T20 World Cup: ಕಿವೀಸ್ ಎದುರು ಟಾಸ್ ಗೆದ್ದ ಆಸ್ಟ್ರೇಲಿಯಾ ಬೌಲಿಂಗ್ ಆಯ್ಕೆ

By Naveen KodaseFirst Published Oct 22, 2022, 12:12 PM IST
Highlights

ಸೂಪರ್ 12 ಹಂತದ ಪಂದ್ಯಾವಳಿಗೆ ಅಧಿಕೃತ ಚಾಲನೆ
ತವರಿನಲ್ಲಿ ಶುಭಾರಂಭ ಮಾಡಲು ರೆಡಿಯಾದ ಆಸ್ಟ್ರೇಲಿಯಾ
ಕಳೆದ ವಿಶ್ವಕಪ್ ಫೈನಲ್ ಸೋಲಿಗೆ ಸೇಡು ತೀರಿಸಿಕೊಳ್ಳುತ್ತಾ ಕಿವೀಸ್

ಸಿಡ್ನಿ(ಅ.22): ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಹಾಗೂ ರನ್ನರ್ ಅಪ್ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಆ್ಯರೋನ್ ಫಿಂಚ್ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ.  ಈ ಹೈವೋಲ್ಟೇಜ್ ಪಂದ್ಯಕ್ಕೆ ಸಿಡ್ನಿ ಕ್ರಿಕೆಟ್ ಮೈದಾನ ಆತಿಥ್ಯವನ್ನು ವಹಿಸಿದೆ.

2021ರಲ್ಲಿ ದುಬೈನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಬಗ್ಗುಬಡಿದು ಆಸ್ಟ್ರೇಲಿಯಾ ಚೊಚ್ಚಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇನ್ನು ಕೇನ್‌ ವಿಲಿಯಮ್ಸನ್ ಪಡೆ, ಕಳೆದ ವಿಶ್ವಕಪ್ ಫೈನಲ್ ಸೋಲಿಗೆ ಸೇಡು ತೀರಿಸಿಕೊಳ್ಳಲು ಎದುರು ನೋಡುತ್ತಿದ್ದರೆ, ಆಸ್ಟ್ರೇಲಿಯಾ ತಂಡವು ಗೆಲುವಿನೊಂದಿಗೆ ಟೂರ್ನಿಯಲ್ಲಿ ಶುಭಾರಂಭ ಮಾಡಲು ಹಾತೊರೆಯುತ್ತಿದೆ.

Toss update 🗞️

Australia have elected to bowl first! | 📝 Scorecard: https://t.co/1mYxKgnC0n pic.twitter.com/nRbF2BR9rj

— T20 World Cup (@T20WorldCup)

ಪಂದ್ಯಕ್ಕೆ ಮಳೆ ಅಡ್ಡಿ ಪಡಿಸುವ ಸಾಧ್ಯತೆಯಿದೆ. ಹೀಗಾಗಿಯೇ ವಾತಾವರಣವನ್ನು ಗಮನದಲ್ಲಿಟ್ಟುಕೊಂಡು ಟಾಸ್ ಗೆದ್ದ ಆಸೀಸ್ ನಾಯಕ ಫಿಂಚ್ ಮರು ಯೋಚನೆ ಮಾಡದೇ ಫೀಲ್ಡಿಂಗ್ ಆಯ್ದುಕೊಂಡರು. ಬಳಿಕ ಮಾತನಾಡಿದ ಅವರು, ಪಂದ್ಯ ಸಾಗಿದಂತೆ ಬ್ಯಾಟ್‌ ಮಾಡಲು ಪಿಚ್ ಸುಲಭವಾಗಲಿದೆ. ಹೀಗಾಗಿ ತಾವು ಮೊದಲು ಬೌಲಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು. ಇನ್ನು ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ಕೂಡಾ ಇದೇ ಮಾತನ್ನು ಪುನರುಚ್ಚರಿಸಿದ್ದು, ತಾವು ಕೂಡಾ ಒಂದು ವೇಳೆ ಟಾಸ್ ಗೆದ್ದಿದ್ದರೇ ಬೌಲಿಂಗ್ ಆಯ್ದುಕೊಳ್ಳುತ್ತಿದ್ದ ಎಂದು ಹೇಳಿದರು.

ಆಸ್ಟ್ರೇಲಿಯಾ ತಂಡವು ಮೇಲ್ನೋಟಕ್ಕೆ ಬಲಾಢ್ಯವಾಗಿ ಗುರುತಿಸಿಕೊಂಡಿದ್ದರೂ ಸಹಾ, ಕಿವೀಸ್ ಕೂಡಾ ತಿರುಗೇಟು ನೀಡುವ ಸಾಮರ್ಥ್ಯ ಹೊಂದಿದೆ. ಕಿವೀಸ್ ಬ್ಯಾಟಿಂಗ್‌ನಲ್ಲಿ ಫಿನ್ ಅಲೆನ್, ಡೆವೊನ್ ಕಾನ್‌ವೇ, ಕೇನ್ ವಿಲಿಯಮ್ಸನ್, ಗ್ಲೆನ್ ಫಿಲಿಫ್ಸ್‌ ಹಾಗೂ ಮಾರ್ಕ್‌ ಚಾಂಪ್ಮನ್ ಅವರನ್ನು ನೆಚ್ಚಿಕೊಂಡಿದೆ. ಇನ್ನು ಬೌಲಿಂಗ್‌ನಲ್ಲಿ ಅನುಭವಿ ವೇಗಿಗಳಾದ ಟಿಮ್ ಸೌಥಿ, ಟ್ರೆಂಟ್ ಬೌಲ್ಟ್‌, ಲಾಕಿ ಫರ್ಗ್ಯೂಸನ್ ಜತೆಗೆ ಜೇಮ್ಸ್ ನೀಶಮ್ ಕೂಡಾ ಆಸರೆಯಾಗಬಲ್ಲರು. 

T20 World Cup ಪಟ್ಟಕ್ಕೆ 12 ತಂಡ ಕಾದಾಟ..! ಯಾವ ತಂಡ ಎಷ್ಟು ಸ್ಟ್ರಾಂಗ್...?

ಇನ್ನು ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಾಕಷ್ಟು ಸಮತೋಲಿತವಾಗಿ ಗುರುತಿಸಿಕೊಂಡಿದೆ. ವಾರ್ನರ್, ಫಿಂಚ್, ಮಿಚೆಲ್ ಮಾರ್ಶ್‌, ಗ್ಲೆನ್ ಮ್ಯಾಕ್ಸ್‌ವೆಲ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್, ಮಾರ್ಕಸ್ ಸ್ಟೋನಿಸ್ ಅವರಂತಹ ಟಿ20 ಸ್ಪೆಷಲಿಸ್ಟ್ ಬ್ಯಾಟರ್‌ಗಳನ್ನು ಹೊಂದಿರುವ ಆಸ್ಟ್ರೇಲಿಯಾ, ಬೌಲಿಂಗ್‌ನಲ್ಲಿ ಮಾರಕ ವೇಗಿಗಳಾದ ಮಿಚೆಲ್ ಸ್ಟಾರ್ಕ್‌, ಪ್ಯಾಟ್ ಕಮಿನ್ಸ್‌, ಜೋಶ್ ಹೇಜಲ್‌ವುಡ್‌ ಕಿವೀಸ್ ಬ್ಯಾಟರ್‌ಗಳನ್ನು ಕಾಡಲು ಸಜ್ಜಾಗಿದ್ದಾರೆ. 

ತಂಡಗಳು ಹೀಗಿವೆ ನೋಡಿ

ನ್ಯೂಜಿಲೆಂಡ್ ಕ್ರಿಕೆಟ್ ತಂಡ: ಡೆವೊನ್ ಕಾನ್ವೇ(ವಿಕೆಟ್ ಕೀಪರ್), ಫಿನ್ ಅಲೆನ್, ಕೇನ್ ವಿಲಿಯಮ್ಸನ್(ನಾಯಕ), ಗ್ಲೆನ್ ಫಿಲಿಫ್ಸ್, ಮಾರ್ಕ್ ಚಾಂಪ್ಮನ್, ಜೆಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಇಶ್ ಸೋಧಿ, ಲಾಕಿ ಫರ್ಗ್ಯೂಸನ್, ಟ್ರೆಂಟ್ ಬೌಲ್ಟ್‌

ಆಸ್ಟ್ರೇಲಿಯಾ ಕ್ರಿಕೆಟ್ ತಂಡ: ಆ್ಯರೋನ್ ಫಿಂಚ್(ನಾಯಕ). ಡೇವಿಡ್ ವಾರ್ನರ್, ಮಿಚೆಲ್ ಮಾರ್ಶ್‌, ಗ್ಲೆನ್ ಮ್ಯಾಕ್ಸ್‌ವೆಲ್‌, ಮಾರ್ಕಸ್ ಸ್ಟೋನಿಸ್, ಮ್ಯಾಥ್ಯೂ ವೇಡ್(ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್‌, ಮಿಚೆಲ್ ಸ್ಟಾರ್ಕ್‌, ಆಡಂ ಜಂಪಾ, ಜೋಶ್ ಹೇಜಲ್‌ವುಡ್‌

click me!