
ಬೆಂಗಳೂರು: ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಬೇಕು ಅಂದ್ರೆ ಕೇವಲ ಪ್ರತಿಭೆ ಇದ್ದರಷ್ಟೇ ಸಾಲದು, ಅದೃಷ್ಟವೂ ಬೇಕಾಗುತ್ತದೆ. ಭಾರತ ತಂಡದಲ್ಲಿ ಸ್ಥಾನ ಪಡೆಯಲು ಸ್ಪರ್ಧೆ ಹೇಗಿದೆ ಅಂದ್ರೆ, ಅತ್ಯುತ್ತಮ ಆಟಗಾರ ಕೂಡಾ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲು ಪರದಾಡಬೇಕಾದ ಪರಿಸ್ಥಿತಿಯಿದೆ. ಒಂದು ವೇಳೆ ತಂಡದಲ್ಲಿ ಸ್ಥಾನ ಸಿಕ್ಕಿದರೂ, ಅದನ್ನು ಉಳಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ದೇಶಿ ಕ್ರಿಕೆಟ್‌ನಲ್ಲಿ ಅಸಾಧಾರಣ ಪ್ರದರ್ಶನ ತೋರಿದ ಹೊರತಾಗಿಯೂ ಹಲವು ಪ್ರತಿಭಾನ್ವಿತ ಕ್ರಿಕೆಟಿಗರು ಟೀಂ ಇಂಡಿಯಾದಲ್ಲಿ ನೆಲೆ ಕಂಡುಕೊಳ್ಳಲು ವಿಫಲವಾದ ಹಲವಾರು ಕ್ರಿಕೆಟಿಗರಿದ್ದಾರೆ. ಅಂತವರಲ್ಲಿ ಫೈಝ್ ಫಝಲ್ ಕೂಡಾ ಒಬ್ಬರು.
ಫೈಝ್ ಫಝಲ್ ದೇಶಿ ಕ್ರಿಕೆಟ್‌ನಲ್ಲಿ ವಿದರ್ಭ ಹಾಗೂ ರೈಲ್ವೇಸ್ ತಂಡವನ್ನು ಪ್ರತಿನಿಧಿಸಿದ್ದರು. 2015-16ರ ದೇಶಿ ಋತುವಿನಲ್ಲಿ ಈ ಎಡಗೈ ಬ್ಯಾಟರ್ 44.62ರ ಬ್ಯಾಟಿಂಗ್ ಸರಾಸರಿಯಲ್ಲಿ 3 ಶತಕ ಸಹಿತ 714 ರನ್ ಚಚ್ಚಿದ್ದರು. ಫೈಝ್ ಫಝಲ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 138 ಪಂದ್ಯಗಳನ್ನಾಡಿ 41ರ ಬ್ಯಾಟಿಂಗ್ ಸರಾಸರಿಯಲ್ಲಿ 9,184 ರನ್ ಸಿಡಿಸಿದ್ದರು.
ದೇಶಿ ಕ್ರಿಕೆಟ್‌ನಲ್ಲಿ ಫೈಝ್ ಫಝಲ್ ಅದ್ಭುತ ಪ್ರದರ್ಶನ ತೋರಿದ ಬೆನ್ನಲ್ಲೇ, 2016ರ ಜಿಂಬಾಬ್ವೆ ಪ್ರವಾಸಕ್ಕೆ ಭಾರತ ತಂಡಕ್ಕೆ ಆಯ್ಕೆಯಾದರು. ಫೈಝ್ ಫಝಲ್ ತಮ್ಮ 30ನೇ ವಯಸ್ಸಿಗೆ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದರು. ಜೂನ್ 15,2016ರಲ್ಲಿ ಜಿಂಬಾಬ್ವೆ ವಿರುದ್ದ ಫೈಝ್ ಫಝಲ್ 61 ಎಸೆತಗಳನ್ನು ಎದುರಿಸಿ ಅಜೇಯ 55 ರನ್ ಸಿಡಿಸಿದರು. ಗೆಲ್ಲಲು 125 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಭಾರತ ಸುಲಭ ಗೆಲುವು ಸಾಧಿಸಿತು. ಮತ್ತೊಂದು ತುದಿಯಲ್ಲಿ ಕೆ ಎಲ್ ರಾಹುಲ್ ಅಜೇಯ 63 ರನ್ ಸಿಡಿಸಿದ್ದರು. ಇನ್ನು ದುರಂತ ಸಂಗತಿಯೆಂದರೇ, ಇದಾದ ಬಳಿಕ ಫೈಝ್ ಫಝಲ್ ಟೀಂ ಇಂಡಿಯಾ ಪರ ಒಂದೇ ಒಂದು ಅಂತಾರಾಷ್ಟ್ರೀಯ ಪಂದ್ಯವನ್ನಾಡುವ ಅವಕಾಶ ಸಿಗಲಿಲ್ಲ.
2021ರ ಫೆಬ್ರವರಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಫೈಝ್ ಫಝಲ್, "ನಾಳೆ ಒಂದು ಯುಗದ ಅಂತ್ಯವಾಗಲಿದೆ; ಏಕೆಂದರೆ, 21 ಅದ್ಭುತ ವರ್ಷಗಳ ಹಿಂದೆ ನನ್ನ ಪ್ರಥಮ ದರ್ಜೆ ಕ್ರಿಕೆಟ್ ಪಯಣ ಆರಂಭವಾದ ನಾಗ್ಪುರದ ಮೈದಾನಕ್ಕೆ ನಾನು ಕೊನೆಯ ಬಾರಿಗೆ ಕಾಲಿಡಲಿದ್ದೇನೆ," ಎಂದು ಆಗ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಬರೆದಿದ್ದರು.
ಇದು ಮರೆಯಲಾಗದಂತಹ ಪಯಣವಾಗಿದ್ದು, ನಾನು ಎಂದೆಂದಿಗೂ ಪ್ರೀತಿಯಿಂದ ನೆನಪಿಸಿಕೊಳ್ಳುವ ಅಮೂಲ್ಯವಾದ ನೆನಪುಗಳಿಂದ ಕೂಡಿದೆ. ಭಾರತೀಯ ಕ್ರಿಕೆಟ್ ತಂಡ ಮತ್ತು ವಿದರ್ಭ ತಂಡಗಳೆರಡನ್ನೂ ಪ್ರತಿನಿಧಿಸಿರುವುದು ನನ್ನ ಜೀವನದ ಅತ್ಯಂತ ದೊಡ್ಡ ಗೌರವವಾಗಿದೆ; ಆ ಕ್ರಿಕೆಟ್ ಜರ್ಸಿಗಳನ್ನು ಧರಿಸುವುದು ಯಾವಾಗಲೂ ನನ್ನಲ್ಲಿ ಅಪಾರ ಹೆಮ್ಮೆಯ ಭಾವನೆಯನ್ನು ಮೂಡಿಸಿದೆ. ನನ್ನ ಪ್ರೀತಿಯ 24ನೇ ಸಂಖ್ಯೆಯ ಜೆರ್ಸಿಗೆ ವಿದಾಯ. ನಿನ್ನನ್ನು ತುಂಬಾನೆ ಮಿಸ್ ಮಾಡಿಕೊಳ್ಳುತ್ತೇನೆ ಎಂದು ಭಾವುಕವಾಗಿ ಫೈಝ್ ಫಝಲ್ ಬರೆದುಕೊಂಡಿದ್ದರು.
ಮುಂದುವರೆದು, ಒಂದು ಅಧ್ಯಾಯ ಮುಕ್ತಾಯಗೊಂಡು ಮತ್ತೊಂದು ಕಾಯುತ್ತಿರುವಾಗ, ನನ್ನ ವೃತ್ತಿಪರ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳುವುದು ನನ್ನಲ್ಲಿ ಮಿಶ್ರ ಭಾವನೆಗಳನ್ನು ಮೂಡಿಸುತ್ತಿದೆ; ಆದರೂ, ಮುಂದಿರುವ ಹೊಸ ಸಾಹಸಗಳನ್ನು ಅಪ್ಪಿಕೊಳ್ಳಲು ನಾನು ಉತ್ಸುಕನಾಗಿದ್ದೇನೆ ಎಂದು ಭಾವನಾತ್ಮಕ ವಿದಾಯದ ಸಂದೇಶ ರವಾನಿಸಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.