
ಬೆಂಗಳೂರು: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಹಾಗೂ ನಿರ್ಣಾಯಕ ಏಕದಿನ ಪಂದ್ಯದಲ್ಲಿ ಶುಭ್‌ಮನ್ ಗಿಲ್ ನೇತೃತ್ವದ ಟೀಂ ಇಂಡಿಯಾ 27 ರನ್ ಅಂತರದ ಸೋಲು ಅನುಭವಿಸಿದೆ. ಇದರೊಂದಿಗೆ ಟಿ20 ಸರಣಿ ಬಳಿಕ ಏಕದಿನ ಸರಣಿಯನ್ನೂ ಸೋತ ಭಾರತ ಬರಿಗೈನಲ್ಲಿ ತವರಿಗೆ ವಾಪಾಸ್ಸಾಗಿದೆ. ಅಷ್ಟಕ್ಕೂ ಈ ಟೀಂ ಇಂಡಿಯಾ ಸೋಲಿಗೆ ಕಾರಣವೇನು ಎಂದು ಹುಡುಕುತ್ತಾ ಹೊರಟರೇ ನಮ್ಮ ಕಣ್ಣ ಮುಂದೆ ಕಾಣುವುದು ಗೌತಮ್ ಗಂಭೀರ್ ಹಾಗೂ ಅಜಿತ್ ಅಗರ್ಕರ್ ಎನ್ನುವ ಇಬ್ಬರು ಖತರ್‌ನಾಕ್ ಜೋಡಿ.
ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿ ಹಾಗೂ ಹೆಡ್ ಕೋಚ್ ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ ಗೆದ್ದಿದ್ದಕ್ಕಿಂತ ಸೋತಿದ್ದೇ ಹೆಚ್ಚು ಎಂದರೆ ಅತಿಶಯೋಕ್ತಿಯಲ್ಲ. ಏಕದಿನ ಹಾಗೂ ಟಿ20 ಕ್ರಿಕೆಟ್‌ನಲ್ಲಿ ರಾಹುಲ್ ದ್ರಾವಿಡ್ ಹೆಡ್ ಕೋಚ್ ಆಗಿದ್ದಾಗ ಟೀಂ ಇಂಡಿಯಾ ಜಗತ್ತಿನ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿತ್ತು. ಆದರೆ ಇದೀಗ ಗಂಭೀರ್ ಮಾರ್ಗದರ್ಶನದಲ್ಲಿ ನ್ಯೂಜಿಲೆಂಡ್, ಆಸ್ಟ್ರೇಲಿಯಾದಂತಹ ತಂಡಗಳು ಬದಿಗಿರಲಿ, ಕ್ರಿಕೆಟ್ ಶಿಶು ಎಂದೇ ಕರೆಯಲ್ಪಡುವ ಐರ್ಲೆಂಡ್‌ನಂತಹ ತಂಡದೆದುರು 2-0 ಅಂತರದಲ್ಲಿ ಭಾರತ ವೈಟ್ ವಾಷ್ ಅನುಭವಿಸಿದೆ. ಇದೀಗ ಇಂಗ್ಲೆಂಡ್ ಎದುರು ಟಿ20 ಸರಣಿಯಲ್ಲಿ 4-0 ಅಂತರದಲ್ಲಿ ವೈಟ್‌ವಾಷ್ ಹಾಗೂ ಏಕದಿನ ಸರಣಿಯಲ್ಲಿ 2-1 ಅಂತರದಲ್ಲಿ ಟಿ20 ಸರಣಿ ಸೋತಿದೆ. ತಂಡದಲ್ಲಿ ಸಾಕಷ್ಟು ಅನುಭವಿ ಬೌಲರ್‌ಗಳಿದ್ದರೂ ಅವರನ್ನು ಸಾರಾಸಗಟಾಗಿ ಕಡೆಗಣಿಸಿ ಯುವ ಹಾಗೂ ಅನನುಭವಿ ವೇಗಿಗಳಿಗೆ ಮಣೆಹಾಕುವ ಪ್ರಯೋಗ ಕೈಸುಟ್ಟುಕೊಳ್ಳುವಂತೆ ಮಾಡಿದೆ. ಇಂಗ್ಲೆಂಡ್ ಎದುರು ಗುರ್ನೂರ್ ಬ್ರಾರ್ 10 ಓವರ್‌ನಲ್ಲಿ 97 ರನ್ ಚಚ್ಚಿಸಿಕೊಂಡರೆ, ಪ್ರಿನ್ಸ್ ಯಾದವ್ 79 ರನ್ ಬಿಟ್ಟುಕೊಟ್ಟರು. ಇದು ಪಂದ್ಯದ ಫಲಿತಾಂಶದ ಮೇಲೂ ಪರಿಣಾಮ ಬೀರಿತು.
ಹೌದು, ಇಂಗ್ಲೆಂಡ್‌ನಂತಹ ಪಿಚ್‌ನಲ್ಲಿ ಟೀಂ ಇಂಡಿಯಾ ಅನುಭವಿ ವೇಗಿಗಳಾದ ಮೊಹಮ್ಮದ್ ಶಮಿ ಹಾಗೂ ಭುವನೇಶ್ವರ್ ಕುಮಾರ್ ತಾವೆಷ್ಟು ಅಪಾಯಕಾರಿ ಬೌಲರ್ ಎನ್ನುವುದನ್ನು ಈಗಾಗಲೇ ಸಾಬೀತು ಮಾಡಿ ತೋರಿಸಿದ್ದಾರೆ. ಭುವಿ ಇತ್ತೀಚೆಷ್ಟೇ 19ನೇ ಸೀಸನ್ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹೀಗಿದ್ದೂ ಇಂಗ್ಲೆಂಡ್ ಎದುರಿನ ಸರಣಿಗೆ ಭುವಿಯನ್ನು ಆಯ್ಕೆ ಸಮಿತಿ ಕಡೆಗಣಿಸಿತು.
ಇನ್ನು ಐಸಿಸಿ ಟೂರ್ನಿಯ ಇತಿಹಾಸದಲ್ಲೇ ಭಾರತ ಪರ ಗರಿಷ್ಠ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿರುವ ಮೊಹಮ್ಮದ್ ಶಮಿ ಸಂಪೂರ್ಣ ಫಿಟ್ ಆಗಿದ್ದಾರೆ. ದೇಶಿ ಕ್ರಿಕೆಟ್‌ನಲ್ಲೂ ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಿದ್ದಾರೆ. ಹೀಗಿದ್ದೂ ಶಮಿಯನ್ನು ಬಿಸಿಸಿಐ ಆಯ್ಕೆ ಸಮಿತಿ ಪದೇ ಪದೇ ಕಡೆಗಣಿಸುತ್ತಾ ಬಂದಿದೆ. ಶಮಿಗೆ ಅವಕಾಶ ನೀಡಿದ್ದರೇ ಬಹುಶಃ ಇಂಗ್ಲೆಂಡ್ 350+ ರನ್ ದಾಖಲಿಸಲು ಅವಕಾಶ ಮಾಡಿ ಕೊಡುತ್ತಿರಲಿಲ್ಲ. ಬುಮ್ರಾ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಬೌಲಿಂಗ್ ವಿಭಾಗ ಇಂಗ್ಲೆಂಡ್ ಎದುರಿನ ಮೂರನೇ ಪಂದ್ಯದಲ್ಲಿ ಅತ್ಯಂತ ದುರ್ಬಲ ಬೌಲಿಂಗ್ ಪಡೆ ರೀತಿ ಕಾಣುತ್ತಿತ್ತು.
ರೋಹಿತ್ ಶರ್ಮಾ ಐತಿಹಾಸಿಕ ಶತಕದ ಹೊರತಾಗಿಯೂ ಇಂಗ್ಲೆಂಡ್ ವಿರುದ್ಧ 3ನೇ ಏಕದಿನ ಪಂದ್ಯದಲ್ಲಿ ಭಾರತ 27 ರನ್‌ಗಳಿಂದ ಸೋತಿದೆ. ಇದರ ಜೊತೆ 3 ಪಂದ್ಯಗಳ ಸರಣಿಯನ್ನು 1-2 ಅಂತರದಲ್ಲಿ ಕಳೆದುಕೊಂಡಿತು. ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 3 ವಿಕೆಟ್ ನಷ್ಟದಲ್ಲಿ 387 ರನ್ ಗಳಿಸಿತು. ಮೊದಲ ವಿಕೆಟ್‌ಗೆ ಬೆನ್ ಡಕೆಟ್-ಜೇಕಬ್ ಬೆಥೆಲ್ 192 ರನ್ ಸೇರಿಸಿದರು. ಬೆಥೆಲ್ 91ಕ್ಕೆ ಔಟಾದರೆ, ಡಕೆಟ್ 141 ರನ್ ಸಿಡಿಸಿದರು. ಜೋ ರೂಟ್ ಔಟಾಗದೆ 74, ಜೋಸ್ ಬಟ್ಲರ್ 13 ಎಸೆತಕ್ಕೆ ಔಟಾಗದೆ 41 ರನ್ ಗಳಿಸಿದರು.
ಬೃಹತ್ ಮೊತ್ತ ಬೆನ್ನತ್ತಿದ ಭಾರತ ಉತ್ತಮ ಆರಂಭ ಪಡೆಯಿತು. ರೋಹಿತ್-ನಾಯಕ ಶುಭ್‌ಮನ್ ಗಿಲ್ 147 ರನ್ ಸೇರಿಸಿದರು. ಗಿಲ್ 77ಕ್ಕೆ ಔಟಾದ ಬಳಿಕವೂ ಅಬ್ಬರಿಸಿದ ರೋಹಿತ್ 84 ಎಸೆತಕ್ಕೆ ಶತಕ ಪೂರೈಸಿದರು. 2ನೇ ವಿಕೆಟ್ ರೋಹಿತ್-ಕೊಹ್ಲಿ 113 ರನ್ ಸೇರಿಸಿದರು. 110 ಎಸೆತಕ್ಕೆ 138 ರನ್ ಸಿಡಿಸಿ ರೋಹಿತ್ 39ನೇ ಓವರ್‌ನಲ್ಲಿ ಔಟಾದ ಬಳಿಕ ತಂಡ ಕುಸಿಯಿತು. 43 ಓವರ್‌ನಲ್ಲಿ ತಂಡ 2 ವಿಕೆಟ್‌ಗೆ 300 ರನ್ ಕಲೆಹಾಕಿತ್ತು. 44ನೇ ಓವರ್‌ನಲ್ಲಿ ಕಿಶನ್, ಶ್ರೇಯಸ್ ಔಟಾದರು. 46ನೇ ಓವರ್‌ನಲ್ಲಿ ಕೊಹ್ಲಿ(74) ಔಟಾದ ಬಳಿಕ ತಂಡದ ಸೋಲು ಖಚಿತವಾಯಿತು. ರಾಹುಲ್(12) ಕೂಡಾ ಕೈಕೊಟ್ಟರು. ಕೊನೆಗೆ ತಂಡ 7 ವಿಕೆಟ್‌ಗೆ 360 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.