ಈ ವರ್ಷ ಒಂದಾದರೂ ಟೂರ್ನಿ ನಡೆಯಲಿದೆ ಎನ್ನುವ ಮೂಲಕ ಐಪಿಎಲ್ ಆಯೋಜನೆಯ ಬಗ್ಗೆ ಆಶಾವಾದ ಹುಟ್ಟುಹಾಕುವಂತೆ ಸಂದೇಶವನ್ನು ಕ್ರೀಡಾಸಚಿವ ಕಿರಣ್ ರಿಜಿಜು ರವಾನಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಮೇ.24): ತಕ್ಷಣಕ್ಕೆ ಭಾರತದಲ್ಲಿ ಯಾವುದೇ ಅಂತಾರಾಷ್ಟ್ರೀಯ ಕ್ರೀಡಾಕೂಟ ಇಲ್ಲವೇ ಟೂರ್ನಿಗಳು ನಡೆಯುವುದಿಲ್ಲ. ಆದರೆ ಈ ವರ್ಷದಲ್ಲಿ ಒಂದಾದರೂ ಟೂರ್ನಿ ನಡೆಯಲಿದೆ ಎನ್ನುವ ಮೂಲಕ ಐಪಿಎಲ್ ನಡೆಯುವ ಬಗ್ಗೆ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಸುಳಿವು ನೀಡಿದ್ದಾರೆ.
ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಬೇಕಿರುವ ಐಸಿಸಿ ಟಿ20 ವಿಶ್ವಕಪ್ ಮುಂದೂಡಲ್ಪಟ್ಟರೆ ಆ ಅವಧಿಯಲ್ಲಿ ಐಪಿಎಲ್ ಆಯೋಜಿಸಲು ಬಿಸಿಸಿಐ ಯೋಜನೆ ರೂಪಿಸುತ್ತಿದೆ. ಈ ನಿಟ್ಟಿನಲ್ಲಿ ಕ್ರೀಡಾ ಸಚಿವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಆಸ್ಟ್ರೇಲಿಯಾದಲ್ಲಿ ಈ ವರ್ಷ ನಡೆಯಬೇಕಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಬಹುತೇಕ ಮುಂದೂಡಲ್ಪಡಲಿದೆ ಎನ್ನಲಾಗುತ್ತಿದೆ. ಹೀಗಾಗಿ ಭಾರತದಲ್ಲಿ ಖಾಲಿ ಕ್ರೀಡಾಂಗಣದಲ್ಲಿ ಐಪಿಎಲ್ ಟೂರ್ನಿ ನಡೆದರೂ ಅಚ್ಚರಿಯಿಲ್ಲ. ಇವೆಲ್ಲವುಗಳಿಗಿಂತ ಹೆಚ್ಚಾಗಿ ಐಪಿಎಲ್ ಭಾರತದಲ್ಲಿ ನಡೆಯಬೇಕಿದ್ದರೆ ಕೊರೋನಾ ನಿಯಂತ್ರಣಕ್ಕೆ ಬರಬೇಕಿದೆ.
ಅಭ್ಯಾಸ ಆರಂಭಿಸಿದ ದೇಶದ ಮೊದಲ ಕ್ರಿಕೆಟಿಗ ಶಾರ್ದೂಲ್
ಪಾಲ್ಘರ್: ವೇಗಿ ಶಾರ್ದೂಲ್ ಠಾಕೂರ್ ಶನಿವಾರ ಇಲ್ಲಿನ ಬೊಯ್ಸಾರ್ ಮೈದಾನದಲ್ಲಿ ಅಭ್ಯಾಸ ನಡೆಸುವ ಮೂಲಕ, ದೇಶದಲ್ಲಿ ಅಭ್ಯಾಸ ಪುನಾರಂಭಿಸಿದ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟಿಗ ಎನಿಸಿಕೊಂಡರು.
ಕ್ರಿಕೆಟಿಗರಿಗೆ ಮಾರ್ಗಸೂಚಿ ಪ್ರಕಟಿಸಿದ ಐಸಿಸಿ; ಬಾಲ್ ಮುಟ್ಟಿದ ಮೇಲೆ ಸ್ಯಾನಿಟೈಸರ್!
ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ 2 ತಿಂಗಳ ಹಿಂದೆ ಕ್ರಿಕೆಟ್ ಚಟುವಟಿಕೆಯನ್ನು ಸ್ಥಗಿತಗೊಳಿಸಲಾಗಿತ್ತು. ಹಸಿರು, ಕಿತ್ತಳೆ ವಲಯಗಳಲ್ಲಿ ಕ್ರೀಡಾಪಟುಗಳ ಅಭ್ಯಾಸಕ್ಕೆ ಸರ್ಕಾರ ಅನುಮತಿ ನೀಡಿದ ಬೆನ್ನಲ್ಲೇ ಶಾರ್ದೂಲ್ ಮೈದಾನಕ್ಕಿಳಿದು, ಸ್ಥಳೀಯ ಕ್ರಿಕೆಟಿಗರ ಜೊತೆ ನೆಟ್ಸ್ ಅಭ್ಯಾಸ ನಡೆಸಿದರು.