ಕಿವೀಸ್ ಎದುರು ಹೀನಾಯ ಸೋಲು ಕಂಡ ಪಾಕ್; ಭಾರತ ವನಿತೆಯರ ಸೆಮಿಫೈನಲ್‌ ಕನಸು ಭಗ್ನ!

By Naveen KodaseFirst Published Oct 15, 2024, 8:24 AM IST
Highlights

ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ತಂಡದ ಟಿ20 ವಿಶ್ವಕಪ್ ಕನಸು ನುಚ್ಚುನೂರಾಗಿದೆ. ಆಸ್ಟ್ರೇಲಿಯಾ ಹಾಗೂ ಕಿವೀಸ್ ತಂಡಗಳು 'ಎ' ಗುಂಪಿನಲ್ಲಿ ಸೆಮಿಫೈನಲ್ ಪ್ರವೇಶಿಸಿವೆ

ದುಬೈ: ಚೊಚ್ಚಲ ಐಸಿಸಿ ಟ್ರೋಫಿ ಗೆಲ್ಲುವ ಕನಸಿನೊಂದಿಗೆ ಯುಎಇ ವಿಮಾನವೇರಿದ್ದ ಭಾರತ ಮಹಿಳಾ ತಂಡ ಬರಿಗೈಲಿ ತವರಿಗೆ ಹಿಂದಿರುಗಲಿದೆ. 9ನೇ ಆವೃತ್ತಿ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸುವ ನಿರೀಕ್ಷೆಯಲ್ಲಿದ್ದ ಹರ್ಮನ್‌ಪ್ರೀತ್‌ ಕೌರ್‌ ನಾಯಕತ್ವದ ಭಾರತ ಗುಂಪು ಹಂತದಲ್ಲೇ ಹೊರಬಿದ್ದಿದೆ. ನ್ಯೂಜಿಲೆಂಡ್‌ ಸೋಲಲಿ, ಪಾಕಿಸ್ತಾನ ಗೆಲ್ಲಲಿ ಎಂದು ಹಾರೈಸಿದ್ದ ಭಾರತೀಯ ಕ್ರಿಕೆಟ್‌ ಅಭಿಮಾನಿಗಳೂ ನಿರಾಸೆ ಅನುಭವಿಸಿದ್ದಾರೆ.

ಭಾರತ ಗುಂಪು ಹಂತದ ತನ್ನ ಕೊನೆ ಪಂದ್ಯವನ್ನು ಭಾನುವಾರವೇ ಆಡಿದ್ದರೂ, ಸೋಮವಾರದ ನ್ಯೂಜಿಲೆಂಡ್‌ ಹಾಗೂ ಪಾಕಿಸ್ತಾನ ಪಂದ್ಯದ ಮೇಲೆ ತಂಡದ ಸೆಮೀಸ್‌ ಭವಿಷ್ಯ ನಿರ್ಧಾರವಾಯಿತು. ನ್ಯೂಜಿಲೆಂಡ್‌ ವಿರುದ್ಧ ಪಾಕಿಸ್ತಾನ 54 ರನ್‌ಗಳಿಂದ ಹೀನಾಯವಾಗಿ ಸೋಲುವ ಮೂಲಕ ಭಾರತದ ಕನಸು ನುಚ್ಚುನೂರಾಯಿತು. ಒಂದು ವೇಳೆ ಪಾಕಿಸ್ತಾನ ಕಡಿಮೆ ಅಂತರದಲ್ಲಿ ಗೆದ್ದಿದ್ದರೆ ಭಾರತ ಸೆಮಿಫೈನಲ್‌ ಪ್ರವೇಶಿಸುತ್ತಿತ್ತು.

Joy in the New Zealand camp as they make the Women's semi-finals for the first time since 2016 👏 pic.twitter.com/2Ppq8kycXt

— ICC (@ICC)

Latest Videos

ಸೋಮವಾರದ ಪಂದ್ಯದ ಮೂಲಕ ಭಾರತ, ನ್ಯೂಜಿಲೆಂಡ್‌, ಪಾಕಿಸ್ತಾನಕ್ಕೂ ಸೆಮೀಸ್‌ಗೇರುವ ಅವಕಾಶವಿತ್ತು. ಒಂದು ವೇಳೆ ಪಾಕಿಸ್ತಾನ ದೊಡ್ಡ ಅಂತರದಲ್ಲಿ ಗೆದ್ದಿದ್ದರೆ, ಆಗ ಭಾರತ ಹಾಗೂ ನ್ಯೂಜಿಲೆಂಡ್‌ ಸೆಮಿಫೈನಲ್‌ ರೇಸ್‌ನಿಂದ ಹೊರಬೀಳುತ್ತಿದ್ದವು. ಆದರೆ ನ್ಯೂಜಿಲೆಂಡ್‌ ಗೆದ್ದ ಕಾರಣ ಭಾರತ ಹಾಗೂ ಪಾಕಿಸ್ತಾನ ಗುಂಪು ಹಂತದಲ್ಲೇ ಹೊರಬಿದ್ದವು.

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕ ಸಿಡಿಸಿದ ಟೀಂ ಇಂಡಿಯಾ ಟಾಪ್ 5 ಬ್ಯಾಟರ್ಸ್

ಆಸ್ಟ್ರೇಲಿಯಾ ಎಲ್ಲಾ 4 ಪಂದ್ಯಗಳಲ್ಲಿ ಗೆದ್ದು 8 ಅಂಕಗಳೊಂದಿಗೆ ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ಸೆಮಿಫೈನಲ್‌ ಪ್ರವೇಶಿಸಿದರೆ, ನ್ಯೂಜಿಲೆಂಡ್‌ 6 ಅಂಕಗಳೊಂದಿಗೆ ಸೆಮೀಸ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿತು.

ಹೀನಾಯ ಸೋಲು: ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ನ್ಯೂಜಿಲೆಂಡ್‌ 6 ವಿಕೆಟ್‌ ನಷ್ಟದಲ್ಲಿ 110 ರನ್‌ ಕಲೆಹಾಕಿತು. ಪಾಕಿಸ್ತಾನ ಉತ್ತಮ ದಾಳಿ ಸಂಘಟಿಸಿದರೂ ತಂಡದ ಕಳಪೆ ಫೀಲ್ಡಿಂಗ್‌ನ ಲಾಭ ಪಡೆದ ಕಿವೀಸ್‌ ಸ್ಪರ್ಧಾತ್ಮಕ ಮೊತ್ತ ಗಳಿಸಿತು. ಸುಜೀ ಬೇಟ್ಸ್‌ 28, ಬ್ರೂಕ್‌ ಹಾಲಿಡೇ 22, ನಾಯಕಿ ಸೋಫಿ ಡಿವೈನ್‌ 19 ರನ್‌ ಗಳಿಸಿ ತಂಡಕ್ಕೆ ಆಸರೆಯಾದರು. ನಶ್ರಾ ಸಂಧೂ 18 ರನ್‌ಗೆ 3 ವಿಕೆಟ್‌ ಕಿತ್ತರು.

111 ರನ್‌ ಗುರಿಯನ್ನು 10.4 ಓವರ್‌ಗಳಲ್ಲಿ ಬೆನ್ನತ್ತಿ ಗೆದ್ದಿದ್ದರೆ ಪಾಕಿಸ್ತಾನ ಸೆಮೀಸ್‌ಗೇರಬಹುದಿತ್ತು. ಆದರೆ ತಂಡ ಬ್ಯಾಟಿಂಗ್‌ ವೈಫಲ್ಯಕ್ಕೊಳಗಾಯಿತು. ಫಾತಿಮಾ ಸನಾ 21, ಮುನೀಬಾ ಅಲಿ 15 ರನ್ ಗಳಿಸಿದ್ದು ಬಿಟ್ಟರೆ ಇತರರು ಎರಡಂಕಿ ಮೊತ್ತ ಕಲೆಹಾಕಲು ವಿಫಲರಾದರು. 52ಕ್ಕೆ 5 ವಿಕೆಟ್‌ ಕಳೆದುಕೊಂಡಿದ್ದ ತಂಡ ಬಳಿಕ 4 ರನ್‌ ಸೇರಿಸುವಷ್ಟರಲ್ಲಿ ಉಳಿದ ಐದು ವಿಕೆಟ್‌ ನಷ್ಟಕ್ಕೊಳಗಾಯಿತು. ಅಮೇಲಿ ಕೇರ್‌ 3 ವಿಕೆಟ್‌ ಕಿತ್ತರು.

ಹಾಕಿ ಲೀಗ್‌: ಹರ್ಮನ್‌ಪ್ರೀತ್‌, ಅಭಿಷೇಕ್‌ಗೆ ಬಂಪರ್‌ ಮೊತ್ತ

2016ರ ಬಳಿಕ ಮೊದಲ ಸಲ ಭಾರತ ಸೆಮಿಫೈನಲ್‌ಗಿಲ್ಲ

ಭಾರತ 2016ರ ಬಳಿಕ ಇದೇ ಮೊದಲ ಬಾರಿ ಸೆಮಿಫೈನಲ್‌ ಪ್ರವೇಶಿಸಿತು. 2016ರಲ್ಲಿ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದ ತಂಡ ಬಳಿಕ ಮೂರೂ ಆವೃತ್ತಿಗಳಲ್ಲಿ ನಾಕೌಟ್‌ ಪ್ರವೇಶಿಸಿತ್ತು. ಆದರೆ ಈ ಬಾರಿ ಸೆಮಿಫೈನಲ್‌ ಪ್ರವೇಶಿಸಲು ತಂಡ ವಿಫಲವಾಗಿದೆ. ತಂಡ ಒಟ್ಟಾರೆ 9 ಆವೃತ್ತಿಗಳಲ್ಲಿ 5 ಬಾರಿ(2009, 2010, 2018, 2020, 2023) ಸೆಮಿಫೈನಲ್‌ ಪ್ರವೇಶಿಸಿದೆ. ಈ ಪೈಕಿ 2020ರಲ್ಲಿ ತಂಡ ಫೈನಲ್‌ಗೇರಿದ್ದರೂ, ಆಸ್ಟ್ರೇಲಿಯಾ ವಿರುದ್ಧ ಸೋತು ರನ್ನರ್‌-ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

04ನೇ ಬಾರಿ

ಭಾರತ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಗುಂಪು ಹಂತದಲ್ಲೇ ಹೊರಬಿದ್ದಿದ್ದು ಇದು 4ನೇ ಬಾರಿ. 2012, 2014, 2016ರಲ್ಲೂ ತಂಡ ನಾಕೌಟ್‌ಗೇರಿರಲಿಲ್ಲ.

8 ವರ್ಷಗಳ ಬಳಿಕ ಕಿವೀಸ್‌ ಸೆಮೀಸ್‌ಗೆ

ನ್ಯೂಜಿಲೆಂಡ್‌ ತಂಡ 8 ವರ್ಷಗಳ ಬಳಿಕ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದೆ. 2009, 2010ರಲ್ಲಿ ರನ್ನರ್‌-ಅಪ್‌ ಆಗಿದ್ದ ತಂಡ ಬಳಿಕ 2012, 2016ರಲ್ಲಿ ಸೆಮಿಫೈನಲ್‌ಗೇರಿತ್ತು. ಬಳಿಕ ಮೂರೂ ಆವೃತ್ತಿಗಳಲ್ಲಿ ತಂಡ ನಾಕೌಟ್‌ಗೇರಲು ವಿಫಲವಾಗಿತ್ತು.
 

click me!