ICC ODI Rankings: ಸತತ ಎರಡು ಶತಕ ಸಿಡಿಸಿದ ಕೊಹ್ಲಿ, ರ‍್ಯಾಂಕಿಂಗ್‌ನಲ್ಲಿ ಮಹತ್ತರ ಬದಲಾವಣೆ..!

By Naveen KodaseFirst Published Jan 11, 2023, 6:35 PM IST
Highlights

ಐಸಿಸಿ ನೂತನ ಏಕದಿನ ರ‍್ಯಾಂಕಿಂಗ್‌ ಪ್ರಕಟ
ಆರನೇ ಸ್ಥಾನಕ್ಕೆ ಲಗ್ಗೆಯಿಟ್ಟ ವಿರಾಟ್ ಕೊಹ್ಲಿ
ಟಾಪ್ 10 ಬೌಲರ್‌ಗಳ ಪಟ್ಟಿಯಲ್ಲಿ ಭಾರತೀಯರಿಗಿಲ್ಲ ಸ್ಥಾನ

ದುಬೈ(ಜ.11): ಭಾರತದ ಬ್ಯಾಟಿಂಗ್ ದಿಗ್ಗಜ ವಿರಾಟ್ ಕೊಹ್ಲಿ, ಏಕದಿನ ಕ್ರಿಕೆಟ್‌ನಲ್ಲಿ ಸತತ ಶತಕ ಸಿಡಿಸಿದ್ದು, ಏಕದಿನ ರ‍್ಯಾಂಕಿಂಗ್‌ನಲ್ಲಿ ಗಣನೀಯ ಏರಿಕೆ ಕಂಡಿದ್ದು, ಆರನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಇನ್ನುಳಿದಂತೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಮೊಹಮ್ಮದ್ ಸಿರಾಜ್ ಶ್ರೇಯಾಂಕದಲ್ಲಿ ಸಾಕಷ್ಟು ಮಹತ್ವದ ಬದಲಾವಣೆಗಳಾಗಿವೆ.

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಬಾಂಗ್ಲಾದೇಶ ಎದುರಿನ ಕೊನೆಯ ಏಕದಿನ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿದ್ದರು. ಇನ್ನು ಇದೀಗ ಲಂಕಾ ಎದುರಿನ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ಆಕರ್ಷಕ ಶತಕ ಸಿಡಿಸಿದ್ದರು. ಇದರೊಂದಿಗೆ ವಿರಾಟ್ ಕೊಹ್ಲಿ, ಇದೀಗ ಎರಡು ಸ್ಥಾನ ಜಿಗಿತ ಕಂಡು, ಏಕದಿನ ಬ್ಯಾಟರ್‌ಗಳ ರ‍್ಯಾಂಕಿಂಗ್‌ನಲ್ಲಿ ಆರನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಇನ್ನು ಲಂಕಾ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಆಕರ್ಷಕ 83 ರನ್ ಬಾರಿಸಿದ್ದ ರೋಹಿತ್ ಶರ್ಮಾ ಕೂಡಾ ಇದೀಗ 8ನೇ ಸ್ಥಾನ ತಲುಪಿದ್ದಾರೆ. ಭಾರತ ಎದುರು ಕೆಚ್ಚೆದೆಯ ಶತಕ ಸಿಡಿಸಿದ ಲಂಕಾ ನಾಯಕ ದಶುನ್ ಶಾನಕ ಕೂಡಾ 20 ಸ್ಥಾನ ಜಿಗಿತ ಕಂಡು 61ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.

ಇನ್ನು ಬೌಲಿಂಗ್‌ ವಿಭಾಗದಲ್ಲಿ ಹೈದರಾಬಾದ್ ಮೂಲದ ವೇಗಿ ಮೊಹಮ್ಮದ್ ಸಿರಾಜ್‌, ಗಣನೀಯ ಏರಿಕೆ ಕಂಡಿದ್ದು, ಬರೋಬ್ಬರಿ 4 ಸ್ಥಾನ ಜಿಗಿತ ಕಂಡು 18ನೇ ಸ್ಥಾನಕ್ಕೆ ತಲುಪಿದ್ದಾರೆ. 

ಏಕದಿನ ಶ್ರೇಯಾಂಕದಲ್ಲಿ ಬ್ಯಾಟರ್ ವಿಭಾಗದಲ್ಲಿ ಪಾಕಿಸ್ತಾನ ನಾಯಕ ಬಾಬರ್ ಅಜಂ ಮೊದಲ ಸ್ಥಾನದಲ್ಲೇ ಮುಂದುವರೆದಿದ್ದಾರೆ. ಇನ್ನುಳಿದಂತೆ ರಾಸ್ಸಿ ವ್ಯಾನ್ ಡರ್ ಡುಸೇನ್, ಇಮಾಮ್ ಉಲ್ ಹಕ್, ಕ್ವಿಂಟನ್ ಡಿ ಕಾಕ್, ಡೇವಿಡ್ ವಾರ್ನರ್, ವಿರಾಟ್ ಕೊಹ್ಲಿ, ಸ್ಟೀವ್ ಸ್ಮಿತ್, ರೋಹಿತ್ ಶರ್ಮಾ, ಜಾನಿ ಬೇರ್‌ಸ್ಟೋವ್ ಹಾಗೂ ಪಖರ್ ಜಮಾನ್ ಕ್ರಮವಾಗಿ ಟಾಪ್ 10 ಬ್ಯಾಟರ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 

ಭಾರತ ಎದುರಿನ ಟೆಸ್ಟ್‌ ಸರಣಿಗೆ ಬಲಿಷ್ಠ ಆಸ್ಟ್ರೇಲಿಯಾ ತಂಡ ಪ್ರಕಟ; ನಾಲ್ವರು ಸ್ಪಿನ್ನರ್‌ಗಳಿಗೆ ಸ್ಥಾನ..!

ಇನ್ನು ಬೌಲರ್‌ಗಳ ಟಾಪ್ 10 ಪಟ್ಟಿಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ನ್ಯೂಜಿಲೆಂಡ್ ವೇಗಿ ಟ್ರೆಂಟ್ ಬೌಲ್ಟ್‌ ಮೊದಲ ಸ್ಥಾನದಲ್ಲೇ ಮುಂದುವರೆದಿದ್ದಾರೆ. ಇದಾದ ಬಳಿಕ ಜೋಶ್ ಹೇಜಲ್‌ವುಡ್, ಮಿಚೆಲ್ ಸ್ಟಾರ್ಕ್‌, ರಶೀದ್ ಖಾನ್, ಮ್ಯಾಟ್ ಹೆನ್ರಿ, ಆಡಂ ಜಂಪಾ, ಶಾಹೀನ್ ಅಫ್ರಿದಿ, ಶಕೀಬ್ ಅಲ್ ಹಸನ್, ಮುಷ್ತಾಫಿಜುರ್ ರೆಹಮಾನ್ ಹಾಗೂ ಮುಜೀಬ್ ಉರ್ ರೆಹಮಾನ್ ಸ್ಥಾನ ಪಡೆದಿದ್ದಾರೆ. ಭಾರತದ ಯಾವೊಬ್ಬ ಬೌಲರ್ ಕೂಡಾ ಏಕದಿನ ಬೌಲಿಂಗ್ ಟಾಪ್ 10 ಶ್ರೇಯಾಂಕದಲ್ಲಿ ಸ್ಥಾನ ಪಡೆಯಲು ಸಫಲರಾಗಿಲ್ಲ.

ಏಕದಿನ ಕ್ರಿಕೆಟ್‌ನ ಆಲ್ರೌಂಡರ್ ವಿಭಾಗದಲ್ಲಿ ಶಕೀಬ್ ಅಲ್ ಹಸನ್‌ ಮೊದಲ ಸ್ಥಾನ ಕಾಯ್ದುಕೊಂಡಿದ್ದರೇ, ಮೊಹಮ್ಮದ್ ನಬಿ, ಮೆಹದಿ ಹಸನ್, ರಶೀದ್ ಖಾನ್ ಹಾಗೂ ಮಿಚೆಲ್ ಸ್ಯಾಂಟ್ನರ್ ಟಾಪ್ 5 ಪಟ್ಟಿಯೊಳಗೆ ಸ್ಥಾನ ಪಡೆದಿದ್ದಾರೆ.

click me!