ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್, ಟೀಂ ಇಂಡಿಯಾ ನೂತನ ಹೆಡ್ ಕೋಚ್ ಆಗುತ್ತಿದ್ದಂತೆಯೇ ಖಡಕ್ ಸಂದೇಶ ರವಾನಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೆ ಬಗೆಗಿನ ಗೊಂದಲಗಳಿಗೆ ಕೊನೆಗೂ ತೆರೆಬಿದ್ದಿದ್ದು, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ನೂತನ ಕೋಚ್ ಆಗಿ ನೇಮಕಗೊಂಡಿದ್ದಾರೆ. ಇದನ್ನು ಮಂಗಳವಾರ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅಧಿಕೃತವಾಗಿ ಘೋಷಿಸಿದ್ದಾರೆ. ಇನ್ನು ಗೌತಮ್ ಗಂಭೀರ್, ಭಾರತ ಕ್ರಿಕೆಟ್ ತಂಡದ ನೂತನ ಹೆಡ್ ಕೋಚ್ ಆಗುತ್ತಿದ್ದಂತೆಯೇ ಖಡಕ್ ಸಂದೇಶ ರವಾನಿಸಿದ್ದಾರೆ.
ಇತ್ತೀಚೆಗಷ್ಟೇ ಗಂಭೀರ್ ಜೊತೆ ಅಂತಿಮ ಸುತ್ತಿನ ಮಾತುಕತೆ ನಡೆಸಿದ್ದ ಬಿಸಿಸಿಐ, ಮಂಗಳವಾರ ಅವರನ್ನು ಅಧಿಕೃತವಾಗಿ ಹುದ್ದೆಗೆ ನೇಮಕ ಮಾಡಿದೆ. ಜುಲೈ 27ರಿಂದ ಆರಂಭಗೊಳ್ಳಲಿರುವ ಶ್ರೀಲಂಕಾ ವಿರುದ್ಧ ಸರಣಿ ಮೂಲಕ ಅವರು ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದು, 2027ರ ಡಿ.31ರ ವರೆಗೂ ಅವಧಿ ಇರಲಿದೆ.
ಮೊಹಮ್ಮದ್ ಸಿರಾಜ್‌ಗೆ ಜಮೀನು, ಸರ್ಕಾರಿ ಹುದ್ದೆ ಘೋಷಿಸಿದ ತೆಲಂಗಾಣ ಮುಖ್ಯಮಂತ್ರಿ!
"ಭಾರತ ನನ್ನ ಗುರುತು ಮತ್ತು ದೇಶಕ್ಕೆ ಸೇವೆ ಸಲ್ಲಿಸುವುದು ನನ್ನ ಜೀವನದ ದೊಡ್ಡ ಗೌರವ. ಟೀಂ ಇಂಡಿಯಾಕ್ಕೆ ಹಿಂದಿರುಗುತ್ತಿರುವುದಕ್ಕೆ ಸಂತೋಷವಿದೆ. ಎಲ್ಲಾ ಭಾರತೀಯರು ಹೆಮ್ಮೆ ಪಡುವಂತೆ ಮಾಡುವುದೇ ನನ್ನ ಗುರಿ. ಟೀಂ ಇಂಡಿಯಾ ಆಟಗಾರರು 140 ಕೋಟಿ ಭಾರತೀಯರ ಕನಸುಗಳನ್ನು ಹೊತ್ತುಕೊಂಡಿದ್ದಾರೆ. ಆ ಕನಸನ್ನು ನನಸಾಗಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ" ಎಂದು ಗೌತಮ್ ಗಂಭೀರ್, ಟ್ವೀಟ್ ಮಾಡುವ ಮೂಲಕ ಖಡಕ್ ಸಂದೇಶ ಸಾರಿದ್ದಾರೆ.
ಗೌತಿ ಮೊದಲ ಬಾರಿ ಕೋಚ್
ಗೌತಮ್ ಗಂಭೀರ್ ಈ ವರೆಗೆ ಯಾವುದೇ ಅಂತಾರಾಷ್ಟ್ರೀಯ, ದೇಸಿ ತಂಡಕ್ಕೆ ಕೋಚ್ ಅಗಿಲ್ಲ. 2022, 2023ರಲ್ಲಿ ಲಖನೌ ಸೂಪರ್ ಜೈಂಟ್ಸ್ ಮೆಂಟರ್ ಆಗಿದ್ದ ಅವರು, ಈ ಬಾರಿ ಕೆಕೆಆರ್ ಮೆಂಟರ್ ಆಗಿ ಕಾರ್ಯನಿರ್ವಹಿಸಿದ್ದರು. ಇದೇ ಮೊದಲ ಬಾರಿ ಕೋಚ್ ಹುದ್ದೆ ಸ್ವೀಕರಿಸಿದ್ದಾರೆ.
2003ರಲ್ಲಿ ಭಾರತ ಪರ ಪಾದಾರ್ಪಣೆ ಮಾಡಿದ್ದ ಗಂಭೀರ್, 58 ಟೆಸ್ಟ್, 147 ಏಕದಿನ ಹಾಗೂ 37 ಟಿ20 ಪಂದ್ಯಗಳನ್ನಾಡಿದ್ದಾರೆ. ಅವರು 2007ರ ಟಿ20 ವಿಶ್ವಕಪ್, 2011ರ ಏಕದಿನ ವಿಶ್ವಕಪ್ ವಿಜೇತ ಭಾರತ ತಂಡದಲ್ಲಿದ್ದರು. 2016ರಲ್ಲಿ ಕೊನೆ ಬಾರಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಗೌತಮ್ ಗಂಭೀರ್ 2007ರ ಐಸಿಸಿ ಟಿ20 ವಿಶ್ವಕಪ್ ಫೈನಲ್ ಹಾಗೂ 2011ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಗರಿಷ್ಠ ರನ್ ಸಿಡಿಸುವ ಮೂಲಕ ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ರಾಹುಲ್ ದ್ರಾವಿಡ್ ಬಗ್ಗೆ ರೋಹಿತ್ ಶರ್ಮಾ ಭಾವುಕ ಪೋಸ್ಟ್..!
ನಾಯಕನಾಗಿ ಗಂಭೀರ್ ಸಕ್ಸಸ್:
ಗೌತಮ್ ಗಂಭೀರ್, ಐಪಿಎಲ್ ಟೂರ್ನಿಯಲ್ಲಿ ಯಶಸ್ವಿಯಾಗಿದ್ದಾರೆ. ಗೌತಮ್ ಗಂಭೀರ್ ನಾಯಕತ್ವದಲ್ಲೇ ಕೋಲ್ಕತಾ ನೈಟ್ ರೈಡರ್ಸ್ ತಂಡವು 2012 ಹಾಗೂ 2014ರಲ್ಲಿ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದೀಗ ಗೌತಮ್ ಗಂಭೀರ್ ನಾಯಕನಾಗಿಯೂ ಸಫಲರಾಗುತ್ತಾರಾ ಎನ್ನುವ ಕುತೂಹಲವಿದೆ.
ಗಂಭೀರ್ ಮುಂದಿದೆ ದೊಡ್ಡ ಸವಾಲು:
ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಇತ್ತೀಚೆಗಷ್ಟೇ ಟಿ20 ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದರ ಬೆನ್ನಲ್ಲೇ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸಿದ್ದಾರೆ. ಹೀಗಾಗಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಇವರ ಸ್ಥಾನ ತುಂಬಬಲ್ಲ ಸೂಕ್ತ ಆಟಗಾರರನ್ನು ಗಂಭೀರ್ ಹುಡುಕಿಕೊಳ್ಳಬೇಕಿದೆ.
ಇನ್ನು ಇದಷ್ಟೇ ಅಲ್ಲದೇ ಮುಂದಿನ ವರ್ಷ ಅಂದರೆ 2025ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಕೂಡಾ ನಡೆಯಲಿದ್ದು, ಐಸಿಸಿಯ ಈ ಎರಡು ಪ್ರತಿಷ್ಠಿತ ಟೂರ್ನಿ ಗೆಲ್ಲಲು ಗಂಭೀರ್ ಈಗಿನಿಂದಲೇ ರಣತಂತ್ರ ಹೆಣೆಯಬೇಕಿದೆ.
