ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ ಕನ್ನಡಿಗ ಕೆ.ಗೌತಮ್‌!

Published : Dec 22, 2025, 07:54 PM IST
K gowtham

ಸಾರಾಂಶ

ಕರ್ನಾಟಕದ ಮಾಜಿ ಆಫ್ ಸ್ಪಿನ್ನರ್ ಕೆ. ಗೌತಮ್ ಅವರು ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಸುಮಾರು 14 ವರ್ಷಗಳ ಕಾಲ ಕರ್ನಾಟಕ, ಟೀಮ್ ಇಂಡಿಯಾ ಹಾಗೂ ಐಪಿಎಲ್‌ನಲ್ಲಿ ಆಡಿದ ಅವರು, ಇತ್ತೀಚೆಗೆ ಅವಕಾಶಗಳ ಕೊರತೆಯಿಂದ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಬೆಂಗಳೂರು (ಡಿ.22): ಕರ್ನಾಟಕದ ಮಾಜಿ ಆಫ್ ಸ್ಪಿನ್ನರ್ ಕೆ. ಗೌತಮ್ ಅವರು ಎಲ್ಲಾ ರೀತಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಸೋಮವಾರ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ನೇತೃತ್ವದ ಹೊಸ ಕೆಎಸ್‌ಸಿಎ ಮಂಡಳಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಘೋಷಣೆ ಮಾಡಿದರು.

37 ವರ್ಷದ ಗೌತಮ್, ಸುಮಾರು 14 ವರ್ಷಗಳ ಕಾಲ ಕರ್ನಾಟಕದ ಪರ ಆಡಿದ ಎಲ್ಲಾ ಮಾದರಿಗಳಲ್ಲಿ ರಣಜಿ ಟ್ರೋಫಿಯಲ್ಲಿ ಒಂದು ಶತಕ ಮತ್ತು ಐದು ಅರ್ಧಶತಕಗಳು ಸೇರಿದಂತೆ 394 ವಿಕೆಟ್‌ಗಳು ಮತ್ತು 2783 ರನ್‌ಗಳನ್ನು ಗಳಿಸಿದ್ದಾರೆ. 2018-19ರಲ್ಲಿ ಕರ್ನಾಟಕದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಗೆಲುವಿನಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದರು. ಇದು ಅವರ ವೃತ್ತಿಜೀವನದ ಅತ್ಯಂತ ಶ್ರೇಷ್ಠ ಸಾಧನೆಯಲ್ಲಿ ಒಂದಾಗಿದೆ. 2021 ರಲ್ಲಿ, ಆರಂಭದಲ್ಲಿ ನೆಟ್ ಬೌಲರ್ ಆಗಿ ಆಯ್ಕೆಯಾದ ನಂತರ, ಶ್ರೀಲಂಕಾ ಪ್ರವಾಸದಲ್ಲಿ ಅರ್ಧಕ್ಕಿಂತ ಹೆಚ್ಚು ತಂಡವು ಕೋವಿಡ್ -19ಗೆ ತುತ್ತಾದ ನಂತರ ಗೌತಮ್ ಟೀಮ್‌ ಇಂಡಿಯಾ ಪರ ಆಡುವ ಅವಕಾಶ ಪಡೆದರು. ಅವರು ತಮ್ಮ ಏಕೈಕ ODI ಪಂದ್ಯದಲ್ಲಿ 49ರನ್‌ ನೀಡಿ 1 ವಿಕೆಟ್ ಪಡೆದಿದ್ದರು.

ಬಾಲ್ಯದಲ್ಲಿ ಅವರ ಬೌಲಿಂಗ್‌ ಆಕ್ಷನ್‌ ಹರ್ಭಜನ್‌ ಸಿಂಗ್‌ ಅವರನ್ನು ಹೋಲುತ್ತಿದ್ದ ಕಾರಣಕ್ಕೆ ಸ್ನೇಹಿತರಿಂದ ಭಜ್ಜಿ ಎಂದು ಹೆಸರು ಪಡೆದಿದ್ದು ಗೌತಮ್‌ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್‌ ತಂಡದ ಪರವಾಗಿ ಆಡಿ ಸಣ್ಣ ಪ್ರಮಾಣದ ಯಶಸ್ಸು ಕಂಡಿದ್ದರು. 2018ರಲ್ಲಿ ದಿವಂಗತ ಸ್ಪಿನ್‌ ದಿಗ್ಗಜ ಶೇನ್‌ ವಾರ್ನ್‌ , ಕೆ.ಗೌತಮ್‌ ಅವರನ್ನು ತಮ್ಮ ಐಪಿಎಲ್‌ ಪ್ರಾಜೆಕ್ಟ್‌ ಎಂದು ಕರೆದಿದ್ದು ಸಖತ್ ಫೇಮಸ್‌ ಆಗಿತ್ತು.

ರಾಜಸ್ಥಾನ ರಾಯಲ್ಸ್ ಅಲ್ಲದೆ ಪಂಜಾಬ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ಲಕ್ನೋ ಸೂಪರ್ ಜೈಂಟ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳನ್ನು ಪ್ರತಿನಿಧಿಸಿದ್ದು, ಒಟ್ಟು 36 ಪಂದ್ಯಗಳನ್ನು ಆಡಿದ್ದಾರೆ. 8.24 ರ ಎಕಾನಮಿಯಲ್ಲಿ 21 ವಿಕೆಟ್‌ಗಳನ್ನು ಪಡೆದಿದ್ದಾರೆ.

2023ರಲ್ಲಿ ಕೊನೆಯ ಬಾರಿಗೆ ಆಡಿದ್ದ ಕೆ.ಗೌತಮ್‌

ಗೌತಮ್ ಕೊನೆಯ ಬಾರಿಗೆ ಡಿಸೆಂಬರ್ 2023 ರಲ್ಲಿ ಕರ್ನಾಟಕ ಪರ ಸ್ಪರ್ಧಾತ್ಮಕ ಪಂದ್ಯದಲ್ಲಿ ಕಾಣಿಸಿಕೊಂಡರು. ಅದೇ ವರ್ಷದಲ್ಲಿ ಹಲವು ಹಿರಿಯ ಆಟಗಾರರು ನಿವೃತ್ತರಾದಾಗ, ಗೌತಮ್‌ ಕೂಡ ಅವಕಾಶ ಕಳೆದುಕೊಂಡಿದ್ದರು. ಆರಂಭದಲ್ಲಿ ಬೇರೆ ರಾಜ್ಯವನ್ನು ಪ್ರತಿನಿಧಿಸುವ ನಿರ್ಧಾರ ಮಾಡಿದ್ದರೂ, ಕಡೆಗೆ ಅದರಿಂದ ವಿಮುಖರಾದರು. ಆ ಬಳಿಕ ಮಹಾರಾಜ ಟಿ20 ಟೂರ್ನಿಯಲ್ಲಿ ಆಡಿ ತಂಡಕ್ಕೆ ವಾಪಾಸ್‌ ಬರುವ ಪ್ರಯತ್ನ ಮಾಡಿದರು. ಆದರೆ, ಆಯ್ಕೆ ಸಮಿತಿ ಹೊಸ ಹುಡುಗರನ್ನು ನೋಡುತ್ತಿದ್ದಾರೆ ಎನ್ನುವುದು ಅರಿವಾದಾಗ ನಿವೃತ್ತಿ ಹೇಳುವ ನಿರ್ಧಾರ ಮಾಡಿದರು.

2025ರಲ್ಲಿ ಮೈಸೂರು ವಾರಿಯರ್ಸ್‌ ತಂಡದ ಪರವಾಗಿ ಮೆಂಟರ್‌ ಹಾಗೂ ಪ್ಲೇಯರ್‌ಆಗಿ ಆಡಿದ್ದರು. ಅಲ್ಲದೆ, ಕಳೆದ 2 ವರ್ಷಗಳಿಂದ ಅವರು ಕ್ರಿಕಟ್‌ ವಿಶ್ಲೇಷಣೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಭಾರತ ಎದುರು ಅಂಡರ್-19 ಏಷ್ಯಾಕಪ್ ಗೆದ್ದ ಪಾಕ್ ಆಟಗಾರರಿಗೆ ಪ್ರಧಾನಿ ಭಾರೀ ಬಹುಮಾನ ಘೋಷಣೆ!
T20 ವಿಶ್ವಕಪ್‌ನಿಂದ ಹೊರಬಿದ್ದ ಬೆನ್ನಲ್ಲೇ ಈ ಟೂರ್ನಿ ಆಡಲು ರೆಡಿಯಾದ ಶುಭ್‌ಮನ್ ಗಿಲ್! ಹೆಗಲಿಗೆ ಮಹತ್ವದ ಜವಾಬ್ದಾರಿ?