ಈ 5 ಆಟಗಾರರನ್ನು ರಿಲೀಸ್ ಮಾಡಲು ರೆಡಿಯಾದ ಹಾಲಿ ಚಾಂಪಿಯನ್ ಆರ್‌ಸಿಬಿ! ಪಟ್ಟಿಯಲ್ಲಿದೆ ಒಂದು ಅಚ್ಚರಿ ಹೆಸರು!

Published : Nov 11, 2025, 12:23 PM IST
RCB Team with title

ಸಾರಾಂಶ

2026ರ ಐಪಿಎಲ್ ಮಿನಿ ಹರಾಜಿಗೂ ಮುನ್ನ, ಹಾಲಿ ಚಾಂಪಿಯನ್ ಆರ್‌ಸಿಬಿ ತಂಡವು ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ. ಕಳಪೆ ಪ್ರದರ್ಶನ ನೀಡಿದ ಲಿವಿಂಗ್‌ಸ್ಟೋನ್ ಮತ್ತು ಲುಂಗಿ ಎಂಗಿಡಿ ಸೇರಿದಂತೆ ಒಟ್ಟು 5 ಆಟಗಾರರನ್ನು ತಂಡದಿಂದ ಕೈಬಿಡುವ ಬಗ್ಗೆ ಫ್ರಾಂಚೈಸಿ ಚಿಂತನೆ ನಡೆಸುತ್ತಿದೆ.

ಬೆಂಗಳೂರು: 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಮಿನಿ ಹರಾಜಿಗೂ ಮುನ್ನ ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ನವೆಂಬರ್ 15ರಂದು ಡೆಡ್ ಲೈನ್ ನೀಡಲಾಗಿದೆ. ಇನ್ನು ಮಿನಿ ಹರಾಜು ಪ್ರಕ್ರಿಯೆಯು ಮುಂಬರುವ ಡಿಸೆಂಬರ್ 15ರಂದು ನಡೆಯುವ ಸಾಧ್ಯತೆಯಿದೆ. ಹೀಗಾಗಿ ಎಲ್ಲಾ 10 ಫ್ರಾಂಚೈಸಿಗಳು ಯಾವೆಲ್ಲಾ ಆಟಗಾರರನ್ನು ಉಳಿಸಿಕೊಳ್ಳಬೇಕು, ಯಾವ ಆಟಗಾರರನ್ನು ಕೈಬಿಡಬೇಕು ಎನ್ನುವ ಬಗ್ಗೆ ಸಾಕಷ್ಟು ಅಳೆದುತೂಗಿ ತೀರ್ಮಾನ ತೆಗೆದುಕೊಳ್ಳುತ್ತಿವೆ. ಇದೀಗ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಸಾಕಷ್ಟು ಸಮತೋಲಿತವಾಗಿಯೇ ಗುರುತಿಸಿಕೊಂಡಿದೆ. ಹೀಗಿದ್ದೂ ಆರ್‌ಸಿಬಿ ಫ್ರಾಂಚೈಸಿಯು ಈ ಐದು ಆಟಗಾರರನ್ನು ರಿಲೀಸ್ ಮಾಡುವ ಸಾಧ್ಯತೆ ದಟ್ಟವಾಗಿದೆ.

ಎರಡೂ ವಿದೇಶಿ ಆಟಗಾರರಿಗೆ ಗೇಟ್‌ಪಾಸ್ ಫಿಕ್ಸ್?

2025ರ ಐಪಿಎಲ್ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಇಂಗ್ಲೆಂಡ್ ಮೂಲದ ಸ್ಟಾರ್ ಆಲ್ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಅವರನ್ನು ಬರೋಬ್ಬರಿ 8.75 ಕೋಟಿ ರುಪಾಯಿ ನೀಡಿ ಖರೀದಿಸಿತ್ತು. ಆದರೆ ಆರ್‌ಸಿಬಿ ಪರ ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಲಿವಿಂಗ್‌ಸ್ಟೋನ್ 10 ಪಂದ್ಯಗಳನ್ನಾಡಿ 8 ಇನ್ನಿಂಗ್ಸ್‌ಗಳಿಂದ ಕೇವಲ 133.33ರ ಸ್ಟ್ರೈಕ್‌ರೇಟ್‌ನಲ್ಲಿ 112 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಇನ್ನು ಬೌಲಿಂಗ್‌ನಲ್ಲೂ ಜಾದೂ ಮಾಡಲು ಇಂಗ್ಲೆಂಡ್ ಆಲ್ರೌಂಡರ್ ವಿಫಲರಾಗಿದ್ದರು. ಹೀಗಾಗಿ ಮಿನಿ ಹರಾಜಿಗೂ ಮೊದಲು ಲಿವಿಂಗ್‌ಸ್ಟೋನ್ ಅವರನ್ನು ಆರ್‌ಸಿಬಿ ಫ್ರಾಂಚೈಸಿಯು ರಿಲೀಸ್ ಮಾಡುವ ಸಾಧ್ಯತೆ ದಟ್ಟವಾಗಿದೆ.

ಇನ್ನು ದಕ್ಷಿಣ ಆಫ್ರಿಕಾ ಮೂಲದ ವೇಗದ ಬೌಲರ್ ಲುಂಗಿ ಎಂಗಿಡಿ ಅವರನ್ನು ಆರ್‌ಸಿಬಿ ಫ್ರಾಂಚೈಸಿಯು ರಿಲೀಸ್ ಮಾಡುವ ಸಾಧ್ಯತೆಯಿದೆ. ಆರ್‌ಸಿಬಿ ಫ್ರಾಂಚೈಸಿಯು ಲುಂಗಿ ಎಂಗಿಡಿ ಅವರನ್ನು ಒಂದು ಕೋಟಿ ರುಪಾಯಿ ನೀಡಿ ಖರೀದಿಸಿತ್ತು. ಆರ್‌ಸಿಬಿ ಪರ ಎರಡು ಪಂದ್ಯಗಳನ್ನಷ್ಟೇ ಆಡಿದ್ದ ಎಂಗಿಡಿ 4 ವಿಕೆಟ್ ಕಬಳಿಸಿದ್ದರು. ಆದರೆ ಎಂಗಿಡಿ ಫ್ರಾಂಚೈಸಿ ಲೀಗ್ ಮಾದರಿಯ ತಂಡಕ್ಕೆ ಸರಿಯಾಗಿ ಫಿಟ್ ಆಗುತ್ತಿಲ್ಲ ಎನ್ನುವ ಆರೋಪವಿದೆ. ಇದರ ಜತೆಗೆ ಬೌಲಿಂಗ್‌ನಲ್ಲೂ ಎಂಗಿಡಿ ದುಬಾರಿಯಾಗುತ್ತಿರುವುದರಿಂದಾಗಿ ಎಂಗಿಡಿಗೆ ಗೇಟ್‌ಪಾಸ್ ಸಿಗುವ ಸಾಧ್ಯತೆಯಿದೆ.

ಇನ್ನು ದೇವದತ್ ಪಡಿಕ್ಕಲ್ ಗಾಯಗೊಂಡಿದ್ದರಿಂದ ಅವರ ಸ್ಥಾನಕ್ಕೆ ರಿಪ್ಲೇಸ್‌ಮೆಂಟ್ ಆಟಗಾರನಾಗಿ ತಂಡ ಕೂಡಿಕೊಂಡಿದ್ದ ಮಯಾಂಕ್ ಅಗರ್‌ವಾಲ್ ಅವರನ್ನು ಮತ್ತೊಮ್ಮೆ ತಂಡದಿಂದ ರಿಲೀಸ್ ಮಾಡುವ ಸಾಧ್ಯತೆಯಿದೆ. ದೇವದತ್ ಪಡಿಕ್ಕಲ್ ಫಿಟ್ ಆಗಿರುವುದರಿಂದ ಅಗರ್‌ವಾಲ್ ಅವರನ್ನು ಕೈಬಿಡಲು ಸಾಧ್ಯತೆಯಿದೆ.

ಕಠಿಣ ನಿರ್ಧಾರ ತೆಗೆದುಕೊಳ್ಳಲು ಮುಂದಾಗುತ್ತಾ ಆರ್‌ಸಿಬಿ?

ಚೊಚ್ಚಲ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿದ್ದರೂ ಸಹ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಕೆಲ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಯುವ ವೇಗದ ಬೌಲರ್ ರಸೀಕ್ ಧಾರ್ ಅವರಿಗೂ ಗೇಟ್‌ಪಾಸ್ ನೀಡುವ ಸಾಧ್ಯತೆಯಿದೆ. ರಸಿಕ್ ಧಾರ್ ಅವರಿಗೆ ಆರು ಕೋಟಿ ರುಪಾಯಿ ನೀಡಿ ಖರೀದಿಸಿತ್ತು. ಆದರೆ ರಸೀಕ್ ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬಂದಿರಲಿಲ್ಲ. ಇನ್ನು ಇದರ ಜತೆಗೆ ಆರ್‌ಸಿಬಿ ಫ್ರಾಂಚೈಸಿಯು ಸ್ವಪ್ನಿಲ್ ಸಿಂಗ್ ಅವರನ್ನು ರಿಲೀಸ್‌ ಮಾಡುವ ಸಾಧ್ಯತೆಯಿದೆ. ಸ್ವಪ್ನಿಲ್ ಸಿಂಗ್ ಅವರನ್ನು ಆರ್‌ಸಿಬಿ ಫ್ರಾಂಚೈಸಿಯು 50 ಲಕ್ಷ ರುಪಾಯಿ ನೀಡಿ ಖರೀದಿಸಿತ್ತು.

18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಜತ್ ಪಾಟೀದಾರ್ ನೇತೃತ್ವದ ಆರ್‌ಸಿಬಿ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್‌ ತಂಡವನ್ನು ಸೋಲಿಸಿ ಚೊಚ್ಚಲ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದು ಬೀಗಿತ್ತು. ಇದೀಗ ಆರ್‌ಸಿಬಿ ಬಹುತೇಕ ಕೋರ್ ಆಟಗಾರರನ್ನು ಉಳಿಸಿಕೊಂಡು ಕೆಲ ಆಟಗಾರರನ್ನು ಕೈಬಿಡುವ ಸಾಧ್ಯತೆಯಿದೆ. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ
ಕಾಂಗರೂ ನಾಡಲ್ಲಿ ಶತಕದ ಬರ ನೀಗಿಸಿಕೊಂಡ ಜೋ ರೂಟ್! ಕೊನೆಗೂ ತಪ್ಪಿದ ಹೇಡನ್ 'ಬೆತ್ತಲೆ ಸೇವೆ'!