Commonwealth Games: ಚಿನ್ನದ ಬೇಟೆಯಾಡಲು ಸಜ್ಜಾದ ಹರ್ಮನ್‌ಪ್ರೀತ್ ಕೌರ್ ಪಡೆ..!

By Naveen KodaseFirst Published Aug 7, 2022, 2:22 PM IST
Highlights

ಕಾಮನ್‌ವೆಲ್ತ್‌ ಗೇಮ್ಸ್‌ ಮಹಿಳಾ ಕ್ರಿಕೆಟ್ ಫೈನಲ್‌ಗೆ ಕ್ಷಣಗಣನೆ
ಚಿನ್ನದ ಪದಕಕ್ಕಾಗಿ ಭಾರತ-ಆಸ್ಟ್ರೇಲಿಯಾ ಕಾದಾಟ
ಎಜ್‌ಬಾಸ್ಟನ್‌ನಲ್ಲಿ ನಡೆಯಲಿರುವ ಫೈನಲ್‌ ಪಂದ್ಯ

ಬರ್ಮಿಂಗ್‌ಹ್ಯಾಮ್‌(ಆ.07): ಚೊಚ್ಚಲ ಬಾರಿಗೆ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಪಾಲ್ಗೊಂಡಿರುವ ಭಾರತ ಮಹಿಳಾ ಹಾಕಿ ತಂಡವು ಮೊದಲ ಪ್ರಯತ್ನದಲ್ಲೇ ರೋಚಕವಾಗಿ ಫೈನಲ್ ಪ್ರವೇಶಿಸಿದ್ದು, ಇಂದು ನಡೆಯಲಿರುವ ಫೈನಲ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಚಿನ್ನದ ಪದಕ ಜಯಿಸಲು ಎದುರು ನೋಡುತ್ತಿದೆ. ಸೂಪರ್ ಸಂಡೇಯಲ್ಲಿಂದು ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ಚಿನ್ನದ ಪದಕಕ್ಕಾಗಿ ಜಿದ್ದಾಜಿದ್ದಿನ ಪೈಪೋಟಿಯನ್ನು ನಿರೀಕ್ಷಿಸಲಾಗುತ್ತಿದೆ.

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಫೈನಲ್ ಪಂದ್ಯವು ಎಜ್‌ಬಾಸ್ಟನ್‌ನಲ್ಲಿ ಭಾರತೀಯ ಕಾಲಮಾನ ರಾತ್ರಿ 9.30ರಿಂದ ಆರಂಭವಾಗಲಿದೆ. ಒಟ್ಟಿನಲ್ಲಿ ಮೇಲ್ನೋಟಕ್ಕೆ ಮೆಗ್‌ ಲ್ಯಾನಿಂಗ್ ನೇತೃತ್ವದ ಆಸ್ಟ್ರೇಲಿಯಾ ತಂಡವು ಸಾಕಷ್ಟು ಬಲಿಷ್ಠವಾಗಿ ಗುರುತಿಸಿಕೊಂಡಿದ್ದರೂ ಸಹಾ, ಹರ್ಮನ್‌ಪ್ರೀತ್ ಕೌರ್ ಪಡೆ ದೈತ್ಯ ಸಂಹಾರ ಮಾಡಿ ಚಿನ್ನದ ಪದಕಕ್ಕೆ ಕೊರಳೊಡ್ಡಲು ಹಾತೊರೆಯುತ್ತಿದೆ. 'ಎ' ಗುಂಪಿನಲ್ಲಿ ಸ್ಥಾನ ಪಡೆದಿದ್ದ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಇದೀಗ ಮತ್ತೊಮ್ಮೆ ಮುಖಾಮುಖಿಗೆ ಸಜ್ಜಾಗಿವೆ. 

ಸೆಮಿಫೈನಲ್‌ನಲ್ಲಿ ಭಾರತ ತಂಡವು ಆತಿಥೇಯ ಇಂಗ್ಲೆಂಡ್ ಎದುರು 4 ರನ್‌ಗಳ ರೋಚಕ ಗೆಲುವು ಸಾಧಿಸುವ ಮೂಲಕ ಪದಕ ಸುತ್ತಿಗೆ ಲಗ್ಗೆಯಿಟ್ಟಿದ್ದರೇ, ಇನ್ನೊಂದೆಡೆ ಆಸ್ಟ್ರೇಲಿಯಾ ತಂಡವು ಸೆಮೀಸ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಬಗ್ಗುಬಡಿದು ಫೈನಲ್ ಪ್ರವೇಶಿಸಿದೆ.  ಭಾರತ ತಂಡವು ಈ ಮೊದಲು 2018 ಹಾಗೂ 2020ರ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ ಎದುರು ಮುಖಾಮುಖಿಯಾಗಿತ್ತು. ಆದರೆ ಈ ಬಾರಿ ಆಕ್ರಮಣಕಾರಿ ಆಟವಾಡುವ ಮೂಲಕ ಭಾರತ ಫೈನಲ್‌ಗೆ ಲಗ್ಗೆಯಿಟ್ಟಿದೆ.

Commonwealth Games 2022: ಇತಿಹಾಸ ನಿರ್ಮಿಸಿದ ಭಾರತ ಮಹಿಳಾ ಕ್ರಿಕೆಟ್‌ ತಂಡ!

ಭಾರತ ತಂಡಕ್ಕೆ ಅಗ್ರಕ್ರಮಾಂಕದಲ್ಲಿ ಸ್ಮೃತಿ ಮಂಧನಾ ಹಾಗೂ ಶಫಾಲಿ ವರ್ಮಾ ಉತ್ತಮ ಆರಂಭ ಒದಗಿಸಿಕೊಡುತ್ತಿದ್ದಾರೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಜೆಮಿಯಾ ರೋಡ್ರಿಗಸ್, ಹರ್ಮನ್‌ಪ್ರೀತ್ ಕೌರ್, ದೀಪ್ತಿ ಶರ್ಮಾ ಉತ್ತಮ ಫಾರ್ಮ್‌ನಲ್ಲಿರುವುದು ತಂಡದ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ.  ಬಲಿಷ್ಠ ಆಸ್ಟ್ರೇಲಿಯಾ ಎದುರು ಫೈನಲ್‌ನಲ್ಲಿ ಗೆಲುವು ಸಾಧಿಸಬೇಕಿದ್ದರೇ ಹರ್ಮನ್‌ಪ್ರೀತ್ ಪಡೆ 100% ಪ್ರದರ್ಶನ ತೋರಬೇಕಿದೆ.

ತಂಡಗಳು ಹೀಗಿವೆ ನೋಡಿ

ಭಾರತ

ಹರ್ಮನ್‌ಪ್ರೀತ್ ಕೌರ್(ನಾಯಕಿ), ಸ್ಮೃತಿ ಮಂಧನಾ(ಉಪನಾಯಕಿ), ಶಫಾಲಿ ವರ್ಮಾ, ಮೆಘನಾ ಸಿಂಗ್, ತಾನಿಯಾ ಭಾಟಿಯಾ, ಯಾಶ್ತಿಕಾ ಭಾಟಿಯಾ, ದೀಪ್ತಿ ಶರ್ಮಾ, ರಾಜೇಶ್ವರಿ ಗಾಯಕ್ವಾಡ್, ಪೂಜಾ ವಸ್ತ್ರಾಕರ್, ರೆಣುಕಾ ಠಾಕೂರ್, ಜೆಮಿಯಾ ರೋಡ್ರಿಗಸ್, ರಾಧಾ ಯಾದವ್, ಹರ್ಲೀನ್ ಡಿಯೋಲ್, ಸ್ನೆಹ್ ರಾಣಾ.

ಆಸ್ಟ್ರೇಲಿಯಾ:

ಮೆಗ್‌ ಲ್ಯಾನಿಂಗ್(ನಾಯಕ), ರಚೇಲ್ ಹೇಯ್ನ್ಸ್‌(ಉಪನಾಯಕ), ಡಾರ್ಸಿ ಬ್ರೌನ್, ನಿಕೋಲಾ ಕ್ಯಾರಿ, ಆಶ್ಲೆ ಗಾರ್ಡ್ನರ್, ಗ್ರೇಸ್ ಹ್ಯಾರಿಸ್, ಆಲೀಸಾ ಹೀಲಿ, ಜೆಸ್ ಜಾನ್ಸನ್, ಅಲ್ನಾ ಕಿಂಗ್, ತಾಹ್ಲಿಯ ಮೆಗ್ರಾಥ್, ಬೆನ್ ಮೂನಿ, ಏಲಿಸಾ ಪೆರ್ರಿ, ಮೆಘನ್ ಶೂಟ್, ಅನಾಬೆಲ್‌ ಸದರ್ಲ್ಯಾಂಡ್, ಅಮಂಡ ಜೇಡ್ ವೆಲ್ಲಿಂಗ್‌ಟನ್.

click me!