2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನಾಡಲು ಪಾಕಿಸ್ತಾನಕ್ಕೆ ಟೀಂ ಇಂಡಿಯಾ ತೆರಳದಿರಲು ತೀರ್ಮಾನಿಸಿದೆ ಎಂದು ವರದಿಯಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಮುಕ್ತಾಯವಾದ ಬೆನ್ನಲ್ಲೇ ಇದೀಗ ಕ್ರಿಕೆಟ್ ಅಭಿಮಾನಿಗಳ ಚಿತ್ತ ಮುಂದಿನ ವರ್ಷ ಅಂದರೆ 2025ರಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಮೇಲೆ ನೆಟ್ಟಿದೆ. 2025ರ ಫೆಬ್ರವರಿ ಹಾಗೂ ಮಾರ್ಚ್‌ನಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಪಾಕಿಸ್ತಾನ ಆತಿಥ್ಯ ವಹಿಸಿದೆ. ಈ ಟೂರ್ನಿಯನ್ನಾಡಲು ಭಾರತ ತಂಡವು ಪಾಕಿಸ್ತಾನಕ್ಕೆ ಪ್ರವಾಸ ಮಾಡಬೇಕಿತ್ತು. ಆದರೆ ಬಿಸಿಸಿಐ, ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳಿಸದಿರಲು ನಿರ್ಧರಿಸಿದ್ದು ಶ್ರೀಲಂಕಾ ಇಲ್ಲವೇ ದುಬೈನಲ್ಲಿ ಭಾರತದ ಪಂದ್ಯಗಳನ್ನು ಆಯೋಜಿಸಿದರಷ್ಟೇ ತಮ್ಮ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಪಾಲ್ಗೊಳ್ಳಲಿದೆ ಎನ್ನುವ ಖಡಕ್ ಸಂದೇಶ ರವಾನಿಸಿದೆ ಎಂದು ವರದಿಯಾಗಿದೆ.
ಭಾರತ ಕ್ರಿಕೆಟ್ ತಂಡವು 2008ರಲ್ಲಿ ಕೊನೆಯ ಬಾರಿಗೆ ಪಾಕಿಸ್ತಾನ ಪ್ರವಾಸ ಮಾಡಿ ಏಷ್ಯಾಕಪ್ ಟೂರ್ನಿಯಲ್ಲಿ ಪಾಲ್ಗೊಂಡಿತ್ತು. ಇದಾದ ಬಳಿಕ ರಾಜತಾಂತ್ರಿಕ ಬಿಕ್ಕಟ್ಟು ಹಾಗೂ ಭದ್ರತೆಯ ಕಾರಣಗಳಿಂದಾಗಿ ಭಾರತ ಕ್ರಿಕೆಟ್ ತಂಡವು ಪಾಕಿಸ್ತಾನ ಪ್ರವಾಸ ಮಾಡಲು ಹಿಂದೇಟು ಹಾಕಿದೆ. ಇನ್ನು 2012ರ ಡಿಸೆಂಬರ್‌ನಿಂದ 2013ರ ಜನವರಿ ವರೆಗೆ ಭಾರತ ಹಾಗೂ ಪಾಕಿಸ್ತಾನ ನಡುವೆ ಭಾರತದಲ್ಲಿ ಕೊನೆಯ ಬಾರಿಗೆ ದ್ವಿಪಕ್ಷೀಯ ಸರಣಿ ನಡೆದಿತ್ತು. ಇದಾದ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವೆ ಯಾವುದೇ ದ್ವಿಪಕ್ಷೀಯ ಸರಣಿಗಳು ನಡೆದಿಲ್ಲ. ಕೇವಲ ಐಸಿಸಿ ಟೂರ್ನಿಗಳಲ್ಲಿ ಹಾಗೂ ಏಷ್ಯಾಕಪ್ ಟೂರ್ನಿಗಳಲ್ಲಿ ಮಾತ್ರ ಉಭಯ ತಂಡಗಳು ಮುಖಾಮುಖಿಯಾಗುತ್ತಿವೆ.
ರಾಹುಲ್ ದ್ರಾವಿಡ್‌ಗೆ ಗಾಳ ಹಾಕಿದ ಈ ಐಪಿಎಲ್ ಫ್ರಾಂಚೈಸಿ..! ಆಫರ್ ಒಪ್ತಾರಾ 'ದಿ ವಾಲ್'..?
ಪಾಕಿಸ್ತಾನ ಕ್ರಿಕೆಟ್ ಮಂಡಳಿಯು, ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ತಂಡವು ಪಾಕ್ ಪ್ರವಾಸ ಮಾಡಿದರೆ, ಲಾಹೋರ್‌ನಲ್ಲೇ ಭಾರತ ಆಡಲಿರುವ ಎಲ್ಲಾ ಪಂದ್ಯಗಳನ್ನು ಆಯೋಜಿಸುವ ಭರವಸೆ ನೀಡಿತ್ತು. ಆದರೆ ಬಿಸಿಸಿಐ ಇದೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಆಫರ್ ಅನ್ನು ಸಾರಾಸಗಟಾಗಿ ತಿರಸ್ಕರಿಸಿದೆ.
"ಭಾರತ ಕ್ರಿಕೆಟ್ ತಂಡವು 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನಾಡಲು ಪಾಕಿಸ್ತಾನ ಪ್ರವಾಸ ಮಾಡುವುದಿಲ್ಲ. ಪಂದ್ಯಗಳಲ್ಲಿ ಶ್ರೀಲಂಕಾ ಇಲ್ಲವೇ ದುಬೈನಲ್ಲಿ ಆಯೋಜಿಸುವಂತೆ ಐಸಿಸಿಗೆ ಮನವಿ ಮಾಡಿಕೊಳ್ಳಲಿದ್ದೇವೆ" ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ANI ಸುದ್ದಿಸಂಸ್ಥೆ ವರದಿ ಮಾಡಿದೆ.
ರಾಹುಲ್ ದ್ರಾವಿಡ್‌ಗೆ ಗಾಳ ಹಾಕಿದ ಈ ಐಪಿಎಲ್ ಫ್ರಾಂಚೈಸಿ..! ಆಫರ್ ಒಪ್ತಾರಾ 'ದಿ ವಾಲ್'..?
ಈ ಮೊದಲು ಕಳೆದ ಮೇ ತಿಂಗಳಿನಲ್ಲಿ ಈ ಕುರಿತಂತೆ ಪ್ರತಿಕ್ರಿಯೆ ನೀಡಿದ್ದ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ, ಒಂದು ವೇಳೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದರಷ್ಟೇ ಭಾರತ ಕ್ರಿಕೆಟ್ ತಂಡವನ್ನು ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನಾಡಲು ಪಾಕಿಸ್ತಾನಕ್ಕೆ ಕಳಿಸಿಕೊಡಲಾಗುವುದು ಎಂದಿದ್ದರು.