ವಿಶ್ವಕಪ್‌ ಹೀರೋನನ್ನೇ ಕೈಬಿಟ್ಟು ಸ್ಪೋಟಕ ಆಟಗಾರನಿಗೆ ಮಣೆ ಹಾಕಿದ ಇಂಗ್ಲೆಂಡ್..! 2023ರ ವಿಶ್ವಕಪ್‌ಗೆ ಹೊಸದಾಗಿ ತಂಡ ಪ್ರಕಟ

By Naveen Kodase  |  First Published Sep 18, 2023, 9:15 AM IST

2019ರ ವಿಶ್ವಕಪ್‌ ಟೂರ್ನಿಯಲ್ಲಿ ಇಂಗ್ಲೆಂಡ್ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದ ಜೇಸನ್ ರಾಯ್ ಹಾಗೂ ಹ್ಯಾರಿ ಬ್ರೂಕ್ ನಡುವೆ ಯಾರಿಗೆ ಸ್ಥಾನ ನೀಡಬೇಕು ಎನ್ನುವ ಗೊಂದಲಕ್ಕೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಒಳಗಾಗಿತ್ತು. ಕೊನೆಗೂ ರಾಯ್ ಕೈಬಿಟ್ಟು ಬ್ರೂಕ್‌ಗೆ ಅವಕಾಶ ನೀಡಿದೆ. 


ಲಂಡನ್(ಸೆ.18): ಹಾಲಿ ಚಾಂಪಿಯನ್ ಇಂಗ್ಲೆಂಡ್‌ ತಂಡವು ಇದೀಗ ಸಾಕಷ್ಟು ಅಳೆದು ತೂಗಿ ಮುಂಬರುವ 2023ರ ಏಕದಿನ ವಿಶ್ವಕಪ್ ಟೂರ್ನಿಗೆ ಅಂತಿಮ 15 ಆಟಗಾರರನ್ನೊಳಗೊಂಡ ತಂಡ ಪ್ರಕಟಿಸಲಾಗಿದೆ. ಈ ಪೈಕಿ 2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಚಾಂಪಿಯನ್ ಪಟ್ಟ ಅಲಂಕರಿಸಲು ಪ್ರಮುಖ ಪಾತ್ರವಹಿಸಿದ್ದ ಸ್ಪೋಟಕ ಆರಂಭಿ ಬ್ಯಾಟರ್ ಜೇಸನ್ ರಾಯ್ ಅವರನ್ನು ಕೈಬಿಟ್ಟು, ಇದೀಗ 24 ವರ್ಷದ ಯುವ ಬ್ಯಾಟರ್ ಹ್ಯಾರಿ ಬ್ರೂಕ್‌ಗೆ ಇಂಗ್ಲೆಂಡ್ 15 ಆಟಗಾರರನ್ನೊಳಗೊಂಡ ವಿಶ್ವಕಪ್ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ.

ಹೌದು, ಈ ಮೊದಲು ಇಂಗ್ಲೆಂಡ್ ವಿಶ್ವಕಪ್ ಸಂಭಾವ್ಯ ತಂಡದಲ್ಲಿ ಜೇಸನ್ ರಾಯ್‌ಗೆ ಮಣೆ ಹಾಕಲಾಗಿತ್ತು, ಆದರೆ ಅಚ್ಚರಿ ಎನ್ನುವಂತೆ ಹ್ಯಾರಿ ಬ್ರೂಕ್ ಅವರನ್ನು ಕೈಬಿಡಲಾಗಿತ್ತು. ಆದರೆ ಇದೀಗ ಕೊನೆಯ ಕ್ಷಣದ ಬದಲಾವಣೆ ಎನ್ನುವಂತೆ ಜೇಸನ್ ರಾಯ್ ಕೈಬಿಟ್ಟು, ಹ್ಯಾರಿ ಬ್ರೂಕ್‌ಗೆ ಇಂಗ್ಲೆಂಡ್ ತಂಡದಲ್ಲಿ ಮಣೆಹಾಕಲಾಗಿದೆ. ನ್ಯೂಜಿಲೆಂಡ್ ಎದುರು ನೀರಸ ಪ್ರದರ್ಶನ ತೋರಿದ ಹೊರತಾಗಿಯೂ ಹ್ಯಾರಿ ಬ್ರೂಕ್‌ಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡಲಾಗಿದೆ. ಇಂಗ್ಲೆಂಡ್‌ನ ಸ್ಪೋಟಕ ಬ್ಯಾಟರ್ ಹ್ಯಾರಿ ಬ್ರೂಕ್, ಭಾರತದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಹಾಗೂ ದಿ ಹಂಡ್ರೆಡ್ ಟೂರ್ನಿಯಲ್ಲಿ ತೋರಿದ ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯು ಇದೀಗ ಬ್ರೂಕ್‌ಗೆ 15 ಆಟಗಾರರ ತಂಡದಲ್ಲಿ ಸ್ಥಾನ ಕಲ್ಪಿಸಿದೆ.

Tap to resize

Latest Videos

21 ರನ್‌ಗೆ 6 ವಿಕೆಟ್‌: ಭಾರತೀಯರ ಹೃದಯ ಗೆದ್ದ ಮೊಹಮ್ಮದ್ ಸಿರಾಜ್‌ ಹೆಸರಿಗೆ ಹಲವು ಅಪರೂಪದ ದಾಖಲೆ ಸೇರ್ಪಡೆ

ಈ ತಿಂಗಳ ಆರಂಭದಲ್ಲಿ ನಡೆದ ನ್ಯೂಜಿಲೆಂಡ್‌ ವಿರುದ್ದದ 4 ಪಂದ್ಯಗಳ ಏಕದಿನ ಸರಣಿಗೆ ಜೇಸನ್ ರಾಯ್ ಗೈರಾಗಿದ್ದರು. ಬೆನ್ನು ನೋವಿನ ಸೆಳೆತದಿಂದ ಬಳಲುತ್ತಿರುವ ಜೇಸನ್‌ ರಾಯ್, ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. 2019ರ ವಿಶ್ವಕಪ್‌ ಟೂರ್ನಿಯಲ್ಲಿ ಇಂಗ್ಲೆಂಡ್ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದ ಜೇಸನ್ ರಾಯ್ ಹಾಗೂ ಹ್ಯಾರಿ ಬ್ರೂಕ್ ನಡುವೆ ಯಾರಿಗೆ ಸ್ಥಾನ ನೀಡಬೇಕು ಎನ್ನುವ ಗೊಂದಲಕ್ಕೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಒಳಗಾಗಿತ್ತು. ಕೊನೆಗೂ ರಾಯ್ ಕೈಬಿಟ್ಟು ಬ್ರೂಕ್‌ಗೆ ಅವಕಾಶ ನೀಡಿದೆ. 

Our 1⃣5⃣ 😍

Are we excited yet?! 😆 | pic.twitter.com/u5FOly7rAk

— England Cricket (@englandcricket)

ಇನ್ನುಳಿದಂತೆ ಇದೊಂದು ಬದಲಾವಣೆ ಹೊರತುಪಡಿಸಿ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಆದಿಲ್ ರಶೀದ್ ಹಾಗೂ ಮಾರ್ಕ್ ವುಡ್ ಕೂಡಾ ಇಂಗ್ಲೆಂಡ್ ವಿಶ್ವಕಪ್ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಜೇಸನ್ ರಾಯ್ ಅನುಪಸ್ಥಿತಿಯಲ್ಲಿ ಡೇವಿಡ್ ಮಲಾನ್ ಆರಂಭಿಕ ಬ್ಯಾಟರ್ ಆಗಿ ಯಶಸ್ಸು ಕಂಡಿದ್ದಾರೆ. ಡೇವಿಡ್ ಮಲಾನ್ ನ್ಯೂಜಿಲೆಂಡ್ ಎದುರಿನ ಪಂದ್ಯದಲ್ಲಿ 277 ರನ್ ಬಾರಿಸುವ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಕೇವಲ 6.1 ಓವರ್‌ನಲ್ಲಿ ಗುರಿ ತಲುಪಿ ದಾಖಲೆ, 8ನೇ ಏಷ್ಯಾಕಪ್ ಟ್ರೋಫಿ ಗೆದ್ದ ಭಾರತ!

ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವು ಅಕ್ಟೋಬರ್ 05ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ರನ್ನರ್ ಅಪ್ ನ್ಯೂಜಿಲೆಂಡ್ ಎದುರು ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯ ವಹಿಸಲಿದೆ.

2023ರ ವಿಶ್ವಕಪ್ ಟೂರ್ನಿಗೆ ಇಂಗ್ಲೆಂಡ್ ಕ್ರಿಕೆಟ್ ತಂಡ ಹೀಗಿದೆ ನೋಡಿ:

ಜೋಸ್ ಬಟ್ಲರ್(ನಾಯಕ), ಮೋಯಿನ್ ಅಲಿ, ಗುಸ್ ಅಟ್ಕಿನ್‌ಸನ್, ಜಾನಿ ಬೇರ್‌ಸ್ಟೋವ್, ಹ್ಯಾರಿ ಬ್ರೂಕ್, ಸ್ಯಾಮ್ ಕರ್ರನ್, ಲಿಯಾಮ್ ಲಿವಿಂಗ್‌ಸ್ಟೋನ್, ಡೇವಿಡ್ ಮಲಾನ್, ಆದಿಲ್ ರಶೀದ್, ಜೋ ರೂಟ್, ಬೆನ್ ಸ್ಟೋಕ್ಸ್, ರೀಸ್ ಟಾಪ್ಲೆ, ಡೇವಿಡ್ ವಿಲ್ಲಿ, ಮಾರ್ಕ್ ವುಡ್, ಕ್ರಿಸ್ ವೋಕ್ಸ್.

click me!