ಡೆಲ್ಲಿ ಕ್ಯಾಪಿಟಲ್ಸ್ ಎದುರು ಗುಜರಾತ್ ಟೈಟಾನ್ಸ್ ರೋಚಕವಾಗಿ ಗೆಲ್ಲಿಸಿದ ಕನ್ನಡಿಗ ಪ್ರಸಿದ್ದ್ ಕೃಷ್ಣ!

Published : Apr 08, 2026, 11:49 PM IST
Prasidh Krishna

ಸಾರಾಂಶ

ಶುಭ್‌ಮನ್ ಗಿಲ್, ಬಟ್ಲರ್ ಮತ್ತು ಸುಂದರ್ ಅವರ ಅರ್ಧಶತಕಗಳ ನೆರವಿನಿಂದ ಗುಜರಾತ್ ಟೈಟಾನ್ಸ್ 210 ರನ್ ಗಳಿಸಿತು. ಈ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್, ಕೆ ಎಲ್ ರಾಹುಲ್ ಅವರ 92 ರನ್‌ಗಳ ಹೋರಾಟದ ಹೊರತಾಗಿಯೂ ಕೇವಲ ಒಂದು ರನ್‌ನಿಂದ ಸೋಲನುಭವಿಸಿತು. ಕೊನೆಯ ಓವರ್‌ನಲ್ಲಿ ಪ್ರಸಿದ್ದ ಕೃಷ್ಣ 13 ರನ್‌ಗಳನ್ನು ಯಶಸ್ವಿಯಾಗಿ ರಕ್ಷಿಸಿಕೊಂಡು ಗುಜರಾತ್‌ಗೆ ರೋಚಕ ಜಯ ತಂದುಕೊಟ್ಟರು.

ದೆಹಲಿ: ಕ್ರಿಕೆಟ್ ಅಭಿಮಾನಿಗಳನ್ನು ಅಕ್ಷರಶಃ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು ಗುಜರಾತ್ ಟೈಟಾನ್ಸ್ ಒಂದು ರನ್ ರೋಚಕ ಜಯ ಸಾಧಿಸಿದೆ. ಗೆಲ್ಲಲು 211 ರನ್ ಗುರಿ ಬೆನ್ನತ್ತಿದ ಡೆಲ್ಲಿ 209 ರನ್ ಗಳಿಸಲಷ್ಟೇ ಶಕ್ತವಾಯಿತು. ಕೊನೆಯ ಓವರ್‌ನಲ್ಲಿ 13 ರನ್ ರಕ್ಷಿಸಿಕೊಳ್ಳುವಲ್ಲಿ ಕನ್ನಡದ ವೇಗಿ ಪ್ರಸಿದ್ದ್ ಕೃಷ್ಣ ಯಶಸ್ವಿಯಾಗಿದ್ದಾರೆ. ಮೂರನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಇದು ಮೊದಲ ಸೋಲಾಗಿದ್ದರೇ, ಗುಜರಾತ್ ಟೈಟಾನ್ಸ್‌ಗೆ ಇದು ಮೊದಲ ಗೆಲುವು ಎನಿಸಿಕೊಂಡಿದೆ.

ಗೆಲ್ಲಲು 211 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್‌ ಸ್ಪೋಟಕ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ ಕೆ ಎಲ್ ರಾಹುಲ್ ಹಾಗೂ ಪಥುಮ್ ನಿಸ್ಸಾಂಕ 49 ಎಸೆತಗಳಲ್ಲಿ 76 ರನ್‌ಗಳ ಜತೆಯಾಟವಾಡುವ ಮೂಲಕ ಭದ್ರ ಬುನಾದಿ ಹಾಕಿಕೊಟ್ಟರು. ವಿಸ್ಪೋಟಕ ಬ್ಯಾಟಿಂಗ್ ನಡೆಸಿದ ನಿಸ್ಸಾಂಕ ಕೇವಲ 24 ಎಸೆತಗಳಲ್ಲಿ 6 ಬೌಂಡರಿ ಒಂದು ಸಿಕ್ಸರ್ ಸಹಿತ 41 ರನ್ ಸಿಡಿಸಿದರು.

ಡೆಲ್ಲಿ ನಾಟಕೀಯ ಕುಸಿತ:

ಒಂದು ಹಂತದಲ್ಲಿ 76 ರನ್‌ಗಳಿಗೆ ಯಾವುದೇ ವಿಕೆಟ್ ಕಳೆದುಕೊಳ್ಳದೇ ಗೆಲುವಿನತ್ತ ಮುನ್ನುಗ್ಗುತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್ ನಿಸ್ಸಾಂಕ ವಿಕೆಟ್ ಪತನದ ಬಳಿಕ ನಾಟಕೀಯ ಕುಸಿತ ಕಂಡಿತು. ನಿತೀಶ್ ರಾಣಾ(5) ಕಳೆದೆರಡು ಪಂದ್ಯಗಳ ಹೀರೋ ಸಮೀರ್ ರಿಜ್ವಿ ಖಾತೆ ತೆರೆಯುವ ಮುನ್ನವೇ ರಶೀದ್ ಖಾನ್‌ಗೆ ವಿಕೆಟ್‌ ಒಪ್ಪಿಸಿದರು. ಇನ್ನು ನಾಯಕ ಅಕ್ಷರ್ ಪಟೇಲ್ ಎರಡು ಹಾಗೂ ಟ್ರಿಸ್ಟಿನ್ ಸ್ಟಬ್ಸ್ 7 ರನ್ ಗಳಿಸಿ ರನೌಟ್ ಆಗಿ ಪೆವಿಲಿಯನ್ ಸೇರಿದರು.

ಒಂದು ಕಡೆ ನಿರಂತರವಾಗಿ ವಿಕೆಟ್ ಬೀಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ಕೆಚ್ಚೆದೆಯ ಬ್ಯಾಟಿಂಗ್ ನಡೆಸಿದ ವಿಕೆಟ್ ಕೀಪರ್ ಬ್ಯಾಟರ್ ಕೆ ಎಲ್ ರಾಹುಲ್ 52 ಎಸೆತಗಳನ್ನು ಎದುರಿಸಿ 11 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 92 ರನ್ ಸಿಡಿಸಿ ತಂಡವನ್ನು ಗೆಲುವಿನ ಸಮೀಪ ಕೊಂಡೊಯ್ಯಿದರು. ಇನ್ನು ಕೊನೆಯಲ್ಲಿ ರಿಟೈರ್ಡ್‌ ಹರ್ಟ್ ಆಗಿ ಆ ಬಳಿಕ ನಿರ್ಣಾಯಕ ಘಟ್ಟದಲ್ಲಿ ಮತ್ತೆ ಕ್ರೀಸ್‌ಗಿಳಿದ ಡೇವಿಡ್ ಮಿಲ್ಲರ್ ಕೇವಲ 20 ಎಸೆತಗಳಲ್ಲಿ 41 ರನ್ ಸಿಡಿಸಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.

ಗುಜರಾತ್ ಟೈಟಾನ್ಸ್ ಪರ 2 ವಿಕೆಟ್ ಕಬಳಿಸಿದ ಕನ್ನಡಿಗ ವೇಗಿ ಪ್ರಸಿದ್ದ್ ಕೃಷ್ಣ ಗೆಲುವಿನ ರೂವಾರಿ ಎನಿಸಿಕೊಂಡರು.

ಡೆಲ್ಲಿ ಎದುರು ಸವಾಲಿನ ಮೊತ್ತ ಕಲೆಹಾಕಿದ ಗುಜರಾತ್

ಟಾಸ್ ಸೋತು ಮೊದಲು ಬ್ಯಾಟ್ ಮಾಡಲಿಳಿದ ಗುಜರಾತ್ ಟೈಟಾನ್ಸ್ ತಂಡವು ಆರಂಭದಲ್ಲೇ ಸಾಯಿ ಸುದರ್ಶನ್(12) ವಿಕೆಟ್ ಕಳೆದುಕೊಂಡಿತು. ಆದರೆ ಎರಡನೇ ವಿಕೆಟ್‌ಗೆ ನಾಯಕ ಶುಭ್‌ಮನ್ ಗಿಲ್ ಹಾಗೂ ಜೋಸ್ ಬಟ್ಲರ್ ಜೋಡಿ 32 ಎಸೆತಗಳಲ್ಲಿ ಚುರುಕಿನ 60 ರನ್‌ಗಳ ಜತೆಯಾಟವಾಡಿದರು. ನಾಯಕ ಗಿಲ್ 45 ಎಸೆತಗಳಲ್ಲಿ 4 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 70 ರನ್‌ ಸಿಡಿಸಿ ವಿಕೆಟ್ ಒಪ್ಪಿಸಿದರು. ಮಧ್ಯಮ ಕ್ರಮಾಂಕದಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ಜೋಸ್ ಬಟ್ಲರ್ ಕೇವಲ 27 ಎಸೆತಗಳಲ್ಲಿ 3 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 52 ರನ್ ಸಿಡಿಸಿದರು. ಮೂರನೇ ವಿಕೆಟ್‌ಗೆ ಬಟ್ಲರ್ ಹಾಗೂ ವಾಷಿಂಗ್ಟನ್ ಸುಂದರ್ 60 ಎಸೆತಗಳಲ್ಲಿ 104 ರನ್‌ಗಳ ಜತೆಯಾಟವಾಡಿದರು. ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ವಾಷಿಂಗ್ಟನ್ ಸುಂದರ್ 32 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 55 ರನ್ ಸಿಡಿಸಿ ಮುಕೇಶ್ ಕುಮಾರ್‌ಗೆ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಗ್ಲೆನ್ ಫಿಲಿಫ್ಸ್ 14 ರನ್ ಸಿಡಿಸುವ ಮೂಲಕ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.

ಡೆಲ್ಲಿ ಕ್ಯಾಪಿಟಲ್ಸ್ ಪರ ಮುಕೇಶ್ ಕುಮಾರ್ ಎರಡು ವಿಕೆಟ್ ಪಡೆದರೆ, ಲುಂಗಿ ಎಂಗಿಡಿ ಹಾಗೂ ಕುಲ್ದೀಪ್ ಯಾದವ್ ತಲಾ ಒಂದು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರನೌಟ್ ವಿವಾದಕ್ಕೆ ಅಂಪೈರೆಗೆ ಚಾಕು ಇರಿದ ಅಭಿಮಾನಿ, ದುರಂತ ಸಾವಿನಿಂದ ಕ್ರಿಕೆಟ್ ಜಗತ್ತು ಶಾಕ್
ಸೋತಿದ್ದಕ್ಕೆ ಬೇಜಾರಿಲ್ಲ, 15ರ ಹುಡುಗನ ಆಟ ನೋಡಿ ಬೆರಗಾದ ಹಾರ್ದಿಕ್ ಪಾಂಡ್ಯ! ವೈಭವ್ ಸೂರ್ಯವಂಶಿ ಕೊಂಡಾಡಿದ ಮುಂಬೈ ನಾಯಕ