2003ರ ಏಕದಿನ ವಿಶ್ವಕಪ್ ಟೂರ್ನಿಯ ಸುಂದರ ಕ್ಷಣವನ್ನು ಮೆಲುಕು ಹಾಕಿದ ಸೆಹ್ವಾಗ್
ವಾಸೀಂ ಅಕ್ರಂ ಅವರಿಂದ ರಕ್ಷಿಸಿಕೊಳ್ಳಲು ಪ್ಲಾನ್ ಮಾಡಿದ್ದಾಗಿ ತಿಳಿಸಿದ ವೀರೂ
ಸಚಿನ್ ಆಟದ ನೆರವಿನಿಂದ ಪಾಕ್ ಎದುರು ಗೆಲುವು ಸಾಧಿಸಿದ್ದ ಟೀಂ ಇಂಡಿಯಾ
ನವದೆಹಲಿ(ಜ.14): ಭಾರತ ಕ್ರಿಕೆಟ್ ಕಂಡಂತಹ ಅತ್ಯಂತ ಯಶಸ್ವಿ ಆರಂಭಿಕ ಜೋಡಿ ಯಾರೆಂದು ಕೇಳಿದರೆ, ಥಟ್ಟೆಂದು ನೆನಪಾಗುವುದು ಸಚಿನ್ ತೆಂಡುಲ್ಕರ್ ಹಾಗೂ ಸೌರವ್ ಗಂಗೂಲಿ ಎಂದು ಎಲ್ಲರೂ ಹೇಳುತ್ತಾರೆ. ಇದು ಅಂಕಿ-ಅಂಶಗಳನ್ನು ನೋಡಿದರೂ ನಿಜವೆನಿಸೋದು ಸಹಜ. ಯಾಕೆಂದರೇ ಈ ಜೋಡಿ 136 ಬಾರಿ ಭಾರತ ಪರ ಇನಿಂಗ್ಸ್ ಆರಂಭಿಸಿ 49.32ರ ಬ್ಯಾಟಿಂಗ್ ಸರಾಸರಿಯಲ್ಲಿ 21 ಶತಕ ಸಹಿತ 6609 ರನ್ ಬಾರಿಸಿದ್ದಾರೆ. ಇನ್ನು ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ ಜೋಡಿ 115 ಇನಿಂಗ್ಸ್‌ಗಳನ್ನಾಡಿ 18 ಶತಕದ ಜತೆಯಾಟ ಸಹಿತ 5148 ರನ್ ಬಾರಿಸಿದ್ದಾರೆ. ಅತ್ಯಂತ ಎಂಟರ್‌ಟೈನ್‌ಮೆಂಟ್ ನೀಡಿದ ಜೋಡಿ ಎನಿಸಿಕೊಂಡಿರುವ ಸಚಿನ್ ತೆಂಡುಲ್ಕರ್ ಹಾಗೂ ವಿರೇಂದ್ರ ಸೆಹ್ವಾಗ್ ಜೋಡಿ, ಆರಂಭಿಕರಾಗಿ ಅತಿ ಹೆಚ್ಚು ರನ್ ಜತೆಯಾಟವಾಡಿದವರ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಈ ಜೋಡಿ 93 ಇನಿಂಗ್ಸ್‌ಗಳನ್ನಾಡಿ 3,919 ರನ್ ಬಾರಿಸಿದೆ. ಭಾರತೀಯ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಿದ ಅತ್ಯಂತ ಯಶಸ್ವಿ ಜೋಡಿ ಎನ್ನುವ ಹೆಗ್ಗಳಿಕೆ ಈ ಜೋಡಿಗಿದೆ.
ಇನ್ನು 2003ರಿಂದ ಸಚಿನ್ ತೆಂಡುಲ್ಕರ್ ಹಾಗೂ ವಿರೇಂದ್ರ ಸೆಹ್ವಾಗ್ ಆರಂಭಿಕರಾಗಿ ಯಶಸ್ಸು ಕಂಡರು. 2003ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯ ಸಂದರ್ಭದಲ್ಲಿ ನಡೆದ ಸ್ವಾರಸ್ಯಕರ ಘಟನೆಯೊಂದನ್ನು ವಿರೇಂದ್ರ ಸೆಹ್ವಾಗ್ ಮೆಲುಕು ಹಾಕಿದ್ದಾರೆ. 2003ರ ಏಕದಿನ ವಿಶ್ವಕಪ್ ಟೂರ್ನಿಯ ಅತ್ಯಂತ ಹೈವೋಲ್ಟೇಜ್ ಪಂದ್ಯ ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದರು. ಈ ಸಂದರ್ಭದಲ್ಲಿ ಬ್ಯಾಟಿಂಗ್ ಸ್ಟ್ರೈಕ್ ತೆಗೆದುಕೊಳ್ಳುವ ವಿಚಾರದಲ್ಲಿ ಸಚಿನ್ ಹಾಗೂ ಸೆಹ್ವಾಗ್ ನಡುವಿನ ಸಂಭಾಷಣೆಯನ್ನು ವೀರೂ ಮತ್ತೊಮ್ಮೆ ಮೆಲುಕು ಹಾಕಿದ್ದಾರೆ.
"ನಾನು ಎಡಗೈ ವೇಗಿಗಳ ಎದುರು ಅಷ್ಟೊಂದು ಚೆನ್ನಾಗಿ ಆಡಿರಲಿಲ್ಲ. ನಾನು ಸಾಕಷ್ಟು ಬಾರಿ ಮೊದಲ ಎಸೆತದಲ್ಲೇ ಚಮಿಂಡಾ ವಾಸ್ ಹಾಗೂ ನೇಥನ್ ಬ್ರಾಕೆನ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದ್ದೆ. ಹೀಗಾಗಿ 2003ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ವಾಸೀಂ ಅಕ್ರಂ ಅವರನ್ನು ಎದುರಿಸುವ ಮುನ್ನ, ಪಾಕ್ ಇನಿಂಗ್ಸ್ ಕೊನೆಯಲ್ಲಿ, ಟೀಂ ಇಂಡಿಯಾ ಇನಿಂಗ್ಸ್ ಆರಂಭಿಸುವಾಗ ಸಚಿನ್‌ಗೆ ಸ್ಟ್ರೈಕ್ ತೆಗೆದುಕೊಳ್ಳುವಂತೆ ಕೇಳಿಕೊಂಡೆ. :ನೋಡಿ, ವಾಸೀಂ ಅಕ್ರಂ ಮೊದಲ ಬಾಲ್ ಎಸೆದರೇ, ನಾನು ಮೊದಲ ಎಸೆತದಲ್ಲೇ ಔಟ್ ಆಗಬಹುದು ಎಂದೆ. ಆಗ ಸಚಿನ್, ನಾನು ಕೆಲವೊಂದು ವಿಚಾರವನ್ನು ನಂಬುತ್ತೇನೆ. ನಮ್ಮ ಪಂಡಿತರು ನೀವು ಎರಡನೇ ಕ್ರಮಾಂಕದಲ್ಲೇ ಬ್ಯಾಟ್ ಮಾಡಿ ಎಂದಿದ್ದಾರೆ ಎಂದು ಹೇಳಿದರು.
ನಾನು, ನೀವು ಜಗತ್ತಿನ ನಂ.1 ಬ್ಯಾಟ್ಸ್‌ಮನ್. ಹೀಗಿದ್ದೂ ಪಂಡಿತರನ್ನು ನಂಬುತ್ತೀರಾ?. ಎಂದು ಹೇಳಿದರೂ ಒಪ್ಪದ ಅವರು, ನಾನು ನಾನ್‌ಸ್ಟ್ರೈಕ್‌ನಲ್ಲಿರುತ್ತೇನೆ. ನೀನೇ ಸ್ಟ್ರೈಕ್ ತೆಗೆದುಕೋ ಎಂದು ಹೇಳಿದರು ಎಂದು ವಿರೇಂದ್ರ ಸೆಹ್ವಾಗ್ ಆ ದಿನಗಳನ್ನು ಮೆಲುಕು ಹಾಕಿದ್ದಾರೆ.
ಪಾಕಿಸ್ತಾನ ಇನಿಂಗ್ಸ್ ಮುಗಿದ ಬಳಿಕ ನಾವು ಲಂಚ್‌ಗೆ ಮೆಟ್ಟಿಲು ಹತ್ತುತ್ತಾ ಇದ್ದಾಗ ಮತ್ತೆ ಮನವಿ ಮಾಡಿಕೊಂಡರೂ ಕೇಳದ ಅವರು, ಹೋಗು ಪ್ಯಾಡ್ ಕಟ್ಟಿಕೋ, ನಾನಂತೂ ಸ್ಟ್ರೈಕ್ ತೆಗೆದುಕೊಳ್ಳುವುದಿಲ್ಲ ಎಂದರು. ಆಗ ನಾನು, ದಯವಿಟ್ಟು ವಾಸೀಂ ಅಕ್ರಂ ಅವರಿಂದ ನನ್ನನ್ನು ಕಾಪಾಡಿ ಎಂದು ಕೈ ಮುಗಿದು ಕೇಳಿಕೊಂಡಿದ್ದೆ ಎಂದು ಸೆಹ್ವಾಗ್ ಹೇಳಿದ್ದಾರೆ.
ಮೊದಲು ಬ್ಯಾಟ್ ಮಾಡಿದ್ದ ಪಾಕಿಸ್ತಾನ ತಂಡವು ಸಯೀದ್ ಅನ್ವರ್ ಬಾರಿಸಿದ ಆಕರ್ಷಕ ಶತಕದ ನೆರವಿನಿಂದ 7 ವಿಕೆಟ್ ಕಳೆದುಕೊಂಡು 273 ರನ್ ಬಾರಿಸಿತ್ತು. ಇದು ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ವಿರುದ್ದ ಪಾಕಿಸ್ತಾನ ಗಳಿಸಿದ ಗರಿಷ್ಠ ಸ್ಕೋರ್ ಎನಿಸಿತ್ತು. ಹೀಗಾಗಿ ಕೊನೆಯ ಕ್ಷಣದಲ್ಲಿ ಮನಸ್ಸು ಬದಲಿಸಿದ ಸಚಿನ್ ತೆಂಡುಲ್ಕರ್ ಸ್ಟ್ರೈಕ್ ತೆಗೆದುಕೊಳ್ಳಲು ತೀರ್ಮಾನಿಸಿದರು. ವಾಸೀಂ ಅಕ್ರಂ ಎಸೆದ ಮೂರನೇ ಎಸೆತದಲ್ಲೇ ಭರ್ಜರಿ ಬೌಂಡರಿ ಬಾರಿಸುವ ಮೂಲಕ ತಂಡಕ್ಕೆ ರನ್ ಖಾತೆ ತೆರೆದರು. ಆ ಬಳಿಕ ಸೆಹ್ವಾಗ್ ಕೂಡಾ ಮೈ ಚಳಿ ಬಿಟ್ಟು ಬ್ಯಾಟ್ ಬೀಸಲಾರಂಭಿಸಿದರು. ಪಾಕ್ ಎದುರು ಸಚಿನ್ ತೆಂಡುಲ್ಕರ್ ಕೇವಲ 75 ಎಸೆತಗಳಲ್ಲಿ 12 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 98 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಆ ಪಂದ್ಯವನ್ನು ಟೀಂ ಇಂಡಿಯಾ 26 ಎಸೆತ ಬಾಕಿ ಇರುವಂತೆಯೇ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತ್ತು.