ್ಲಿ ಹಿಟ್‌ವಿಕೆಟ್‌ ಆಗಿ ಪೆವಿಲಿಯನ್ ಸೇರಿದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೆಲವೇ ದಿನದಲ್ಲಿ ಸ್ಮೃತಿ ಮಂಧನಾ ಮದುವೆ ಆಘಾತದಿಂದ ಹೊರಬಂದಿದ್ದೇಗೆ? 3 ವರ್ಷ ಹಿಂದೆ ಹೇಳಿದ್ದ ಟಿಪ್ಸ್
ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟಿ20 ಪಂದ್ಯಕ್ಕೂ ಮೊದಲು ಗೊಂದಲಕ್ಕೆ ಸಿಲುಕಿದ ಗೌತಮ್ ಗಂಭೀರ್!