T20 World Cup: ಒಂದೇ ರನ್‌ನಿಂದ ಜಿಂಬಾಬ್ವೆ ವಿರುದ್ಧ ಮಕಾಡೆ ಮಲಗಿದ ಪಾಕಿಸ್ತಾನ!

By Santosh NaikFirst Published Oct 27, 2022, 8:14 PM IST
Highlights

ಭಾರತ ತಂಡದ ವಿರುದ್ಧ ಸೋಲು ಕಂಡಿದ್ದ ಮಾಜಿ ಚಾಂಪಿಯನ್‌ ಪಾಕಿಸ್ತಾನ ತಂಡ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ತನ್ನ 2ನೇ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧವೂ ಸೋಲು ಕಂಡಿದೆ. ಗುರುವಾರ ನಡೆದ ಪಂದ್ಯದಲ್ಲಿ ಬಾಬರ್‌ ಅಜಮ್‌ ಸಾರಥ್ಯದ ತಂಡ 1 ರನ್‌ಗಳಿಂದ ಜಿಂಬಾಬ್ವೆಗೆ ಶರಣಾಗಿದೆ. 

ಪರ್ತ್‌ (ಅ.27): ಪಾಕಿಸ್ತಾನ ತಂಡ ನಿರೀಕ್ಷೆಯೇ ಮಾಡದೇ ಇದ್ದ ಸೋಲು ಪರ್ತ್ ಸ್ಟೇಡಿಯಂನಲ್ಲಿ ದಾಖಲಾಗಿದೆ. ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ 1 ರನ್‌ಗಳ ಸೋಲು ಕಂಡಿರುವ ಪಾಕಿಸ್ತಾನ ವಿಶ್ವಕಪ್‌ನ ಸೆಮಿಫೈನಲ್‌ ರೇಸ್‌ನಿಂದ ಬಹುತೇಕ ನಿರ್ಗಮನ ಕಂಡಂತಾಗಿದೆ. ಜಿಂಬಾಬ್ವೆ ವಿರುದ್ಧ ಪಂದ್ಯದಲ್ಲಿ ಗೆಲುವು ಸಾಧಿಸಲು ಕೊನೇ ಓವರ್‌ನಲ್ಲಿ 11 ರನ್‌ ಬಾರಿಸಲು ವಿಫಲವಾದ ಪಾಕಿಸ್ತಾನ ತಂಡ 1 ರನ್‌ಗಳ ಸೋಲು ಕಂಡಿದೆ. ಜಿಂಬಾಬ್ವೆ ಪರವಾಗಿ ಬೌಲಿಂಗ್‌ನಲ್ಲಿ ಮಿಂಚಿದ ಸಿಕಂದರ್‌ ರಾಜಾ 25 ರನ್‌ ನೀಡಿ ಮೂರು ಪ್ರಮುಖ ವಿಕೆಟ್‌ ಉರುಳಿಸಿದರೆ, ಬ್ರಾಡ್‌ ಇವಾನ್ಸ್‌ 25 ರನ್‌ ನೀಡಿ 2 ವಿಕೆಟ್‌ ಉರುಳಿಸಿ ಪಾಕಿಸ್ತಾನ ತಂಡದ ಸೋಲಿಗೆ ಕಾರಣರಾದರು. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಜಿಂಬಾಬ್ವೆ ತಂಡ 8 ವಿಕೆಟ್‌ಗೆ 130 ರನ್‌ಗಳ ಸಾಧಾರಣ ಮೊತ್ತ ಪೇರಿಸಿತ್ತು. ಈ ಮೊತ್ತವನ್ನು ಸುಲಭವಾಗಿ ಪೇರಿಸಬಹುದು ಎನ್ನುವ ಕಾರಣಕ್ಕೆ ಅಸಡ್ಡೆ ತೋರಿದ ಪಾಕಿಸ್ತಾನದ ಬ್ಯಾಟ್ಸ್‌ಮನ್‌ಗಳಿಗೆ ಜಿಂಬಾಬ್ವೆ ಬೌಲರ್‌ಗಳು ದಿಗಿಲು ಮೂಡಿಸಿದರು. 20 ಓವರ್‌ಗಳಲ್ಲಿ ಪಾಕಿಸ್ತಾನ ತಂಡ 8 ವಿಕೆಟ್‌ಗೆ 129 ರನ್‌ ಪೇರಿಸಲಷ್ಟೇ ಯಶಸ್ವಿಯಾಗಿ 1 ರನ್‌ನಿಂದ ಸೋಲು ಕಂಡಿತು.

 

Winning moment!

Well played ZIMBABWE 🇿🇼

THEY'VE DEFEATED PAKISTAN!

ZIMBABWE WON BY 1 RUN! pic.twitter.com/MOCNwYwmZo

— Abhinav Mishra (@AdvAbhinav_)

ಕೊನೇ ಓವರ್‌ನಲ್ಲಿ ಪಾಕಿಸ್ತಾನ ತಂಡದ ಗೆಲುವಿಗೆ 11 ರನ್‌ ಬೇಕಿದ್ದವು. ಆದರೆ, ತಂಡಕ್ಕೆ ಗೆಲುವು ನೀಡಲು ಪಾಕ್‌ ತಂಡದ ಪಾಲಿಗೆ ವಿರಾಟ್‌ ಕೊಹ್ಲಿ ಇದ್ದಿರಲಿಲ್ಲವಷ್ಟೇ. ಮೊಹಮದ್‌ ವಾಸಿಂ ಹಾಗೂ ಟಿ20 ಯಲ್ಲಿ ಉತ್ತಮವಾಗಿಯೇ ಬ್ಯಾಟಿಂಗ್‌ ಮಾಡುವ ಮೊಹಮದ್‌ ನವಾಜ್‌ ಕ್ರೀಸ್‌ನಲ್ಲಿದ್ದರು. ಬ್ರಾಡ್‌ ಇವಾನ್ಸ್‌ ಎಸೆದ ಒದಲ ಎಸೆತದಲ್ಲಿ ಮೊಹಮದ್‌ ನವಾಜ್‌, ಮಿಡ್‌ಆಫ್‌ನತ್ತ ಬಾರಿಸಿ ಮೂರು ರನ್‌ ಕದ್ದರು. ಇದರಿಂದಾಗಿ ಕೊನೇ 5 ಎಸೆತಗಳಲ್ಲಿ 8 ರನ್‌ ಬಾರಿಸುವ ತೀರಾ ಸುಲಭದ ಸವಾಲು ಪಾಕ್‌ ಮುಂದೆ ಇತ್ತು. ಮೊಹಮದ್‌ ವಾಸಿಂ 2ನೇ ಎಸೆತದಲ್ಲಿ ಬ್ಯಾಕ್‌ ಕವರ್‌ನಲ್ಲಿ ಆಕರ್ಷಕ ಬೌಂಡರಿ ಕೂಡ ಸಿಡಿಸಿದರು. ಮೂರನೇ ಎಸೆತದಲ್ಲಿ, ವಾಸಿಂ 1 ರನ್‌ ಕದಿದ್ದರು.

ಕೊನೆಯ ಮೂರು ಎಸೆತಗಳಲ್ಲಿ ಪಾಕಿಸ್ತಾನಕ್ಕೆ 3 ರನ್‌ ಬೇಕಿತ್ತು. 4ನೇ ಎಸೆತದಲ್ಲಿ ಮೊಹಮದ್‌ ನವಾಜ್‌ ರನ್‌ ಬಾರಿಸಲು ವಿಫಲರಾದರು. 5ನೇ ಎಸೆತದಲ್ಲಿ ಮೊಹಮದ್‌ ನವಾಜ್‌, ಕ್ರೇಗ್‌ ಇರ್ವಿನ್‌ಗೆ ಕ್ಯಾಚ್‌ ನೀಡಿದಾಗ ಪಾಕಿಸ್ತಾನ ಆಘಾತ ಕಂಡಿತು. ಏಕೆಂದರೆ ಕೊನೇ ಎಸೆತದಲ್ಲಿ ಪಾಕಿಸ್ತಾನಕ್ಕೆ ಮೂರು ರನ್‌ ಬೇಕಿತ್ತು. ಬ್ಯಾಟಿಂಗ್‌ ಮಾಡಲು ಬಂದ ಶಾಹಿನ್‌ ಆಪ್ರಿಧಿ, ಕೊನೇ ಎಸೆತದಲ್ಲಿ ಕೇವಲ 1 ರನ್‌ ಕದ್ದರು. ಕನಿಷ್ಠ ಸ್ಕೋರ್‌ ಟೈ ಮಾಡುವ ಪ್ರಯತ್ನದಲ್ಲಿ ರನ್‌ಔಟ್‌ ಆದಾಗ ಜಿಂಬಾಬ್ವೆ ಸಂಭ್ರಮಕ್ಕೆ ಪಾರವೇ ಇರಲಿಲ್ಲ.

ವಿಲ್ ಯು ಮ್ಯಾರಿ ಮಿ? ಭಾರತ ನೆದರ್ಲೆಂಡ್ ಪಂದ್ಯದ ನಡುವೆ ಗೆಳತಿಗೆ ಪ್ರೇಮ ನಿವೇದನೆ!

ಜಿಂಬಾಬ್ವೆ ನೀರಸ ಬ್ಯಾಟಿಂಗ್: ಮೊದಲು ಬ್ಯಾಟಿಂಗ್‌ ಮಾಡಿದ ಜಿಂಬಾಬ್ವೆ ಪರವಾಗಿ ಅನುಭವಿ ಸೀನ್‌ ವಿಲಿಯಮ್ಸ್‌ 28 ಎಸೆತಗಳಲ್ಲಿ 31 ರನ್‌ ಬಾರಿಸಿದ್ದರು. ಉಳಿದಂತೆ ಯಾವೊಬ್ಬ ಬ್ಯಾಟ್ಸ್‌ಮನ್‌ ಕೂಡ 20 ರನ್‌ಗಳ ಗಡಿ ದಾಟಿರಲಿಲ್ಲ. ಮೊದಲ ವಿಕೆಟ್‌ಗೆ ಮ್ಯಾಧವೇರ್‌ ಹಾಗೂ ನಾಯಕ ಕ್ರೇಗ್‌ ಇರ್ವಿನ್‌ 42 ರನ್ ಜೊತೆಯಾಟವಾಡಿ ಬೇರ್ಪಟ್ಟ ಬಳಿಕ ಜಿಂಬಾಬ್ವೆ ಪರವಾಗಿ ಉತ್ತಮ ಜೊತೆಯಾಟ ದಾಖಲಾಗಲೇ ಇಲ್ಲ.  ಒಂದು ಹಂತದಲ್ಲಿ ವಿಕೆಟ್‌ ನಷ್ಟವಿಲ್ಲದೆ 42 ರನ್‌ ಬಾರಿಸಿದ್ದ ಜಿಂಬಾಬ್ವೆ ಈ ಮೊತ್ತಕ್ಕೆ 53 ರನ್‌ ಕೂಡಿಸುವ ವೇಳೆಗೆ 7 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಕೊನೆಯಲ್ಲಿ ಬ್ರಾಡ್‌ ಎವಾನ್ಸ್‌ 15 ಎಸೆತಗಳಲ್ಲಿ ಒಂದು ಸಿಕ್ಸರ್‌ನೊಂದಿಗೆ 19 ರನ್‌ ಸಿಡಿಸಿ ತಂಡದ ಮೊತ್ತವನ್ನು130ರ ಗಡಿ ಮುಟ್ಟಿಸಿದ್ದರು.

IPL Exclusive: ಇಸ್ತಾನ್‌ಬುಲ್‌ನಲ್ಲಿ ಐಪಿಎಲ್‌, ನಿರಾಕರಿಸಿದ ಚೇರ್ಮನ್‌ ಅರುಣ್‌ ಧುಮಲ್‌!

ಬಾಬರ್‌ ಅಜಮ್‌ ಮತ್ತೆ ಫೇಲ್‌: ಚೇಸಿಂಗ್‌ ಆರಂಭಿಸಿದ ಪಾಕಿಸ್ತಾನಕ್ಕೆ ನಾಯಕ ಬಾಬರ್‌ ಅಜಮ್‌ ಮತ್ತೊಮ್ಮೆ ಕೈಕೊಟ್ಟರು. ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ಔಟಾದ ಅಜಮ್‌ ಈ ಬಾರಿ 4 ರನ್‌ ಬಾರಿಸಿದರು. ಮೊಹಮದ್‌ ರಿಜ್ವಾನ್‌ 14 ರನ್‌ ಬಾರಿಸಿದರೆ, ಕಳೆದ ಪಂದ್ಯದ ಅರ್ಧಶತಕವೀರ ಇಫ್ತಿಕಾರ್‌ ಅಹ್ಮದ್‌ 5 ರನ್‌ ಬಾರಿಸಿದರು. ಇದರಿಂದಾಗಿ 36 ರನ್‌ಗೆ ಪಾಕ್‌ 3 ವಿಕೆಟ್‌ ಕಳೆದುಕೊಂಡಿತ್ತು. 4ನೇ ವಿಕೆಟ್‌ಗೆ ಶಾದಾಬ್‌ ಖಾನ್‌ (17) ಹಾಗೂ ಶಾನ್‌ ಮಸೂದ್‌ (44) 52 ರನ್‌ಗಳ ಜೊತೆಯಾಟವಾಡಿದರೂ, ನಿಧಾನಗತಿಯ ಈ ಇನ್ನಿಂಗ್ಸ್‌ ಕೊನೆಯಲ್ಲಿ ಪಾಕಿಸ್ತಾನಕ್ಕೆ ಕಂಟಕವಾಯಿತು.  ಸಿಕಂದರ್‌ ರಾಜಾ, ಶಾದಾಬ್‌ ಖಾನ್‌ ವಿಕೆಟ್‌ ಉರುಳಿಸಿ ಮೇಲುಗೈ ನೀಡಿದರೆ, ಹೈದರ್‌ ಅಲಿ ಹಾಗೂ ಅರ್ಧಶತಕದಿಂದ 6 ರನ್‌ ಗಳ ದೂರವಿದ್ದ  ಶಾನ್‌ ಮಸೂದ್‌ ಕೂಡ 100 ರನ್‌ ದಾಟುವ ಮುನ್ನವೇ ಔಟಾದರು.  ಕೊನೆಯಲ್ಲಿ ಮೊಹಮದ್‌ ನವಾಜ್‌ (22) ಹಾಗೂ ಮೊಹಮದ್‌ ವಾಸಿಂ (12) ಗೆಲುವಿಗೆ ಪ್ರಯತ್ನ ಪಟ್ಟರೂ ಸಾಕಾಗಲಿಲ್ಲ.

click me!