ಚಾಂಪಿಯನ್ಸ್ ಟ್ರೋಫಿ: ಆಸೀಸ್-ಆಫ್ಘಾನ್ ಪಂದ್ಯ ಮಳೆಯಿಂದ ರದ್ದಾದ್ರೆ ಸೆಮೀಸ್ ಪ್ರವೇಶಿಸೋದು ಯಾರ್ಯಾರು?

Published : Feb 28, 2025, 01:23 PM ISTUpdated : Feb 28, 2025, 01:25 PM IST
ಚಾಂಪಿಯನ್ಸ್ ಟ್ರೋಫಿ: ಆಸೀಸ್-ಆಫ್ಘಾನ್ ಪಂದ್ಯ ಮಳೆಯಿಂದ ರದ್ದಾದ್ರೆ ಸೆಮೀಸ್ ಪ್ರವೇಶಿಸೋದು ಯಾರ್ಯಾರು?

ಸಾರಾಂಶ

2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ-ಅಫ್ಘಾನಿಸ್ತಾನ ಪಂದ್ಯ ಲಾಹೋರ್‌ನಲ್ಲಿ ನಡೆಯಲಿದೆ. ಇದು ಉಭಯ ತಂಡಗಳಿಗೆ ಸೆಮಿಫೈನಲ್ ಪ್ರವೇಶಕ್ಕೆ ನಿರ್ಣಾಯಕ ಪಂದ್ಯ. ಮಳೆಯಿಂದ ಪಂದ್ಯ ರದ್ದಾದರೆ, ಆಸ್ಟ್ರೇಲಿಯಾ 4 ಅಂಕಗಳೊಂದಿಗೆ ಸೆಮಿಫೈನಲ್ ತಲುಪುತ್ತದೆ. ಅಫ್ಘಾನಿಸ್ತಾನದ ಭವಿಷ್ಯವು ದಕ್ಷಿಣ ಆಫ್ರಿಕಾ-ಇಂಗ್ಲೆಂಡ್ ಪಂದ್ಯದ ಫಲಿತಾಂಶದ ಮೇಲೆ ನಿರ್ಧಾರವಾಗುತ್ತದೆ. ಈಗಾಗಲೇ ಭಾರತ ಮತ್ತು ನ್ಯೂಜಿಲೆಂಡ್ 'ಎ' ಗುಂಪಿನಿಂದ ಸೆಮಿಫೈನಲ್ ತಲುಪಿವೆ.

ಲಾಹೋರ್: 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಆಸ್ಟ್ರೇಲಿಯಾ ಹಾಗೂ ಆಫ್ಘಾನಿಸ್ತಾನ ನಡುವಿನ ಮಹತ್ವದ ಪಂದ್ಯಕ್ಕೆ ಇಲ್ಲಿನ ಗಢಾಫಿ ಕ್ರಿಕೆಟ್ ಮೈದಾನ ಆತಿಥ್ಯ ವಹಿಸಿದೆ. ಸೆಮಿಫೈನಲ್ ಪ್ರವೇಶಿಸುವ ನಿಟ್ಟಿನಲ್ಲಿ ಉಭಯ ತಂಡಗಳ ಪಾಲಿಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿಕೊಂಡಿದೆ. ಇಂದಿನ ಪಂದ್ಯ ಗೆಲ್ಲುವ ತಂಡವು ನೇರವಾಗಿ ಸೆಮಿಫೈನಲ್‌ಗೆ ಎಂಟ್ರಿಕೊಟ್ಟರೇ ಸೋತ ತಂಡವು ಮನೆ ಕಡೆ ಪ್ರಯಾಣ ಬೆಳೆಸಲಿದೆ. ಇನ್ನು ಇದೆಲ್ಲದರ ನಡುವೆ ಇಂದಿನ ಪಂದ್ಯಕ್ಕೂ ಮಳೆರಾಯ ಅಡ್ಡಿ ಪಡಿಸುವ ಭೀತಿ ಎದುರಾಗಿದೆ. ಹೀಗಾಗಿ ಆಸ್ಟ್ರೇಲಿಯಾ ಹಾಗೂ ಆಫ್ಘಾನಿಸ್ತಾನ ನಡುವಿನ ಪಂದ್ಯ ಒಂದು ವೇಳೆ ಮಳೆಯಿಂದ ರದ್ದಾದ್ರೆ ಯಾವ ತಂಡ ಸೆಮೀಸ್ ಪ್ರವೇಶಿಸಲಿದೆ ಎನ್ನುವ ಕುತೂಹಲ ಜೋರಾಗಿದೆ.

ಮಳೆಯಿಂದ ಪಂದ್ಯ ರದ್ದಾದ್ರೆ, ಆಫ್ಘಾನ್ ತಂಡಕ್ಕೆ ಹೆಚ್ಚಾಗಲಿದೆ ತಲೆನೋವು:

ಆಫ್ಘಾನಿಸ್ತಾನ ತಂಡವು ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು ಮುಗ್ಗರಿಸಿತ್ತು. ಆದರೆ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸುವ ಮೂಲಕ ಸೆಮೀಸ್ ಕನಸನ್ನು ಜೀವಂತವಾಗಿಟ್ಟುಕೊಂಡಿದೆ. ಆಫ್ಘಾನಿಸ್ತಾನ ತಂಡದ ಬಳಿ 2 ಅಂಕಗಳಿವೆ. ಇನ್ನು ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಪಂದ್ಯವು ಮಳೆಯಿಂದ ರದ್ದಾಗಿತ್ತು. ಇದಕ್ಕೂ ಮೊದಲು ಇಂಗ್ಲೆಂಡ್ ಎದುರು ಆಸ್ಟ್ರೇಲಿಯಾ ತಂಡವು ಗೆಲುವು ಸಾಧಿಸಿತ್ತು. ಹೀಗಾಗಿ ಆಸ್ಟ್ರೇಲಿಯಾ ತಂಡದ ಬಳಿ 3 ಅಂಕಗಳಿವೆ. ಇನ್ನು ಗುರುವಾರ ನಡೆಯಬೇಕಿದ್ದ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ನಡುವಿನ ಪಂದ್ಯವು ಮಳೆಯಿಂದ ರದ್ದಾಗಿತ್ತು. ಹೀಗಾಗಿ ಉಭಯ ತಂಡಗಳು ತಲಾ ಒಂದೊಂದು ಅಂಕಗಳನ್ನು ಹಂಚಿಕೊಂಡಿದ್ದವು. ಇದೀಗ ಆಸ್ಟ್ರೇಲಿಯಾ ಹಾಗೂ ಆಫ್ಘಾನಿಸ್ತಾನ ನಡುವಿನ ಪಂದ್ಯವು ಮಳೆಯಿಂದ ರದ್ದಾದ್ರೆ ಆಫ್ಘಾನ್ ಪಡೆಯ ಸೆಮೀಸ್ ಕನಸು ದುರ್ಗಮವಾಗಲಿದೆ.

ಇದನ್ನೂ ಓದಿ: 'ಇದು ನನ್ನ ಕೊನೆಯ ಐಸಿಸಿ ಟೂರ್ನಿ': ದಿಢೀರ್ ಎನ್ನುವಂತೆ ಅಚ್ಚರಿ ನಿರ್ಧಾರ ಪ್ರಕಟಿಸಿದ ಸ್ಟಾರ್ ಕ್ರಿಕೆಟಿಗ!

ಆಫ್ಘಾನ್ ಹಾಗೂ ಆಸೀಸ್ ನಡುವಿನ ಪಂದ್ಯ ರದ್ದಾದ್ರೆ ಉಭಯ ತಂಡಗಳು ತಲಾ ಒಂದೊಂದು ಅಂಕ ಹಂಚಿಕೊಳ್ಳಲಿವೆ. ಆಗ ಆಸ್ಟ್ರೇಲಿಯಾ ಬಳಿ 4 ಅಂಕಗಳಾಗಲಿದ್ದು, ಅಧಿಕೃತವಾಗಿ ಸೆಮೀಸ್‌ಗೆ ಎಂಟ್ರಿ ಕೊಡಲಿದೆ. ಇನ್ನು ಆಫ್ಘಾನಿಸ್ತಾನದ ಬಳಿ 3 ಅಂಕಗಳು ಇರಲಿದೆ. ಆಗ ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ನಡುವಿನ ಫಲಿತಾಂಶವು ಆಫ್ಘಾನಿಸ್ತಾನ ತಂಡದ ಸೆಮೀಸ್ ಹಾದಿಯನ್ನು ನಿರ್ಧರಿಸಲಿದೆ.

ಮಾರ್ಚ್‌ 01ರಂದು ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಪಂದ್ಯ ನಡೆಯಲಿದೆ. ಆ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ದಕ್ಷಿಣ ಆಫ್ರಿಕಾ ತಂಡವು ಹೀನಾಯ ಸೋಲು ಅನುಭವಿಸಬೇಕು. ಆಗ ದಕ್ಷಿಣ ಆಫ್ರಿಕಾ ಬಳಿಯೂ ಕೇವಲ ಮೂರು ಅಂಕಗಳು ಉಳಿಯಲಿವೆ. ಆಗ ಒಂದು ವೇಳೆ ದಕ್ಷಿಣ ಆಫ್ರಿಕಾದ ನೆಟ್‌ ರನ್‌ರೇಟ್‌ಗಿಂತ ಆಫ್ಘಾನಿಸ್ತಾನ ತಂಡದ ನೆಟ್‌ ರನ್‌ರೇಟ್ ಉತ್ತಮವಾಗಿದ್ದರೇ, ಆಸೀಸ್ ಎದುರು ಸೋತರೂ ಆಫ್ಘಾನಿಸ್ತಾನ ತಂಡವು ಸೆಮೀಸ್‌ಗೆ ಲಗ್ಗೆಯಿಡಲಿದೆ.

ಇದನ್ನೂ ಓದಿ: ಒಂದೂ ಜಯವಿಲ್ಲದೆ ಚಾಂಪಿಯನ್ಸ್ ಟ್ರೋಫಿಗೆ ಪಾಕ್ ಗುಡ್‌ಬೈ! ಆತಿಥ್ಯ ವಹಿಸಿದ್ದ ಪಾಕಿಸ್ತಾನಕ್ಕೆ ಸಿಕ್ಕಿದು ಬರೀ ನಿರಾಸೆ

ಒಂದು ವೇಳೆ ಇಂಗ್ಲೆಂಡ್ ಎದುರು ದಕ್ಷಿಣ ಆಫ್ರಿಕಾ ಗೆಲುವು ಸಾಧಿಸಿದರೆ ಅಥವಾ ಮಳೆಯಿಂದಾಗಿ ಪಂದ್ಯ ರದ್ದಾದರೇ ದಕ್ಷಿಣ ಆಫ್ರಿಕಾ ತಂಡವು ಅನಾಯಾಸವಾಗಿ ಸೆಮಿಫೈನಲ್‌ಗೆ ಲಗ್ಗೆಯಿಡಲಿದೆ.

ಈಗಾಗಲೇ 'ಎ' ಗುಂಪಿನಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಸೆಮೀಸ್‌ ಪ್ರವೇಶ ಪಡೆದಿದ್ದು, ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ತಂಡಗಳು ಸೆಮೀಸ್‌ ರೇಸ್‌ನಿಂದ ಹೊರಬಿದ್ದಿವೆ. ಇನ್ನು 'ಬಿ' ಗುಂಪಿನಲ್ಲಿ ಸೆಮೀಸ್ ಪ್ರವೇಶಿಸಲಿರುವ ಆ ಎರಡು ತಂಡಗಳು ಯಾವುವು ಎನ್ನುವ ಕುತೂಹಲಕ್ಕೆ ಇಂದು ತೆರೆ ಬೀಳುವ ಸಾಧ್ಯತೆ ದಟ್ಟವಾಗಲಿದೆ. ಇಂದು ಆಸೀಸ್‌ ಗೆದ್ದರೇ, ಆಸೀಸ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಅಧಿಕೃತವಾಗಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಪ್ರವೇಶಿಸಲಿವೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಕಷ್ಟ ನಿವಾರಣೆಗೆ ಸಿಂಹಾಚಲಂ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ವಿರಾಟ್ ಕೊಹ್ಲಿ
ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ ವೆಂಕಟೇಶ್ ಪ್ರಸಾದ್ ಅಧ್ಯಕ್ಷ, ಚುನಾವಣಾ ಫಲಿತಾಂಶ ಪ್ರಕಟ