
ಇಸ್ಲಾಮಾಬಾದ್: 2026ನೇ ಸಾಲಿನ ಹಾಂಕಾಂಗ್ ಸಿಕ್ಸಸ್ ಟೂರ್ನಿಯು ಇದೇ ಅಕ್ಟೋಬರ್ 30ರಿಂದ ಆರಂಭವಾಗಲಿದೆ. ಈ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳು ಮುಖಾಮುಖಿಯಾಗಲಿವೆ. ಕೆಲವು ದಿನಗಳ ಹಿಂದಷ್ಟೇ ಏಳು ಆಟಗಾರರನ್ನೊಳಗೊಂಡ ಬಲಿಷ್ಠ ಭಾರತ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿತ್ತು. ಇದೀಗ ಪಾಕಿಸ್ತಾನ ಕ್ರಿಕೆಟ್ ಬೋರ್ಡ್, ಈ ಹಾಂಕಾಂಗ್ ಸಿಕ್ಸಸ್ ಟೂರ್ನಿಗೆ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಪ್ರಕಟಿಸಿದೆ. ಕಳೆದ ಸೀಸನ್ ಹಾಂಕಾಂಗ್ ಸಿಕ್ಸಸ್ ಟೂರ್ನಿಯಲ್ಲಿ ಅಬ್ಬಾಸ್ ಅಫ್ರಿದಿ ನೇತೃತ್ವದಲ್ಲಿ ಪಾಕಿಸ್ತಾನ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದೀಗ ಮತ್ತೊಮ್ಮೆ ಅಬ್ಬಾಸ್ ಅಫ್ರಿದಿ ನೇತೃತ್ವದಲ್ಲೇ ಪಾಕಿಸ್ತಾನ ತಂಡವು ಕಪ್ ಗೆಲ್ಲುವ ಕನಸಿನೊಂದಿಗೆ ಟೂರ್ನಿಯಲ್ಲಿ ಪಾಲ್ಗೊಳ್ಳಲು ರೆಡಿಯಾಗಿದೆ.
2025ನೇ ಸಾಲಿನ ಹಾಂಕಾಂಗ್ ಸಿಕ್ಸಸ್ ಟೂರ್ನಿಯಲ್ಲಿ ಅಬ್ಬಾಸ್ ಅಫ್ರಿದಿ ನೇತೃತ್ವದ ಪಾಕಿಸ್ತಾನ ತಂಡವು ಫೈನಲ್‌ನಲ್ಲಿ ಕುವೈತ್ ತಂಡವನ್ನು 43 ರನ್‌ಗಳ ಅಂತರದಲ್ಲಿ ಅನಾಯಾಸವಾಗಿ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ತನ್ನ ಚಾಂಪಿಯನ್ ಪಟ್ಟ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಬಲಿಷ್ಠ ಆಟಗಾರರನ್ನೊಳಗೊಂಡ ತಂಡವನ್ನೇ ಈ ಬಾರಿ ಕಣಕ್ಕಿಳಿಸಿದೆ.
ಹಾಂಕಾಂಗ್ ಸಿಕ್ಸಸ್ ಟೂರ್ನಿಯಲ್ಲಿ ಅಬ್ಬಾಸ್ ಅಫ್ರಿದಿ ಪಾಕಿಸ್ತಾನ ತಂಡದ ನಾಯಕರಾಗಿದ್ದು, ಖವಾಜಾ ನಫೆ, ಇರ್ಫಾನ್ ಖಾನ್, ಮೊಹಮ್ಮದ್ ಶೆಹಜಾದ್, ಅಹಮದ್ ಡೇನಿಯಲ್, ಅಬ್ದುಲ್ ಸಮದ್ ಹಾಗೂ ಸಾದ್ ಮಸೂದ್ ಅವರನ್ನು ನೇಮಕ ಮಾಡಲಾಗಿದೆ.
ಹಾಂಕಾಂಗ್ ಸಿಕ್ಸಸ್ ಟೂರ್ನಿಯು ಕೇವಲ ಮೂರು ದಿನಗಳ ಕಾಲ ನಡೆಯುವ ಹೈವೋಲ್ಟೇಜ್ ಸರಣಿಯಾಗಿದೆ. ಅಕ್ಟೋಬರ್ 30ರಂದು ಟೂರ್ನಿ ಆರಂಭವಾಗಲಿದ್ದು, ನವೆಂಬರ್ 01ರಂದು ಫೈನಲ್ ಪಂದ್ಯ ನಡೆಯಲಿದೆ. ಪಾಕಿಸ್ತಾನ 'ಸಿ' ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಇದೇ ಗುಂಪಿನಲ್ಲಿ ಭಾರತ ಹಾಗೂ ಯುಎಇ ತಂಡಗಳು ಸ್ಥಾನ ಪಡೆದಿವೆ. ಪಾಕಿಸ್ತಾನವು ಅಕ್ಟೋಬರ್ 30ರಂದು ಯುಎಇ ಎದುರು ಮೊದಲ ಪಂದ್ಯವನ್ನಾಡಲಿದೆ. ಅದೇ ದಿನವೇ ಭಾರತ ಹಾಗೂ ಪಾಕಿಸ್ತಾನ ತಂಡಗಳು ಕೂಡಾ ಕಾದಾಡಲಿವೆ. ಮೇಲ್ನೋಟಕ್ಕೆ ಭಾರತ ಹಾಗೂ ಪಾಕಿಸ್ತಾನ ತಂಡಗಳು ಸಾಕಷ್ಟು ಬಲಿಷ್ಠವಾಗಿದ್ದು, ಜಿದ್ದಾಜಿದ್ದಿನ ಪೈಪೋಟಿ ಮೂಡಿಬರುವ ನಿರೀಕ್ಷೆಯಿದೆ. ಇದೇ ಕಾರಣಕ್ಕೆ ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
ಹಾಂಕಾಂಗ್ ಸಿಕ್ಸಸ್ ಟೂರ್ನಿಗೆ ಭಾರತ ತಂಡ ಹೀಗಿದೆ: ಭುವನೇಶ್ವರ್ ಕುಮಾರ್(ನಾಯಕ), ಕೃನಾಲ್ ಪಾಂಡ್ಯ, ನಿತೀಶ್ ರಾಣಾ, ಶಶಾಂಕ್ ಸಿಂಗ್, ಟಿ ನಟರಾಜನ್, ರಾಹುಲ್ ತ್ರಿಪಾಠಿ ಹಾಗೂ ರಾಹುಲ್ ತೆವಾಟಿಯಾ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.