
ನವದೆಹಲಿ(ಜು.02): ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ 2021-23ರ ಅವಧಿಯಲ್ಲಿ ಅಂಕಗಳ ಹಂಚಿಕೆ ಮಾದರಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಬದಲಾಯಿಸಿದೆ.
ಇನ್ನು ಮುಂದೆ ಪ್ರತಿ ಟೆಸ್ಟ್‌ಗೆ ಗರಿಷ್ಠ 12 ಅಂಕಗಳು ಇರಲಿವೆ. ಪಂದ್ಯ ಗೆದ್ದರೆ 12 ಅಂಕ, ಟೈಗೆ 6 ಹಾಗೂ ಡ್ರಾಗೆ 4 ಅಂಕಗಳು ದೊರೆಯಲಿವೆ. ತಂಡಗಳು ಸ್ಪರ್ಧಿಸುವ ಒಟ್ಟು ಅಂಕಗಳ ಪೈಕಿ ಗಳಿಸಿದ ಅಂಕಗಳ ಪ್ರತಿಶತದ ಆಧಾರದ ಮೇಲೆ ಸ್ಥಾನಗಳ ನಿರ್ಧಾರವಾಗಲಿವೆ. ಈ ಮೊದಲು ಪ್ರತಿ ಸರಣಿಗೆ 120 ಅಂಕಗಳನ್ನು ನಿಗದಪಡಿಸಲಾಗಿತ್ತು. ಸರಣಿಯಲ್ಲಿ 5 ಪಂದ್ಯವಿದ್ದರೂ 120 ಅಂಕ, 2 ಪಂದ್ಯವಿದ್ದರೂ 120 ಅಂಕಕ್ಕೆ ತಂಡಗಳು ಸ್ಪರ್ಧಿಸುತ್ತಿದ್ದವು. ಇದೀಗ ಐಸಿಸಿ ತನ್ನ ನಿಯಮಗಳಲ್ಲಿ ಕೆಲವೊಂದು ಬದಲಾವಣೆಗಳನ್ನು ತಂದಿದೆ.
9 ತಂಡಗಳು ತಲಾ 6 ಟೆಸ್ಟ್ ಸರಣಿಗಳನ್ನು ಆಡಲಿವೆ. ಈ ಪೈಕಿ ತವರಿನಲ್ಲಿ 3 ಹಾಗೂ ತವರಿನಾಚೆ 3 ಟೆಸ್ಟ್ ಸರಣಿಗಳನ್ನು ಆಡಲಿವೆ. ಎರಡನೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಇಂಗ್ಲೆಂಡ್ ತಂಡವು ಅತಿಹೆಚ್ಚು ಟೆಸ್ಟ್ ಪಂದ್ಯ(21)ಗಳನ್ನು ಆಡಲಿದೆ. ಆನಂತರ ಟೀಂ ಇಂಡಿಯಾ(19), ಆಸ್ಟ್ರೇಲಿಯಾ(18), ದಕ್ಷಿಣ ಆಫ್ರಿಕಾ(15), ಪಾಕಿಸ್ತಾನ(14) ಹಾಗೂ ಹಾಲಿ ಚಾಂಪಿಯನ್ ನ್ಯೂಜಿಲೆಂಡ್, ವೆಸ್ಟ್ ಇಂಡೀಸ್, ಶ್ರೀಲಂಕಾ ಹಾಗೂ ಬಾಂಗ್ಲಾದೇಶ ತಂಡಗಳು ತಲಾ 13 ಟೆಸ್ಟ್ ಪಂದ್ಯಗಳನ್ನು ಆಡಲಿವೆ.
ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಗೂ ಮುನ್ನ ಟೀಂ ಇಂಡಿಯಾಗೆ ಶಾಕ್..!
ಚೊಚ್ಚಲ ಆವೃತ್ತಿಯ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾವನ್ನು ಮಣಿಸಿ ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಸೌಥಾಂಪ್ಟನ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮಳೆಯ ಅಡಚಣೆಯ ಹೊರತಾಗಿಯೂ ನ್ಯೂಜಿಲೆಂಡ್ ತಂಡವು ಮೀಸಲು ದಿನದಲ್ಲಿ 8 ವಿಕೆಟ್‌ಗಳಿಂದ ಜಯಭೇರಿ ಬಾರಿಸಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.