
ಮುಂಬೈ: ದೇಶೀಯ ಕ್ರಿಕೆಟ್ ಆಟಗಾರರ ಸಂಭಾವನೆಯನ್ನು ಬಿಸಿಸಿಐ ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದೆ. ದೇಶೀಯ ಕ್ರಿಕೆಟ್‌ನಲ್ಲಿ ಆಡುವ ಹಿರಿಯ ಮತ್ತು ಕಿರಿಯ ಆಟಗಾರರ ಸಂಭಾವನೆಯಲ್ಲಿ ಎರಡೂವರೆ ಪಟ್ಟು ಹೆಚ್ಚಳವನ್ನು ಬಿಸಿಸಿಐ ಘೋಷಿಸಿದೆ. ಮುಂಬೈನಲ್ಲಿ ನಡೆದ ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಈ ಹಿಂದೆ ದೇಶೀಯ ಕ್ರಿಕೆಟ್‌ನಲ್ಲಿ ಆಡುವ ಹಿರಿಯ ಮಹಿಳಾ ಆಟಗಾರ್ತಿಯರಿಗೆ ದಿನಕ್ಕೆ 20,000 ರೂ. ಪಂದ್ಯ ಶುಲ್ಕ ನೀಡಲಾಗುತ್ತಿತ್ತು, ಇನ್ನು ಮುಂದೆ 50,000 ರೂ. ಪಂದ್ಯ ಶುಲ್ಕ ಸಿಗಲಿದೆ. ಆಡುವ ಹನ್ನೊಂದರ ಬಳಗದಲ್ಲಿ ಇಲ್ಲದ ಮೀಸಲು ಆಟಗಾರ್ತಿಯರ ಪಂದ್ಯ ಶುಲ್ಕವನ್ನು 10,000 ರೂ.ನಿಂದ 25,000 ರೂ.ಗೆ ಹೆಚ್ಚಿಸಲಾಗಿದೆ. ಮಹಿಳಾ ಐಪಿಎಲ್ ಮತ್ತು ಭಾರತದ ವಿಶ್ವಕಪ್ ಗೆಲುವಿನ ಹಿನ್ನೆಲೆಯಲ್ಲಿ ದೇಶದಲ್ಲಿ ಮಹಿಳಾ ಕ್ರಿಕೆಟ್‌ಗೆ ಹೆಚ್ಚುತ್ತಿರುವ ಜನಪ್ರಿಯತೆಯನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಈ ನಿರ್ಧಾರ ಕೈಗೊಂಡಿದೆ.
ಹಿರಿಯ ಆಟಗಾರ್ತಿಯರ ಪಂದ್ಯ ಶುಲ್ಕ ಹೆಚ್ಚಳಕ್ಕೆ ಅನುಗುಣವಾಗಿ, ಬಿಸಿಸಿಐ ಕಿರಿಯ ಆಟಗಾರ್ತಿಯರ ಸಂಭಾವನೆಯನ್ನೂ ಹೆಚ್ಚಿಸಿದೆ. ಆಡುವ ಹನ್ನೊಂದರ ಬಳಗದಲ್ಲಿರುವ ಕಿರಿಯ ಆಟಗಾರ್ತಿಯರಿಗೆ ದಿನಕ್ಕೆ 10,000 ರೂ. ಇದ್ದ ಪಂದ್ಯ ಶುಲ್ಕವನ್ನು 25,000 ರೂ.ಗೆ ಮತ್ತು ಮೀಸಲು ಆಟಗಾರ್ತಿಯರ ಪಂದ್ಯ ಶುಲ್ಕವನ್ನು 5,000 ರೂ.ನಿಂದ 12,500 ರೂ.ಗೆ ಏರಿಸಲಾಗಿದೆ.
ಟಿ20 ಪಂದ್ಯಗಳಲ್ಲಿ ಹಿರಿಯ ಆಟಗಾರ್ತಿಯರಿಗೆ, ಆಡುವ ಹನ್ನೊಂದರ ಬಳಗದಲ್ಲಿರುವವರಿಗೆ 25,000 ರೂ. ಮತ್ತು ಮೀಸಲು ಆಟಗಾರ್ತಿಯರಿಗೆ 12,500 ರೂ. ಪಂದ್ಯ ಶುಲ್ಕ ಸಿಗಲಿದೆ. ಕಿರಿಯ ಆಟಗಾರ್ತಿಯರಿಗೆ ಟಿ20 ಪಂದ್ಯಗಳಲ್ಲಿ ಆಡುವ ಹನ್ನೊಂದರ ಬಳಗದಲ್ಲಿರುವವರಿಗೆ 12,500 ರೂ. ಮತ್ತು ಮೀಸಲು ಆಟಗಾರ್ತಿಯರಿಗೆ 6,250 ರೂ. ಪಂದ್ಯ ಶುಲ್ಕವಾಗಿ ಸಿಗಲಿದೆ. ಇದಕ್ಕೂ ಮುನ್ನ 2021ರಲ್ಲಿ ದೇಶೀಯ ಕ್ರಿಕೆಟ್ ಆಡುವ ಮಹಿಳಾ ಆಟಗಾರ್ತಿಯರ ಸಂಭಾವನೆಯನ್ನು ಹೆಚ್ಚಿಸಲಾಗಿತ್ತು.
ಸದ್ಯ ಭಾರತ ಮಹಿಳಾ ಸೀನಿಯರ್ಸ್ ಆಟಗಾರ್ತಿಯರು ಒಂದು ಸೀಸನ್‌ನಲ್ಲಿ ಕೇವಲ ಲೀಗ್ ಹಂತದ ಪಂದ್ಯಗಳನ್ನು ಆಡಿದರೂ ಕನಿಷ್ಠ 2 ಲಕ್ಷ ರುಪಾಯಿ ಗಳಿಸಲಿದ್ದಾರೆ ಎಂದು ವರದಿಯಾಗಿದೆ.
ಇನ್ನು ಇತ್ತೀಚೆಗಷ್ಟೇ ಮುಕ್ತಾಯವಾದ ಅಂಡರ್-19 ಏಷ್ಯಾಕಪ್ ಟೂರ್ನಿಯ ಫೈನಲ್‌ನಲ್ಲಿ ಪಾಕಿಸ್ತಾನ ಎದುರು ಹೀನಾಯ ಸೋಲು ಕಂಡ ಭಾರತ ತಂಡದ ಪ್ರದರ್ಶನದ ಬಗ್ಗೆ ಬಿಸಿಸಿಐ ಪರಾಮರ್ಶೆ ನಡೆಸಲು ಮುಂದಾಗಿದೆ ಎಂದು ವರದಿಯಾಗಿದೆ. ದುಬೈನಲ್ಲಿ ನಡೆದ ಅಂಡರ್ 19 ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನ ಎದುರು ಭಾರತ ತಂಡವು 191 ರನ್ ಅಂತರದ ಹೀನಾಯ ಸೋಲು ಕಂಡಿತ್ತು.
'ನಾವು ಭಾರೀ ಅಂತರದ ಸೋಲಿನ ಬಗ್ಗೆ ಗಮನ ಹರಿಸಲಿದ್ದೇವೆ. ಅಂಡರ್-19 ಕ್ರಿಕೆಟ್ ತಂಡದ ಭವಿಷ್ಯದ ಬಗ್ಗೆ ಚಿಂತನೆ ನಡೆಸಲಾಗುವುದು' ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಹೇಳಿದ್ದಾರೆ.
ಈ ಪರಾಮರ್ಶನಾ ಸಭೆಯಲ್ಲಿ ಮುಂಬರುವ 2026ರ ಜನವರಿ 15ರಿಂದ ಜಿಂಬಾಬ್ವೆ ಹಾಗೂ ನಮೀಬಿಯಾದಲ್ಲಿ ಆರಂಭವಾಗಲಿರುವ ಐಸಿಸಿ ಅಂಡರ್-19 ವಿಶ್ವಕಪ್ ಬಗ್ಗೆಯೂ ಚಿಂತನೆ ನಡೆಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.