
ನವದೆಹಲಿ: ಮಾಜಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಐಪಿಎಲ್‌ಗೆ ಕಾಲಿಟ್ಟ ಬಳಿಕ 4 ಆವೃತ್ತಿಗಳಲ್ಲಿ 3ನೇ ಬಾರಿಗೆ ಪ್ಲೇ-ಆಫ್‌ಗೆ ಪ್ರವೇಶಿಸಿದೆ. ಭಾನುವಾರ ಇಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 10 ವಿಕೆಟ್‌ಗಳ ಅಮೋಘ ಗೆಲುವು ಸಾಧಿಸುವ ಮೂಲಕ, ತಾನು ಪ್ಲೇ-ಆಫ್‌ಗೆ ಲಗ್ಗೆಯಿಡುವುದರ ಜೊತೆಗೆ ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳನ್ನೂ ಪ್ಲೇ-ಆಫ್‌ಗೆ ಕೊಂಡೊಯ್ದಿತು.
ಐಪಿಎಲ್‌ನಲ್ಲಿ ಹೊಸ ಇತಿಹಾಸ ಬರೆದ ಗುಜರಾತ್ ಟೈಟಾನ್ಸ್ ಓಪನ್ನರ್ಸ್:
ಡೆಲ್ಲಿ ನೀಡಿದ್ದ 200 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಗುಜರಾತ್ ಟೈಟಾನ್ಸ್ ತಂಡವು ದಾಖಲೆಯ ಗೆಲುವು ಸಾಧಿಸಿತು. ಇದಕ್ಕೆ ಕಾರಣವಾಗಿದ್ದ ಗುಜರಾತ್ ಟೈಟಾನ್ಸ್ ಆರಂಭಿಕ ಬ್ಯಾಟರ್ ಸಾಯಿ ಸುದರ್ಶನ ಅಮೋಘ ಶತಕ ಹಾಗೂ ನಾಯಕ್ ಶುಭ್‌ಮನ್ ಗಿಲ್ ಅವರ ಅಜೇಯ 93 ರನ್‌ಗಳ ನೆರವಿನಿಂದ ಮೊದಲ ವಿಕೆಟ್‌ಗೆ ಮುರಿಯದ ದ್ವಿಶತಕದ ಜತೆಯಾಟವಾಡುವ ಮೂಲಕ ಹೊಸ ಐಪಿಎಲ್ ರೆಕಾರ್ಡ್ ನಿರ್ಮಿಸಿದೆ.
ಹೌದು, ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಯಾವುದೇ ವಿಕೆಟ್ ಕಳೆದುಕೊಳ್ಳದೇ 200+ ರನ್ ಗುರಿಯನ್ನು ಯಶಸ್ವಿಯಾಗಿ ತಲುಪಿದ ತಂಡ ಎನ್ನುವ ಹಿರಿಮೆಗೆ ಗುಜರಾತ್ ಟೈಟಾನ್ಸ್ ಪಾತ್ರವಾಗಿದೆ. ಇನ್ನು ಇದಷ್ಟೇ ಅಲ್ಲದೇ ಗುಜರಾತ್ ಟೈಟಾನ್ಸ್ ತಂಡವು ಇದೇ ಮೊದಲ ಬಾರಿಗೆ ಐಪಿಎಲ್‌ನಲ್ಲಿ 10 ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಹೊಸ ರೆಕಾರ್ಡ್ ಬರೆದ ಗಿಲ್-ಸಾಯಿ ಜೋಡಿ:
ಗುಜರಾತ್ ಟೈಟಾನ್ಸ್ ತಂಡವು ಈ ಬಾರಿ ಅದ್ಭುತ ಪ್ರದರ್ಶನ ನೀಡುವುದರ ಹಿಂದೆ ತಂಡದ ಆರಂಭಿಕರಾದ ಸಾಯಿ ಸುದರ್ಶನ್ ಹಾಗೂ ಶುಭ್‌ಮನ್ ಗಿಲ್ ಪಾತ್ರ ದೊಡ್ಡದಿದೆ. ಇದೀಗ ಈ ಜೋಡಿ ಐಪಿಎಲ್ ಇತಿಹಾಸದಲ್ಲೇ ಆವೃತ್ತಿಯೊಂದರಲ್ಲಿ ಗರಿಷ್ಠ ರನ್‌ಗಳ ಜತೆಯಾಟ ಬರೆದ ಆರಂಭಿಕ ಜೋಡಿ ಎನಿಸಿಕೊಂಡಿದೆ. ಗಿಲ್ ಹಾಗೂ ಸಾಯಿ ಜೋಡಿ ಈ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸದ್ಯ 839 ರನ್‌ಗಳ ಜತೆಯಾಟವಾಡಿದೆ. ಇನ್ನು ಇದಕ್ಕೂ ಮೊದಲು 2021ರ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಶಿಖರ್ ಧವನ್ ಹಾಗೂ ಪೃಥ್ವಿ ಶಾ ಆರಂಭಿಕ ಜೋಡಿ 744 ರನ್ ಬಾರಿಸಿದ್ದು ಈ ಹಿಂದಿನ ದಾಖಲೆಯಾಗಿತ್ತು.
ಗುಜರಾತ್ ಟೈಟಾನ್ಸ್-ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯ ಹೇಗಿತ್ತು?
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕೆ.ಎಲ್.ರಾಹುಲ್ ಆಕರ್ಷಕ ಶತಕದ ನೆರವಿನಿಂದ 20 ಓವರಲ್ಲಿ 3 ವಿಕೆಟ್‌ಗೆ 199 ರನ್ ಗಳಿಸಿತು. ಆದರೂ, ತಂಡ ಕನಿಷ್ಠ 10-15 ರನ್ ಕಡಿಮೆ ದಾಖಲಿಸಿದಂತೆ ಕಂಡುಬಂತು. ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ಲೀಲಾಜಾಲವಾಗಿ ಆಡಿದ ರಾಹುಲ್ 60
ಎಸೆತದಲ್ಲಿ ಶತಕ ಪೂರೈಸಿದರು. 65 ಎಸೆತ ದಲ್ಲಿ 14 ಬೌಂಡರಿ, 4 ಸಿಕ್ಸರ್‌ಗಳೊಂದಿಗೆ ಔಟಾಗದೆ 112 ರನ್ ಗಳಿಸಿದರು.
ಸುದರ್ಶನ್-ಗಿಲ್ ಶೋ: ಮೊದಲ ಓವರ್ ನಿಂದಲೇ ಅಬ್ಬರಿಸಲು ಶುರುವಿಟ್ಟ ಗುಜರಾತ್ ಯಾವ ಹಂತದಲ್ಲೂ ಒತ್ತಡಕ್ಕೆ ಸಿಲುಕಲಿಲ್ಲ. ಸಾಯಿ ಸುದರ್ಶನ್ ಹಾಗೂ ಶುಭಮನ್ ಗಿಲ್, ಡೆಲ್ಲಿ ಬೌಲರ್‌ಗಳನ್ನು ಮನಸೋಇಚ್ಛೆ ದಂಡಿಸಿದರು. ಮಿಚೆಲ್ ಸ್ಟಾರ್ಕ್‌ರ ಅನುಪಸ್ಥಿತಿ ತಂಡಕ್ಕೆ ಬಲವಾಗಿ ಕಾಡಿತು. ಅಮೋಘ ಹೊಡೆತಗಳ ಮೂಲಕ ರಂಜಿಸಿದ ಸುದರ್ಶನ್ 61 ಎಸೆತದಲ್ಲಿ 12 ಬೌಂಡರಿ, 4 ಸಿಕ್ಸರ್‌ಗಳೊಂದಿಗೆ ಔಟಾಗದೆ 108 ರನ್ ಸಿಡಿಸಿದರೆ, ಗಿಲ್ 53 ಎಸೆತದಲ್ಲಿ 3 ಬೌಂಡರಿ, 7 ಸಿಕ್ಸರ್‌ಗಳೊಂದಿಗೆ 93 ರನ್ ಚಚ್ಚಿ ಔಟಾಗದೆ ಉಳಿದರು. ಇನ್ನೂ 1 ಓವರ್ ಇರುವಂತೆಯೇ ಗುಜರಾತ್ ಜಯದ ದಡ ಸೇರಿ, ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿತು. ಶುಭ್ಮನ್ ಗಿಲ್ ಹಾಗೂ ಸುದರ್ಶನ್ ನಡುವೆ ಈ ಆವೃತ್ತಿಯಲ್ಲಿ ಇದು 3ನೇ ಶತಕದ ಜೊತೆಯಾಟ
ಸ್ಕೋರ್:
ಡೆಲ್ಲಿ 20 ಓವರಲ್ಲಿ 199/3 (ರಾಹುಲ್ 112*, ಪೊರೆಲ್ 30, ಅರ್ಶದ್ 1-7),
ಗುಜರಾತ್ 19 ಓವರಲ್ಲಿ 205/0 (ಸುದರ್ಶನ್ 108*, ಗಿಲ್ 93*)
ಪಂದ್ಯ ಶ್ರೇಷ್ಠ: ಸಾಯಿ ಸುದರ್ಶನ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.