ಟಿ20 ವಿಶ್ವಕಪ್ ಗೆದ್ದಾಯ್ತು, ಟೀಂ ಇಂಡಿಯಾ ಮುಂದಿನ ಬಿಗ್ ಟಾರ್ಗೆಟ್ ಬಗ್ಗೆ ಬಾಯ್ಬಿಟ್ಟ ಗೌತಮ್ ಗಂಭೀರ್!

Published : Mar 12, 2026, 08:10 AM IST
Gautam Gambhir

ಸಾರಾಂಶ

ಟಿ20 ವಿಶ್ವಕಪ್ ಗೆದ್ದ ನಂತರ, ಭಾರತದ ಹೆಡ್ ಕೋಚ್ ಗೌತಮ್ ಗಂಭೀರ್ ತಮ್ಮ ಮುಂದಿನ ಗುರಿಯನ್ನು ಬಹಿರಂಗಪಡಿಸಿದ್ದಾರೆ. 2025-2027ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ತಂಡವನ್ನು ಕೊಂಡೊಯ್ಯುವುದೇ ತಮ್ಮ ಪ್ರಮುಖ ಉದ್ದೇಶ ಎಂದು ಅವರು ಹೇಳಿದ್ದಾರೆ. 

ಮುಂಬೈ: ಟಿ20 ವಿಶ್ವಕಪ್‌ನಲ್ಲಿ ಭಾರತಕ್ಕೆ ಕಪ್ ಗೆಲ್ಲಿಸಿಕೊಟ್ಟ ಹೆಡ್ ಕೋಚ್ ಗೌತಮ್ ಗಂಭೀರ್, ಈಗ ತಮ್ಮ ಮುಂದಿನ ದೊಡ್ಡ ಗುರಿ ಏನೆಂಬುದನ್ನು ಬಹಿರಂಗಪಡಿಸಿದ್ದಾರೆ. 2025-2027ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಭಾರತವನ್ನು ತಲುಪಿಸುವುದೇ ನನ್ನ ಮುಂದಿನ ಮಿಷನ್ ಎಂದು ಅವರು ಹೇಳಿದ್ದಾರೆ. ಟೆಸ್ಟ್ ಕ್ರಿಕೆಟ್ ತನಗೆ ಅತ್ಯಂತ ಇಷ್ಟವಾದ ಮಾದರಿ ಎಂದೂ ಗಂಭೀರ್ ತಿಳಿಸಿದ್ದಾರೆ. ಕಳೆದ ಭಾನುವಾರ ನಡೆದ ಐಸಿಸಿ ಟಿ20 ವಿಶ್ವಕಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು 96 ರನ್‌ಗಳಿಂದ ಸೋಲಿಸಿ ಭಾರತ ವಿಶ್ವಕಪ್ ಕಿರೀಟವನ್ನು ಉಳಿಸಿಕೊಂಡಿತ್ತು. ಈ ಗೆಲುವಿನೊಂದಿಗೆ ಭಾರತ ಹಲವು ಐತಿಹಾಸಿಕ ದಾಖಲೆಗಳನ್ನು ಬರೆದಿದೆ:

ತವರಿನಲ್ಲಿ ಟಿ20 ವಿಶ್ವಕಪ್ ಗೆದ್ದ ಮೊದಲ ದೇಶ ಭಾರತ. 2024 ಮತ್ತು 2026ರಲ್ಲಿ ಸತತ ಎರಡು ಬಾರಿ ಪ್ರಶಸ್ತಿ ಗೆದ್ದ ಮೊದಲ ತಂಡವೂ ಹೌದು. ಭಾರತ ಮೂರು ಬಾರಿ (2007, 2024, 2026) ಟಿ20 ವಿಶ್ವಕಪ್ ಗೆದ್ದ ಮೊದಲ ರಾಷ್ಟ್ರವಾಗಿದೆ. ಕಳೆದ ಎರಡು ವರ್ಷಗಳಲ್ಲಿ ಭಾರತ ಮೂರು ಐಸಿಸಿ ವೈಟ್-ಬಾಲ್ ಟ್ರೋಫಿಗಳನ್ನು (2024 ಟಿ20 ವಿಶ್ವಕಪ್, 2025 ಚಾಂಪಿಯನ್ಸ್ ಟ್ರೋಫಿ, 2026 ಟಿ20 ವಿಶ್ವಕಪ್) ಗೆದ್ದಿದೆ. ಆದರೆ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಇನ್ನೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ.

ಗುರಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್

ಟೆಸ್ಟ್ ಕ್ರಿಕೆಟ್‌ನಲ್ಲಿರುವ ಸವಾಲುಗಳನ್ನು ತಾನು ಅರಿತಿರುವುದಾಗಿ ಗಂಭೀರ್ ಹೇಳಿದ್ದಾರೆ. "ಟೆಸ್ಟ್ ಕ್ರಿಕೆಟ್ ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದೆ. ಮೊದಲು ನಾವು ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆಯಬೇಕು. ನಮ್ಮ ಮುಂದೆ ಇನ್ನೂ ಒಂಬತ್ತು ಟೆಸ್ಟ್ ಪಂದ್ಯಗಳಿವೆ. ರೆಡ್-ಬಾಲ್ ಕ್ರಿಕೆಟ್‌ನಲ್ಲಿ ನಾವು ಬದಲಾವಣೆಯ ಹಂತದಲ್ಲಿದ್ದೇವೆ, ಹಾಗಾಗಿ ಯುವ ಆಟಗಾರರಿಗೆ ನಮ್ಮ ಬೆಂಬಲ ಮುಂದುವರಿಯುತ್ತದೆ," ಎಂದು ಗಂಭೀರ್ ANI ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಐದು ದಿನಗಳ ಕಠಿಣ ಪರಿಶ್ರಮದ ನಂತರ ಸಿಗುವ ಟೆಸ್ಟ್ ಗೆಲುವಿನ ಸಂತೋಷಕ್ಕೆ ಬೇರೆ ಯಾವುದೂ ಸಮನಾಗದು ಎಂದೂ ಗಂಭೀರ್ ಹೇಳಿದರು. "ಡ್ರೆಸ್ಸಿಂಗ್ ರೂಮ್‌ನಲ್ಲಿರುವ ಬಹುತೇಕ ಆಟಗಾರರು ಟೆಸ್ಟ್ ಕ್ರಿಕೆಟ್‌ನಲ್ಲಿ ಮಿಂಚಲು ಬಯಸುತ್ತಾರೆ," ಎಂದು ಅವರು ಹೇಳಿದ್ದಾರೆ.

ಭಾರತದ ಮುಂದಿರುವ ಸವಾಲು

ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಭರ್ಜರಿ ಯಶಸ್ಸು ಸಾಧಿಸುತ್ತಿದ್ದರೂ, ಗಂಭೀರ್ ನೇತೃತ್ವದಲ್ಲಿ ಭಾರತದ ಟೆಸ್ಟ್ ಪ್ರದರ್ಶನ ಅಷ್ಟೊಂದು ಉತ್ತಮವಾಗಿಲ್ಲ. ಕಳೆದ ವರ್ಷ ತವರಿನಲ್ಲಿ ನಡೆದ ಟೆಸ್ಟ್ ಸರಣಿಗಳಲ್ಲಿ ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಸೋಲು ಕಂಡಿತ್ತು. ಈ ಬಾರಿ ಫೈನಲ್‌ಗೆ ತಲುಪದಿದ್ದರೆ, ಕೋಚ್ ಆಗಿ ಗಂಭೀರ್‌ಗೆ ಇದು ದೊಡ್ಡ ಹಿನ್ನಡೆಯಾಗಲಿದೆ.

ಸದ್ಯ, ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್ಸ್ ಪಟ್ಟಿಯಲ್ಲಿ ಭಾರತ ಆರನೇ ಸ್ಥಾನದಲ್ಲಿದೆ. 9 ಪಂದ್ಯಗಳಿಂದ 4 ಗೆಲುವಿನೊಂದಿಗೆ 48.15% ಅಂಕಗಳನ್ನು ಹೊಂದಿದೆ. ಮುಂಬರುವ ಶ್ರೀಲಂಕಾ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಸರಣಿಗಳು ಭಾರತದ ಫೈನಲ್ ಹಾದಿಯನ್ನು ನಿರ್ಧರಿಸಲಿವೆ.

ಭಾರತ ಕ್ರಿಕೆಟ್ ತಂಡವು ಮೊದಲೆರಡು ಸೀಸನ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಸತತವಾಗಿ ಫೈನಲ್ ಪ್ರವೇಶಿಸಿತ್ತಾದರೂ, ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ಎದುರು ಸೋತು ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಇನ್ನು ಕಳೆದ ಸೀಸನ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಸಲ ಭಾರತ ಫೈನಲ್‌ಗೇರಲು ವಿಫಲವಾಗಿತ್ತು. ಅದರಲ್ಲೂ ಟೆಸ್ಟ್‌ ಕ್ರಿಕೆಟ್‌ಗೆ ಅನುಭವಿ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಚೇತೇಶ್ವರ್ ಪೂಜಾರ ಹಾಗೂ ರವಿಚಂದ್ರನ್ ಅಶ್ವಿನ್ ವಿದಾಯ ಘೋಷಿಸಿರುವುದು ಭಾರತ ಟೆಸ್ಟ್ ತಂಡದ ಫಲಿತಾಂಶದ ಮೇಲೂ ಪರಿಣಾಮ ಬೀರುತ್ತಿದೆ.

ಶುಭ್‌ಮನ್ ಗಿಲ್ ನೇತೃತ್ವದಲ್ಲಿ ಯಶಸ್ವಿ ಜೈಸ್ವಾಲ್, ಹರ್ಷಿತ್ ರಾಣಾ, ಧ್ರುವ ಜುರೆಲ್, ರಿಷಭ್ ಪಂತ್ ಸೇರಿದಂತೆ ಹಲವು ಹಿರಿ-ಕಿರಿಯ ಆಟಗಾರರನ್ನೊಳಗೊಂಡ ಆಟಗಾರರ ಪಡೆ ನಾಲ್ಕನೇ ಸೀಸನ್‌ನಲ್ಲಿ ಟೆಸ್ಟ್ ವಿಶ್ವಕಪ್ ಫೈನಲ್‌ಗೇರಿ ಕಪ್ ಗೆಲ್ಲುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಾಳೆಯಿಂದ ಸನಾತನ ಪ್ರೀಮಿಯರ್‌ ಲೀಗ್‌, ಪ್ರತಿ ರನ್‌ ಬಂದಾಗಲೂ ಆಸಿಡ್‌ ದಾಳಿ ಸಂತ್ರಸ್ಥರಿಗೆ 500 ರೂಪಾಯಿ ದೇಣಿಗೆ!
ICC Team of the Tournament: ವರ್ಲ್‌ಕಪ್‌ ಗೆದ್ದ ನಾಯಕ ಸೂರ್ಯಕುಮಾರ್‌ಗೆ ಟೀಮ್‌ ಆಫ್‌ ಟೂರ್ನಮೆಂಟ್‌ನಲ್ಲಿ ಸ್ಥಾನವಿಲ್ಲ!