
ಮೈಸೂರು: ಮಾಜಿ ಚಾಂಪಿಯನ್ ಹುಬ್ಬಳ್ಳಿ ಟೈಗರ್ಸ್ ಕೆಎಸ್‌ಸಿಎ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ 2ನೇ ಬಾರಿ ಫೈನಲ್ ಪ್ರವೇಶಿಸಿದೆ. ಮಂಗಳವಾರ ನಡೆದ ಕ್ವಾಲಿಫೈಯರ್-1 ಪಂದ್ಯದಲ್ಲಿ ಮಂಗಳೂರು ಡ್ರ್ಯಾಗನ್ಸ್ ವಿರುದ್ಧ ಹುಬ್ಬಳ್ಳಿ ತಂಡ 110 ರನ್ ಭರ್ಜರಿ ಜಯಗಳಿಸಿತು. ಇದರೊಂದಿಗೆ ತಂಡ ನೇರವಾಗಿ ಫೈನಲ್ ತಲುಪಿತು.
ದೇವದತ್ ಪಡಿಕ್ಕಲ್ ನಾಯಕತ್ವದಲ್ಲಿ ಕಣಕ್ಕಿಳಿದ ಹುಬ್ಬಳ್ಳಿ 2 ವಿಕೆಟ್‌ಗೆ 210 ರನ್ ಕಲೆಹಾಕಿತು. ದೇವದತ್ ಮುಂಚೂಣಿಯಲ್ಲಿ ನಿಂತು ತಂಡವನ್ನು ಫೈನಲ್‌ಗೇರಿಸಲು ಯಶಸ್ವಿಯಾದರು. ಮೊಹಮ್ಮದ್ ತಾಹ ಜೊತೆಗೂಡಿ ಪಡಿಕ್ಕಲ್ ಮೊದಲ ವಿಕೆಟ್‌ಗೆ 10 ಓವರ್‌ಗಳಲ್ಲಿ 81 ರನ್ ಸೇರಿಸಿದರು. ತಾಹ 28 ಎಸೆತಗಳಲ್ಲಿ 37 ರನ್ ಕೊಡುಗೆ ನೀಡಿದರು. 13 ಓವರ್‌ಗಳಲ್ಲಿ ತಂಡ 100 ರನ್ ಗಳಿಸಿದ್ದರೂ, ಬಳಿಕ ಅಕ್ಷರಶಃ ಅಬ್ಬರಿಸಿತು. ಕೊನೆ 7 ಓವರ್‌ಗಳಲ್ಲಿ ತಂಡ ಖಾತೆಗೆ 110 ರನ್ ಸೇರ್ಪಡೆಗೊಂಡಿತು. ಪಡಿಕ್ಕಲ್ ಹಾಗೂ ಅಭಿನವ್ ಮನೋಹರ್ ಭರ್ಜರಿಯಾಗಿ ಬ್ಯಾಟ್ ಬೀಸಿದರು. ಈ ಜೋಡಿ 2ನೇ ವಿಕೆಟ್‌ಗೆ 48 ಎಸೆತಗಳಲ್ಲಿ 105 ರನ್ ಸೇರಿಸಿತು. ಅಭಿನವ್ 23 ಎಸೆತಕ್ಕೆ 50 ರನ್ ಗಳಿಸಿ ಔಟಾದರೆ, ಪಡಿಕ್ಕಲ್ 64 ಎಸೆತಗಳಲ್ಲಿ 10 ಬೌಂಡರಿ, 5 ಸಿಕ್ಸರ್‌ನೊಂದಿಗೆ 99 ರನ್ ಸಿಡಿಸಿ ಔಟಾಗದೆ ಉಳಿದರು. 20 ಓವರ್‌ನ 5ನೇ ಎಸೆತದಲ್ಲಿ ಸಿಂಗಲ್ ಪಡೆದ ಅವರು, ಶತಕದಿಂದ ವಂಚಿತರಾದರು. ಮನ್ವಂತ್ ಕುಮಾರ್ 6 ಎಸೆತಕ್ಕೆ 16 ರನ್ ಸಿಡಿಸಿ ತಂಡದ ಮೊತ್ತವನ್ನು 210ರ ಗಡಿ ದಾಟಿಸಿದರು.
ದೊಡ್ಡ ಮೊತ್ತ ಬೆನ್ನತ್ತಿದ ಮಂಗಳೂರು, ಒತ್ತಡದಿಂದಲೇ ಕ್ರೀಸ್‌ಗೆ ಇಳಿಯಿತು. 2ನೇ ಓವರ್‌ನಲ್ಲೇ ಶರತ್ ಬಿ.ಆರ್. ವಿಕೆಟ್ ಕಳೆದುಕೊಂಡರೆ, 4ನೇ ಓವರ್‌ನಲ್ಲಿ ಲೋಚನ್ ಗೌಡ ನಿರ್ಗಮಿಸಿದರು. ಆ ಬಳಿಕ ಬಂದವರೆಲ್ಲರೂ ಒತ್ತಡದಲ್ಲೇ ಆಡಿ, ವಿಕೆಟ್ ಕಳೆದುಕೊಂಡರು. ಅನೀಶ್ ಕೆ.ವಿ.(28) ತಂಡದ ಪರ ಗರಿಷ್ಠ ವೈಯಕ್ತಿಕ ಮೊತ್ತ ಗಳಿಸಿದರು. ಮ್ಯಾಕ್ನಿಲ್ ನೊರೊನ್ಹಾ(6), ಶಿವರಾಜ್(9), ನಾಯಕ ಶ್ರೇಯಸ್ ಗೋಪಾಲ್(1) ವಿಫಲರಾದರು. ತಂಡ 16.1 ಓವರ್‌ಗಳಲ್ಲಿ 100 ರನ್‌ಗೆ ಆಲೌಟಾಯಿತು.
ಹುಬ್ಬಳ್ಳಿ ಪರ ರಿತೇಶ್ ಭಟ್ಕಳ್ 3, ಯಶ್ ರಾಜ್ ಪೂಂಜ, ಶ್ರೀಶಾ ಆಚಾರ್, ಕೆ.ಸಿ.ಕಾರ್ಯಪ್ಪ ತಲಾ 2 ವಿಕೆಟ್ ಕಿತ್ತರು.
ಸ್ಕೋರ್: ಹುಬ್ಬಳ್ಳಿ 20 ಓವರಲ್ಲಿ 210/2 (ಪಡಿಕ್ಕಲ್ 99*, ಅಭಿನವ್ 50, ತಾಹಾ 37, ರೋನಿತ್ ಮೋರೆ 1-48), ಮಂಗಳೂರು 16.1 ಓವರಲ್ಲಿ 100/10 (ಅನೀಶ್ 28, ರಿತೇಶ್ 3/20, ಕಾರ್ಯಪ್ಪ 2-14) ಪಂದ್ಯಶ್ರೇಷ್ಠ: ದೇವದತ್ ಪಡಿಕ್ಕಲ್
ಮಂಗಳೂರಿಗೆ ಇದೆ ಮತ್ತೊಂದು ಚಾನ್ಸ್
ಕ್ವಾಲಿಫೈಯರ್-1ರಲ್ಲಿ ಸೋತ ಹೊರತಾಗಿಯೂ ಮಂಗಳೂರು ತಂಡಕ್ಕೆ ಫೈನಲ್‌ಗೇರಲು ಮತ್ತೊಂದು ಅವಕಾಶ ಸಿಗಲಿದೆ. ಎಲಿಮಿನೇಟರ್‌ನಲ್ಲಿ ಗೆದ್ದ ಬೆಂಗಳೂರು ಬ್ಲಾಸ್ಟರ್ಸ್ ತಂಡದ ವಿರುದ್ಧ ಬುಧವಾರ ನಡೆಯಲಿರುವ ಕ್ವಾಲಿಫೈಯರ್-2ರಲ್ಲಿ ಮಂಗಳೂರು ತಂಡ ಸೆಣಸಲಿದೆ. ಅದರಲ್ಲಿ ಗೆದ್ದರೆ ಫೈನಲ್‌ಗೇರಲಿದೆ. ಫೈನಲ್ ಪಂದ್ಯ ಗುರುವಾರ ನಡೆಯಲಿದೆ.
ದುಲೀಪ್ ಟ್ರೋಫಿ ಕ್ರಿಕೆಟ್‌ಗೆ ಬೆಂಗ್ಳೂರಲ್ಲಿ ನಾಳೆ ಚಾಲನೆ
ಬೆಂಗಳೂರು: 2025-26ರ ದೇಸಿ ಕ್ರಿಕೆಟ್ ಋತುವಿನ ಮೊದಲ ಟೂರ್ನಿಯಾಗಿರುವ ದುಲೀಪ್ ಟ್ರೋಫಿಗೆ ಬುಧವಾರ ಚಾಲನೆ ಸಿಗಲಿದೆ. ಬೆಂಗಳೂರಿನಲ್ಲಿರುವ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಏಕಕಾಲದಲ್ಲಿ 2 ಪಂದ್ಯಗಳು ಆರಂಭಗೊಳ್ಳಲಿವೆ.
ಟೂರ್ನಿ ಈ ಬಾರಿಯೂ ವಲಯ ಮಾದರಿಯಲ್ಲಿ ನಡೆಯಲಿದೆ. ಒಟ್ಟು 6 ತಂಡಗಳು ಸ್ಪರ್ಧಿಸಲಿವೆ. ತಿಲಕ್ ವರ್ಮಾ ನಾಯಕತ್ವದ ದಕ್ಷಿಣ ವಲಯ ಹಾಗೂ ಶಾರ್ದೂಲ್ ಠಾಕೂರ್ ನಾಯಕತ್ವದ ಪಶ್ಚಿಮ ವಲಯ ನೇರವಾಗಿ ಫೈನಲ್‌ಗೇರಿವೆ. ಹೀಗಾಗಿ ಇತರ 4 ತಂಡಗಳು ಕ್ವಾರ್ಟರ್ ಫೈನಲ್‌ನಲ್ಲಿ ಸೆಣಸಾಡಲಿವೆ. ಒಂದು ಕ್ವಾರ್ಟರ್‌ನಲ್ಲಿ ಅಂಕಿತ್ ಕುಮಾರ್ ನಾಯಕತ್ವದ ಉತ್ತರ ವಲಯ ಹಾಗೂ ಅಭಿಮನ್ಯು ಈಶ್ವರನ್ ಸಾರಥ್ಯದ ಪೂರ್ವ ವಲಯ ಮುಖಾಮುಖಿಯಾಗಲಿದ್ದು, ಮತ್ತೊಂದು ಪಂದ್ಯದಲ್ಲಿ ಧ್ರುವ್ ಜುರೆಲ್ ನಾಯಕತ್ವದ ಕೇಂದ್ರ ವಲಯ ಹಾಗೂ ಜೊನಾಥನ್ ರೊಂಗ್ಸನ್ ಸಾರಥ್ಯದ ಈಶಾನ್ಯ ವಲಯ ಸೆಣಸಾಡಲಿವೆ. ಇದು 4 ದಿನಗಳ ಪಂದ್ಯವಾಗಿರಲಿದೆ.
ಸೆಮಿಫೈನಲ್ ಸೆ.4ರಿಂದ, ಫೈನಲ್ ಸೆ.11ರಿಂದ ಆರಂಭಗೊಳ್ಳಲಿದೆ. ಎಲ್ಲಾ ಪಂದ್ಯಗಳೂ ಬೆಂಗಳೂರಿನಲ್ಲಿ ನಡೆಯಲಿವೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.