ಹರ್ಷಿತ್ ರಾಣಾ ಪರ ಬ್ಯಾಟ್ ಬೀಸಿದ ಗಂಭೀರ್, ಬೇಕಿದ್ರೆ ನನ್ನ ಟಾರ್ಗೆಟ್ ಮಾಡಿ ಎಂದ ಟೀಂ ಇಂಡಿಯಾ ಹೆಡ್‌ ಕೋಚ್!

Published : Oct 14, 2025, 05:17 PM IST
Harshit Rana and Gautam Gambhir

ಸಾರಾಂಶ

ಹರ್ಷಿತ್ ರಾಣಾ ಆಯ್ಕೆಯು ಕೋಚ್ ಗೌತಮ್ ಗಂಭೀರ್ ಅವರ ಪ್ರಭಾವದಿಂದಾಗಿದೆ ಎಂಬ ಮಾಜಿ ಆಯ್ಕೆಗಾರ ಶ್ರೀಕಾಂತ್ ಅವರ ಆರೋಪಕ್ಕೆ ಗಂಭೀರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಯೂಟ್ಯೂಬ್ ವೀಕ್ಷಣೆಗಾಗಿ 23 ವರ್ಷದ ಯುವ ಆಟಗಾರನನ್ನು ಗುರಿಯಾಗಿಸುವುದು ನಾಚಿಕೆಗೇಡಿನ ಸಂಗತಿ ಎಂದು ಹೇಳಿದ್ದಾರೆ.

ದೆಹಲಿ: ವೇಗಿ ಹರ್ಷಿತ್ ರಾಣಾ ಅವರನ್ನು ಏಕದಿನ ಮತ್ತು ಟಿ20 ತಂಡಗಳಲ್ಲಿ ಸೇರಿಸಿಕೊಳ್ಳುವುದರ ವಿರುದ್ಧ ಮಾಜಿ ಮುಖ್ಯ ಆಯ್ಕೆಗಾರ ಕೃಷ್ಣಮಾಚಾರಿ ಶ್ರೀಕಾಂತ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾಡಿದ ಟೀಕೆಗೆ ಭಾರತೀಯ ಕೋಚ್ ಗೌತಮ್ ಗಂಭೀರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಟೀಕೆಗೆ ಗುರಿಯಾಗಿರುವ ಹರ್ಷಿತ್ ರಾಣಾ

ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ಭಾರತದ ಏಕದಿನ ಮತ್ತು ಟಿ20 ತಂಡಗಳಲ್ಲಿ ಹರ್ಷಿತ್ ರಾಣಾ ಸ್ಥಾನ ಪಡೆದಿದ್ದನ್ನು ಶ್ರೀಕಾಂತ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಟೀಕಿಸಿದ್ದರು. ಕೋಚ್ ಗೌತಮ್ ಗಂಭೀರ್ ಅವರ ನೆಚ್ಚಿನ ಆಟಗಾರನಾಗಿರುವುದರಿಂದಲೇ ವೇಗಿ ಹರ್ಷಿತ್ ರಾಣಾ ಯಾವಾಗಲೂ ಭಾರತ ತಂಡಕ್ಕೆ ಆಯ್ಕೆಯಾಗುತ್ತಾರೆ ಎಂದು ಶ್ರೀಕಾಂತ್ ಹೇಳಿದ್ದರು. ಹರ್ಷಿತ್ ರಾಣಾ ಭಾರತ ತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ. ಏಕೆಂದರೆ, ಅವರು ಗೌತಮ್ ಗಂಭೀರ್ ಅವರ ಫೇವರಿಟ್ ಎಂಬುದು ಶ್ರೀಕಾಂತ್ ಅವರ ಕಾಮೆಂಟ್ ಆಗಿತ್ತು. ನಾಯಕ ಶುಭಮನ್ ಗಿಲ್ ನಂತರ ಭಾರತ ತಂಡದಲ್ಲಿ ಸ್ಥಾನ ಖಚಿತವಾಗಿರುವ ಏಕೈಕ ಆಟಗಾರ ಹರ್ಷಿತ್ ರಾಣಾ ಎಂದೂ ಶ್ರೀಕಾಂತ್ ಹೇಳಿದ್ದರು.

ರಾಣಾ ಪರ ಬ್ಯಾಟ್ ಬೀಸಿದ ಗೌತಮ್ ಗಂಭೀರ್

ಆದರೆ, ವಿಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಗೆದ್ದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಶ್ರೀಕಾಂತ್ ಅವರ ಹೆಸರನ್ನು ಹೇಳದೆ ಗೌತಮ್ ಗಂಭೀರ್ ತಿರುಗೇಟು ನೀಡಿದ್ದಾರೆ. ಯೂಟ್ಯೂಬ್ ಚಾನೆಲ್‌ಗೆ ವೀಕ್ಷಕರನ್ನು ಪಡೆಯಲು ಕೆಲವರು 23 ವರ್ಷದ ಹರ್ಷಿತ್ ರಾಣಾರನ್ನು ಬಲಿಪಶು ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಗಂಭೀರ್ ಹೇಳಿದರು. ನೀವು ಬೇಕಿದ್ದರೆ ನನ್ನನ್ನು ಟಾರ್ಗೆಟ್ ಮಾಡಿ. ನಾನು ಅದನ್ನು ನಿಭಾಯಿಸಬಲ್ಲೆ. ಆದರೆ 23 ವರ್ಷದ ಹುಡುಗನನ್ನು ಟೀಕಿಸಿ ಯೂಟ್ಯೂಬ್ ಚಾನೆಲ್‌ಗೆ ವೀಕ್ಷಕರನ್ನು ಗಳಿಸುವ ಪ್ರಯತ್ನ ನಾಚಿಕೆಗೇಡು. ಅವನನ್ನು ತಂಡಕ್ಕೆ ಸೇರಿಸಲು ಅವನ ತಂದೆ ಮಾಜಿ ಸೆಲೆಕ್ಟರ್ ಅಲ್ಲ, ಅವನು ತನ್ನ ಸ್ವಂತ ಸಾಮರ್ಥ್ಯದಿಂದ ಆಡಿ ತಂಡಕ್ಕೆ ಬಂದಿದ್ದಾನೆ. ಆದ್ದರಿಂದ ಈ ರೀತಿ ಯುವ ಆಟಗಾರರನ್ನು ಟಾರ್ಗೆಟ್ ಮಾಡಬಾರದು ಎಂದು ಗಂಭೀರ್ ಹೇಳಿದರು.

ಕೇವಲ 23 ವರ್ಷ ವಯಸ್ಸಿನ, ಬೆಳೆಯುತ್ತಿರುವ ಆಟಗಾರನನ್ನು ಟೀಕಿಸುವಾಗ ಪದಗಳನ್ನು ಬಹಳ ಎಚ್ಚರಿಕೆಯಿಂದ ಬಳಸಬೇಕು. ಆಟಗಾರರ ಪ್ರದರ್ಶನವನ್ನು ಟೀಕಿಸಬಹುದು. ಆಯ್ಕೆಗಾರರು ಮತ್ತು ತರಬೇತುದಾರರನ್ನು ಟೀಕಿಸಬಹುದು. ಆದರೆ ಬೆಳೆಯುತ್ತಿರುವ ಯುವ ಆಟಗಾರನನ್ನು ಟೀಕಿಸಿ ಅದನ್ನು ಸಾಮಾಜಿಕ ಮಾಧ್ಯಮದ ಮೂಲಕ ಪ್ರಚಾರ ಮಾಡುವವರ ಮನಸ್ಥಿತಿಯನ್ನು ಒಮ್ಮೆ ಪರೀಕ್ಷಿಸಿ ನೋಡಿ. ಯೂಟ್ಯೂಬ್ ಚಾನೆಲ್‌ಗೆ ವೀಕ್ಷಕರನ್ನು ಪಡೆಯಲು ಏನನ್ನಾದರೂ ಮಾತನಾಡುವುದು ಸರಿಯಲ್ಲ ಎಂದು ಗಂಭೀರ್ ಹೇಳಿದರು.

ಹರ್ಷಿತ್ ರಾಣಾ 2024ರ ಐಪಿಎಲ್‌ನಲ್ಲಿ ಕೋಲ್ಕತಾ ನೈಟ್‌ರೈಸರ್ಸ್ ಚಾಂಪಿಯನ್ ತಂಡದ ಸದಸ್ಯರಾಗಿದ್ದರು. ಗೌತಮ್ ಗಂಭೀರ್ ಅವರ ನೀಲಿಗಣ್ಣಿನ ಹುಡುಗ ಎಂದೇ ಬಿಂಬಿತವಾಗಿರುವುದರಿಂದಲೇ ಹರ್ಷಿತ್ ರಾಣಾಗೆ ಪದೇ ಪದೇ ಭಾರತ ತಂಡದಲ್ಲಿ ಸ್ಥಾನ ಸಿಗುತ್ತಿದೆ ಎಂದು ನೆಟ್ಟಿಗರು ಟ್ರೋಲ್ ಮಾಡಲಾಗುತ್ತಿದೆ. ಹರ್ಷಿತ್ ರಾಣಾ 2024ರ ನವೆಂಬರ್‌ನಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಇದಾದ ಬಳಿಕ 2025ರ ಜನವರಿಯಲ್ಲಿ ಭಾರತ ಟಿ20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಇದಾದ ನಂತರ ಭಾರತ ಏಕದಿನ ತಂಡದಲ್ಲಿ ಸ್ಥಾನ ಪಡೆಯಲು ರಾಣಾ ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಹರ್ಷಿತ್ ರಾಣಾ ಇದುವರೆಗೂ ಭಾರತ ಪರ 2 ಟೆಸ್ಟ್‌ನಿಂದ 4 ವಿಕೆಟ್, ಮೂರು ಟಿ20 ಪಂದ್ಯಗಳಿಂದ 10ರ ಎಕನಮಿಯಲ್ಲಿ 5 ವಿಕೆಟ್ ಹಾಗೂ 5 ಏಕದಿನ ಪಂದ್ಯಗಳನ್ನಾಡಿ 10 ವಿಕೆಟ್ ಕಬಳಿಸಿದ್ದಾರೆ.

ಇನ್ನು ಹರ್ಷಿತ್ ರಾಣಾ ಅವರ ಆಯ್ಕೆಯನ್ನು ಮಾಜಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಹಾಗೂ ಆಕಾಶ್ ಚೋಪ್ರಾ ಸಮರ್ಥಿಸಿಕೊಂಡಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ
ಕಾಂಗರೂ ನಾಡಲ್ಲಿ ಶತಕದ ಬರ ನೀಗಿಸಿಕೊಂಡ ಜೋ ರೂಟ್! ಕೊನೆಗೂ ತಪ್ಪಿದ ಹೇಡನ್ 'ಬೆತ್ತಲೆ ಸೇವೆ'!