T20 World Cup ಲಂಕಾ ಬಗ್ಗುಬಡಿದು ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಇಂಗ್ಲೆಂಡ್..! ಬೆನ್ ಸ್ಟೋಕ್ಸ್ ಗೆಲುವಿನ ಹೀರೋ

By Naveen KodaseFirst Published Nov 5, 2022, 4:57 PM IST
Highlights

ಟಿ20 ವಿಶ್ವಕಪ್ ಸೆಮೀಸ್‌ಗೆ ಲಗ್ಗೆಯಿಟ್ಟ ಇಂಗ್ಲೆಂಡ್
ಬೆನ್ ಸ್ಟೋಕ್ಸ್‌ ಇಂಗ್ಲೆಂಡ್ ಗೆಲುವಿನ ರೂವಾರಿ
ಇಂಗ್ಲೆಂಡ್ ಗೆಲುವಿನೊಂದಿಗೆ ಆಸ್ಟ್ರೇಲಿಯಾದ ಸೆಮೀಸ್ ಕನಸು ನುಚ್ಚುನೂರು

ಸಿಡ್ನಿ(ನ.05): ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಗ್ರೂಪ್ 1 ಹಂತದ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ತಂಡದ ವಿರುದ್ದ 4 ವಿಕೆಟ್‌ ಜಯ ಸಾಧಿಸಿದ ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ತಂಡವು ಸೆಮಿಫೈನಲ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದೆ. ಮತ್ತೊಮ್ಮೆ ಕೆಚ್ಚೆದೆಯ ಬ್ಯಾಟಿಂಗ್ ಪ್ರದರ್ಶನ ತೋರಿದ ಬೆನ್ ಸ್ಟೋಕ್ಸ್‌, ಇಂಗ್ಲೆಂಡ್ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು. ಸಮಯೋಚಿತ ಬ್ಯಾಟಿಂಗ್ ನಡೆಸಿದ ಬೆನ್ ಸ್ಟೋಕ್ಸ್‌  ಅಜೇಯ 44 ರನ್ ಬಾರಿಸಿ ಗೆಲುವಿನ ರೂವಾರಿ ಎನಿಸಿದರು. ಈ ಗೆಲುವಿನೊಂದಿಗೆ ಗ್ರೂಪ್ 1 ಹಂತದಿಂದ ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ತಂಡಗಳು ಸೆಮಿಫೈನಲ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿವೆ. ಇಂಗ್ಲೆಂಡ್ ಗೆಲುವಿನೊಂದಿಗೆ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾದ ಸೆಮೀಸ್ ಕನಸು ನುಚ್ಚುನೂರಾಗಿದೆ.

ಇಲ್ಲಿನ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಶ್ರೀಲಂಕಾ ನೀಡಿದ್ದ 142 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡವು ಸ್ಪೋಟಕ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ ನಾಯಕ ಜೋಸ್ ಬಟ್ಲರ್ ಹಾಗೂ ಅಲೆಕ್ಸ್‌ ಹೇಲ್ಸ್‌ 7.2 ಓವರ್‌ಗಳಲ್ಲಿ 72 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ನಾಯಕ ಜೋಸ್ ಬಟ್ಲರ್ 23 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 28 ರನ್ ಬಾರಿಸಿ ಹಸರಂಗಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ 47 ರನ್ ಬಾರಿಸಿ ಅರ್ಧಶತಕದತ್ತ ಮುನ್ನುಗ್ಗುತ್ತಿದ್ದ ಮತ್ತೋರ್ವ ಆರಂಭಿಕ ಬ್ಯಾಟರ್ ಅಲೆಕ್ಸ್‌ ಹೇಲ್ಸ್‌ ಮಿಸ್ಟ್ರಿ ಸ್ಪಿನ್ನರ್ ಹಸರಂಗಗೆ ಎರಡನೇ ಬಲಿಯಾದರು.

England seal their spot in the 2022 semi-finals 🤩

They have now made it to the last four in three successive editions of the tournament! 👏 pic.twitter.com/JzdGRkOB7A

— T20 World Cup (@T20WorldCup)

ದಿಢೀರ್ ಕುಸಿದ ಆಂಗ್ಲರು: ಹೌದು ಲಂಕಾ ಎದುರು ಭರ್ಜರಿ ಆರಂಭ ಪಡೆದಿದ್ದ ಇಂಗ್ಲೆಂಡ್ ತಂಡವು, ಜೋಸ್ ಬಟ್ಲರ್ ವಿಕೆಟ್ ಪತನದ ಬಳಿಕ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಲೇ ಸಾಗಿತು. ಇಂಗ್ಲೆಂಡ್ ತಂಡವು ತನ್ನ ಖಾತೆಗೆ 36 ರನ್ ಸೇರಿಸುವಷ್ಟರಲ್ಲಿ ಅಗ್ರಕ್ರಮಾಂಕದ 5 ವಿಕೆಟ್ ಕಳೆದುಕೊಂಡು ಕೆಲಕಾಲ ಕೊಂಚ ಆತಂಕಕ್ಕೆ ಒಳಗಾಗಿತ್ತು. ಹ್ಯಾರಿ ಬ್ರೂಕ್ ಹಾಗೂ ಲಿಯಾಮ್ ಲಿವಿಂಗ್‌ಸ್ಟೋನ್ ತಲಾ 4 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಮೋಯಿನ್ ಅಲಿ ಕೇವಲ 1 ರನ್ ಬಾರಿಸಿ ಧನಂಜಯ ಡಿ ಸಿಲ್ವಾಗೆ ಎರಡನೇ ಬಲಿಯಾದರು.

ತಂಡವನ್ನು ಗೆಲುವಿನ ದಡ ಸೇರಿಸಿದ ಬೆನ್ ಸ್ಟೋಕ್ಸ್‌: 2019ರ ಏಕದಿನ ವಿಶ್ವಕಪ್ ಹೀರೋ ಬೆನ್ ಸ್ಟೋಕ್ಸ್‌, ಮತ್ತೊಮ್ಮೆ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಬೌಲಿಂಗ್‌ನಲ್ಲಿ ಪ್ರಮುಖ ವಿಕೆಟ್ ಕಬಳಿಸಿದ್ದ ಸ್ಟೋಕ್ಸ್‌, ಬ್ಯಾಟಿಂಗ್‌ನಲ್ಲಿ ಅಜೇಯ 44 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದರು.

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ ತಂಡವು ಸ್ಪೋಟಕ ಆರಂಭವನ್ನೇ ಪಡೆಯಿತಾದರೂ, ಉತ್ತಮ ಆರಂಭವನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸಲು ವಿಫಲವಾಯಿತು. ಕುಸಾಲ್ ಮೆಂಡಿಸ್ 14 ಎಸೆತಗಳಲ್ಲಿ 18 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಮತ್ತೋರ್ವ ಆರಂಭಿಕ ಬ್ಯಾಟರ್ ಪಥುಮ್ ನಿಸ್ಸಾಂಕ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ತಂಡ ಸವಾಲಿನ ಮೊತ್ತ ಕಲೆಹಾಕಲು ನೆರವಾದರು. ನಿಸ್ಸಾಂಕ 45 ಎಸೆತಗಳನ್ನು ಎದುರಿಸಿ 2 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 67 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಕೊನೆಯಲ್ಲಿ ಭನುಕಾ ರಾಜಪಕ್ಸಾ 22 ಎಸೆತಗಳಲ್ಲಿ 22 ರನ್ ಬಾರಿಸುವ ಮೂಲಕ ತಂಡಕ್ಕೆ ಉಪಯುಕ್ತ ರನ್ ಕಾಣಿಕೆ ನೀಡಿದರು.

ಕಮ್‌ಬ್ಯಾಕ್ ಮಾಡಿದ ಇಂಗ್ಲೆಂಡ್: ಒಂದು ಹಂತದಲ್ಲಿ ಶ್ರೀಲಂಕಾ ತಂಡವು ಮೊದಲ 10 ಓವರ್‌ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 80 ರನ್ ಗಳಿಸುವ ಮೂಲಕ ಬೃಹತ್ ಮೊತ್ತದತ್ತ ದಾಪುಗಾಲಿಡುತ್ತಿತ್ತು. ಆದರೆ ದ್ವಿತಿಯಾರ್ಧದಲ್ಲಿ ಇಂಗ್ಲೆಂಡ್ ಬೌಲರ್‌ಗಳು ಕಮ್‌ಬ್ಯಾಕ್ ಮಾಡುವಲ್ಲಿ ಯಶಸ್ವಿಯಾದರು. ಹೀಗಾಗಿ ಕೊನೆಯ 60 ಎಸೆತಗಳಲ್ಲಿ ಇಂಗ್ಲೆಂಡ್‌ ಬೌಲರ್‌ಗಳು 6 ವಿಕೆಟ್ ಕಬಳಿಸುವುದರ ಜತೆಗೆ ಕೇವಲ 61 ರನ್ ನೀಡುವ ಮೂಲಕ ಲಂಕಾ ರನ್ ವೇಗಕ್ಕೆ ಕಡಿವಾಣ ಹಾಕಿದರು.  ಅದರಲ್ಲೂ ಕೊನೆಯ 5 ಓವರ್‌ಗಳಲ್ಲಿ ಲಂಕಾ ತಂಡವು 25 ರನ್ ಕಲೆಹಾಕಲಷ್ಟೇ ಶಕ್ತವಾಯಿತು.


 

click me!