
ಬೆಂಗಳೂರು: ಸೋಮವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಭಾರತದ ಕೋಚ್ ಗೌತಮ್ ಗಂಭೀರ್, 'ನಮ್ಮ ಆಟಗಾರರು ದಿನಕ್ಕೆ 400-500 ಕಲೆಹಾಕಲು ಸಿದ್ಧವಿದ್ದರೆ ಅವರನ್ನು ನಾವೇಕೆ ತಡೆಯಬೇಕು? ನಾವು ಅದೇ ರೀತಿಯಲ್ಲಿ ಆಡುತ್ತೇವೆ. ಇದುವೇ ತಂಡದ ಬೆಳವಣಿಗೆ' ಎಂದಿದ್ದಾರೆ.
ಹೆಚ್ಚಿನ ರಿಸ್ಕ್ ತೆಗೆಯುವುದರಿಂದ ಅದರ ಲಾಭವೂ ಹೆಚ್ಚಿರುತ್ತದೆ. ಕೆಲವೊಮ್ಮೆ ವೈಫಲ್ಯವೂ ಎದುರಾಗುತ್ತದೆ. ದಿನಕ್ಕೆ 400 ರನ್ ಗಳಿಸುವ ಹಾಗೂ 2 ದಿನ ಬ್ಯಾಟ್ ಮಾಡಬಲ್ಲ ತಂಡ ನಮಗೆ ಬೇಕು. ಕೆಲವೊಮ್ಮೆ ನಾವು 100 ರನ್‌ಗೆ ಆಲೌಟಾಗಬಹುದು. ಆದರೆ ನಾವು ಆಟಗಾರರ ಬೆನ್ನಿಗೆ ನಿಲ್ಲುತ್ತೇವೆ' ಎಂದು ಗೌತಮ್ ಗಂಭೀರ್ ಅವರು ತಿಳಿಸಿದ್ದಾರೆ.
ಕೊಹ್ಲಿ ರನ್ ಹಸಿವು ಇನ್ನೂ ನೀಗಿಲ್ಲ, ಮೊದಲಿನಂತಿದೆ
ವಿರಾಟ್ ಕೊಹ್ಲಿಯ ಪ್ರದರ್ಶನದ ಬಗ್ಗೆ ಮಾತನಾಡಿರುವ ಕೋಚ್ ಗಂಭೀರ್, ಅವರ ರನ್ ಹಸಿವು ಇನ್ನೂ ನೀಗಿಲ್ಲ. ಪಾದಾರ್ಪಣೆ ವೇಳೆ ಇದ್ದಷ್ಟೇ ಈಗಲೂ ಇದೆ ಎಂದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಕೊಹ್ಲಿ ಬಗ್ಗೆ ನನ್ನ ನಿಲುವು ಸ್ಪಷ್ಟ. ಅವರೊಬ್ಬ ವಿಶ್ವ ಶ್ರೇಷ್ಠ ಕ್ರಿಕೆಟಿಗ, ಭಾರತ ಪರ ದೀರ್ಘ ಕಾಲದಿಂದ ಉತ್ತಮ ಪ್ರದರ್ಶನ ನೀಡುತ್ತಿರುವ ಆಟಗಾರ. ಅವರಲ್ಲಿ ಈಗಲೂ ರನ್ ಹಸಿವಿದೆ. ರನ್ ಗಳಿಸುವ ತುಡಿತ ಅವರನ್ನು ವಿಶ್ವ ಶ್ರೇಷ್ಠ ಆಟಗಾರನನ್ನಾಗಿ ರೂಪಿಸಿದೆ. ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರುವ ವಿಶ್ವಾಸವಿದೆ' ಎಂದಿದ್ದಾರೆ. ಕೊಹ್ಲಿಯ ಆಟದ ಬಗ್ಗೆ ಪ್ರತಿ ಪಂದ್ಯದ ಬಳಿಕವೂ ಜಡ್ಜ್ ಮಾಡಬೇಕಾಗಿಲ್ಲ. ಅದು ಒಳ್ಳೆಯದಲ್ಲ ಎಂದು ಗಂಭೀರ್ ತಿಳಿಸಿದ್ದಾರೆ.
ಬೆಂಗ್ಳೂರಿನಲ್ಲಿ ಅಭ್ಯಾಸ ಶುರು ಆರಂಭಿಸಿದ ಟೀಂ ಇಂಡಿಯಾ; ರೋಹಿತ್, ಕೊಹ್ಲಿ ಭೇಟಿ ಮಾಡಿದ ಮಾಜಿ ಕೋಚ್ ದ್ರಾವಿಡ್
ಕಿವೀಸ್ ಟೆಸ್ಟ್‌ಗೆ ಭಾರತ ಕಠಿಣ ಅಭ್ಯಾಸ
ಬೆಂಗಳೂರು: ನ್ಯೂಜಿಲೆಂಡ್ ವಿರುದ್ಧ ಮಹತ್ವದ ಟೆಸ್ಟ್ ಸರಣಿಗೆ ಭಾರತೀಯ ಆಟಗಾರರು ಸಜ್ಜಾಗುತ್ತಿದ್ದಾರೆ. 3 ಪಂದ್ಯಗಳ ಸರಣಿಯ ಮೊದಲ ಪಂದ್ಯ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರದಿಂದ ಆರಂಭಗೊಳ್ಳಲಿದ್ದು, ಸೋಮವಾರ ಭಾರತೀಯ ಆಟಗಾರರು ಕಠಿಣ ಅಭ್ಯಾಸದಲ್ಲಿ ತೊಡಗಿಸಿಕೊಂಡರು. ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯವು ಅಕ್ಟೋಬರ್ 16ರಿಂದ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರಂಭವಾಗಲಿದೆ
ತಂಡದ ಎಲ್ಲಾ ಆಟಗಾರರು ಮಧ್ಯಾಹ್ನದ ವೇಳೆ ಕ್ರೀಡಾಂಗಣದಲ್ಲಿ ನೆಟ್ಸ್ ಅಭ್ಯಾಸ ಆರಂಭಿಸಿದರು. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್, ರಿಷಭ್ ಪಂತ್, ಅಕ್ಷರ್ ಪಟೇಲ್ ಗಂಟೆಗಳ ಕಾಲ ಬ್ಯಾಟಿಂಗ್ ಅಭ್ಯಾಸ ನಡೆಸಿದರು. ಕುಲ್ದೀಪ್ ಯಾದವ್ ಕೂಡಾ ಕೆಲ ಹೊತ್ತು ನೆಟ್ಸ್‌ನಲ್ಲಿ ಬ್ಯಾಟ್ ಬೀಸಿದರು.
ಆರ್.ಅಶ್ವಿನ್, ರವೀಂದ್ರ ಜಡೇಜಾ, ಮೊಹಮದ್ ಸಿರಾಜ್ ಕೂಡಾ ಮೈದಾನದಲ್ಲಿ ಬೆವರಿಳಿಸಿದರು. ಮುಖ್ಯ ಕೋಚ್ ಗೌತಮ್ ಗಂಭೀರ್, ಬೌಲಿಂಗ್ ಕೋಚ್ ಮೊರ್ನೆ ಮೊರ್ಕೆಲ್ ಕೂಡಾ ಮೈದಾನದಲ್ಲಿ ಉಪಸ್ಥಿತರಿದ್ದು, ಆಟಗಾರರಿಗೆ ಅಗತ್ಯ ಸಲಹೆಗಳನ್ನು ನೀಡುತ್ತಿದ್ದುದು ಕಂಡುಬಂತು. ಇದಕ್ಕೂ ಮುನ್ನ ನ್ಯೂಜಿಲೆಂಡ್ ಆಟಗಾರರು ಕೂಡಾ ಅಭ್ಯಾಸದಲ್ಲಿ ತೊಡಗಿಸಿಕೊಂಡರು.
ನ್ಯೂಜಿಲೆಂಡ್ ಎದುರಿನ ಟೆಸ್ಟ್ ಸರಣಿಗೆ ಭಾರತ ತಂಡ ಹೀಗಿದೆ:
ರೋಹಿತ್ ಶರ್ಮಾ(ನಾಯಕ), ಜಸ್ಪ್ರೀತ್ ಬುಮ್ರಾ(ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಕೆ ಎಲ್ ರಾಹುಲ್, ಸರ್ಫರಾಜ್ ಖಾನ್, ರಿಷಭ್ ಪಂತ್(ವಿಕೆಟ್ ಕೀಪರ್), ದೃವ್ ಜುರೆಲ್(ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್.
ಭಾರತ ಎದುರಿನ ಟೆಸ್ಟ್ ಸರಣಿಗೆ ನ್ಯೂಜಿಲೆಂಡ್ ತಂಡ:
ಟಾಮ್ ಲೇಥಮ್ (ನಾಯಕ), ಟಾಮ್ ಬ್ಲಂಡೆಲ್, ಮೈಕಲ್ ಬ್ರೇಸ್‌ವೆಲ್ (ಮೊದಲ ಟೆಸ್ಟ್‌ಗೆ ಮಾತ್ರ), ಮಾರ್ಕ್ ಚಾಪ್ಮನ್, ಡೆವೊನ್ ಕಾನ್‌ವೇ, ಮ್ಯಾಟ್ ಹೆನ್ರಿ, ಡ್ಯಾರೆಲ್ ಮಿಚೆಲ್, ವಿಲ್ ಓ’ ರೌರ್ಕೆ, ಅಜಾಜ್ ಪಟೇಲ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಬೆನ್ ಸೀರ್ಸ್, ಇಶ್ ಸೋಧಿ (2, 3ನೇ ಟೆಸ್ಟ್‌ಗೆ), ಟಿಮ್ ಸೌಥಿ, ಕೇನ್ ವಿಲಿಯಮ್ಸನ್, ವಿಲ್ ಯಂಗ್.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.