T20 World Cup: ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಪಾಕ್‌ ಬೇಡಿ!

By Santosh Naik  |  First Published Nov 3, 2022, 5:41 PM IST

ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಭರ್ಜರಿ ನಿರ್ವಹಣೆ, ಬೌಲರ್‌ಗಳ ಶಿಸ್ತಿನ ದಾಳಿ ಹಾಗೂ ಮಳೆಯ ಸಹಾಯದಿಂದ ಪಾಕಿಸ್ತಾನ ತಂಡ ಟಿ20 ವಿಶ್ವಕಪ್‌ನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು ಡಿಎಲ್‌ಎಸ್‌ ನಿಯಮದ ಅನ್ವಯ 33 ರನ್‌ಗಳಿಂದ ಮಣಿಸಿದೆ.
 


ಸಿಡ್ನಿ (ನ.3): ಜಿಂಬಾಬ್ವೆ ಹಾಗೂ ಭಾರತ ವಿರುದ್ಧ ಸೋಲು ಕಂಡು ವಿಶ್ವಕಪ್‌ನ ಸೆಮಿಫೈನಲ್‌ ರೇಸ್‌ನಿಂದ ಹೊರಬೀಳುವ ಅಪಾಯ ಎದುರಿಸುತ್ತಿದ್ದ ಪಾಕಿಸ್ತಾನ ತಂಡ, ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ವಿಶ್ವಕಪ್‌ನ ತನ್ನ ನಾಲ್ಕನೇ ಪಂದ್ಯದಲ್ಲಿ 33 ರನ್‌ ಗೆಲುವು ಸಾಧಿಸಿದೆ. ಆ ಮೂಲಕ ಸೆಮಿಫೈನಲ್‌ ರೇಸ್‌ನಲ್ಲಿ ಉಳಿದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಸಿಡ್ನಿ ಕ್ರಿಕೆಟ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಪಾಕಿಸ್ತಾನ ತಂಡ ಇಫ್ತಿಕಾರ್‌ ಅಹ್ಮದ್‌ ಹಾಗೂ ಶಾದಾಬ್‌ ಖಾನ್‌ ಬಾರಿಸಿದ ಆಕರ್ಷಕ ಅರ್ಧಶತಕಗಳ ನೆರವಿನಿಂದ 9 ವಿಕೆಟ್‌ಗೆ 185 ರನ್‌ ಪೇರಿಸಿತ್ತು. ಸವಾಲಿನ ಮೊತ್ತವನ್ನು ಚೇಸ್‌ ಮಾಡಲು ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡದ ಇನ್ನಿಂಗ್ಸ್‌ಗೆ ಮಳೆ ಅಡ್ಡಿಪಡಿಸಿತು. ಮತ್ತೆ ಪಂದ್ಯ ಆರಂಭವಾದಾಗ ದಕ್ಷಿಣ ಆಫ್ರಿಕಾಕ್ಕೆ 14 ಓವರ್‌ಗಳಲ್ಲಿ 142 ರನ್‌ ಬಾರಿಸುವ ಗುರಿ ನೀಡಲಾಗಿತ್ತು. ಶಾಹಿನ್‌ ಅಫ್ರಿಧಿ ಹಾಗೂ ಶಾಬಾದ್‌ ಖಾನ್‌ ನೇತೃತ್ವದ ದಾಳಿಯ ಮುಂದೆ ಪರದಾಡಿದ ದಕ್ಷಿಣ ಆಫ್ರಿಕಾ 9 ವಿಕೆಟ್‌ಗೆ 108 ರನ್‌ ಬಾರಿಸಲಷ್ಟೇ ಯಶಸ್ವಿಯಾಗಿ ಸೋಲು ಕಂಡಿತು. ಕ್ವಿಂಟನ್‌ ಡಿ ಕಾಕ್‌, ರಿಲ್ಲಿ ರೋಸೌ, ಏಡೆನ್‌ ಮಾರ್ಕ್ರಮ್‌ ಹಾಗೂ ಹೆನ್ರಿಚ್ ಕ್ಲಾಸೆನ್‌ ದಯನೀಯ ವೈಫಲ್ಯ ಕಂಡಿದ್ದು ದಕ್ಷಿಣ ಆಫ್ರಿಕಾದ ಸೋಲಿಗೆ ಕಾರಣವೆನಿಸಿತು.

ಈ ಗೆಲುವಿನೊಂದಿಗೆ ಗ್ರೂಪ್‌2 ಅಂಕಪಟ್ಟಿಯಲ್ಲಿ ಪಾಕಿಸ್ತಾನ 4 ಅಂಕದೊಂದಿಗೆ ಮೂರನೇ ಸ್ಥಾನಕ್ಕೇರಿದೆ. ಭಾರತ ತಂಡ ಆಡಿದ 4 ಪಂದ್ಯಗಳಿಂದ 3 ಗೆಲುವು ಹಾಗೂ 1 ಸೋಲಿನೊಂದಿಗೆ 6 ಅಂಕ ಸಂಪಾದನೆ ಮಾಡಿ ಅಗ್ರಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾ ತಂಡ 4 ಪಂದ್ಯಗಳಲ್ಲಿ 2 ಗೆಲುವು 1 ಸೋಲು 1 ರದ್ದಾದ ಪಂದ್ಯದಿಂದ 5 ಅಂಕ ಸಂಪಾದಿಸಿದೆ. ಇನ್ನೊಂದೆಡೆ ಪಾಕಿಸ್ತಾನ ಆಡಿದ 4 ಪಂದ್ಯಗಳಲ್ಲಿ 2 ಗೆಲುವು, 2 ಸೋಲುಗಳೊಂದಿಗೆ 4 ಅಂಕ ಸಂಪಾದನೆ ಮಾಡಿ ಮೂರನೇ ಸ್ಥಾನದಲ್ಲಿದೆ. ಈ ಮೂರೂ ತಂಡಗಳಿಗೆ ಸೆಮಿಫೈನಲ್‌ ಪ್ರವೇಶ ಮುಕ್ತವಾಗಿದ್ದು, ಅಂತಿಮ ಪಂದ್ಯದ ಫಲಿತಾಂಶಗಳೇ ಸೆಮಿಫೈನಲ್‌ ಟಿಕೆಟ್‌ ಖಚಿತಪಡಿಸಲಿದೆ. ಪಾಕಿಸ್ತಾನ ಸೆಮಿಫೈನಲ್‌ಗೆ ಹೋಗಬೇಕಾದಲ್ಲಿ ಭಾರತ ಅಥವಾ ದಕ್ಷಿಣ ಆಫ್ರಿಕಾ ಕೊನೆಯ ಪಂದ್ಯದಲ್ಲಿ ಸೋಲು ಕಾಣಬೇಕು ಎಂದು ಪ್ರಾರ್ಥಿಸಬೇಕಿದೆ.

Latest Videos

T20 World Cup: ಭಾರತವನ್ನು ಜಿಂಬಾಬ್ವೆ ಸೋಲಿಸಿದರೆ ನಾನು ಆ ದೇಶದವರನ್ನೇ ಮದುವೆಯಾಗ್ತೀನಿ ಎಂದ ಪಾಕ್‌ ನಟಿ..!

ಮೊತ್ತ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ ಉತ್ತಮ ಆರಂಭ ಕಂಡಿರಲಿಲ್ಲ.ಮೊದಲ ಓವರ್‌ನಲ್ಲಿಯೇ ಅನುಭವಿ ಕ್ವಿಂಟನ್‌ ಡಿ ಕಾಕ್‌ ವಿಕೆಟ್‌ ಕಳೆದುಕೊಂಡರೆ, 16 ರನ್‌ ಬಾರಿಸುವ ವೇಳೆಗೆ ರಿಲ್ಲಿ ರೋಸೌ ಔಟಾದರು. ಈ ಹಂತದಲ್ಲಿ ಜೊತೆಯಾದ ಟೆಂಬಾ ಬವುಮಾ (36) ಹಾಗೂ ಏಡೆನ್‌ ಮಾರ್ಕ್ರಮ್‌ (20) ತಂಡದ ಮೊತ್ತವನ್ನು 65ರ ಗಡಿ ಮುಟ್ಟಿಸಿದ್ದರು. ಆದರೆ, ಒಂದೇ ರನ್‌ನ ಅಂತರದಲ್ಲಿ ಇವರಿಬ್ಬರು ಔಟಾದರು. 9 ಓವರ್‌ ಮುಕ್ತಾಯಕ್ಕೆ 4 ವಿಕೆಟ್‌ಗೆ 69 ರನ್‌ ಬಾರಿಸಿದ್ದ ವೇಳೆ ಮಳೆ ಆರಂಭವಾದ್ದರಿಂದ ಅರ್ಧಗಂಟೆಗೂ ಹೆಚ್ಚುಕಾಲ ಪಂದ್ಯ ಸ್ಥಗಿತವಾಯಿತು. ಈ ವೇಳೆ ದಕ್ಷಿಣ ಆಫ್ರಿಕಾ ಡಿಎಲ್‌ ನಿಯಮದ ಅನ್ವಯ 16 ರನ್‌ಗಳಿಂದ ಹಿಂದಿತ್ತು. ಪಂದ್ಯ ಆರಂಭವಾದ ಬಳಿಕ ದಕ್ಷಿಣ ಆಫ್ರಿಕಾ ತಂಡಕ್ಕೆ 14 ಓವರ್‌ ಗಳಲ್ಲಿ 142 ರನ್‌ ಬಾರಿಸುವ ಪರಿಷ್ಕೃತ ಗುರಿ ನೀಡಲಾಗಿತ್ತು. ಇದರ ಅನ್ವಯ ಕೊನೆಯ 5 ಓವರ್‌ಗಳಲ್ಲಿ ದಕ್ಷಿಣ ಆಫ್ರಿಕಾ ಗೆಲುವಿಗೆ 73 ರನ್‌ ಸಿಡಿಸಬೇಕಿತ್ತು.

T20 World Cup ಬಾಂಗ್ಲಾ ಎದುರು ರೋಚಕ ಜಯ, ಸೆಮೀಸ್‌ಗೆ ಟೀಂ ಇಂಡಿಯಾ ಸನಿಹ..!

ಪಂದ್ಯ ಆರಂಭವಾದ ಬಳಿಕ ನಡೆದ ಶಾಬಾದ್‌ ಖಾನ್‌ರ ಮೊದಲ ಓವರ್‌ನಲ್ಲಿಯೇ ಸ್ಟಬ್ಸ್‌ 14 ರನ್‌ ಸಿಡಿಸಿ ಗಮನಸೆಳೆದಿದ್ದರು. ಆದರೆ, ಆ ಬಳಿಕ ತಂಡ ನಿರಂತರವಾಗಿ ವಿಕೆಟ್‌ ಕಳೆದುಕೊಂಡಿತು. ಹೆನ್ರಿಚ್‌ ಕ್ಲಾಸೆನ್‌, ಶಾಹಿನ್‌ ಅಫ್ರಿಧಿಗೆ ವಿಕೆಟ್‌ ನೀಡಿದರೆ, ಮೊಹಮದ್‌ ವಾಸಿಮ್‌ ಎಸೆದ 12ನೇ ಓವರ್‌ನಲ್ಲಿ ವೇಯ್ನ್‌ ಪರ್ನೆಲ್‌ ಹಾಗೂ ಮರು ಓವರ್‌ನಲ್ಲಿ ಸ್ಟಬ್ಸ್‌  ಕೂಡ ವಿಕೆಟ್‌ ಒಪ್ಪಿಸಿದಾಗ ತಂಡ ಸೋಲು ಕಾಣವುದು ಖಚಿತವಾಗಿತ್ತು.

click me!