
ಮುಂಬೈ(ನ.26): 2022ರ ಐಪಿಎಲ್‌ನಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದ ಹಾರ್ದಿಕ್ ಪಾಂಡ್ಯ, ಮತ್ತೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎನ್ನುವ ವಿಷಯ ಭಾರತೀಯ ಕ್ರಿಕೆಟ್‌ನಲ್ಲಿ ಸಂಚಲನ ಮೂಡಿಸಿದೆ. ಹಾರ್ದಿಕ್‌ರ ವರ್ಗಾವಣೆ ಬಗ್ಗೆ ಖ್ಯಾತ ಕ್ರಿಕೆಟ್ ವೆಬ್‌ಸೈಟ್‌ವೊಂದು ವರದಿ ಮಾಡಿದ್ದು, ಕೊನೆ ನಿಮಿಷದಲ್ಲಿ ಬದಲಾವಣೆಯಾಗದಿದ್ದರೆ ಅವರು 2024ರಲ್ಲಿ ಮುಂಬೈ ಪರ ಆಡುವುದು ಖಚಿತ.
ಹಾರ್ದಿಕ್ ಪಾಂಡ್ಯ 2015ರಲ್ಲಿ ಮುಂಬೈ ತಂಡದಲ್ಲೇ ಐಪಿಎಲ್ ವೃತ್ತಿಬದುಕಿಗೆ ಕಾಲಿರಿಸಿದ್ದರು. 2022ರ ಹರಾಜಿಗೂ ಮುನ್ನ ಗುಜರಾತ್ ಫ್ರಾಂಚೈಸಿಯು ₹15 ಕೋಟಿ ನೀಡಿ ಹಾರ್ದಿಕ್‌ರನ್ನು ತನ್ನ ತೆಕ್ಕೆಗೆ ಪಡೆದು, ನಾಯಕತ್ವ ನೀಡಿತ್ತು. ಆದರೆ ಫ್ರಾಂಚೈಸಿ ಜೊತೆಗಿನ ಸಂಬಂಧ ಹಳಸಿದ ಕಾರಣ ಹಾರ್ದಿಕ್ ತಂಡ ತೊರೆಯಲಿದ್ದಾರೆ ಎನ್ನಲಾಗಿದೆ.
ಹಾರ್ದಿಕ್ ಸೇರ್ಪಡೆಗಾಗಿ ಟೈಟಾನ್ಸ್‌ಗೆ ಮುಂಬೈ ₹15 ಕೋಟಿ ನೀಡಲಿದ್ದು, ವರ್ಗಾವಣೆ ಶುಲ್ಕ ಎಷ್ಟು ಎಂಬುದು ಬಹಿರಂಗಗೊಂಡಿಲ್ಲ. ಸದ್ಯ ಮುಂಬೈ ಬಳಿ ಕೇವಲ ₹5 ಲಕ್ಷ ಇದ್ದು, ಹಾರ್ದಿಕ್‌ರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕಿದ್ದರೆ ಕೆಲ ಪ್ರಮುಖ ಆಟಗಾರರನ್ನು ಹರಾಜಿಗೂ ಮುನ್ನ ಕೈಬಿಡಬೇಕಿದೆ.
ಆಸೀಸ್ ಎದುರು ಸತತ ಎರಡನೇ ಜಯದ ಮೇಲೆ ಟೀಂ ಇಂಡಿಯಾ ಕಣ್ಣು..!
ಹಾರ್ದಿಕ್ ಗುಜರಾತ್ ಬಿಡಲು ಕಾರಣವೇನು?
2022ರಲ್ಲಿ ನಾಯಕತ್ವದ ಚೊಚ್ಚಲ ಪ್ರಯತ್ನದಲ್ಲೇ ಗುಜರಾತ್‌ಗೆ ಟ್ರೋಫಿ ಗೆಲ್ಲಿಸಿಕೊಟ್ಟಿದ್ದ ಹಾರ್ದಿಕ್, 2023ರಲ್ಲಿ ತಂಡವನ್ನು ಫೈನಲ್‌ಗೇರಿಸಿದ್ದರು. ಆದರೂ ಈ ಬಾರಿ ತಂಡ ತೊರೆಯುವುದೇಕೆ ಎಂಬ ಗೊಂದಲ ಹಲವರಲ್ಲಿದೆ. ವರದಿಗಳ ಪ್ರಕಾರ, ಹಾರ್ದಿಕ್ ಗುಜರಾತ್ ಫ್ರಾಂಚೈಸಿ ಬಳಿ ಅನಧಿಕೃತವಾಗಿ ಹೆಚ್ಚಿನ ಹಣ ಹಾಗೂ ಜಾಹೀರಾತು ಒಪ್ಪಂದಕ್ಕೆ ಬೇಡಿಕೆ ಇರಿಸಿದ್ದರು ಎನ್ನಲಾಗಿದ್ದು, ಆ ಬೇಡಿಕೆಯನ್ನು ಫ್ರಾಂಚೈಸಿಯು ತಿರಸ್ಕರಿಸಿತು ಎಂದು ಹೇಳಲಾಗುತ್ತಿದೆ.
ಟಿ20 ತಂಡಕ್ಕೆ ಬೇಕಿದೆ ಕೊಹ್ಲಿ ಎನರ್ಜಿ; ರನ್ ಮಷೀನ್ ಇಲ್ಲದೇ ಹೋದ್ರೆ ಸಂಕಷ್ಟ ತಪ್ಪಿದ್ದಲ್ಲ..!
ಜುಲೈ-ಆಗಸ್ಟ್‌ನಲ್ಲೇ ಈ ಬೆಳವಣಿಗೆಗಳು ನಡೆದಿದ್ದು, ವಿಶ್ವಕಪ್ ಹೊಸ್ತಿಲಲ್ಲಿ ಈ ವಿಷಯ ಬಹಿರಂಗಗೊಳಿಸುವುದು ಸರಿಯಲ್ಲ ಎನ್ನುವ ಕಾರಣಕ್ಕೆ ಗುಪ್ತವಾಗಿ ಇಡಲಾಗಿತ್ತು ಎಂದು ತಿಳಿದುಬಂದಿದೆ. ಹಾರ್ದಿಕ್‌ಗೆ ಕೆಲ ಜಾಹೀರಾತು ಒಪ್ಪಂದಗಳನ್ನು ಕೊಡಿಸುವುದಾಗಿ ಮುಂಬೈ ಮಾಲಿಕರು ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಇಂದೇ ಆಟಗಾರರ ಅಂತಿಮ ಪಟ್ಟಿ ಸಲ್ಲಿಕೆ
ಈ ಬಾರಿ ಡಿ.19ರಂದು ದುಬೈನಲ್ಲಿ ಆಟಗಾರರ ಹರಾಜು ನಡೆಯಲಿದ್ದು, ತಂಡಗಳು ಉಳಿಸಿಕೊಳ್ಳಲು ಇಚ್ಛಿಸುವ ಆಟಗಾರರ ಪಟ್ಟಿ ಪ್ರಕಟಿಸಲು ಇಂದೇ ಕೊನೆ ದಿನ. ಎಲ್ಲಾ 12 ತಂಡಗಳು ಸಂಜೆಯೊಳಗಾಗಿ ರೀಟೈನ್ ಪಟ್ಟಿಯನ್ನು ಸಲ್ಲಿಸಬೇಕಿದೆ. ಆರ್‌ಸಿಬಿ ತಂಡ ಹಸರಂಗ, ಹರ್ಷಲ್ ಪಟೇಲ್ ಸೇರಿ ಕೆಲವರನ್ನು ತಂಡದಿಂದ ಕೈಬಿಡಲಿದೆ ಎಂದು ತಿಳಿದುಬಂದಿದೆ. ಇದೇ ವೇಳೆ ಆಲ್ರೌಂಡರ್ ಶಾಬಾಜ್ ಅಹ್ಮದ್‌ರನ್ನು ಸನ್‌ರೈಸರ್ಸ್‌ಗೆ ಬಿಟ್ಟುಕೊಟ್ಟು, ಸ್ಪಿನ್ನರ್ ಮಯಾಂಕ್ ಡಾಗರ್‌ರನ್ನು ಸೇರಿಸಿಕೊಂಡಿದೆ ಎಂದು ತಿಳಿದುಬಂದಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.