ರಾಹುಲ್ ದ್ರಾವಿಡ್‌ಗೆ ಗಾಳ ಹಾಕಿದ ಈ ಐಪಿಎಲ್ ಫ್ರಾಂಚೈಸಿ..! ಆಫರ್ ಒಪ್ತಾರಾ 'ದಿ ವಾಲ್'..?

By Naveen Kodase  |  First Published Jul 11, 2024, 1:45 PM IST

ಟೀಂ ಇಂಡಿಯಾ ಹೆಡ್ ಕೋಚ್ ಹುದ್ದೆಯಿಂದ ಕೆಳಗಿಳಿದ ಟೀಂ ಇಂಡಿಯಾ ಯಶಸ್ವಿ ಕೋಚ್ ರಾಹುಲ್ ದ್ರಾವಿಡ್ ಅವರನ್ನು ತಮ್ಮ ತೆಕ್ಕೆಗೆ ಸೆಳೆದುಕೊಳ್ಳಲು ಈ ಐಪಿಎಲ್ ಫ್ರಾಂಚೈಸಿ ಮುಂದಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ


ಬೆಂಗಳೂರು: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಚಾಂಪಿಯನ್ ಆಗುತ್ತಿದ್ದಂತೆಯೇ ಬಿಸಿಸಿಐ ಜತೆಗಿನ ರಾಹುಲ್ ದ್ರಾವಿಡ್ ಅವರ ಹೆಡ್ ಕೋಚ್ ಒಪ್ಪಂದಾವಧಿ ಕೂಡಾ ಮುಕ್ತಾಯವಾಗಿದೆ. ಇದರ ಬೆನ್ನಲ್ಲೇ ತಮಾಷೆಯಾಗಿಯೇ ಪ್ರತಿಕ್ರಿಯಿಸಿದ್ದ ರಾಹುಲ್ ದ್ರಾವಿಡ್ ಮುಂದಿನ ವಾರದಿಂದ ತಾವು ನಿರುದ್ಯೋಗಿ ಎಂದು ಹೇಳಿದ್ದರು.

ಇನ್ನು ರಾಹುಲ್ ದ್ರಾವಿಡ್ ಅವರಿಂದ ತೆರವಾಗಿದ್ದ ಟೀಂ ಇಂಡಿಯಾ ಹೆಡ್ ಕೋಚ್ ಹುದ್ದೆಯನ್ನು ಇದೀಗ ಭಾರತ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ನೇಮಕವಾಗಿದ್ದಾರೆ. ಗೌತಮ್ ಗಂಭೀರ್ ಟೀಂ ಇಂಡಿಯಾ ಹೆಡ್ ಕೋಚ್ ಆಗುವ ಮುನ್ನ, ಕೋಲ್ಕತಾ ನೈಟ್ ರೈಡರ್ಸ್ ತಂಡದ ಮೆಂಟರ್ ಆಗಿ ನೇಮಕವಾಗಿದ್ದರು. ಇದೀಗ ಕೆಕೆಆರ್ ಮೆಂಟರ್ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಸಿಸಿಐ ಹೆಡ್ ಕೋಚ್ ಆಗಿ ಗೌತಿ ನೇಮಕವಾಗಿದ್ದಾರೆ.

Latest Videos

undefined

ಗಿಲ್ ಸಹೋದರಿ ಜತೆ ಕಾಣಿಸಿಕೊಂಡ ರಿಂಕು ಸಿಂಗ್..! ಏನ್ ಸಮಾಚಾರ ಗುರೂ ಎಂದು ಕಿಚಾಯಿಸಿದ ಫ್ಯಾನ್ಸ್

ಕೋಲ್ಕತಾ ನೈಟ್ ರೈಡರ್ಸ್‌ ತಂಡವು ಕಳೆದೊಂದು ದಶಕದಿಂದಲೂ ಐಪಿಎಲ್ ಟ್ರೋಫಿ ಗೆಲ್ಲಲು ಪದೇ ಪದೇ ಎಡವುತ್ತಲೇ ಬಂದಿತ್ತು. ಆದರೆ ಕೆಕೆಆರ್ ತಂಡದ ಮಾಲೀಕ ಶಾರುಕ್ ಖಾನ್, ಗಂಭೀರ್ ಅವರನ್ನು ಮೆಂಟರ್ ಆಗಿ ನೇಮಿಸಿಕೊಳ್ಳುವ ಮೂಲಕ ಮತ್ತೊಮ್ಮೆ ಐಪಿಎಲ್ ಟ್ರೋಫಿ ಜಯಿಸುವಲ್ಲಿ ಯಶಸ್ವಿಯಾಗಿದ್ದರು. ಇನ್ನು ಇಂಟ್ರೆಸ್ಟಿಂಗ್ ಸಂಗತಿಯೆಂದರೆ, ಕೆಕೆಆರ್ ತಂಡದ ಮೆಂಟರ್ ಆಗಿ ನೇಮಿಸಿಕೊಳ್ಳುವ ವೇಳೆಯಲ್ಲಿ ಶಾರುಕ್ ಖಾನ್ ಬ್ಲಾಂಕ್ ಚೆಕ್ ನೀಡಿ 10 ವರ್ಷ ನೀವು ನಮ್ಮ ಜತೆಗಿರಬೇಕು ಎಂದು ಗೌತಿಗೆ ಆಫರ್ ನೀಡಿದ್ದರು ಎಂದೆಲ್ಲಾ ವರದಿಯಾಗಿತ್ತು.

ಆದರೆ ಕೆಕೆಆರ್ ತಂಡವು ಐಪಿಎಲ್ ಚಾಂಪಿಯನ್ ಆಗುತ್ತಿದ್ದಂತೆಯೇ ಬಿಸಿಸಿಐ, ಗೌತಮ್ ಗಂಭೀರ್ ಅವರನ್ನು ಟೀಂ ಇಂಡಿಯಾ ಕೋಚ್ ಮಾಡಲು ಒಲವು ತೋರಿತು. ಹಲವು ಮಾತುಕತೆಗಳ ಬಳಿಕ ಕೊನೆಗೂ ಗಂಭೀರ್, ಇದೀಗ ಟೀಂ ಇಂಡಿಯಾ ನೂತನ ಹೆಡ್ ಕೋಚ್ ಆಗಿ ನೇಮಕವಾಗಿದ್ದಾರೆ. ಇದರ ಬೆನ್ನಲ್ಲೇ ಕೆಕೆಆರ್ ಫ್ರಾಂಚೈಸಿ ಕೂಡಾ ಗಂಭೀರ್ ಅವರಿಂದ ತೆರವಾಗಿರುವ ಮೆಂಟರ್ ಸ್ಥಾನಕ್ಕೆ ಸೂಕ್ತ ವ್ಯಕ್ತಿಯ ಹುಡುಕಾಟದಲ್ಲಿದೆ. ಈ ಪೈಕಿ ರಾಹುಲ್ ದ್ರಾವಿಡ್ ಕೂಡಾ ಕೆಕೆಆರ್ ಶಾರ್ಟ್‌ಲಿಸ್ಟ್‌ನಲ್ಲಿದ್ದಾರೆ ಎನ್ನಲಾಗುತ್ತಿದೆ.

ಕನ್ನಡಿಗ, ಆರ್‌ಸಿಬಿ ಮಾಜಿ ಕ್ರಿಕೆಟಿಗನೇ ಬೌಲಿಂಗ್ ಕೋಚ್ ಆಗಬೇಕು: ಪಟ್ಟು ಹಿಡಿದ ಗೌತಮ್ ಗಂಭೀರ್..!

News 18 Bangla ವರದಿಯ ಪ್ರಕಾರ, ಮುಂಬರುವ 2025ರ ಐಪಿಎಲ್ ಟೂರ್ನಿಯಲ್ಲಿ ರಾಹುಲ್ ದ್ರಾವಿಡ್ ಅವರನ್ನು ತಮ್ಮ ತಂಡದ ಹೆಡ್‌ ಕೋಚ್ ಆಗಿ ನೇಮಿಸಿಕೊಳ್ಳಲು ಹಲವು ಫ್ರಾಂಚೈಸಿಗಳು ಕಣ್ಣಿಟ್ಟಿವೆ. ಈ ಪೈಕಿ ಕೋಲ್ಕತಾ ನೈಟ್ ರೈಡರ್ಸ್ ಕೂಡಾ ರೇಸ್‌ನಲ್ಲಿದೆ. ಆದರೆ ಈ ಸಂಬಂಧ ಈ ಕುರಿತಂತೆ ದ್ರಾವಿಡ್ ಹಾಗೂ ಕೆಕೆಆರ್ ಫ್ರಾಂಚೈಸಿ ನಡುವೆ ಯಾವುದೇ ಮಾತುಕತೆಗಳು ನಡೆದಿಲ್ಲ ಎನ್ನಲಾಗುತ್ತಿದೆ. 

ಒಂದು ವೇಳೆ ಕೋಲ್ಕತಾ ನೈಟ್ ರೈಡರ್ಸ್ ಫ್ರಾಂಚೈಸಿಯು ತಮ್ಮ ತಂಡದ ಮೆಂಟರ್ ಆಗುವಂತೆ ರಾಹುಲ್ ದ್ರಾವಿಡ್ ಅವರನ್ನು ಕೇಳಿಕೊಂಡರೆ, ದ ವಾಲ್ ಖ್ಯಾತಿಯ ದ್ರಾವಿಡ್ ಒಪ್ಪಿಕೊಳ್ಳುತ್ತಾರೇ ಅಥವಾ ಕೆಲಕಾಲ ಕ್ರಿಕೆಟ್‌ನಿಂದ ದೂರ ಉಳಿದು ವಿಶ್ರಾಂತಿಗೆ ಜಾರುತ್ತಾರೆಯೇ ಎನ್ನುವುದನ್ನು ಕಾದು ನೋಡಬೇಕಿದೆ.

ರಾಹುಲ್ ದ್ರಾವಿಡ್, ಈಗಾಗಲೇ ಐಪಿಎಲ್‌ನಲ್ಲಿ ಕೋಚ್ ಹಾಗೂ ಮೆಂಟರ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. 2014ರಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಮೆಂಟರ್ ಆಗಿದ್ದ ದ್ರಾವಿಡ್, ಕೆಲಕಾಲ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹೆಡ್‌ ಕೋಚ್ ಆಗಿಯೂ ಸೈ ಎನಿಸಿಕೊಂಡಿದ್ದರು. 

click me!