ಕನ್ನಡಿಗ, ಆರ್‌ಸಿಬಿ ಮಾಜಿ ಕ್ರಿಕೆಟಿಗನೇ ಬೌಲಿಂಗ್ ಕೋಚ್ ಆಗಬೇಕು: ಪಟ್ಟು ಹಿಡಿದ ಗೌತಮ್ ಗಂಭೀರ್..!

By Naveen Kodase  |  First Published Jul 10, 2024, 3:12 PM IST

ಗೌತಮ್ ಗಂಭೀರ್, ಟೀಂ ಇಂಡಿಯಾ ಹೆಡ್ ಕೋಚ್ ಆಗುತ್ತಿದ್ದಂತೆಯೇ ಬಿಸಿಸಿಐ ಮುಂದೆ ಹೊಸ ಡಿಮ್ಯಾಂಡ್ ಇಟ್ಟಿದ್ದಾರೆ. ಕನ್ನಡಿಗ, ಆರ್‌ಸಿಬಿ ಮಾಜಿ ವೇಗಿಯೇ ಟೀಂ ಇಂಡಿಯಾ ಹೆಡ್ ಕೋಚ್ ಆಗಬೇಕು ಎಂದು ಗೌತಿ ಹೇಳಿದ್ದಾಗಿ ವರದಿಯಾಗಿದೆ


ಮುಂಬೈ: ಭಾರತ ಕ್ರಿಕೆಟ್ ತಂಡದ ನೂತನ ಹೆಡ್‌ ಕೋಚ್ ಆಗಿ ಗೌತಮ್ ಗಂಭೀರ್ ನೇಮಕವಾಗಿದ್ದಾರೆ. ಈ ವಿಚಾರವನ್ನು ಸ್ವತಃ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಮಂಗಳವಾರ(ಜು.09) ಸಂಜೆ ಸಾಮಾಜಿಕ ಜಾಲತಾಣವಾದ ಎಕ್ಸ್‌(ಟ್ವಿಟರ್) ಮೂಲಕ ಖಚಿತಪಡಿಸಿದ್ದರು. ಇದೀಗ ಮಾಜಿ ಕ್ರಿಕೆಟಿಗ ಗಂಭೀರ್, ಹೊಸ ಸವಾಲು ಹಾಗೂ ಗುರಿಯನ್ನಿಟ್ಟುಕೊಂಡು ಪ್ರತಿಷ್ಠಿತ ಭಾರತ ಕ್ರಿಕೆಟ್ ತಂಡದ ಹೆಡ್‌ ಕೋಚ್ ಆಗಿ ನೇಮಕವಾಗಿದ್ದಾರೆ.

ಹೌದು, ಇತ್ತೀಚೆಗಷ್ಟೇ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಟಿ20 ವಿಶ್ವಕಪ್ ಚಾಂಪಿಯನ್ ಆಗುವ ಮೂಲಕ ದಶಕದ ಬಳಿಕ ಐಸಿಸಿ ಟ್ರೋಫಿ ಬರ ನೀಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಇನ್ನು ಟಿ20 ವಿಶ್ವಕಪ್ ಟೂರ್ನಿಯು ಮುಕ್ತಾಯವಾಗುತ್ತಿದ್ದಂತೆಯೇ ಹೆಡ್ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಅವರ ಒಪ್ಪಂದಾವಧಿ ಕೂಡಾ ಮುಕ್ತಾಯವಾಗಿತ್ತು. ಇದರ ಬೆನ್ನಲ್ಲೇ ಡೆಲ್ಲಿ ಮೂಲದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರನ್ನು ಬಿಸಿಸಿಐ, ಟೀಂ ಇಂಡಿಯಾ ನೂತನ ಹೆಡ್ ಕೋಚ್ ಆಗಿ ನೇಮಿಸಿದೆ.

Tap to resize

Latest Videos

ಟೀಂ ಇಂಡಿಯಾ ನೂತನ ಹೆಡ್ ಕೋಚ್ ಆಗುತ್ತಿದ್ದಂತೆಯೇ ಖಡಕ್ ಸಂದೇಶ ರವಾನಿಸಿದ ಗೌತಮ್ ಗಂಭೀರ್..!

ಇನ್ನು ಗೌತಮ್ ಗಂಭೀರ್, ಬಿಸಿಸಿಐ ನೇಮಿತ ಕ್ರಿಕೆಟ್ ಆಡಳಿತ ಮಂಡಳಿ ನಡೆಸಿದ ಸಂದರ್ಶನ ವೇಳೆಯಲ್ಲಿಯೇ ತಾವು ಕೋಚ್ ಆಗಬೇಕೆಂದಿದ್ದರೇ ಕೆಲವೊಂದು ಡಿಮ್ಯಾಂಡ್‌ಗಳಿವೆ. ಅವಕ್ಕೆಲ್ಲ ಬಿಸಿಸಿಐ ಒಪ್ಪಿದರಷ್ಟೇ ತಾವು ಟೀಂ ಇಂಡಿಯಾ ಹೆಡ್ ಕೋಚ್ ಆಗಿ ಅಧಿಕಾರ ಸ್ವೀಕರಿಸುವುದಾಗಿ ಹೇಳಿದ್ದರು ಎಂದೆಲ್ಲಾ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಅದರಲ್ಲಿ ಮುಖ್ಯವಾಗಿದ್ದು, ತಮಗೆ ಬೇಕಾದ ಸಹಾಯಕ ಸಿಬ್ಬಂದಿಗಳನ್ನು ಆಯ್ಕೆ ಮಾಡಿಕೊಳ್ಳಲು ಪೂರ್ಣ ಸ್ವತಂತ್ರ ನೀಡಬೇಕು ಎಂದು ಗಂಭೀರ್ ಬೇಡಿಕೆಯಿಟ್ಟಿದ್ದರು ಎನ್ನಲಾಗಿತ್ತು.

ಇದೀಗ RevSportz ವೆಬ್‌ಸೈಟ್ ವರದಿಯ ಪ್ರಕಾರ, ಗೌತಮ್ ಗಂಭೀರ್, ಕೋಲ್ಕತಾ ನೈಟ್ ರೈಡರ್ಸ್ ತಂಡದಲ್ಲಿ ಬ್ಯಾಟಿಂಗ್ ಕೋಚ್ ಆಗಿದ್ದ ಅಭಿಷೇಕ್ ನಾಯರ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಆಟಗಾರ ಆರ್ ವಿನಯ್ ಕುಮಾರ್ ಅವರು ತಮ್ಮ ಜತೆಗಿರಬೇಕು ಎಂದು ಪಟ್ಟು ಹಾಕಿದ್ದಾರೆ ಎಂದು ವರದಿಯಾಗಿದೆ. 

ರಾಹುಲ್ ದ್ರಾವಿಡ್ ಬಗ್ಗೆ ರೋಹಿತ್ ಶರ್ಮಾ ಭಾವುಕ ಪೋಸ್ಟ್..!

ಗೌತಮ್ ಗಂಭೀರ್, ಅಭಿಷೇಕ್ ನಾಯರ್ ಅವರನ್ನು ಸಹಾಯಕ ಬ್ಯಾಟಿಂಗ್ ಕೋಚ್ ಹಾಗೂ ಆರ್‌ ವಿನಯ್ ಕುಮಾರ್ ಅವರನ್ನು ಬೌಲಿಂಗ್ ಕೋಚ್ ಆಗಿ ನೇಮಿಸಿ ಎಂದು ಬಿಸಿಸಿಐಗೆ ಅರ್ಜಿ ರವಾನಿಸಿದ್ದಾರೆ ಎಂದು ವರದಿಯಾಗಿದೆ. ಗೌತಮ್ ಗಂಭಿರ್ ಮುಂಬರುವ ಶ್ರೀಲಂಕಾ ಎದುರಿನ ಸರಣಿಯಿಂದ ಟೀಂ ಇಂಡಿಯಾ ಹೆಡ್ ಕೋಚ್ ಆಗಿ ಕರ್ತವ್ಯ ಆರಂಭಿಸಲಿದ್ದು, ಅವರ ಹೆಡ್ ಕೋಚ್ ಒಪ್ಪಂದಾವಧಿ 2027ರ ಡಿಸೆಂಬರ್ 31ರವರೆಗೆ ಇರಲಿದೆ. 

ಟೀಂ ಇಂಡಿಯಾ ಹೆಡ್ ಕೋಚ್ ಆಗಿ ನೇಮಕವಾಗುತ್ತಿದ್ದಂತೆಯೇ ಟ್ವೀಟ್ ಮಾಡಿದ ಗಂಭೀರ್, "ಭಾರತ ನನ್ನ ಗುರುತು ಮತ್ತು ದೇಶಕ್ಕೆ ಸೇವೆ ಸಲ್ಲಿಸುವುದು ನನ್ನ ಜೀವನದ ದೊಡ್ಡ ಗೌರವ. ಟೀಂ ಇಂಡಿಯಾಕ್ಕೆ ಹಿಂದಿರುಗುತ್ತಿರುವುದಕ್ಕೆ ಸಂತೋಷವಿದೆ. ಎಲ್ಲಾ ಭಾರತೀಯರು ಹೆಮ್ಮೆ ಪಡುವಂತೆ ಮಾಡುವುದೇ ನನ್ನ ಗುರಿ. ಟೀಂ ಇಂಡಿಯಾ ಆಟಗಾರರು 140 ಕೋಟಿ ಭಾರತೀಯರ ಕನಸುಗಳನ್ನು ಹೊತ್ತುಕೊಂಡಿದ್ದಾರೆ. ಆ ಕನಸನ್ನು ನನಸಾಗಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ" ಎಂದು ಹೇಳಿದ್ದರು.
 

click me!