* ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಗ್ರೂಪ್ 2 ಹಂತದ ಕೊನೆಯ ಲೀಗ್ ಸೆಣಸಾಟ
* 3 ಪಂದ್ಯಗಳಲ್ಲಿ ಎರಡು ತಂಡಗಳಿಗಿದೆ ಸೆಮೀಸ್‌ಗೇರುವ ಅವಕಾಶ
* ಸದ್ಯ 'ಬಿ' ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಟೀಂ ಇಂಡಿಯಾ
ಮೆಲ್ಬರ್ನ್: ಐಸಿಸಿ ಟಿ20 ವಿಶ್ವಕಪ್‌ನ ಲೀಗ್ ಹಂತದ ಪಂದ್ಯ ಕೊನೆಗೊಳ್ಳಲು ಇನ್ನೊಂದೇ ದಿನ ಬಾಕಿ ಇದೆ. ಟೂರ್ನಿ ನಿರ್ಣಾಯಕ ಹಂತ ತಲುಪಿದರೂ ಗುಂಪು 2ರಿಂದ ಸೆಮಿಫೈನಲ್ ಪ್ರವೇಶಿಸುವ ತಂಡಗಳು ಯಾವುವು ಎಂಬುದು ಇನ್ನೂ ಖಚಿತಗೊಂಡಿಲ್ಲ. ಕ್ರಿಕೆಟಿಗರು, ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲಿಸಿರುವ ಟೂರ್ನಿಯಲ್ಲಿ ಭಾನುವಾರ 3 ಪಂದ್ಯಗಳ ಮೂಲಕ 4 ತಂಡಗಳ ಭವಿಷ್ಯ ನಿರ್ಧಾರವಾಗಲಿದೆ.
ಯಾವ ತಂಡ, ಏನು ಸ್ಥಿತಿಗತಿ?
‘ಬಿ’ನಲ್ಲಿ 6 ತಂಡಕ್ಕೆ ಒಂದೊಂದು ಪಂದ್ಯವಿದ್ದು, ಸದ್ಯಕ್ಕೆ ಭಾರತ 6 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ 5, ಪಾಕ್ ಹಾಗೂ ಬಾಂಗ್ಲಾ ತಲಾ 4, ಜಿಂಬಾಬ್ವೆ 3 ಮತ್ತು ನೆದರ್ಲೆಂಡ್ 2 ಅಂಕ ಹೊಂದಿವೆ. ಜಿಂಬಾಬ್ವೆ, ನೆದರ್ಲೆಂಡ್ ಈಗಾಗಲೇ ಹೊರಬಿದ್ದಿದ್ದು, ಉಳಿದ 4 ತಂಡಗಳಿಗೆ ಸೆಮಿಫೈನಲ್‌ಗೇರುವ ಅವಕಾಶವಿದೆ. ಈ ಪೈಕಿ ಭಾರತ ಹಾಗೂ ಆಫ್ರಿಕಾಕ್ಕೆ ಸೆಮಿಫೈನಲ್‌ಗೆ ಏರುವ ಅವಕಾಶ ಅತಿ ಹೆಚ್ಚಿದೆ. ಆ ಸಾಧ್ಯಾಸಾಧ್ಯತೆಗಳ ವಿವರ ಇಂತಿದೆ.
1. ಭಾರತ: ಜಿಂಬಾಬ್ವೆ ವಿರುದ್ಧ ಗೆದ್ದರೆ ಅಥವಾ ಪಂದ್ಯ ರದ್ದಾದರೆ ಚಿಂತೆಯೇ ಇಲ್ಲ. 8 ಅಥವಾ 7 ಅಂಕದೊಂದಿಗೆ ಸೆಮಿಫೈನಲ್ ಪ್ರವೇಶಿಸಲಿದೆ. ಸೋತರೆ ಅದರ ಭವಿಷ್ಯ ಆಫ್ರಿಕಾ-ನೆದರ್ಲೆಂಡ್ ಹಾಗೂ ಪಾಕ್-ಬಾಂಗ್ಲಾ ಪಂದ್ಯಗಳ ಮೇಲೆ ಅವಲಂಬಿತ. ಆಫ್ರಿಕಾ ಸೋತರೆ 6 ಅಂಕ ಹೊಂದಿರುವ ಭಾರತ ಸೆಮೀಸ್‌ಗೇರುತ್ತದೆ. ಆಫ್ರಿಕಾ ಗೆದ್ದರೆ 7 ಅಂಕದೊಂದಿಗೆ ಅದರ ಸೆಮೀಸ್ ಸ್ಥಾನ ಗಟ್ಟಿ. ಇನ್ನೊಂದು ಸ್ಥಾನಕ್ಕೆ ಭಾರತ, ಪಾಕ್, ಬಾಂಗ್ಲಾ ಗುದ್ದಾಡಬೇಕು. ಅಂದರೆ, ಭಾರತಕ್ಕೆ 6 ಅಂಕ ಇದ್ದು, ಪಾಕ್-ಬಾಂಗ್ಲಾ ಪಂದ್ಯದ ವಿಜೇತರಿಗೂ 6 ಅಂಕ ಇರಲಿದೆ. ಉತ್ತಮ ರನ್‌ರೇಟ್ ಹೊಂದಿರುವ ತಂಡ ಸೆಮೀಸ್ ಪ್ರವೇಶಿಸುತ್ತದೆ.
T20 World Cup ಭಾರತ ಜಿಂಬಾಬ್ವೆ ಪಂದ್ಯ ಮಳೆಯಿಂದ ರದ್ದಾದರೆ, ಸೆಮಿಫೈನಲ್ ಲೆಕ್ಕಾಚಾರ!
2. ದಕ್ಷಿಣ ಆಫ್ರಿಕಾ: ಇದರ ಲೆಕ್ಕಾಚಾರ ಸರಳ. ನೆದರ್ಲೆಂಡ್ ವಿರುದ್ಧ ಗೆದ್ದರೆ 7 ಅಂಕಗಳೊಂದಿಗೆ ಸೆಮೀಸ್‌ಗೆ ಪ್ರವೇಶ ನಿಶ್ಚಿತ. ಸೋತರೆ, 5 ಅಂಕ ಇರುವ ಕಾರಣ ಟೂರ್ನಿಯಿಂದ ನಿರ್ಗಮನ. ಪಂದ್ಯ ರದ್ದಾದರೂ 6 ಅಂಕ ಹಾಗೂ ಉತ್ತಮ ರನ್‌ರೇಟ್ ಆಧಾರದಲ್ಲಿ ಸೆಮೀಸ್ ಪ್ರವೇಶಿಸುವ ಸಾಧ್ಯತೆ ಹೆಚ್ಚು.
3. ಪಾಕಿಸ್ತಾನ: ಬಾಂಗ್ಲಾ ವಿರುದ್ಧ ಗೆಲ್ಲಲೇಬೇಕು. ಗೆದ್ದರೂ, ಆಫ್ರಿಕಾ-ನೆದರ್ಲೆಂಡ್, ಭಾರತ-ಜಿಂಬಾಬ್ವೆ ಫಲಿತಾಂಶದ ಮೇಲೆ ಅವಲಂಬಿತ. ಭಾರತ, ಆಫ್ರಿಕಾ ಎರಡೂ ಗೆದ್ದಿದ್ದರೆ ಪಾಕ್‌ಗೆ ಅವಕಾಶವೇ ಇಲ್ಲ. ಭಾರತ ಸೋತು ಆಫ್ರಿಕಾ ಗೆದ್ದಿದ್ದರೆ ಪಾಕ್‌ಗೆ ರನ್‌ರೇಟ್ ಆಧಾರದಲ್ಲಿ ಸೆಮೀಸ್‌ಗೇರುವ ಅವಕಾಶ ಇದೆ. ಆಫ್ರಿಕಾ ಸೋತಿದ್ದರೆ ಪಾಕ್‌ಗೆ ಸೆಮೀಸ್ ಅವಕಾಶ ಸುಲಭ. ಹಾಗಾಗಿ, ಅದು ತಾನು ಗೆಲ್ಲುವುದರ ಜೊತೆಗೆ ಆಫ್ರಿಕಾ ಸೋಲಲೆಂದು ಪ್ರಾರ್ಥಿಸಬೇಕು. ಪಂದ್ಯ ರದ್ದಾದರೆ 5 ಅಂಕ ಗಳಿಸಿ ನಿರ್ಗಮಿಸುವ ಸಾಧ್ಯತೆ ಹೆಚ್ಚು.
4. ಬಾಂಗ್ಲಾದೇಶ: ನಾಲ್ಕೂ ತಂಡಗಳ ಪೈಕಿ ಅತ್ಯಂತ ಕಡಿಮೆ ಅವಕಾಶ ಇರುವ ತಂಡ ಇದು. ಪಾಕ್ ವಿರುದ್ಧ ಭಾರೀ ಅಂತರದಿಂದ ಗೆಲ್ಲಬೇಕು. ಅದು ಸಾಧ್ಯ ಆದರೂ, ಇತರೆ ಎರಡು ಪಂದ್ಯಗಳ ಫಲಿತಾಂಶದ ಮೇಲೆ ಬಾಂಗ್ಲಾ ಭವಿಷ್ಯ ಅವಲಂಬಿತ. ಹೆಚ್ಚು ಕಮ್ಮಿ ಪಾಕಿಸ್ತಾನದ ಸ್ಥಿತಿಯೇ ಬಾಂಗ್ಲಾದ್ದು. ಭಾರತ, ಆಫ್ರಿಕಾ ಎರಡೂ ತಂಡ ಗೆದ್ದರೆ ಬಾಂಗ್ಲಾಕ್ಕೆ ಸೆಮೀಸ್ ಅವಕಾಶವಿಲ್ಲ. ಭಾರತ ಸೋತು ಆಫ್ರಿಕಾ ಗೆದ್ದಿದ್ದರೆ ರನ್‌ರೇಟ್ ಆಧಾರದಲ್ಲಿ ಮುಂದಿನ ಹಂತಕ್ಕೇರುವ ಅತಿಕ್ಷೀಣ ಸಾಧ್ಯತೆ ಇದೆ. ಆಫ್ರಿಕಾ ಸೋತಿದ್ದರೆ ಬಾಂಗ್ಲಾ ಹಾದಿ ಸುಗಮ. ಯಾವುದಕ್ಕೂ ಅದು ಪಾಕಿಸ್ತಾನವನ್ನು ತಾನು ಮಣಿಸುವುದರ ಜೊತೆಗೆ ಆಫ್ರಿಕಾ ಸೋಲಲೆಂದು ನಿರೀಕ್ಷಿಸಬೇಕು. ಪಂದ್ಯ ರದ್ದಾದರೆ 5 ಅಂಕ ಗಳಿಸಿ ನಿರ್ಗಮಿಸುವ ಸಾಧ್ಯತೆ ಹೆಚ್ಚು.