ಟೀಂ ಇಂಡಿಯಾ ಕ್ರಿಕೆಟಿಗ ರಿಂಕು ಸಿಂಗ್, ಸಹ ಆಟಗಾರ ಶುಭ್‌ಮನ್ ಗಿಲ್ ಸಹೋದರಿ ಜತೆ ಸೆಲ್ಫಿ ವಿಡಿಯೋಗೆ ಫೋಸ್ ಕೊಟ್ಟಿರುವುದು ಹೊಸ ಗಾಸಿಫ್‌ಗೆ ಕಾರಣವಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಹರಾರೆ: ಭಾರತ ಕ್ರಿಕೆಟ್ ತಂಡವು ಸದ್ಯ ಜಿಂಬಾಬ್ವೆ ಪ್ರವಾಸದಲ್ಲಿದ್ದು, 5 ಪಂದ್ಯಗಳ ಟಿ20 ಸರಣಿಯಲ್ಲಿ ಪಾಲ್ಗೊಂಡಿದೆ. ಹೀಗಿರುವಾಗಲೇ ಟೀಂ ಇಂಡಿಯಾ ಪ್ರತಿಭಾನ್ವಿತ ಮ್ಯಾಚ್ ಫಿನೀಶರ್ ರಿಂಕು ಸಿಂಗ್, ಕ್ರಿಕೆಟ್ ಮೈದಾನದಾಚೆಗಿನ ವಿಚಾರವಾಗಿ ಸುದ್ದಿಯಾಗಿದ್ದಾರೆ. ಟೀಂ ಇಂಡಿಯಾ ಹಂಗಾಮಿ ಟಿ20 ತಂಡದ ನಾಯಕ ಶುಭ್‌ಮನ್ ಗಿಲ್ ಸಹೋದರಿಯ ಜತೆ ರಿಂಕು ಕಾಣಿಸಿಕೊಂಡಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹರಾರೆಯಲ್ಲಿನ ಪಾರ್ಕ್‌ನ ಬಳಿ ಶುಭ್‌ಮನ್ ಗಿಲ್ ಸಹೋದರಿ ಶೆಹನೀಲ್ ಗಿಲ್ ಕ್ರಿಕೆಟಿಗ ರಿಂಕು ಸಿಂಗ್ ಜತೆ ಸೆಲ್ಫಿ ವಿಡಿಯೋವೊಂದರಲ್ಲಿ ಫೋಸ್ ಕೊಟ್ಟಿದ್ದಾರೆ. ಈ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು, ನೆಟ್ಟಿಗರು ಶುಭ್‌ಮನ್ ಗಿಲ್ ಅವರನ್ನು ಉದ್ದೇಶಿಸಿ ಏನಿದು ಸಮಾಚಾರ ಎಂದು ಪ್ರಶ್ನೆ ಮಾಡಲಾರಂಭಿಸಿದ್ದಾರೆ.
ಸರಣಿಯಲ್ಲಿ ಮುನ್ನಡೆ ಸಾಧಿಸಿರುವ ಗಿಲ್ ಪಡೆ:
ಟಿ20 ವಿಶ್ವಕಪ್ ಗೆಲುವಿನ ಬೆನ್ನಲ್ಲೇ ಭಾರತ ಟಿ20 ಕ್ರಿಕೆಟ್ ನಾಯಕತ್ವಕ್ಕೆ ಹಾಗೂ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ರೋಹಿತ್ ಶರ್ಮಾ ವಿದಾಯ ಘೋಷಿಸಿದ್ದಾರೆ. ಹೀಗಾಗಿ ಜಿಂಬಾಬ್ವೆ ಎದುರಿನ 5 ಪಂದ್ಯಗಳ ಟಿ20 ಸರಣಿಗೆ ಹಂಗಾಮಿ ನಾಯಕನನ್ನಾಗಿ ಯುವ ಬ್ಯಾಟರ್ ಶುಭ್‌ಮನ್ ಗಿಲ್ ಅವರನ್ನು ನೇಮಕ ಮಾಡಲಾಗಿದೆ. ಗಿಲ್ ನೇತೃತ್ವದ ಟೀಂ ಇಂಡಿಯಾ, ಮೊದಲ ಪಂದ್ಯದಲ್ಲೇ ಜಿಂಬಾಬ್ವೆಗೆ ಶರಣಾಗುವ ಮೂಲಕ ಮುಖಭಂಗ ಅನುಭವಿಸಿತ್ತು. ಆದರೆ ಇದಾದ ಬಳಿಕ ಎಚ್ಚೆತ್ತುಕೊಂಡ ಟೀಂ ಇಂಡಿಯಾ ಸತತ ಎರಡು ಪಂದ್ಯಗಳನ್ನು ಜಯಿಸುವ ಮೂಲಕ 3 ಪಂದ್ಯಗಳ ಮುಕ್ತಾಯದ ಬಳಿಕ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ.
ಭಾರತದ ಹೊಸ ಕೋಚ್ ಗೌತಮ್ ಗಂಭೀರ್ ಮುಂದಿರುವ ಸವಾಲು ಒಂದೆರಡಲ್ಲ..! ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್
ರಿಂಕು-ಶೆಹನೀಲ್ ವೈರಲ್ ವಿಡಿಯೋ:
ಭಾರತ ಹಾಗೂ ಜಿಂಬಾಬ್ವೆ ನಡುವಿನ ಎರಡನೇ ಟಿ20 ಪಂದ್ಯ ಮುಕ್ತಾಯದ ಬಳಿಕ ಬಿಡುವಿನ ಸಮಯದಲ್ಲಿ ರಿಂಕು ಸಿಂಗ್ ಹಾಗೂ ಶೆಹನೀಲ್ ಗಿಲ್ ನಗುನಗುತ್ತಾ ಸೆಲ್ಫಿ ವಿಡಿಯೋಗೆ ಫೋಸ್ ಕೊಟ್ಟಿದ್ದಾರೆ. ಈ ವಿಡಿಯೋದಲ್ಲಿ ಕೆಲ ಜಿರಾಫೆಗಳು ಇರುವುದು ಕಂಡು ಬಂದಿದೆ.
ಬ್ಯಾಟಿಂಗ್‌ನಲ್ಲೂ ಮಿಂಚಿದ ರಿಂಕು:
ಟೀಂ ಇಂಡಿಯಾ ಪ್ರತಿಭಾನ್ವಿತ ಕ್ರಿಕೆಟಿಗ ರಿಂಕು ಸಿಂಗ್, 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನದ ಹೊರತಾಗಿಯೂ ಕೂದಲೆಳೆ ಅಂತರದಲ್ಲಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ 15 ಆಟಗಾರರ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದರು. ಆದರೆ ರಿಂಕು ಸಿಂಗ್ ಮೀಸಲು ಆಟಗಾರನಾಗಿ ಭಾರತ ತಂಡದ ಜತೆಗೆ ಅಮೆರಿಕ ಹಾಗೂ ವೆಸ್ಟ್ ಇಂಡೀಸ್ ಪ್ರವಾಸ ಮಾಡಿದ್ದರು. ಇನ್ನು ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯದಿದ್ದ ರಿಂಕು ಸಿಂಗ್ ಅವರಿಗೆ ಜಿಂಬಾಬ್ವೆ ಪ್ರವಾಸಕ್ಕೆ ತಂಡದಲ್ಲಿ ಸ್ಥಾನ ನೀಡಲಾಗಿತ್ತು. ಜಿಂಬಾಬ್ವೆ ಎದುರಿನ ಎರಡನೇ ಟಿ20 ಪಂದ್ಯದಲ್ಲಿ ರಿಂಕು ಸಿಂಗ್ ಕೇವಲ 22 ಎಸೆತಗಳಲ್ಲಿ ಅಜೇಯ 48 ರನ್ ಸಿಡಿಸುವ ಮೂಲಕ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಎಡಗೈ ಸ್ಪೋಟಕ ಬ್ಯಾಟರ್ ಆಗಿರುವ ರಿಂಕು ಸಿಂಗ್, ಭಾರತ ಪರ 14 ಟಿ20 ಇನಿಂಗ್ಸ್‌ಗಳನ್ನಾಡಿ 178.41ರ ಸ್ಟ್ರೈಕ್‌ರೇಟ್‌ನಲ್ಲಿ 405 ರನ್ ಸಿಡಿಸಿದ್ದಾರೆ. ಮುಂಬರುವ ದಿನಗಳಲ್ಲಿ ರಿಂಕು ಸಿಂಗ್ ಭಾರತ ಕ್ರಿಕೆಟ್‌ನ ಅದ್ಭುತ ಮ್ಯಾಚ್ ಫಿನಿಶರ್ ಆದರೂ ಅಚ್ಚರಿಯಿಲ್ಲ.