
ಲಾಹೋರ್: ಪಾಕಿಸ್ತಾನದ ನೀಳಕಾಯದ ಮಾರಕ ವೇಗಿ ನಶೀಂ ಶಾ ಅವರ ನಿವಾಸದ ಮೇಲೆ ಆಗುಂತಕರ ಗುಂಪೊಂದು ಎಡಬಿಡದೇ ಬಂದೂಕಿನ ಮೂಲಕ ಗುಂಡಿನ ದಾಳಿ ನಡೆಸಿದ್ದಾರೆ. ಖೈಬರ್ ಫಖ್ತುನ್ಕ್ವಾ ಸಮೀಪದಲ್ಲಿರುವ ಅವರ ನಿವಾಸದಲ್ಲಿ ಸೋಮವಾರ(ನ.10)ರಂದು ಮಧ್ಯಾಹ್ನ 1.45ರ ಸುಮಾರಿಗೆ ಅವರ ಮನೆ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಅವರ ಮನೆಯ ಗೇಟ್ ಮೇಲೆ ಗುಂಡಿನ ದಾಳಿ ನಡೆದಿರುವ ಬಗ್ಗೆ ಸ್ಪಷ್ಟ ತುಣುಕುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿವೆ.
ಈ ಘಟನೆಯ ಕುರಿತಂತೆ ಪಾಕಿಸ್ತಾನದ ಸುದ್ದಿಸಂಸ್ಥೆ ಡಾನ್ ನ್ಯೂಸ್ ವರದಿ ಮಾಡಿದೆ. ಇದೇ ನಿವಾಸದಲ್ಲಿ ನಸೀಂ ಶಾ ಕುಟುಂಬಸ್ಥರು ವಾಸವಾಗಿದ್ದರು. ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ವರದಿಯಾಗಿದೆ. ಗುಂಡು ಹಾರಿಸಿದ ನಂತರ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದು, ಅವರ ಗುರುತು ಇನ್ನೂ ಪತ್ತೆಯಾಗಿಲ್ಲ. ಈ ಮಧ್ಯೆ, ಕ್ರಿಕೆಟಿಗನ ಮನೆಯ ಸುತ್ತಲೂ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ವರದಿಯಾಗಿದೆ.
ಘಟನೆಯ ನಂತರ, ಶಾ ಅವರ ತಂದೆ ಲೋವರ್ ದಿರ್ ಜಿಲ್ಲಾ ಪೊಲೀಸ್ ಅಧಿಕಾರಿ ತೈಮೂರ್ ಖಾನ್ ಅವರನ್ನು ಭೇಟಿ ಮಾಡಿ ದೂರು ದಾಖಲಿಸಿದ್ದಾರೆ. ಈ ಘಟನೆಯ ಸಂಬಂಧ ಐವರು ಶಂಕಿತರನ್ನು ಪಾಕಿಸ್ತಾನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಗುಂಡಿನ ದಾಳಿಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.
ಈ ನಡುವೆ ನಸೀಂ ಶಾ ಪ್ರಸ್ತುತ ಶ್ರೀಲಂಕಾ ವಿರುದ್ಧದ ಮುಂಬರುವ ಏಕದಿನ ಸರಣಿಗಾಗಿ ರಾವಲ್ಪಿಂಡಿಯಲ್ಲಿ ಪಾಕಿಸ್ತಾನ ತಂಡದಲ್ಲಿದ್ದಾರೆ. ಈ ತಿಂಗಳ ಕೊನೆಯಲ್ಲಿ ಜಿಂಬಾಬ್ವೆ ವಿರುದ್ಧದ ಟಿ 20 ಸರಣಿಗಾಗಿ ಅವರು ಪಾಕಿಸ್ತಾನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ನಸೀಂ ಶಾ ಪಾಕಿಸ್ತಾನ ಏಕದಿನ ಕ್ರಿಕೆಟ್ ತಂಡದ ನಾಯಕ ಶಾಹೀನ್ ಅಫ್ರಿದಿ ಹಾಗೂ ಹ್ಯಾರಿಸ್ ರೌಫ್ ಜತೆಗೆ ಪ್ರಮುಖ ತ್ರಿವಳಿ ವೇಗಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಪಾಕಿಸ್ತಾನ ಪರ ನಸೀಂ ಶಾ 20 ಟೆಸ್ಟ್, 32 ಏಕದಿನ ಹಾಗೂ 32 ಟಿ20 ಪಂದ್ಯಗಳನ್ನಾಡಿ ಕ್ರಮವಾಗಿ 60, 58 ಹಾಗೂ 28 ವಿಕೆಟ್ ಕಬಳಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.