Ind vs SL: 2ನೇ ಪಂದ್ಯ ಸೋತರೂ ಟೀಂ ಇಂಡಿಯಾ ವೇಗಿಗಳನ್ನು ಸಮರ್ಥಿಸಿಕೊಂಡ ಕೋಚ್ ರಾಹುಲ್ ದ್ರಾವಿಡ್..!

By Naveen KodaseFirst Published Jan 6, 2023, 6:44 PM IST
Highlights

* ಲಂಕಾ ಎದುರು ಎರಡನೇ ಟಿ20 ಪಂದ್ಯದಲ್ಲಿ ಮುಗ್ಗರಿಸಿದ ಟೀಂ ಇಂಡಿಯಾ
* ಬೌಲಿಂಗ್‌ನಲ್ಲಿ ದುಬಾರಿಯಾದ ಟೀಂ ಇಂಡಿಯಾ ವೇಗಿಗಳು
* 5 ನೋಬಾಲ್‌ ಹಾಕಿ ಟೀಕೆಗೆ ಗುರಿಯಾದ ಯುವ ವೇಗಿ ಅರ್ಶದೀಪ್ ಸಿಂಗ್

ಪುಣೆ(ಜ.06): ಶ್ರೀಲಂಕಾ ವಿರುದ್ದ ತವರಿನಲ್ಲಿ ಟೀಂ ಇಂಡಿಯಾದ ಗೆಲುವಿನ ನಾಗಾಲೋಟಕ್ಕೆ ಗುರುವಾರ ಬ್ರೇಕ್‌ ಬಿದ್ದಿದೆ. ಜನವರಿ 05ರಂದು ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಟೀಂ ಇಂಡಿಯಾ ಆಘಾತಕಾರಿ ಸೋಲು ಕಾಣುವುದರ ಮೂಲಕ ನಿರಾಸೆ ಅನುಭವಿಸಿದೆ. ಎಡಗೈ ವೇಗಿ ಆರ್ಶದೀಪ್ ಸಿಂಗ್ ದಾಖಲೆಯ 5 ನೋಬಾಲ್ ಎಸೆಯುವ ಮೂಲಕ ಬೇಡದ ಕುಖ್ಯಾತಿಗೆ ಪಾತ್ರರಾದರು. ಇನ್ನು ಉಳಿದ ವೇಗಿಗಳು ಎರಡನೇ ಟಿ20 ಪಂದ್ಯದಲ್ಲಿ ಲಂಕಾ ಎದುರು ಕೊಂಚ ದುಬಾರಿ ಎನಿಸಿದರು. ಹೀಗಿದ್ದೂ ಟೀಂ ಇಂಡಿಯಾ ಯುವ ವೇಗದ ಬೌಲಿಂಗ್ ಪಡೆಯನ್ನು ಹೆಡ್‌ ಕೋಚ್ ರಾಹುಲ್ ದ್ರಾವಿಡ್ ಸಮರ್ಥಿಸಿಕೊಂಡಿದ್ದಾರೆ. ಜನರು ಸ್ವಲ್ಪ ಕಾಲ ತಾಳ್ಮೆಯಿಂದಿರಿ, ಅವರಿನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈಗಷ್ಟೇ ಹೆಜ್ಜೆಹಾಕುತ್ತಿದ್ದಾರೆ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.

ಮೊದಲು ಬ್ಯಾಟ್‌ ಮಾಡಿದ ಶ್ರೀಲಂಕಾ ತಂಡವು ಆತಿಥೇಯ ಟೀಂ ಇಂಡಿಯಾಗೆ 207 ರನ್‌ಗಳ ಸವಾಲಿನ ಗುರಿ ನೀಡಿತ್ತು. ಕಠಿಣ ಗುರಿ ಬೆನ್ನತ್ತಿದ ಟೀಂ ಇಂಡಿಯಾ, 9.1 ಓವರ್‌ನಲ್ಲಿ 57 ರನ್ ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡು ಹೀನಾಯ ಸೋಲಿನತ್ತ ಮುಖಮಾಡಿತ್ತು. ಆದರೆ ಆರನೇ ವಿಕೆಟ್‌ಗೆ ಸೂರ್ಯಕುಮಾರ್ ಯಾದವ್ ಹಾಗೂ ಅಕ್ಷರ್ ಪಟೇಲ್‌ ಸ್ಪೋಟಕ 91 ರನ್‌ಗಳ ಜತೆಯಾಟವಾಡುವ ಮೂಲಕ ಟೀಂ ಇಂಡಿಯಾ ಪಾಳಯದಲ್ಲಿ ಗೆಲುವಿನ ಆಸೆ ಮೂಡಿಸಿದ್ದರು. ಆದರೆ 16ನೇ ಓವರ್‌ನಲ್ಲಿ ಸೂರ್ಯಕುಮಾರ್ ಯಾದವ್ ವಿಕೆಟ್ ಪತನವಾಗುತ್ತಿದ್ದಂತೆಯೇ ಭಾರತ ಗೆಲುವಿನ ದಾರಿ ದುರ್ಗಮವಾಗ ತೊಡಗಿತು.

ಆದರೆ ಅಕ್ಷರ್ ಪಟೇಲ್‌ ಹಾಗೂ ಶಿವಂ ಮಾವಿ ಚುರುಕಿನ 41 ರನ್‌ಗಳ ಜತೆಯಾಟವಾಡಿದರು. ಕೊನೆಯ ಓವರ್‌ನಲ್ಲಿ ಭಾರತ ಗೆಲ್ಲಲು 21 ರನ್‌ಗಳ ಅಗತ್ಯವಿತ್ತು. ಆದರೆ ಕೊನೆಯ ಓವರ್‌ನ 3ನೇ ಎಸೆತದಲ್ಲಿ ಅಕ್ಷರ್ ಪಟೇಲ್ ವಿಕೆಟ್ ಪತನವಾಗುತ್ತಿದ್ದೆಯೇ, ಭಾರತ ಗೆಲುವಿನ ಆಸೆಯನ್ನು ಕೈಚೆಲ್ಲಿತು. 

Ind vs SL ಹಸರಂಗಗೆ 6 6 6 ಹ್ಯಾಟ್ರಿಕ್‌ ಸಿಕ್ಸರ್ ಚಚ್ಚಿದ ಅಕ್ಷರ್ ಪಟೇಲ್..! ವಿಡಿಯೋ ವೈರಲ್

ಇನ್ನು ಇದಕ್ಕೂ ಮೊದಲು ಲಂಕಾ ಎದುರಿನ ಮೊದಲ ಟಿ20 ಪಂದ್ಯದಿಂದ ಹೊರಗುಳಿದಿದ್ದ ಆರ್ಶದೀಪ್ ಸಿಂಗ್‌ಗೆ ಎರಡನೇ ಪಂದ್ಯದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಲಾಗಿತ್ತು. ಆರ್ಶದೀಪ್ ಸಿಂಗ್ ಕೇವಲ 2 ಓವರ್‌ನಲ್ಲಿ ದಾಖಲೆಯ 5 ನೋಬಾಲ್ ಮಾಡಿ ದುಬಾರಿಯಾದರು. ಹೀಗಿದ್ದೂ ದ್ರಾವಿಡ್‌, ತಮ್ಮ ತಂಡದ ಯುವ ಬೌಲರ್‌ಗಳನ್ನು ಸಮರ್ಥಿಸಿದ್ದು, ಹೆಚ್ಚು ಟೀಕೆ-ಟಿಪ್ಪಣಿ ಮಾಡಲಿಲ್ಲ.

"ಯಾವುದೇ ಬೌಲರ್‌ಗಳು ಕೂಡಾ ಯಾವುದೇ ಮಾದರಿಯ ಕ್ರಿಕೆಟ್‌ನಲ್ಲಿ ನೋಬಾಲ್ ಅಥವಾ ವೈಡ್ ಹಾಕಬೇಕು ಎಂದು ಬಯಸುವುದಿಲ್ಲ. ಅದರಲ್ಲೂ ಟಿ20 ಕ್ರಿಕೆಟ್ ಮಾದರಿಯಲ್ಲಿ ಈ ರೀತಿಯಾದರೆ ದೊಡ್ಡ ಹೊಡೆತ ಬೀಳುತ್ತದೆ. ಈ ಹುಡುಗರ ಪ್ರದರ್ಶನದ ಬಗ್ಗೆ ನಾವು ಸ್ವಲ್ಪ ತಾಳ್ಮೆಯಿಂದ ಇರಬೇಕು. ತಂಡದಲ್ಲಿ ಅದರಲ್ಲೂ ಬೌಲಿಂಗ್ ವಿಭಾಗದಲ್ಲಿ ಸಾಕಷ್ಟು ಯುವ ಆಟಗಾರರು ಕಣಕ್ಕಿಳಿದಿದ್ದಾರೆ. ಅವರೆಲ್ಲಾ ಇನ್ನು ಸಣ್ಣ ಹುಡುಗರು. ಅವರಿಗೆ ಇಂತಹ ಪಂದ್ಯಗಳ ಅನುಭವವಾಗಬೇಕು. ಅವರೆಲ್ಲ ಸಾಕಷ್ಟು ಕಷ್ಟಪಟ್ಟು ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತಿದ್ದಾರೆ. ಅವರಿಗೆ ಉತ್ತಮ ವಾತಾವರಣ ಕಲ್ಪಿಸಿಕೊಟ್ಟರೇ, ಅವರಿಂದ ಮತ್ತಷ್ಟು ಉತ್ತಮ ಫಲಿತಾಂಶ ನಿರೀಕ್ಷಿಸಬಹುದಾಗಿದೆ" ಎಂದು ಪಂದ್ಯ ಮುಕ್ತಾಯದ ಬಳಿಕ ರಾಹುಲ್ ದ್ರಾವಿಡ್ ಹೇಳಿದ್ದಾರೆ.

click me!